ಕನ್ಯಾಬಲಿ- ಶಿವರಾಮ ಕಾರಂತರ ಸಾಮಾಜಿಕ ಕಾದಂಬರಿ. ಬಾಲವಿಧವೆಯೊಬ್ಬಳು ಕುಟುಂಬದಿಂದ ತಿರಸ್ಕೃತಗೊಂಡು ವೇಶ್ಯೆಯಾಗುವುದೇ ಇಲ್ಲಿಯ ಕಥಾ ವಸ್ತು. ಈ ಕಾದಂಬರಿಯು ಹಲವು ತಿರುವುಗಳ ಮೂಲಕ ದುಃಖಾಂತ್ಯದಲ್ಲಿ ಕೊನೆಗೊಳ್ಳುತ್ತದೆ. ಸಮಾಜದ ಅನಿಷ್ಟ ಪದ್ಧತಿಯನ್ನು ದಾರುಣವಾಗಿ ಚಿತ್ರಿಸುವ ಕಾರಂತರ ಈ ಕಾದಂಬರಿ ಮಾನವೀಯ ಸಂಬಂಧಗಳ ಹುಡುಕಾಟ ನಡೆಸುತ್ತದೆ.
ಬಾಲ ವಿಧವೆ ಮಾಲತಿಯು ಸಾಮಾಜಿಕ ತಿರಸ್ಕಾರಕ್ಕೆ ಒಳಗಾಗಿ, ಅಣ್ಣನ ಮದುವೆ ಸಂದರ್ಭದಲ್ಲೂ ‘ಅಪಶಕುನ, ಅಮಂಗಳ, ವಿಧವೆ’ ಇತ್ಯಾದಿ ಮಾತುಗಳನ್ನು ಕೇಳಬೇಕಾಗುತ್ತದೆ. ತಂದೆ-ತಾಯಿಯರೂ ಸಹ ಇಂತಹ ಚುಚ್ಚು ಮಾತುಗಳನ್ನು ಆಡುತ್ತಾರೆ. ಇದರಿಂದ ದಿಕ್ಕುತೋಚದಂತಾದ ಮಾಲತಿ, ಹುಚ್ಚಿಯಂತೆ ವರ್ತಿಸಿ, ತಾಯಿಗೂ ಸಹ ವಿಧವೆಯಾದರೆ ಹೇಗಿರುತ್ತದೆ ಎಂಬ ಮಾತುಗಳನ್ನಾಡಿ ಎಲ್ಲರಿಗೂ ಶಾಪ ಹಾಕುತ್ತಾಳೆ. ನಂತರ ಅವಳು ವೇಶ್ಯಾವೃತ್ತಿ ಅನುಸರಿಸುತ್ತಾಳೆ. ಮಗುವಾಗುತ್ತದೆ. ಅಣ್ಣ ವೀರೇಶನೊಂದಿಗೆ ಹಾಗೂ. ಕೌಟುಂಬಿಕ ಕಲಹದಿಂದ ಮಾಲತಿ, ಊರನ್ನು ಬಿಟ್ಟುಹೋಗುತ್ತಾಳೆ. ಅಲ್ಲಿಯೂ ತನ್ನ ಬದುಕು ನಿರ್ವಹಣೆಗಾಗಿ ವೇಶ್ಯಾವೃತ್ತಿ ಮುಂದುವರಿಸುತ್ತಾಳೆ. ಒಂದು ದಿನ ಹೀಗೆ ಗಿರಾಕಿಗಳನ್ನು ಕಾಯುತ್ತಿದ್ದಾಗ ಶ್ರೀಮಂತನಂತೆ ಕಾಣುವ ಒಬ್ಬ ಮುದುಕ ಈಕೆಯೆಡೆಗೆ ರೂಪಾಯಿ ನೋಟು ಎಸೆಯುತ್ತಾನೆ. ಅದರ ಆಸೆಗೆ ಬಿದ್ದ ಮಾಲತಿ ಆತನನ್ನು ಮುತ್ತಿಕ್ಕುತ್ತಾಳೆ. ದಿಟ್ಟಿಸಿ ನೋಡಿದರೆ ಆತ ಬೇರಾರೂ ಅಲ್ಲ; ತನ್ನ ತಂದೆ. ಮಗುವಿಗೆ ಹಾಲುಣಿಸಿ ಬರುವುದಾಗಿ ತೆರಳಿದ ಮಾಲತಿ ಬಹಳ ಹೊತ್ತಿನತನಕವೂ ಬಾರದೇ ಇದ್ದಾಗ ‘ಆಕೆ ವಂಚಿಸಿದಳೆಂದು’ ತಿಳಿದು ಈ ತಂದೆ ಮನೆಗೆ ತೆರಳುತ್ತಾನೆ. ಮನೆಯಲ್ಲಿ ಹೆಣ್ಣುಮಗಳೊಬ್ಬಳು ಮಲಗಿದ್ದನ್ನು ಕಂಡು, ಕಾಮಾತುರನಾದ ಆ ಮುದುಕ ಆಕೆಯನ್ನು ಭೋಗಿಸಲು ಮುಂದೆ ಬರುತ್ತಿದ್ದಂತೆ ಮಗುವಿನ ಹಾಗೂ ಆಕೆಯ ದೇಹವನ್ನೂ ಮುಟ್ಟಿ ನೋಡುತ್ತಾನೆ. ತಣ್ಣಗಾಗಿರುತ್ತದೆ. ಕೊರಳಲ್ಲಿದ್ದ ಕರಿಮಣಿ ಸರ ನೋಡುತ್ತಾನೆ. ತನ್ನ ಮಗಳ ಕೊರಳಲ್ಲಿ ಹಲವು ಬಾರಿ ಕಂಡದ್ದೇ ಆ ಸರ. ಎಲ್ಲವೂ ನೆನಪಾಗಿ ‘ಮಾಲತಿ ಮಾಲತಿ’ ಎಂದು ಚೀರುತ್ತಾ ಮೂರ್ಚೆ ಹೋಗುತ್ತಾನೆ. ಇದು ಕಾದಂಬರಿ ಮುಕ್ತಾಯ.
ಬೆಂಗಳೂರಿನ ಸತ್ಯಶೋಧನ ಪ್ರಕಟಣ ಮಂದಿರದಿಂದ (ಪುಟ: 99, ವರ್ಷ: 1932) ಮೊದಲ ಬಾರಿಗೆ ಪ್ರಕಟಗೊಂಡಿತ್ತು. ಹಲವು ಬಾರಿ ಮುದ್ರಣಗೊಂಡಿದೆ. 1929-30ರಲ್ಲಿ ’ವಸಂತ’ ಪತ್ರಿಕೆಯಲ್ಲಿ ’ಸೂಳೆಯ ಸಂಸಾರ’ ಹೆಸರಿನಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MOREಕಾರಂತರ ಕಾದಂಬರಿ ’ಕನ್ಯಾಬಲಿ’-ಬಾಲಸುಬ್ರಹ್ಮಣ್ಯ ಕಂಜರ್ಪಣೆ