ಕಲ್ಲಬ್ಬೆ ಮೇಷ್ಟ್ರ ಮಗಳು ದಿನೇಶ ಹುಲಿಮನೆ ಅವರ ಕಾದಂಬರಿಯಾಗಿದೆ. ಜೀವನದ ಆರಂಭ ಒಂದು ಖಾಲಿ ಹಾಳೆ ಇದ್ದಂತೆ ಎಂದು ನಂಬುವುದಾದರೆ, ಆ ಹಾಳೆಯ ಮೇಲೆ ನಾವು ಬಿಡಿಸುವ ಚಿತ್ರದ ಆಧಾರದ ಮೇಲೆ ನಮ್ಮ ಬದುಕು ರೂಪುಗೊಳ್ಳುತ್ತದೆ ಮತ್ತು ಆ ಚಿತ್ರವೇ ನಮ್ಮ ಬದುಕಿನ ಬಗ್ಗೆ ಹೇಳುತ್ತದೆ ಎನ್ನುವುದು ಕೂಡ ಸತ್ಯವೇ. ನಮ್ಮ ಬದುಕಿನ ಹಾಳೆಯ ಮೇಲೆ ಯಾವ ಚಿತ್ರ ಬಿಡಿಸಬೇಕು, ಹೇಗೆ ಬಣ್ಣ ಹಚ್ಚಬೇಕು ಎನ್ನುವ ನಿರ್ಧಾರ ನಮ್ಮದೇ ಆಗಿದ್ದರೂ ನಮ್ಮ ಮನಸ್ಸಿಗೆ ತೋಚಿದಂತೆ ಗೀಚುವುದು ಸಾಧ್ಯವಿಲ್ಲ. ಆ ಚಿತ್ರಕ್ಕೆ ಸಮಾಜವೆಂಬ ಕಟ್ಟಳೆ ಕಟ್ಟುಪಾಡುಗಳ ಮಿತಿಯಿರುತ್ತದೆ. ಅಲ್ಲದೇ ಅಲ್ಲಿ ಆತ್ಮೀಯರ ಮತ್ತು ಹಿತೈಷಿಗಳ ನಿರೀಕ್ಷೆಗಳಿರುತ್ತವೆ. ಆ ನಿರೀಕ್ಷೆಗಳೊಂದಿಗೆ ಅವರ ಭಾವನೆಗಳೂ ಬೆರೆತು, ನಮ್ಮ ಬದುಕಿನ ಚಿತ್ರ ಅವರೆಲ್ಲರ ಬದುಕಿನ ಭಾಗವೂ ಆಗಿಬಿಟ್ಟಿರುತ್ತದೆ. ಇಂತಹ ಸಂದರ್ಭದಲ್ಲಿ ಕೇವಲ ನಮ್ಮಿಷ್ಟದಂತೆ ಚಿತ್ರ ಬಿಡಿಸುವುದಾದರೂ ಹೇಗೆ? ನಮಗೆ ಇಷ್ಟವಾದ ಚಿತ್ರ ಸಮಾಜದ ಕಟ್ಟಳೆಯಲ್ಲೇ ಇದೆಯಾ, ಹಿತೈಷಿಗಳ ನಿರೀಕ್ಷೆಯನ್ನು ಪೂರೈಸುತ್ತಿದೆಯಾ ಹೀಗೆಲ್ಲ ಯೋಚಿಸಿ ಮಾರ್ಪಾಡುಗೊಳಿಸಿದ ಚಿತ್ರ ನಮಗೆ ಖುಷಿ ಕೊಡುವ ಮಾತು ಹಾಗಿರಲಿ ಕೆಲವೊಮ್ಮೆ ಅದು ನಮ್ಮ ಚಿತ್ರವಾಗಿ ಉಳಿಯುವುದೇ ಅನುಮಾನವಾಗಿಬಿಡುತ್ತದೆ. ಹಾಗೆಯೇ ಬದುಕಿನಲ್ಲಿ ಸಾಧನೆಯ ವಿಚಾರಕ್ಕೆ ಬಂದರೂ ಇದೇ ಗೊಂದಲ. ಸಾಧನೆಗೋಸ್ಕರವೇ ಬದುಕನ್ನು ಸವೆಸಬೇಕಾ ? ಅಥವಾ ಇರುವುದರಲ್ಲಿಯೇ ಸಂತೃಪ್ತಿ ಪಟ್ಟು ಬದುಕನ್ನು ಸಾಗಿಸುವುದು ಲೇಸಾ ? ಸಾಧನೆಯ ಬದುಕು ಶ್ರೇಷ್ಠವೋ ಅಥವಾ ಸಂತೃಪ್ತಿಯ ಬದುಕೇ ಮೇಲಾ? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಂಡಾಗ, ಮೇಲ್ನೋಟಕ್ಕೆ ಸಂತೃಪ್ತಿಯ ಬದುಕೇ ಮೇಲು ಎಂದು ಉತ್ತರಿಸಿಕೊಂಡರೂ ಕಾರಣಗಳೇನೇ ಇರಬಹುದು ವಾಸ್ತವದಲ್ಲಿ ಸಾಧನೆಯ ಬೆನ್ನು ಹತ್ತುವುದು ಸಾಮಾನ್ಯ ಮತ್ತು ಕೆಲವೊಮ್ಮೆ ಅನಿವಾರ್ಯವೂ ಹೌದು.
ದಿನೇಶ ಹುಲಿಮನೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಪಶ್ಚಿಮ ಘಟ್ಟದಲ್ಲಿರುವ ಸಿದ್ದಾಪುರ ತಾಲೂಕಿನ ಪುಟ್ಟ ಹಳ್ಳಿ ಹುಲಿಮನೆ ಇವರ ತವರೂರು. ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಪದವಿ ಪಡೆದ ಇವರು ವೃತ್ತಿಯಲ್ಲಿ ಇಂಜಿನಿಯರ್. ಬೆಂಗಳೂರಿನ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿರುವ ಇವರು, ಪ್ರವೃತ್ತಿಯಲ್ಲಿ ಲೇಖಕರು. ಕಾದಂಬರಿಗಳ ಮೂಲಕ ಜನರ ಮನಸ್ಸನ್ನು ಗೆದ್ದಿರುವ ಇವರು ಸಣ್ಣ ಕಥೆಗಳಲ್ಲೂ ಸೈ ಎನಿಸಿಕೊಂಡಿದ್ದಾರೆ. ಮಲೆನಾಡಿನ ಪ್ರಾಕೃತಿಕ ವರ್ಣನೆ, ಗ್ರಾಮೀಣ ಭಾಷೆಯ ಸೊಗಡು, ಕುತೂಹಲ ಕೆರಳಿಸುವ ಕಥೆಯ ತಿರುವುಗಳು, ಮಾನವ ಸಹಜ ಪ್ರೀತಿ, ಪ್ರಣಯ ಹಾಗೂ ವೈಚಾರಿಕ ವಿಚಾರಗಳನ್ನು ಇವರ ಬರಹಗಳಲ್ಲಿ ಕಾಣಬಹುದಾಗಿದೆ. ಕಾದಂಬರಿಗಳಲ್ಲಿ ...
READ MORE