ಅಬ್ರಾಹ್ಮಣ

Author : ಕೆ.ಟಿ.ಗಟ್ಟಿ

Pages 272

₹ 250.00




Year of Publication: 2019
Published by: ಅಂಕಿತ ಪುಸ್ತಕ
Address: 53, ಶ್ಯಾಮಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್, ಮುಖ್ಯರಸ್ತೆ, ಬೆಂಗಳೂರು
Phone: 08026617100

Synopsys

ಜಾತಿಯ ಆಧಾರದಲ್ಲಿ ನಡೆಯುವ ತಾರತಮ್ಯತೆ, ಶೋಷಣೆ ಮತ್ತು ಅದರಿಂದ ಮಾನವರಲ್ಲಿ ಉದ್ಭವವಾಗುತ್ತಿರುವ ಸಾಮಾಜಿಕ ಸಮಸ್ಯೆ, ಮೂಡುವ ದ್ವೇಷವನ್ನುಈ ಕಾದಂಬರಿ ಚಿತ್ರಿಸುತ್ತದೆ. ಅಂತರ್ಜಾತಿಯ ವಿವಾಹದಿಂದ ಆ ಕುಟುಂಬದಲ್ಲಿ ವಿರಸ-ಕಲಹಕ್ಕೆ ಎಡೆಯಾಗುತ್ತದೆ. ಅದನ್ನು ಮುಂದುವರೆಸುವ ಮನೆಯ ಸದಸ್ಯರು, ಕೊನೆಯಲ್ಲಿ ಜಾತಿ ಎಂಬುದು ನೀರಸ, ಮನುಷ್ಯ ಮಾತ್ರ ಅದನ್ನು ಹೊತ್ತು ತಿರುಗುತ್ತಾನೆ ಎಂಬುದನ್ನು ಈ ಕೃತಿ ಪ್ರಸ್ತುತ ಪಡಿಸುತ್ತದೆ.

About the Author

ಕೆ.ಟಿ.ಗಟ್ಟಿ
(22 July 1938)

ಕಾದಂಬರಿಕಾರ, ಭಾಷಾತಜ್ಞ, ಸಮರ್ಥ ಪ್ರಾಧ್ಯಾಪಕರೆನಿಸಿದ ಕೆ.ಟಿ. ಗಟ್ಟಿಯವರು ಕಾಸರಗೋಡು ಸಮೀಪದ ಕೂಡ್ಲೂವಿನಲ್ಲಿ ಜನಿಸಿದರು. ತಂದೆ ಧೂಮಪ್ಪಗಟ್ಟಿಯವರು ಕೃಷಿಕರಾದರೂ ಯಕ್ಷಗಾನ ಕಲೆಯ ಬಗ್ಗೆ ಅಪಾರ ಒಲವಿದ್ದವರು. ತಾಯಿ ಪರಮೇಶ್ವರಿ ತುಳು-ಮಲಯಾಳಂ ಪಾಡ್ದನ ಹಾಡುಗಳನ್ನು ಕಲಿತವರು. ಉತ್ತಮ ಭಾಷೆ, ಆಕರ್ಷಕ ಶೈಲಿ, ಹೊಸ ಹೊಸ ವಸ್ತು, ಸರಳ ನಿರೂಪಣೆಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಮನೆ ಮಾತಾದ ಹಿರಿಯ ಕಥೆಗಾರ ಕೆ.ಟಿ.ಗಟ್ಟಿ ಅವರು ಎಲ್ಲಾ ಓದುಗರಿಗೆ ಚಿರಪರಿಚಿತರು. ಕೇರಳ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿಎಡ್ ಪದವಿ ಪಡೆದಿರುವ ಕೆ.ಟಿ.ಗಟ್ಟಿ ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯವರು. ಜನಿಸಿದ್ದು 1938ರಲ್ಲಿ. ಸದ್ಯ ...

READ MORE

Reviews

ಜ್ವಲಂತ ಸಾಮಾಜಿಕ ಸಮಸ್ಯೆಯ ಪರಿಶೀಲನೆ

ಕನ್ನಡದ ಖ್ಯಾತ ಕಾದಂಬರಿಕಾರ ಕೆ.ಟಿ. ಗಟ್ಟಿ ಬರೆದ ಹಾಗೂ 1977ರಲ್ಲಿ ಪ್ರಕಟವಾದ 'ಅಬ್ರಾಹ್ಮಣ' ಕಾದಂಬರಿ ಮತ್ತು 'ಸಾಫಲ್ಯ' (1976), ಹಾಗೂ 'ಶಬ್ದಗಳು' ಕಾದಂಬರಿಗಳ ಮೂಲಕ ಕನ್ನಡಿಗರ ಗಮನ ಸೆಳೆದರು. ಕೆ. ಟಿ. ಗಟ್ಟಿಯವರನ್ನು ಕರಾವಳಿ ಭಾಗದಲ್ಲಿ ಅವರಿಗಿಂತ ಹಿಂದೆ ಕಾದಂಬರಿಕಾರರಾಗಿ ಪ್ರಸಿದ್ಧರಾದ ವಿಶು ಕುಮಾರ್ ಅವರಿಗೆ ಹೋಲಿಸಬಹುದು. ವಿಶು ಕುಮಾರ್ ಅವರಲ್ಲಿ ದಟ್ಟವಾದ ಪ್ರಾದೇಶಿಕತೆ ಇದ್ದರೆ ಗಟ್ಟಿಯವರು ಪ್ರಾದೇಶಿಕತೆಗೆ ಗಮನ ಕೊಡದೇ ಭಾರತೀಯ ಸಮಾಜವನ್ನು ವ್ಯಕ್ತಿಗಳ ಕಥನದ ಮೂಲಕ ಪರಿಶೀಲಿಸಿದರು. - ಅಬ್ರಾಹ್ಮಣದ ಮರು ಓದು ಸಾಹಿತ್ಯದ ಶಕ್ತಿ ಮತ್ತು ಮಿತಿಗಳ ಬಗ್ಗೆ ಕುತೂಹಲಕರ ಒಳನೋಟಗಳನ್ನು ನೀಡುತ್ತದೆ. ಜಾತಿಯ ಆಧಾರದಲ್ಲಿ 1. ವೃತ್ತಿ ಸ್ಥಳದಲ್ಲಿ 2. ವಾಸ ಸ್ಥಳದಲ್ಲಿ ಮತ್ತು 3. ಪೂಜಾ ಕೇಂದ್ರಗಳಲ್ಲಿ ತಾರತಮ್ಯ ಹೆಚ್ಚಾಗಿಯೇ ಇದ್ದ 70 ದಶಕದ ಕಥೆಯನ್ನು ಈ ಕಾದಂಬರಿಯಲ್ಲಿ ಕಾಣಬಹುದು.

ಈ ಕಾದಂಬರಿಯಲ್ಲಿ ಚಿತ್ರಿತವಾದ ಕೆಲವು ಜಾತಿಯ ಸಮಸ್ಯೆಗಳು ಈಗ ಅಷ್ಟಾಗಿ ಕಾಡುವುದಿಲ್ಲವಾದ ಕಾರಣ, ಓದುಗರು ಕಾಲದ ಅಂತರವನ್ನು ಗಮನಿಸಿಕೊಂಡು ಸ್ಪಂದಿಸಬೇಕಾಗುತ್ತದೆ. ಸಾಹಿತ್ಯ ಕೃತಿಗಳನ್ನು ಓದುವಾಗ ಈ ಬಗೆಯ ಹೊಂದಾಣಿಕೆ ಮಾಡಿಕೊಳ್ಳುವ ಓದಿನ ಕೌಶಲ ಸಹಜವಾಗಿ ಇರುವುದರಿಂದ ಇದೇನೂ ಕಷ್ಟವಲ್ಲ.

ಜಗದೀಶ ಉಡುಪಿಯ ಕಾಲೇಜೊಂದರಲ್ಲಿ ತತ್ವಶಾಸ್ತ್ರದ ಉಪನ್ಯಾಸಕ. ಕಾಲೇಜು ಉಪನ್ಯಾಸಕ ಹುದ್ದೆ ಸಮಾಜದಲ್ಲಿ ಮೊದಲ ಸ್ಥಾನದ ಆಕರ್ಷಣೆ ಹೊಂದಿದ್ದ ಕಾಲಘಟ್ಟ ಅದು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಕೃಷ್ಣಾಚಾರ್ಯ ತನ್ನ ವೈದ್ಯೆ ಮಗಳನ್ನೂ ಜಗದೀಶನಿಗೆ ಮದುವೆ ಮಾಡಿಕೊಡಲು ಆಸಕ್ತನಿದ್ದ ಎನ್ನುವುದು ಗಮನಾರ್ಹ. ಸ್ವಲ್ಪ ದೂರದ ಹಳ್ಳಿ ಬೆಳ್ಳಣ್ಣಿನಲ್ಲಿದ್ದ ಜಗದೀಶನ ಕುಟುಂಬದವರು ಎಲ್ಲ ಬ್ರಾಹ್ಮಣರಂತೆ ಸಂಪ್ರದಾಯಶೀಲರು, ಜಗದೀಶನ ಅಣ್ಣ ಶಂಭಟ್ಟ ತನ್ನ ಕಾಮಕ್ಕಾಗಿ ಕೆಳ ವರ್ಗದ ಹೆಂಗಸರನ್ನು ಬಳಸಿಕೊಂಡು ಅವರ ಬದುಕನ್ನು ಹಾಳುಮಾಡುತ್ತಾನೆ.

ಇತ್ತ ಜಗದೀಶ ಇತರೆ ಬ್ರಾಹ್ಮಣರಂತೆ ಬದುಕದೇ ಕಾದಂಬರಿಯ ಶೀರ್ಷಿಕೆ ಸೂಚಿಸುವ ಅಬ್ರಾಹ್ಮಣನಾಗುತ್ತಾನೆ. ಅವನು ಯಾರನ್ನೂ ಜಾತಿಯ ಆಧಾರದಲ್ಲಿ ದೂರಮಾಡದೇ ಎಲ್ಲರ ಜತೆಗೂ ಬೆರೆತು, ಎಲ್ಲರ ಜತೆಯೂ ಊಟ ಮಾಡುತ್ತಿದ್ದುದರಿಂದ ಮನೆಯವರ ಆಗ್ರಹಕ್ಕೆ ಪಾತ್ರನಾಗುತ್ತಾನೆ. ಅವನು ಕಿಶೋರಿ ಎಂಬ ದಲಿತ ಯುವತಿಯನ್ನು ಮದುವೆಯಾಗಿ ಮನೆಯಿಂದ ದೂರವಾಗುತ್ತಾನೆ. ಕಾಲೇಜಿನಲ್ಲಿ ಆಡಳಿತ ಮಂಡಳಿ ಅವನಿಗೆ ಕಿರುಕುಳ ನೀಡಿ ಅವನನ್ನು ಹೊರಹಾಕಲು ಪ್ರಯತ್ನಿಸುತ್ತದೆ. ಆದರೆ, ಜಗದೀಶನ ಪರವಾದ ವಿದ್ಯಾರ್ಥಿಗಳ ಹೋರಾಟದಿಂದ ಜಗದೀಶ ಕಾಲೇಜಿನಲ್ಲೇ ಉಳಿಯುತ್ತಾನೆ.

ಜಗದೀಶನ ಪ್ರೋತ್ಸಾಹದಿಂದ ಕಿಶೋರಿ ಗಾಯಕಿಯಾಗಿ ಪ್ರಸಿದ್ಧಳಾಗುತ್ತಾಳೆ. ಒಮ್ಮೆ ಅವಳಿಲ್ಲದಾಗ ಜಗದೀಶನ ತಾಯಿ ಅವನನ್ನು ತಲೆಕೆರೆದುಕೊಂಡು ಹೋಗಿ ಮಾಟ ಮಂತ್ರ ಮಾಡಿಸಿ, ಅವನ ಮನಃಪರಿವರ್ತನೆ ಮಾಡಲು ಮದ್ದು ಹಾಕುತ್ತಾಳೆ. ಅದು ಜಗದೀಶನ ಆರೋಗ್ಯ ಕೆಡಿಸಿ ಅವನ ಸಾವಿಗೆ ಕಾರಣವಾಗುತ್ತದೆ. ಜಗದೀಶನ ಮನೆಯವರೇ ನಿಜವಾಗಿ ಅಬ್ರಾಹ್ಮಣರು ಎನ್ನುವ ಧ್ವನಿತಾರ್ಥವೂ ಕಾದಂಬರಿಯಲ್ಲಿ ಹುಟ್ಟುತ್ತದೆ.

ಕೆ. ಟಿ. ಗಟ್ಟಿಯವರು ತಮ್ಮ ನಿರುದ್ಯೋಗ, ವೈಚಾರಿಕ ಪ್ರಖರತೆಯ ಆಕರ್ಷಕ ಶೈಲಿಯಲ್ಲಿ ಸಂಭಾಷಣೆಗಳು ಮತ್ತು ಚರ್ಚೆಗಳ ಮೂಲಕ ಸಮಾಜವನ್ನು ಸೂಕ್ಷ್ಮವಾಗಿ ವಿಮರ್ಶಿಸುತ್ತಾ ಹೋಗುತ್ತಾರೆ. ಉದಾಹರಣೆಗೆ, ಜಗದೀಶನ ಸಹೋದ್ಯೋಗಿ ಗೋವಿಂದರಾಜ ಮತ್ತು ಅವನ ಪತ್ನಿ ಬೆಳ್ಳಣ್ಣು ಜಾತ್ರೆಗೆ ಹೋಗಿದ್ದಾಗ ಜಗದೀಶನ ಮನೆಯವರು ಅವರನ್ನು ಶೂದ್ರರೆಂದು ಹೊರಗಿನ ಕೋಣೆಯಲ್ಲೇ ಉಳಿಸಿಕೊಂಡು, ಹೊರಭಾಗಗಳಲ್ಲೇ ಉಣ್ಣಲು ಇಕ್ಕಿ ಜಾತಿಭೇದವನ್ನು ಆಚರಿಸುತ್ತಾರೆ. ಜಗದೀಶ ದಲಿತೆಯಾದ ಕಿಶೋರಿಯನ್ನು ಮದುವೆಯಾಗಿ ಕರೆದುಕೊಂಡು ಬಂದಾಗ ಅಬ್ರಾಹ್ಮಣ ಕಾದಂಬರಿ ಅದೇ ಗೋವಿಂದರಾಜನ ಪತ್ನಿಗೆ ಸ್ವೀಕರಿಸಲು ಕಷ್ಟವಾಗುತ್ತದೆ. ಕಿಶೋರಿಗೆ ಸಂಗೀತ ಕಲಿಸಲು ಮೇಲುವರ್ಗದವರು ಒಪ್ಪದೆ ಇದ್ದದ್ದು. ಜಾತಿಯತೆಯ ಸಮಸ್ಯೆಯನ್ನು ಕಾದಂಬರಿ ಹಲವು ಆಯಾಮಗಳಲ್ಲಿ ಚಿಂತಿಸುತ್ತದೆ. ಉದಾಹರಣೆಗೆ, ಜಗದೀಶ ಮತ್ತು ಕಿಶೋರಿ ಬೆಂಗಳೂರಿನಲ್ಲಿ ಒಂದು ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಹೋಗುತ್ತಾರೆ. ಅಲ್ಲಿರುವ ಹತ್ತು ಸಾವಿರ ಮಂದಿ ಯಾವ ಜಾತಿ ಎನ್ನುವುದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವುದರ ಬಗ್ಗೆ ಜಗದೀಶ ಕಿಶೋರಿಯ ಗಮನ ಸೆಳೆಯುತ್ತಾನೆ. ಅಲ್ಲಿ ಅವನು ಹೇಳುವ ಪ್ರಕಾರ, ಕ್ರಿಯಾಶೀಲವಾಗಿರುವ ಮನುಷ್ಯ ಜಾತಿಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ; ನಿಷ್ಕ್ರಿಯನಾಗಿರುವ ಮನುಷ್ಯ ಮಾತ್ರ ಜಾತಿಯೆಂದು ಬಡಿದಾಡುತ್ತಾನೆ.

ಈ ಕಾದಂಬರಿಯ ಕೆಲವು ಸನ್ನಿವೇಶಗಳು ಸ್ವಲ್ಪ ಹಳೆಯದಾದ ಕಾರಣ ಈಗಿಲ್ಲದ ಒಂದು ಸಾಮಾಜಿಕ ಪರಿಸ್ಥಿತಿ ಅಂತ ಅನ್ನಿಸಿದರೂ ಒಳಗಿಂದೊಳಗೆ ಸೂಕ್ಷ್ಮವಾಗಿ ಜಾತೀಯತೆಯ ಸಮಸ್ಯೆಗಳು ಬೇರೆ ರೀತಿಗಳಲ್ಲಿ ಇರುವುದರಿಂದ ಇದು ಈಗಲೂ ಪ್ರಸ್ತುತವಾಗಿರುವ ಕಾದಂಬರಿ; ಮಾತ್ರವಲ್ಲ ಇನ್ನೂ ದಶಕಗಳು ಕಳೆದರೂ ಪ್ರಸ್ತುತವಾಗಿಯೇ ಇರುತ್ತದೆ. ಕರ್ಣನನ್ನು ಸೂತಪುತ್ರ ಎಂದು ದೂರವಿಡುವಾಗಿನ ನೋವು ಇಂದು ಕೂಡ ಪ್ರಸ್ತುತವಾಗಿಲ್ಲವೆ, ಹಾಗೆ ಒಂದು ಒಳ್ಳೆಯ ಕಾದಂಬರಿ ಸುಂದರವಾಗಿ ಮರುಮುದ್ರಣಗೊಂಡಿರುವುದು ಸಂತೋಷದ ವಿಚಾರ. 

ಡಾ. ಬಿ. ಜನಾರ್ದನ ಭಟ್ 

ಕೃಪೆ : ಹೊಸ ದಿಗಂತ (2020 ಫೆಬ್ರುವರಿ 09)

Related Books