ರಾವ ಬಹದ್ದೂರ್ ಅವರ ಜನಪ್ರಿಯ ಕಾದಂಬರಿ ‘ಗ್ರಾಮಾಯಣ’- ಇದು ಮುಖ್ಯವಾಗಿ ಪಾದಳ್ಳಿಯ ಕತೆ. ಕೃಷ್ಣಾನದಿಯ ದಂಡೆಯ ಮೇಲೆ ಇರುವ ಈ ಊರು ಪ್ರಾದೇಶಿಕ ಸತ್ಯವಷ್ಟೇ ಆಗಿರದೇ. ಈ ಕಾದಂಬರಿಯಲ್ಲಿಯ ಅನೇಕ ಸಂಗತಿಗಳಿಗೆ, ಸನ್ನಿವೇಶಗಳಿಗೆ, ವ್ಯಕ್ತಿಗಳಿಗೆ ಕೇಂದ್ರ ಬಿಂದುವಾಗಿದೆ. ವಿಮರ್ಶೆಯ ಪರಿಭಾಷೆಯಲ್ಲಿ ಹೇಳಬೇಕಾದರೆ ಇಲ್ಲಿ ನಡೆಯುವ ಕತೆಯ ವಸ್ತುವಾಗಿದೆ. ಅಂತಲೇ ನಡೆಯುವ ಘಟನೆಗಳು, ಅವುಗಳಲ್ಲಿ ಭಾಗವಿಸಿದ ವ್ಯಕ್ತಿಗಳು ಪಾದಳ್ಳಿಯ ದೈವ(ದುರ್ದೈವ)ಕ್ಕೆ ಅಭಿವ್ಯಕ್ತಿಯನ್ನು ನೀಡುತ್ತವೆ. ಕತೆ ಪಾದಳ್ಳಿಯನ್ನು ಬಿಟ್ಟು ಇನ್ನೊಂದು ಊರಿಗೆ ಹೋದರೂ, ಬೇರೆ ಊರಿನ ವ್ಯಕ್ತಿಗಳು ಪಾದಳ್ಳಿಗೆ ಬಂದರೂ ಪಾದಳ್ಳಿಯ ಜೀವನವೇ ಅಲ್ಲಿ ಪ್ರಕಾಶಿತವಾಗುತ್ತದೆ. ಪಾದಳ್ಳಿಯ ಸ್ಥಿತಿ, ಗತಿ, ಅವನತಿಗಳೇ ಕಾದಂಬರಿಯ ಜೀವವಾಗಿ ಮಿಡಿಯುತ್ತವೆ ಎನ್ನುತ್ತಾರೆ ಲೇಖಕ ಕೀರ್ತಿನಾಥ ಕುರ್ತಕೋಟಿ.
ಗ್ರಾಮಾಯಣಕ್ಕೆ ಬೆನ್ನುಡಿಯನ್ನು ಬರೆದಿರುವ ಕೀರ್ತಿನಾಥ ಕುರ್ತಕೋಟಿಯವರು ಹೇಳುವಂತೆ ಈ ಕಾದಂಬರಿ ರಾವ ಬಹದ್ದೂರ್ ಅವರ ಉಳಿದ ಕೃತಿಗಳಿಗಿಂತ ತೀರ ಭಿನ್ನವಾದದ್ದು. ಒಂದು ಗಳಿಗೆಯ ಕುತೂಹಲಕ್ಕೆ ಮಾತಿನ ತೊಡಿಗೆಯನ್ನು ತೊಡಿಸುವ ಕೃತಿ ಇದಲ್ಲ. ಜೀವನವನ್ನು ಸಮಗ್ರವಾಗಿ ನೋಡುವ ಧೀರದೃಷ್ಟಿ, ದಿನನಿತ್ಯದ ಅನೇಕ ಸಂಗತಿಗಳ ನಡುವೆ ಇರಬಹುದಾದ ಸಂಬಂಧವನ್ನು ನೋಡುವ ಕುತೂಹಲ, ಬದುಕಿನ ಒಡಲಲ್ಲಿಯೇ ಹುಟ್ಟಿ, ಬದುಕನ್ನೇ ನುಂಗಲು ಹವಣಿಸುವ ಸಮಸ್ಯೆಗಳ ರಹಸ್ಯವನ್ನು ಅರಿಯುವ ಆಂತರಿಕ ತಳಮಳ ಈ ಕೃತಿಗೆ ಪ್ರೇರಕಶಕ್ತಿಯಾಗಿದೆ. ಒಟ್ಟಿನಲ್ಲಿ ಈ ಕಾದಂಬರಿಯ ರಚನೆ ಬಹುಮಟ್ಟಿಗೆ ಮಹಾಕಾವ್ಯಗಳ ರಚನೆಯನ್ನು ಹೋಲುತ್ತದೆ.
ರಾವ ಬಹಾದ್ದೂರ ಎಂದೇ ಖ್ಯಾತಿಯ ರಾಮಚಂದ್ರ ರಾವ್ ಕುಲಕರ್ಣಿ ಅವರು ಮೂಲತಃ ವಿಜಯಪುರ ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೆಪಡಸಲಗಿಯಲ್ಲಿ 24-09-1910ರಲ್ಲಿ ಜನಿಸಿದರು. ತಂದೆ ಭೀಮರಾವ್, ತಾಯಿ ಸುಭದ್ರಾಬಾಯಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ (1935) ಬಿ.ಎ. ಪದವಿ ಪಡೆದರು. ಸ್ವಾತಂತ್ಯ್ರ ಯೋಧ ಕೌಜಲಗಿ ಹಣಮಂತರಾಯ ಜೊತೆಗೂಡಿ ‘ಚರಕ ಸಂಘ ಸೇರಿ ಅದರ ವ್ಯವಸ್ಥಾಪಕರೂ ಆದರು. ಸಂಯುಕ್ತ ಕರ್ನಾಟಕ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡಿದರು.ಬಾಂಗ್ಲಾದೇಶ ರಚನೆಯಾದಾಗ ಅವರು ಬಾಂಗ್ಲಾಕ್ಕೆ ತೆರಳಿ ‘ನಾ ಕಂಡ ಬಾಂಗ್ಲಾದೇಶ’ ಎಂಬ ಗ್ರಂಥ ಬರೆದರು. ಕೃತಿಗಳು: ಅಸುರಾಯಣ, ಸಾಮ್ಯವಾದ, ಇತಿಹಾಸ ಭೂತ, ವೃಂದಾವನ, ಕಾಂಚನಮೃಗ, ಧೂಮಕೇತು, ಬಾಳು ...
READ MORE