ಸಾಮಾನ್ಯ ಜನ ಬಡತನ, ಬಿಕ್ಕಟ್ಟುಗಳ ನಡುವೆಯೂ ಘನತೆಯಿಂದ ಬದುಕಲೆತ್ನಿಸುವ ಜೀವನ ಹೋರಾಟವನ್ನು ಮತ್ತು ಅದರಲ್ಲಿ ಅವರು ಪಡೆಯುವ ಗೆಲುವುಗಳನ್ನು ಈ ಕಾದಂಬರಿಯಲ್ಲಿ ದಾಖಲಿಸಿದ್ದಾರೆ. ಟೆಲಿಫೋನ್ ಸುಲಭವಾಗಿ ಕೈಗೆಟುಕದ ಕಾಲದ ವಿದ್ಯಮಾನಗಳನ್ನು ಕೇಂದ್ರೀಕರಿಸಿ ಈಗಿನ ಕಾಲದ ಓದುಗರನ್ನೂ ಆವರಿಸುವಂತೆ ರಚಿಸಿದ ಕಾದಂಬರಿ ಇದಾಗಿದೆ. ಜೀವನದಲ್ಲಿ ಕಂಡುಂಡ ವಿಚಾರಗಳನ್ನು, ಅನುಭವಗಳನ್ನುಕಥನ ರೂಪದಲ್ಲಿ ಕಟ್ಟಿಕೊಟ್ಟಿರುವುದೇ ಕಾಮನ ಹುಣ್ಣಿಮೆ. ಅರ್ಥಪೂರ್ಣವಾದ ಮತ್ತು ಸಮಕಾಲೀನವಾದ ವಸ್ತು, ವಿಚಾರಗಳನ್ನು ಕಲಾತ್ಮಕವಾಗಿ ಕಟ್ಟಿಕೊಡಲಾಗಿದೆ.
'ಇಡೀ ಕಾದಂಬರಿಯಲ್ಲಿ ಮುಖ್ಯ ತಿರುಳಾಗಿ ಪ್ರೀತಿಯ ನುಡಿಗಳೇ ನಿಂತಿವೆ. ದ್ವೇಷಕಾರುವ, ಹಗೆತನ ಬಯಸುವ, ಜಾತಿ-ಧರ್ಮದ ಗಲಭೆಗಳಿಗೆ ಮುನ್ನುಡಿ ಬರೆಯುವ ಮಾತುಗಳಿಗೆ ಇಲ್ಲಿ ಜಾಗವೇ ಇಲ್ಲ. ಈ ಗುಣದಿಂದಾಗಿಯೇ ಕಾದಂಬರಿಯಲ್ಲಿ ಎಲ್ಲರೂ ಎಲ್ಲರನ್ನೂ ಪ್ರೀತಿಸುವ ಮತ್ತು ಗೌರವಿಸುವ ಮಾತುಗಳನ್ನೇ ಆಡುತ್ತಾರೆ. ಇಂಡಿಯಾಕ್ಕೆ ಇವತ್ತಿಗೆ ಬೇಕಾಗಿರುವ ಮದ್ದಂತೆ ಈ ಮಾತುಗಳು ಮತ್ತು ಇಲ್ಲಿನ ನಡವಳಿಕೆಗಳು ಕಂಡು ಬರುತ್ತವೆ' ಎನ್ನುತ್ತಾರೆ ಎಚ್.ಡಿ.ಉಮಾಪತಿ ಅವರು.
ಕಾಮನ ಹುಣ್ಣಿಮೆ’ ಕಾದಂಬರಿಯ ಕುರಿತು ಲೇಖಕರಾದ ನಟರಾಜ ಹುಳಿಯಾರ್ ಅವರ ಮಾತುಗಳು
ನಟರಾಜ್ ಹುಳಿಯಾರ್ ಅವರ 'ಕಾಮನ ಹುಣ್ಣಿಮೆ' ಕಾದಂಬರಿ ಕುರಿತು
ನಟರಾಜ್ ಹುಳಿಯಾರ್ ಅವರು ಕತೆಗಾರರಾಗಿ ಈಗಾಗಲೇ ಅತ್ಯಂತ ಸಮೃದ್ಧವಾದ ಕಥಾಲೋಕವನ್ನೂ, ಜೀವಂತ ಪಾತ್ರಗಳನ್ನೂ ಸೃಷ್ಟಿಸಿದ್ದಲ್ಲದೆ ಅತ್ಯಂತ ಅರ್ಥಪೂರ್ಣವಾದ ಮತ್ತು ಸಮಕಾಲೀನವಾದ ವಸ್ತು, ವಿಚಾರಗಳನ್ನು ಕಲಾತ್ಮಕವಾಗಿ ಕಟ್ಟಿಕೊಟ್ಟವರು. ನಟರಾಜ್ ಹುಳಿಯಾರ್ ಕತೆಗಳಲ್ಲಿ ಸಾಮಾಜಿಕ-ತಾತ್ವಿಕ ಆಯಾಮಗಳು ಇದ್ದೂ ಇಲ್ಲದಂತೆ ಅವರ ಕಥನ ಕಲೆಯ ಆಕರ್ಷಣೆಯಲ್ಲಿ ಹುದುಗಿಕೊಂಡಂತಿರುತ್ತವೆ. ಹಾಗಾಗಿ ಸಹಜವಾಗಿಯೇ ಅವರ ಕಾದಂಬರಿ ‘ಕಾಮನ ಹುಣ್ಣಿಮೆ’ ಅಪಾರ ನಿರೀಕ್ಷೆಗಳನ್ನು ಹುಟ್ಟಿಸಿತ್ತು.
ಲಂಕೇಶರ "ಮುಸ್ಸಂಜೆ ಕಥಾ ಪ್ರಸಂಗ", "ಬಿರುಕು" ಮತ್ತು "ಅಕ್ಕ" - ಈ ಮೂರು ಕಾದಂಬರಿಗಳನ್ನು ಓದಿದ್ದವರಿಗೆ ನಟರಾಜ್ ಹುಳಿಯಾರ್ ಅವರ ಕಾದಂಬರಿ ಬಹುಶಃ ನಿರಾಶೆ ಹುಟ್ಟಿಸುತ್ತದೆ ಅನಿಸುತ್ತದೆ. ಇದನ್ನು ವಿವರವಾಗಿ ಗಮನಿಸದೇ ಹೋದರೆ ಕಾದಂಬರಿಗೂ ಅನ್ಯಾಯವೆಸಗಿದಂತಾಗುತ್ತದೆ ಮಾತ್ರವಲ್ಲ ಈ ಅತ್ಯುತ್ತಮ ಕಾದಂಬರಿ ನಮಗೆ ಕೊಡಬಹುದಾದ್ದು, ಕೊಡಬೇಕಿದ್ದುದು ಮತ್ತು ಕೊಡುತ್ತಿರುವುದು ಮೂರೂ ಕಣ್ತಪ್ಪಿ ಹೋಗಬಹುದು.
ಅರವತ್ತು ಎಪ್ಪತ್ತರ ದಶಕದಲ್ಲಿ ಕರ್ನಾಟಕದ ಹಳ್ಳಿಗಾಡಿನಿಂದ ಯಾವುದೋ ಅದೃಷ್ಟದಿಂದೆಂಬಂತೆ ತಕ್ಕಮಟ್ಟಿಗೆ ಉತ್ತಮ ಶೈಕ್ಷಣಿಕ ಮಟ್ಟ ತೋರಿದ ಕೆಲವೇ ಕೆಲವು ಮಂದಿ, ಹೆಚ್ಚಾಗಿ ಸಮಾಜದ ಕೆಳಸ್ತರದವರು (ಅದು ಜಾತಿಯಿಂದಲೂ, ಆರ್ಥಿಕವಾಗಿಯೂ ಇರಬಹುದು ಅಥವಾ ಬರೀ ಜಾತಿಯಿಂದಲೂ ಇರಬಹುದು) ಅದು ಹೇಗೋ ಬೆಂಗಳೂರು, ಮೈಸೂರಿನಂಥ ಪಟ್ಟಣ ಸೇರಿಕೊಂಡು ಪದವಿ ಪಡೆದು ಅಲ್ಲಲ್ಲಿ ಸೆಟ್ಲ್ ಆದರು. ಇವರಲ್ಲಿ ಹುಡುಗಿಯರು ಇದ್ದಿದ್ದು ಕಡಿಮೆ, ಹುಡುಗರು ಹೆಚ್ಚು. ಹೀಗೆ ನಗರ ಸೇರಿ ಸೆಟ್ಲ್ ಆದವರದ್ದೇ ಒಂದು ತಲೆಮಾರು. ಸಾಮಾನ್ಯವಾಗಿ ಇವರ ಬಡತನಕ್ಕೂ ಕಾರಣವಾಗಿರಬಹುದಾದ ಕೆಲವೊಂದು ಸಾಂಸಾರಿಕ ಸ್ಥಿತಿಗತಿಗಳು, ಜಾತಿ - ಇವರ ಜೀವನ ಚಿತ್ರದಲ್ಲಿನ ಕಾಮನ್ ಫ್ಯಾಕ್ಟರ್. ಅದು ತಂದೆಯ ಕುಡಿತ ಇರಬಹುದು, ಬೇಜವಾಬ್ದಾರಿತನ ಇರಬಹುದು, ಎಳೆಯ ವಯಸ್ಸಲ್ಲೇ ಸಂಭವಿಸಿದ ತಂದೆಯ/ಹಿರಿಯಣ್ಣನ ಮೃತ್ಯು ಅಥವಾ ಅಂಥವೇ ದುರಂತವಿರಬಹುದು, ಹೆಣ್ಣುಮಕ್ಕಳಿಗೆ ಸಂಬಂಧಿಸಿದಂತೆ ಘಟಿಸಿದ ಯಾವುದೇ ದುರಂತ, ಓಡಿಹೋಗಿದ್ದು, ಅತ್ಯಾಚಾರ, ಮದುವೆಯ ವೈಫಲ್ಯ, ಹುಚ್ಚು ಇತ್ಯಾದಿ ಇರಬಹುದು. ಇಂಥ ಸಾಂಸಾರಿಕ ಹಿನ್ನೆಲೆ, ಆರ್ಥಿಕ ಕಷ್ಟಕಾರ್ಪಣ್ಯಗಳು ಮತ್ತು ಜಾತಿ (ಇಲ್ಲಿ ಜಾತಿಗೆ ಹೆಚ್ಚಿನ ಒತ್ತು ಸಿಗುತ್ತಿದ್ದುದು ಆ ಕಾಲ ಹಾಗಿತ್ತು ಎನ್ನುವುದನ್ನು ಸೂಚಿಸುವುದಲ್ಲದೆ ಒಟ್ಟಾರೆ ಪರಿಸ್ಥಿತಿ ಇವತ್ತಿಗಿಂತ ಆವತ್ತು ಅಷ್ಟೇನೂ ಭಿನ್ನವಾಗಿರಲಿಲ್ಲ ಎಂದೇ ಹೇಳಬಹುದು.) ಮೂರೂ ಸೇರಿ (ಕೆಲವೊಮ್ಮೆ ಯಾವುದಾದರೂ ಒಂದು) ಈ ರೀತಿ ಪಟ್ಟಣಕ್ಕೆ ಬಂದ ಹುಡುಗರ ಅನುಭವ, ಪ್ರಬುದ್ಧತೆ ಮತ್ತು ಹೋರಾಟದ ಗುಣವನ್ನು ಕಟ್ಟಿಕೊಟ್ಟಿದ್ದು ಗಮನಕ್ಕೆ ಬರುತ್ತದೆ.
ಸಹಜವಾಗಿಯೇ ಇದು ಆಯಾ ವ್ಯಕ್ತಿಗಳಿಗೆ ತೀರ ಆಪ್ತವಾದ, ಹೃದಯಕ್ಕೆ ಹತ್ತಿರವಾದ, ಸದಾ ಮೆಲುಕು ಹಾಕಲು ಇಷ್ಟವಾದ ಸಂಗತಿಯೇ. ಆದರೆ ಇದನ್ನೇ ಇಟ್ಟುಕೊಂಡು ಲಂಕೇಶ್ ಗಂಭೀರವಾಗಿ ಚಿಂತಿಸುತ್ತಾರೆ. ಹಳ್ಳಿಯ ಹುಡುಗ, ಇಂಗ್ಲೀಷ್ ಎಂದರೆ ಅವನಿಗೆ ಭೀತಿ, ಹಣವಿದ್ದರೂ ನಗರ ಎಂದರೆ ಭೀತಿ, ಅಲ್ಲಿನ ಜನರ ಬಗ್ಗೆ ಭೀತಿ, ಹುಡುಗಿಯರೆಂದರೆ ಭೀತಿ ಇತ್ಯಾದಿ ಅಂಶಗಳನ್ನಿಟ್ಟುಕೊಂಡು ಯೋಚಿಸುತ್ತಾರೆ. ಅವರ ಯೋಚನೆ ಸಾಮಾಜಿಕ, ಮಾನಸಿಕ ಮತ್ತು ಆರ್ಥಿಕ-ರಾಜಕೀಯ ನೆಲೆಗಳನ್ನು ಹೊಂದಿದ್ದು ಎನ್ನುವುದನ್ನಷ್ಟೇ ಇಲ್ಲಿ ಸೂಚಿಸಿ ಮುಂದೆ ಹೋಗಬಹುದು.
ಅಲ್ಲಿ ನಾನು ಹಿಂದೆ ಹೇಳಿದ ಯಾವತ್ತೂ ಸಮಸ್ಯೆಗಳಿದ್ದೇ ಇರುತ್ತವೆ. ಜೊತೆಗೆ ಇವೆಲ್ಲ. ಸಾಲದಿದ್ದರೆ ಆ ಹೊತ್ತಿಗಾಗಲೇ ಸುರುವಾಗುವ ಲೈಂಗಿಕ ಒತ್ತಡಗಳು ಮತ್ತು "ಬ್ರಹ್ಮಶ್ಚರ್ಯವೇ ಜೀವನ, ವೀರ್ಯನಾಶವೇ ಮೃತ್ಯು" ತರದ ದರಿದ್ರ ಪುಸ್ತಕಗಳು ಬೇರೆ ಅದರದ್ದೇ ಆದ ವಿಚಿತ್ರ ಮಾನಸಿಕ ಒತ್ತಡಗಳನ್ನೆಲ್ಲ ನಿರ್ಮಿಸುತ್ತವೆ. ಹಾಸ್ಟೆಲ್ಲಿನಲ್ಲಿ, ಹೋಟೆಲ್ಲಿನಲ್ಲಿ, ಕಾಲೇಜಿನಲ್ಲಿ, ಹುಡುಗಿಯರ ಸಂಬಂಧ ಇರಿಸು ಮುರಿಸು ಉಂಟು ಮಾಡುವ ಪ್ರಸಂಗಗಳಿರುತ್ತವೆ. ಆಗ ಇವರಿಗೆ ಆಪ್ಯಾಯಮಾನವಾಗಿ ಒದಗುವ ಒಂದೇ ಒಂದು ನೆರಳಾಗಿದ್ದುದು ಬಹುಶಃ ಕಮ್ಯುನಿಸಂ. ಅದು ಜಾತಿಯಿಂದ, ಹಳ್ಳಿಯ ‘ಗಮಾರ’ತನದಿಂದ ಮತ್ತು ಇಂಗ್ಲೀಷ್ ಭೂತದಿಂದ ಒಮ್ಮೆಗೇ ಮುಕ್ತಿ ಕಾಣಿಸಿದ್ದು ಮಾತ್ರವಲ್ಲ, ಹಳ್ಳಿಯಲ್ಲಿ ಅನುಭವಿಸಿದ ಯಾವತ್ತೂ ಅವಮಾನ, ಸೋಲು, ಸಂಕಟಗಳಿಗೆ ಇಂಥದ್ದೇ ಕಾರಣ ಎಂದು "ವೈರಿಯನ್ನು ಗುರುತಿಸುವ" ನಿರಾಳತೆಯನ್ನೂ ಒದಗಿಸಿತು ಎನ್ನಬೇಕು. ಇದೊಂದು ತರ ‘ಅನಿಷ್ಟಕ್ಕೆಲ್ಲ ಶನೈಶ್ಚರನೇ ಕಾರಣ’ ಟೆಕ್ನಿಕ್ಕೇ. ಸ್ವಲ್ಪ ಮುಂದುವರಿಸಿ ಯೋಚಿಸಿದರೆ, ಬಹುಶಃ ಸಂಘಪರಿವಾರದವರು ಇವತ್ತು ನಮ್ಮ ಎಳೆಯ ತರುಣರಲ್ಲಿ ತುಂಬುತ್ತಿರುವ ಮುಸ್ಲಿಮ್ ದ್ವೇಷಕ್ಕೆ ಇದನ್ನೇ ಬಳಸಿಕೊಂಡಿರುವುದೂ ನಮ್ಮ ಅರಿವಿಗೆ ನಿಲುಕುತ್ತದೆ.
ಲಂಕೇಶರ "ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ" ಯಂಥ ಅದ್ಭುತ ಕತೆಯಿಂದಲೇ ಇದನ್ನು ಗಮನಿಸಬಹುದು. ಮುಂದೆ ಕಾಮರೂಪಿ, ಎಸ್ ಎಲ್.ಭೈರಪ್ಪ, ತೇಜಸ್ವಿ, ಕೇಶವ ಮಳಗಿ, ಅಬ್ದುಲ್ ರಶೀದ್, ಅಮರೇಶ್ ನುಗಡೋಣಿ, ಮಹದೇವ, ಆಲನಹಳ್ಳಿ ಮುಂತಾದವರ ಕತೆಗಳಲ್ಲಿ ಇಂಥ ಎಳೆಗಳು ಅಲ್ಲಲ್ಲಿ ಸಿಕ್ಕಿಯೇ ಸಿಗುತ್ತವೆ ಎನ್ನುವುದು ಎಷ್ಟು ನಿಜವೋ ಅಷ್ಟೇ ನಿಜವಾದದ್ದು ಮೇಲ್ಜಾತಿಯ, ಆರ್ಥಿಕವಾಗಿ ಹೆಚ್ಚು ಸ್ಥಿತಿವಂತರಾದ, ಸಾಂಸಾರಿಕವಾಗಿ ಹೆಮ್ಮೆಯ ಮನೆತನಕ್ಕೆ ಸೇರಿದ ಕತೆಗಾರರಲ್ಲಿ ಇವು ಸಿಗುವುದಿಲ್ಲ ಎನ್ನುವುದು ಕೂಡ. ಜಾತಿ ಅಥವಾ ಸಾಂಸಾರಿಕ ಸ್ಥಿತಿಗತಿಯ ಕುರಿತ ಅವಮಾನ, ಆರ್ಥಿಕ ಸಂಕಷ್ಟ ಇದ್ದ ಯಾವುದೇ ಜಾತಿಯ ಕತೆಗಾರರೂ ಅನುಭವಿಸಿದ್ದೇ ಇದನ್ನೆಲ್ಲ. ಇವತ್ತು ಅಂಥ ಸ್ಥಿತಿಯೊಂದು ಸಂಪೂರ್ಣವಾಗಿ ಮರೆಯಾಗಿದೆ ಎನ್ನುವ ಧೈರ್ಯ ನನಗಂತೂ ಇಲ್ಲ. ಆದರೆ ಇವತ್ತು ಅಂಥ ವರ್ಗದ ಕತೆಗಾರರಿಗೆ ಯಾವುದೆ ದೇಶ-ಭಾಷೆಯ ಸಾಹಿತ್ಯಕ್ಷೇತ್ರದಲ್ಲಾದರೂ ಉಸಿರಾಡಲು ಅವಕಾಶ ಇದೆಯೇ, ಅಂಥ ಪರಿಸ್ಥಿತಿ ಉಳಿದಿದೆಯೇ ಎನ್ನುವುದು ಹೆಚ್ಚು ಗಹನವಾದ ಪ್ರಶ್ನೆ.
‘ಬಿರುಕು’ ಅಥವಾ ‘ಅಕ್ಕ’ ಬರೆಯುವ ಲಂಕೇಶರು, ‘ಪಲ್ಲವಿ’ಯಂಥ ಸಿನಿಮಾ ಮಾಡುವ ಲಂಕೇಶರು ಇದನ್ನೆಲ್ಲ ತಾತ್ವಿಕ-ಸಾಮಾಜಿಕ ಆಯಾಮವುಳ್ಳ ಅನುಭವ ಎಂದು ಸ್ವೀಕರಿಸುತ್ತಾರೆ ಅಥವಾ ಆ ಆಯಾಮ ಇಟ್ಟುಕೊಂಡೇ ಅನುಭವವನ್ನು ರಾಚನಿಕವಾಗಿ ಕಟ್ಟುವ ಕಲೆಯ ಅನುಕೂಲಗಳನ್ನು ಬಳಸಿಕೊಳ್ಳುತ್ತಾರೆ. ಇವೆಲ್ಲ ಮುಂದಿನ ಅನೇಕ ಕತೆಗಾರರಲ್ಲಿ ಶೋಷಣೆಯ, ದಲಿತ ದೌರ್ಜನ್ಯದ, ಸಮಾನತೆಯ ಘೋಷಣೆಯ ಕತೆಗಳಾಗುತ್ತವೆ. ಹೆಣ್ಣಿನ ಪ್ರೇಮ-ಕಾಮದ ನೆರಳಲ್ಲಿ ಇದು ಆದರ್ಶದ ನಡೆಗಳೆನ್ನಬಹುದಾದ ವಿಧವಾ ವಿವಾಹ, ಅಂತರ್ಜಾತಿ ವಿವಾಹ, ಪರಿತ್ಯಕ್ತರ ಪುನರ್‌ಗ್ರಹಣ ಇತ್ಯಾದಿಯಾಗಿ ಬರುತ್ತದೆ. ನಟರಾಜ್ ಹುಳಿಯಾರ್ ಅವರದೇ ಕತೆಗಳನ್ನು ನಾವು ಗಮನಿಸುತ್ತ ಬಂದರೂ ಇದೇ ಪ್ರಕ್ರಿಯೆ ಅಲ್ಲಿಯೂ ಘಟಿಸಿರುವುದನ್ನು ಸ್ಥೂಲವಾಗಿ ಗಮನಿಸಬಹುದು.
ಈ ಕತೆಗಳು ಎಷ್ಟು subtle ಆಗಿ ಈ ಎಲ್ಲ ವಿಚಾರಗಳನ್ನು, ಅನುಭವಗಳನ್ನು ತಮ್ಮ ಕಥನ ಪ್ರಕ್ರಿಯೆಯಲ್ಲಿ ಬಳಸಿಕೊಂಡವೋ ಅಷ್ಟು ಕನ್ನಡ ಕಥನ ಪರಂಪರೆ ಶ್ರೀಮಂತವಾಯಿತು, ಸಮೃದ್ಧವಾದ ಪ್ರಯೋಗಗಳಿಗೆ ಅದು ತೆರೆದುಕೊಂಡಿತು ಮತ್ತು ಒಟ್ಟಾರೆಯಾಗಿ ನವ್ಯ, ದಲಿತ, ಬಂಡಾಯ - ಮೂರೂ ಹಂತಗಳಲ್ಲಿ ವಿಜೃಂಭಿಸಿ ನವ್ಯೋತ್ತರ ಕಥನ ಮಾದರಿಗಳನ್ನೂ ಕನ್ನಡಕ್ಕೆ ಕಟ್ಟಿಕೊಟ್ಟಿತು ಎನ್ನುವುದು ಸುಳ್ಳಲ್ಲ.
ಸಾಮಾನ್ಯವಾಗಿ ನಮಗೆಲ್ಲ ಗತಕಾಲದ ಕತೆಗಳು ಇಷ್ಟ. ಚಿಕ್ಕಮಕ್ಕಳಾಗಿರುವಾಗಿನಿಂದ ‘ಒಂದಾನೊಂದು ಕಾಲದಲ್ಲಿ, ಒಂದಲ್ಲಾ ಒಂದೂರಿನಲ್ಲಿ’ ನಡೆವ ಕತೆಗಳೇ ನಮಗೆ ಬೇಕಿದ್ದುದು. ನಿನ್ನೆ ನಡೆದಿದ್ದು, ಇಲ್ಲೇ ನಮ್ಮ ಊರಲ್ಲಿ ನಡೆದಿದ್ದು ಎಂದರೆ ಅದು ಅಷ್ಟು ಇಷ್ಟವಾಗುವುದಿಲ್ಲ. ಊರಲ್ಲಿ ನಡೆದಿದ್ದಕ್ಕಿಂತ ಹಳ್ಳಿಯಲ್ಲಿ ನಡೆದಿದ್ದು, ಹಳ್ಳಿಗಿಂತ ಹೆಚ್ಚು ಕಾಡಲ್ಲಿ ನಡೆದಿದ್ದು ಇಷ್ಟ. ಹಾಗಾಗಿ ಫ್ಯಾಂಟಸಿ ಅಗತ್ಯವಾಯಿತು. ಮಾತನಾಡುವ ಪ್ರಾಣಿಗಳು, ಭೂತ-ಪ್ರೇತಗಳು, ಮಾತನಾಡುವ ಮರಗಿಡಗಳು, ದೇವರು-ದೈವಗಳು, ರಾಕ್ಷಸರು, ಚಂದ್ರ-ಸೂರ್ಯ-ತಾರೆಗಳು ಅಗತ್ಯವಾದವು. ಚಂದಮಾಮದ ಕತೆಯಲ್ಲಿ ನಮಗೆ ಮಂದಿ ಎತ್ತಿನಗಾಡಿಯಲ್ಲಿ ಓಡಾಡಿದರೆ ಹೆಚ್ಚು ಆತ್ಮೀಯರಾಗುತ್ತಾರೆಯೇ ಹೊರತು ಮಾರುತಿ ಆಮ್ನಿಯಲ್ಲಿ ಓಡಾಡಿದರೆ ಅಲ್ಲ. ಕನಿಷ್ಠ ಅಂಬಾಸೆಡರ್ ಕಾರು ನಡೆದೀತು. ಅಂದರೆ, ಒಟ್ಟಾರೆಯಾಗಿ ನಮಗೆ ‘ಅನ್ಯ’ ಎನಿಸುವ ಅನುಭವಕ್ಕೆ ಮನಸ್ಸು ಹಾತೊರೆಯುತ್ತದೆಯೇ ಹೊರತು ನಮ್ಮದೇ ಅನುಭವದ ಗೋಳುಗಳಲ್ಲ. ‘ಅನ್ಯ’ದ ಮೂಲಕ ಕಾಣಿಸುವುದು ನಮ್ಮ ಬದುಕನ್ನೇ ಎನ್ನುವುದು ನಮಗೆ ಗೊತ್ತು. ಹಾಗಿದ್ದೂ ಕಥಾಜಗತ್ತು ಅನ್ಯವಾಗಿದ್ದರೆ ಇಷ್ಟವಾಗುತ್ತದೆ. ಅನುವಾದಗಳ ಕುರಿತ ನಮ್ಮ ಆಸ್ಥೆಗೂ ಬಹುಶಃ ಇಂಥ ಅಂಶಗಳೇ ಪ್ರೇರಕ.
ನಮಗೆ ಕುವೆಂಪು, ಕಾರಂತರ, ಮಾಸ್ತಿ, ಗೊರೂರರ ಕಥಾಜಗತ್ತು ಇಷ್ಟವಾಗುವುದು ಇಂಥವೇ ಕಾರಣಗಳಿಗಾಗಿ. ಹಾಗೆಯೇ ಲಂಕೇಶ್, ತೇಜಸ್ವಿ, ಮಹದೇವ, ರಶೀದ್, ಮಳಗಿ, ನುಗಡೋಣಿ ಕಟ್ಟಿಕೊಟ್ಟ ಜಗತ್ತು ಕೂಡ ನಮಗೆ ‘ಅನ್ಯ’ವಾಗಿಯೇ ಇತ್ತು. ಇವತ್ತಿನ ತಲೆಮಾರಿನ ಕತೆಗಾರರಿಗೆ ಮತ್ತು ಓದುಗರಿಗೆ ನಟರಾಜ್ ಹುಳಿಯಾರರ ಕಾದಂಬರಿ ಕಟ್ಟಿಕೊಡುವ ಅನುಭವ ಕೂಡ ಅಷ್ಟೇ ‘ಅನ್ಯ’ ವಾದದ್ದು ಮತ್ತು ಆಪ್ಯಾಯಮಾನವಾದದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನನ್ನ ತಲೆಮಾರಿನವರಿಗೆ ಬಹುಶಃ ಅಲ್ಲ ಎನಿಸುತ್ತದೆ. ನನಗಿದನ್ನು ಓದುವಾಗ ಎರಡೂ ಅಂಶಗಳು ಮತ್ತೆ ಮತ್ತೆ ಮನವರಿಕೆಯಾದವು. ಒಂದು, ಈ ಕಥನ ಪ್ರಕ್ರಿಯೆ ನಟರಾಜ್ ಹುಳಿಯಾರ್ ಅವರಿಗೆ ಎಷ್ಟು ಆಪ್ಯಾಯಮಾನವಾಗಿದ್ದಿರಬಹುದು, ಅವರು ಇದನ್ನು ಬರೆಯುತ್ತ ಎಷ್ಟು ಸುಖಿಸಿರಬಹುದು ಎನ್ನುವುದಾದರೆ ಇನ್ನೊಂದು ನಾನು ಈಗಾಗಲೇ ಇದನ್ನೆಲ್ಲ ಇನ್ನೆಲ್ಲೊ ಓದಿಯಾದಂತಿದೆಯಲ್ಲ ಎನ್ನುವುದು. ಈಚೆಗೆ ನಾನು ಇವರದೇ ತಲೆಮಾರಿನ ಒಬ್ಬರಿಗೆ ಅವರ ಕೃತಿ ಅಷ್ಟು ಇಷ್ಟವಾಗಲಿಲ್ಲ ಎಂದಾಗ ಅವರು ತಟ್ಟನೆ, ಈಗಿನ ತಲೆಮಾರಿನ ಅನೇಕರು ಅದ್ಭುತವಾಗಿದೆ ಎಂದು ಹೊಗಳುತ್ತಿದ್ದಾರೆ ಸರ್ ಎಂದುಬಿಟ್ಟರು. ಆಗ ನನಗೆ ನನ್ನ ಮಿತಿಯ ಅರಿವಾಯಿತು. ಇದು ತಪ್ಪಲ್ಲ, ಸಹಜ.
ನಾವು ನಮಗೆ ಅಥೆಂಟಿಕ್ ಆದ, ತೀರ ನಮ್ಮ ರಕ್ತ ಮಾಂಸ ಮೂಳೆಗಳಿಗೆ ಎಡತಾಕಿದ ಅನುಭವ ಗ್ರಹೀತ ಜಗತ್ತನ್ನೇ ಸಾಹಿತ್ಯದಲ್ಲೂ ಪುನರ್-ನಿರ್ಮಿಸುವುದರ ಮೂಲಕ ಪಡೆಯುವ ಸುಖ ಒಂದು ನೆಲೆಯದ್ದಾದರೆ ಅದನ್ನು ಓದುಗನಿಗೂ ಒದಗಿಸುತ್ತ ಬರೆಯುತ್ತಿರುವುದು ಒಂದು ಕಲಾಕೃತಿಯೂ ಆಗಬೇಕು ಮತ್ತು ಅದು ಕಲೆಯಿಂದ ಬದುಕಿಗೆ ಕೊಡಬೇಕಾದ ಏನನ್ನೋ ದಕ್ಕಿಸುವುದಕ್ಕೆ ಲಂಘಿಸಬೇಕಾದ ಲೀಪ್ ಪಡೆದುಕೊಳ್ಳಲೇಬೇಕು ಎನ್ನುವುದು ಸಾಹಿತ್ಯದ ಮಹತ್ವಾಕಾಂಕ್ಷೆ.
ಇದೆಲ್ಲ ಹೇಳುತ್ತ ಈ ಕಾದಂಬರಿಯಲ್ಲಿ ಮೇಲ್ನೋಟಕ್ಕೆ ಕಾಣದಂತಿರುವ ಹಲವು ಅದ್ಭುತ ಸಂಗತಿಗಳೂ ಮೇಳೈಸಿರುವುದನ್ನು ಮರೆಯಬಾರದು.
೧. ಇಡೀ ಊರನ್ನು, ಒಂದು ಸಮುದಾಯವೆಂಬಂತೆ ನಟರಾಜ್ ಹುಳಿಯಾರ್ ಅವರು ಚಿತ್ರಿಸಿರುವ ಒಂದು ಆಪ್ತ ಬಗೆ. ಇಲ್ಲಿ ದೊಡ್ಡಮ್ಮ, ಚಿಕ್ಕಮ್ಮ, ನೆರೆಕೆರೆ ಎಲ್ಲರ ಒಡನಾಟ ಇತ್ಯಾದಿ ಅಂತಿರಲಿ, ಅದು ಇರುವುದೇ. ಆದರೆ ಒಂದು ಊರಿನ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಮತ್ತು ದಲಿತ ಸಮುದಾಯವನ್ನೆಲ್ಲ ಅತ್ಯಂತ ಕುಶಲತೆಯಿಂದ ಈ ಕಥಾಜಗತ್ತಿನೊಳಗೆ ಕೂರಿಸುತ್ತ ಬಂದಿರುವುದು, ಅವರ ನಡುವಿನ ಕೊಡು-ಕೊಳ್ಳುವಿಕೆಯ ಇತಿಮಿತಿಗಳನ್ನು ಮರೆಯದೇ ಒಬ್ಬರು ಇನ್ನೊಬ್ಬರ ಒಳಿತು ಕೆಡುಕುಗಳಿಗೆ ಒದಗಿ ಬರುವುದನ್ನು ಚಿತ್ರಿಸಿರುವುದು, ಅದು ಕಥನದ ಹಂದರದಲ್ಲಿ ಅತ್ಯಂತ ಸಹಜವಾಗಿ ಬಂದಿರುವುದು ಅನನ್ಯವಾಗಿದೆ.
೨. ರಾಮದಾಸ್ ಮೇಷ್ಟ್ರು, ಶಿವತೀರ್ಥನ್, ನಂಜುಂಡಸ್ವಾಮಿ ಮುಂತಾದ ಜೀವಂತ ವ್ಯಕ್ತಿಗಳನ್ನೂ ಕಥಾ ಹಂದರದೊಳಕ್ಕೆ ತಂದು, ಒಂದು ಕಾಲದ ಚಳವಳಿ-ಹೋರಾಟ ಮತ್ತು ಪ್ರತಿಭಟನೆಗಳ ಹಿಂದಿನ ಮನೋಧರ್ಮ, ಚಿಂತನೆ, ಸ್ಫೂರ್ತಿಯ ಒಂದು ಸ್ಥೂಲ ನೋಟವನ್ನು ಈ ಕಾದಂಬರಿ ಕಟ್ಟಿಕೊಡುತ್ತಿರುವ ಬಗೆ. ಡಿಎಸ್ಸೆಸ್, ರೈತಸಂಘ, ಮಾರ್ಕ್ಸಿಸ್ಟ್, ಮಾವೋವಾದಿಗಳು ಮುಂತಾದ ಸಂಘಟನೆಗಳ ಸುತ್ತ ಒಂದು ಸುತ್ತು ಹಾಕುವ ಕಾದಂಬರಿಯ ಕಥಾನಕ ಮಾವೋವಾದಿ ಪವನ್‌ನ ಎನ್‌ಕೌಂಟರ್ ಮತ್ತು ಮೈಸೂರು ದಸರಾ ಸಂದರ್ಭ ಕಪ್ಪು ಬಾವುಟ ಪ್ರದರ್ಶನ ಮುಂತಾದ ಕೆಲವು ವಿದ್ಯಮಾನಗಳನ್ನು ಕೂಡ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇವೆಲ್ಲ ಒಂದು ತಲೆಮಾರಿನ ಚಿಂತನಾ ಕ್ರಮವನ್ನು ಮತ್ತು ತನ್ಮೂಲಕ ಬದುಕಿನ ರೀತಿನೀತಿಯನ್ನು ಕೂಡ ನಿರ್ಧರಿಸುವ ಚಿಕ್ಕಪುಟ್ಟ ಸಂಗತಿಗಳಾಗಿದ್ದವು ಎನ್ನುವುದು ನಿಜ. ಆದರೆ ಉತ್ತರಾರ್ಧದಲ್ಲಿ ಈ ಎಳೆಯನ್ನು ಪೂರ್ತಿಯಾಗಿ ಕೈಬಿಟ್ಟಂತೆಯೂ ಕಾಣುತ್ತದೆ.
೩. ಚೆಲುವಮ್ಮ, ದೊಡ್ಡಮ್ಮ, ಶಾಂತಕ್ಕ, ಹಾಡಿನ ಕಮಲಿ, ಭಾರ್ತಿ, ಫೆಮಿನಿಸ್ಟ್ ರಾಧಾ ಮುಂತಾದ ಗಟ್ಟಿಯಾದ ಸ್ತ್ರೀಪಾತ್ರಗಳನ್ನು ಕೆತ್ತಿ, ಅವರನ್ನು ಜೀವಂತಗೊಳಿಸಿರುವ ಮಾಯಕತೆ ಈ ಕಾದಂಬರಿಯ ಇನ್ನೊಂದು ಹೈಲೈಟ್. ಹೆಣ್ಣಿನ ಗೋಳುಗಳನ್ನು ಮತ್ತಿಷ್ಟು ಕೊರೆಯುವ ಮಾರ್ಗ ಬಿಟ್ಟುಕೊಟ್ಟು ಆಕೆಯ ದಿಟ್ಟತನದ ಚಿತ್ರಗಳನ್ನೇ ಕೊಡುತ್ತ ಹೋಗುವ ಹೊಸ ವಿಧಾನ ಅನುಸರಿಸಿರುವುದು ಕೂಡ ಮೆಚ್ಚುಗೆ ಹುಟ್ಟಿಸುತ್ತದೆ.
೪. ಕ್ರಾಂತಿಕಾರಕ ಎನ್ನಬಹುದಾದ ನಡೆಯನ್ನು ತೋರುವ ಮಠದ ಸ್ವಾಮಿ ನೀಲಗಂಗಯ್ಯ ಮತ್ತು ಸಂವಾದಿಯಾದ ಪಾತ್ರದಂತೆ ಕಾಣುವ ಯೋಗೀಬೆಟ್ಟದ ಅಮರಪ್ರೇಮಿಯಂಥ ಪಾತ್ರಗಳು. ಒಂದೆಡೆ ರಾಮದಾಸ್ ತರದವರ ವಿಚಾರವಾದಿ ನಿಲುವು ಹೊಂದಿದವರ ಬೆಂಬಲ ಮತ್ತು ಇನ್ನೊಂದೆಡೆ ಪಾದ್ರಿ ಪಾಲಣ್ಣ, ಊರಿನ ಹಿರಿಯರು ತಳೆಯುವ ಉದಾರವಾದಿ ನಿಲುವುಗಳು ಕಾದಂಬರಿಯ ಒಟ್ಟಂದಕ್ಕೆ ನೀಡಿರುವ ಕೊಡುಗೆ ಅನನ್ಯವಾಗಿದೆ. ಸ್ವಲ್ಪ ರೊಮ್ಯಾಂಟಿಕ್ ಅನಿಸಿದರೂ ಅಸಹಜವೇನಲ್ಲ ಅನಿಸುವುದರಿಂದಲೂ, ಇಡೀ ಕಾದಂಬರಿಯ ‘ಒಳಗೊಳ್ಳುವಿಕೆ’ಯ ಸಮುದಾಯ ಪ್ರಜ್ಞೆಯೂ ಈ ನಡೆಗೆ ಪೂರಕವಾಗಿಯೇ ಬಂದಿದೆ. ಚನ್ನಪಟ್ಟಣದ ಚಿತ್ರ ಕೂಡ ಇದಕ್ಕೆಲ್ಲ ಪೂರಕವಾಗಿಯೇ ಇರುವುದನ್ನು ಇಲ್ಲಿ ಗಮನಿಸಬಹುದು.
೫ ಚನ್ನಪಟ್ಟಣದ ಗೊಂಬೆ ತಯಾರಿ, ರಾಜ್ಕುಮಾರನ ಸಿನಿಮಾ ಮತ್ತು ಪ್ರೇಮದ-ಕಾಮದ ಕಥನದ ರಂಜನೆ ಕಾದಂಬರಿಗೆ ತಂದಿರುವ ಸೊಗಸು.
೬. ಕಾದಂಬರಿಯ ಉತ್ತರಾರ್ಧದಲ್ಲಿ ಭಾರತಿಯ ಮಗುವಿನೊಂದಿಗೆ, ಭಾರತಿಯ ಮನೆಯ ಟೆರೇಸಿನಲ್ಲಿ ಹೂಗಿಡಗಳೊಂದಿಗೆ ಚಂದ್ರ ಕಳೆಯುವ ಸಮಯದ ವಿವರಗಳು, ನಿರೂಪಣೆ, ಭಾರತಿ ಮತ್ತು ಚಂದ್ರನ ಕೆಲವೇ ಕೆಲವು ಏಕಾಂತದ ಸಮಾಗಮದ ಚಿತ್ರಗಳು ಅತ್ಯಂತ ಆಪ್ತವೂ, ಹೃದ್ಯವೂ ಆಗಿ ಮೂಡಿಬಂದಿದ್ದು ಕಾವ್ಯದ ಲಯ ಪಡೆದಿವೆ, ಬಹುಕಾಲ ಮನದಲ್ಲುಳಿಯುತ್ತವೆ.
ಇಷ್ಟೆಲ್ಲ ಇದ್ದೂ ಬಹುಶಃ ನಾನು ನಟರಾಜ್ ಹುಳಿಯಾರ್ ಅವರಿಂದ ಸಿಕ್ಕಾಪಟ್ಟೆ ನಿರೀಕ್ಷಿಸಿ ಬಿಟ್ಟೆನೊ ಅಥವಾ ನಟರಾಜ್ ಹುಳಿಯಾರ್ ಅವರೇ ಇಲ್ಲಿ ಚಳವಳಿ-ಹೋರಾಟಗಳ ವಿವರಗಳನ್ನು ಮೊಟಕುಗೊಳಿಸಿದ್ದರಿಂದಲೋ, ಚಂದ್ರ-ಭಾರತಿಯರ ಮದುವೆಗೇ ಕಥಾನಕದ ಕ್ಲೈಮ್ಯಾಕ್ಸ್ ಕೇಂದ್ರೀಕರಿಸಿದ್ದರಿಂದಲೋ, ಚಂದ್ರನ ಇನ್ನೂ ಕೆಲವು ಫೀಲ್ಡ್ ವರ್ಕ್ಸ್ ಕುರಿತ ವಿವರ ತರದೇ ಕೈಬಿಟ್ಟಿದ್ದರಿಂದಲೋ, ಚಂದ್ರನ ಬಾಲ್ಯ- ಬೆಂಗಳೂರಿನ ಶಿಕ್ಷಣ - ಕ್ಷೇತ್ರಕಾರ್ಯಗಳು - ಚಳವಳಿ, ಹೋರಾಟಗಳು ಮತ್ತು ಪ್ರೇಮ ಕಾಮದ ವಿವರಗಳು ಎಲ್ಲದರ ನಡುವೆ ಅಗತ್ಯವಿದ್ದ ಒಂದು ಸಂತುಲನವನ್ನು ಪುಟಗಳ ದೃಷ್ಟಿಯಿಂದಲೊ ಇನ್ನೊಂದೊ ತರದೇ ಇರುವುದರಿಂದಲೊ... ಗೊತ್ತಿಲ್ಲ, ಒಂದು ಅದ್ಭುತ ಕಾದಂಬರಿಯ ನಿರೀಕ್ಷೆಯಲ್ಲಿದ್ದವನಿಗೆ ಅಷ್ಟೇನೂ ಖುಷಿಯಾಗದೇ ಹೋಯ್ತು. ಹಾಗಾಗಿ ನಟರಾಜ್ ಹುಳಿಯಾರ್ ಅವರು ಅತಿ ಶೀಘ್ರದಲ್ಲೇ ಇನ್ನೊಂದು ಕಾದಂಬರಿ ಬರೆದು ನನ್ನಂಥವರ ಅಸಂತೃಪ್ತ ಆತ್ಮಕ್ಕೆ ಶಾಂತಿ ಒದಗಿಸುತ್ತಾರೆಂದು ನಿರೀಕ್ಷಿಸುತ್ತೇನೆ.
-ನರೇಂದ್ರ ಪೈ
ಎಲ್ಲ ಎಲ್ಲೆಗಳನ್ನು ಮೀರುವ ಕಾದಂಬರಿ-ಕಾಮನ ಹುಣ್ಣಿಮೆ-ಪ್ರಜಾವಾಣಿ
------
©2024 Book Brahma Private Limited.