‘ಸೂರ್ಯದರ್ಶನ’ ಶಿರೀಷ ಜೋಶಿ ಅವರ ಕಾದಂಬರಿ. ಹಿಂದೂಸ್ಥಾನಿ ಸಂಗೀತ ಲೋಕದ ರಸ ನಿಮಿಷಗಳನ್ನು ಉಣಬಡಿಸಿದ್ದ ಶಿರೀಷ್ ಜೋಶಿ ಅವರ ಈ ಕಾದಂಬರಿಯಲ್ಲಿ ಸಂಗೀತ ದರ್ಶನವಿದೆ. ಸಂಗೀತ ಕಲಿಕೆಗೆ ಜೀವನವನ್ನೇ ಮುಡಿಪಾಗಿರಿಸಿ ಗುರುವನ್ನು ಅರಸುತ್ತಾ ಮನೆ, ಊರು ತೊರೆದು ಅಲೆಯುವವರಿದ್ದಾರೆ. ಇಲ್ಲಿರುವ ಸೂರಪ್ಪನೂ ಸೂರ್ಯ ದರ್ಶನಕ್ಕಾಗಿ ಊರು ಬಿಟ್ಟು ಉತ್ತರ ಭಾರತವನ್ನೆಲ್ಲಾ ಸುತ್ತುತ್ತಾನೆ. ಪಡುವ ಕಷ್ಟ, ಸಂಕಷ್ಟಗಳು ಅಷ್ಟಿಷ್ಟಲ್ಲ. ಅದೆಲ್ಲವನ್ನು ಸಹಿಸಿಕೊಳ್ಳುವ ಶಕ್ತಿ ತುಂಬುವುದು ಅದೇ ಸಂಗೀತ. ಬಾಲ್ಯದಲ್ಲೇ ಮನೆಯಿಂದ ಹೊರ ಬಿದ್ದ ಸೂರ್ಯನಾರಾಯಣನಿಗೆ ಗುರುವೆಂಬ ಸೂರ್ಯನ ದರ್ಶನವಾಗುತ್ತದೆಯೇ ಎನ್ನುವುದು ಕಥೆ. ಕಥೆಯ ಜೊತೆಗೆ ಹಿಂದೂಸ್ಥಾನಿ ರಾಗಗಳ ಬಗ್ಗೆ ಮಾಹಿತಿ, ಅವುಗಳ ಗುಣಲಕ್ಷಣಗಳನ್ನು ಚಂದವಾಗಿ ಬಿಚ್ಚಿಟ್ಟಿದ್ದಾರೆ. ಸಂಗೀತ ಕಲಿಕಾ ವಿದ್ಯಾರ್ಥಿಗಳು ಓದಲೇಬೇಕಾದ ಕೃತಿ.
ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿರೀಷ ಜೋಶಿ ಅವರು ಸಂಗೀತಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಬರೆಯುವ ಕೆಲವೇ ಲೇಖಕರಲ್ಲಿ ಒಬ್ಬರು. ಬೆಳಗಾವಿ ನಿವಾಸಿ ಆಗಿರುವ ಶಿರೀಷ ಅವರು ಸಾಹಿತ್ಯ, ಸಂಗೀತ, ನಾಟಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಂಗೀತದ ಪ್ರೀತಿ ಅವರಿಂದ ಹಲವು ಪುಸ್ತಕಗಳನ್ನು ಬರೆಸಿದೆ. ಕೃತಿಗಳು: ಕುಮಾರ ಗಂಧರ್ವ, ಬಸವರಾಜ ರಾಜಗುರು, ಕರ್ನಾಟಕದ ಗಂಧರ್ವರು, ಸಂಗೀತ ಲೋಕದ ರಸನಿಮಿಷಗಳು, ಕುಮಾರ ಸಂಗೀತ ...
READ MORE