ಖ್ಯಾತ ಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಪುತ್ರ ಡಾ. ಜಿ.ಎಸ್. ಶಿವಪ್ರಸಾದ್ (ಇಂಗ್ಲೆಂಡಿನಲ್ಲಿ ಮಕ್ಕಳ ತಜ್ಞರು) ಕಾದಂಬರಿ-ಪಯಣ. ಬೀಗಲ್ ಜಾತಿಯ ಉತ್ತಮ ತಳಿಯ ನಾಯಿಯೇ ಈ ಕಾದಂಬರಿಯ ಪ್ರಮುಖ ಪಾತ್ರ. ‘ಸ್ನೂಪಿ’ ಹೆಸರಿನಿಂದ ಈ ನಾಯಿಯು ಚಲನಚಿತ್ರ ನಿದೇರ್ಶಕ ನಿಖಿಲ್ ಎಂಬುವರ ಮನೆ ಸೇರುತ್ತದೆ. ನಂತರ ಅದರ ಸಾಧನೆ ಹಿನ್ನೆಲೆಯಲ್ಲಿ ‘ಅರ್ಚಿ’ ಎಂಬ ಹೆಸರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸಾಧನೆ ತೋರುತ್ತದೆ. ಅದರ ನಿವೃತ್ತಿ ನಂತರ ಅದು ಯಾರ ಕೈ ಸೇರಬೇಕು ಎಂಬ ಪ್ರಶ್ನೆಯೂ ಇಲ್ಲಿ ಸ್ವಾರಸ್ಯಕರವಾಗಿದ್ದು, ಪರಿಹಾರವೂ ನೀಡಿದೆ. ಇದು ಕೇವಲ ನಾಯಿಯೊಂದರ ಕಥೆಯಲ್ಲ; ಮಾನವೀಯ ಸಂಬಂಧಗಳನ್ನು, ಮೌಲ್ಯಗಳನ್ನು ಚರ್ಚಿಸುವ ಕಥೆಯೂ ಆಗಿದೆ.
ಸಾಹಿತಿ, ಲೇಖಕ, ಡಾ. ಜಿ.ಎಸ್.ಶಿವಪ್ರಸಾದ್ ಅವರು ಖ್ಯಾತ ಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಪುತ್ರರು. ಸದ್ಯ, ಇಂಗ್ಲೆಂಡಿನ ಚೆಸ್ಟರ್ ಫೀಲ್ಡ್ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು. ಇಂಗ್ಲೆಂಡಿನಲ್ಲಿ ‘ಕನ್ನಡ ಬಳಗದ ವೇದಿಕೆ’ ಮೂಲಕ ಕನ್ನಡ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ‘ದಕ್ಷಿಣ ಅಮೆರಿಕಾ ಒಂದು ಸುತ್ತು’ (ಪ್ರವಾಸ ಕಥನ), ಇಂಗ್ಲೆಂಡಿನಲ್ಲಿ ಕನ್ನಡಿಗ (ಕನ್ನಡ-ಇಂಗ್ಲಿಷ್ ಕವನಗಳ ಸಂಕಲನ) ಹಾಗೂ ಪಯಣ (ಕಾದಂಬರಿ) . ...
READ MOREನಾಯಿಯ ಬದುಕಿನ ಯಾನವಷ್ಟೇ ಅಲ್ಲ!
ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರ ಎರಡನೆಯ ಮಗ ಡಾ.ಜಿ.ಎಸ್.ಶಿವಪ್ರಸಾದ್ ಇಂಗ್ಲೆಂಡಿನ ಚೆಸ್ಟರ್‌ಫೀಲ್ಡ್ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿದ್ದಾರೆ. ವೈದ್ಯವೃತ್ತಿಯ ಜೊತೆಗೆ ಸಾಹಿತ್ಯಾಸಕ್ತರೂ ಆದ ಇವರು ಈಗಾಗಲೇ ‘ಇಂಗ್ಲೆಂಡಿನಲ್ಲಿ ಕನ್ನಡಿಗ’ ಎಂಬ ಕನ್ನಡ ಮತ್ತು ಇಂಗ್ಲಿಷ್ ಕವನಗಳ ಸಂಕಲನವನ್ನು ಹಾಗೂ ‘ದಕ್ಷಿಣ ಅಮೆರಿಕಾ ಒಂದು ಸುತ್ತು’ ಎಂಬ ಪ್ರವಾಸ ಕಥನವನ್ನು ಪ್ರಕಟಿಸಿದ್ದಾರೆ. ‘ಪಯಣ’ ಎಂಬ ಕಾದಂಬರಿ ಇವರ ಮೂರನೆಯ ಪ್ರಕಟಿತ ಕೃತಿ.
‘ಪಯಣ’ ಕಾದಂಬರಿಯ ಮುಖ್ಯ ಪಾತ್ರದಲ್ಲಿರುವುದು ಉತ್ತಮ ತಳಿಯ ಬೀಗಲ್ ಜಾತಿಯ ಒಂದು ನಾಯಿ. ಎರಡು ತಿಂಗಳ ಪುಟ್ಟಮರಿಯಾಗಿ ನಿಖಿಲ್ ಎಂಬ ಯುವ ಚಿತ್ರನಿರ್ದೇಶಕರ ಮನೆಗೆ ‘ಸ್ನೂಪಿ’ ಎಂಬ ಹೆಸರು ಪಡೆದು ಪ್ರವೇಶ ಪಡೆಯುವ ಘಟನೆಯಿಂದ ಇದರ ಪಯಣ ಆರಂಭ. ಹಲವು ವರ್ಷಗಳಲ್ಲಿ ಹಲವು ಕೈಗಳಿಗೆ ಬದಲಾಗುವ ನಾಟಕೀಯ ತಿರುವುಗಳ ನಂತರ ‘ಆರ್ಚಿ’ ಎಂಬ ಬದಲಾದ ಹೆಸರಿನಲ್ಲಿ ಪೊಲೀಸ್ ಇಲಾಖೆಗೆ ಸಲ್ಲಿಸಿದ ಅನುಪಮ ಸೇವೆಗಾಗಿ ಸನ್ಮಾನಗೊಂಡು, ಪ್ರಸಿದ್ಧವಾಗುವವರೆಗೆ ಕತೆ ಹಬ್ಬಿದೆ. ನಿವೃತ್ತಿಯ ನಂತರ ‘ಆರ್ಚಿ’ ಯಾರ ಕೈ ಸೇರಬೇಕು ಎಂಬ ಸೂಕ್ಷ್ಮ ಪ್ರಶ್ನೆಗೂ ಕಾದಂಬರಿಯಲ್ಲಿ ಒಂದು ಅನಿರೀಕ್ಷಿತ ಉತ್ತರವಿದೆ.
ನೇರ ಸರಳಶೈಲಿಯ ಸ್ವಾರಸ್ಯಕರ ಕತೆಗಾರಿಕೆ ಈ ಕಾದಂಬರಿಯ ಎದ್ದುತೋರುವ ಗುಣ. ಹಾಗೆಂದು ಮನರಂಜನೆಗಷ್ಟೇ ಇದು ಸೀಮಿತವಾಗಿಲ್ಲ. ಕತೆಗೆ ಸಂಬಂಧಿಸಿದಂತೆ ಬರುವ ಹಲವಾರು ವಿಷಯಗಳ ಬಗ್ಗೆ, ಉದಾಹರಣೆಗೆ: ಶ್ವಾನಚರಿತ್ರೆ, ಬೀದಿನಾಯಿಗಳ ಸಂತಾನಶಕ್ತಿಹರಣ ಚಿಕಿತ್ಸೆ, ಪೊಲೀಸ್ ಇಲಾಖೆಯಲ್ಲಿ ಶ್ವಾನಗಳ ಕಾರ್ಯವೈಖರಿ, ಹಾಗೆಯೇ ಆಟಿಸಂ ಎಂಬ ವ್ಯಕ್ತಿ ವಿಲಕ್ಷಣತೆಯ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ.
ಮೇಲ್ವರ್ಗ, ಮಧ್ಯಮವರ್ಗ ಹಾಗೂ ಶ್ರಮಿಕವರ್ಗದ ಇಲ್ಲಿನ ಹಲವು ಸ್ತರದ ಪಾತ್ರಗಳ ಜೀವನ ವಿಧಾನ, ನೋವು ನಲಿವು, ನಂಬಿಕೆ ಆಚರಣೆಗಳನ್ನು ಶಿವಪ್ರಸಾದ್ ಮುಕ್ತಮನಸ್ಸಿನಿಂದ, ಸಹಾನುಭೂತಿಯಿಂದ ಚಿತ್ರಿಸಿದ್ದಾರೆ. ಹೀಗಾಗಿ ಇದೊಂದು ಸಾಕುನಾಯಿಯ ಕತೆಯಾಗಿ ಮಾತ್ರ ಉಳಿಯದೆ ಸಮಕಾಲೀನ ಸಮಾಜದ ಮಾನವೀಯ ಸಂಬಂಧಗಳು ಹಾಗೂ ಮೌಲ್ಯಗಳ ಸಮಗ್ರ ಚಿತ್ರಣವಾಗಿ ತನ್ನ ಪರಿಧಿಯನ್ನು ವಿಸ್ತರಿಸಿಕೊಂಡಿದೆ.
‘ಲಿಯೊ’ ಎಂಬ ಒಂದು ಸಾಕುನಾಯಿಯು ಪ್ರಧಾನ ಪಾತ್ರವಾಗಿರುವ ರಜನಿ ನರಹಳ್ಳಿ ಅವರ ‘ಆತ್ಮ ವೃತ್ತಾಂತ’ ಎಂಬ ಕಾದಂಬರಿ ಈಗಾಗಲೇ ಜನಮನ್ನಣೆ ಗಳಿಸಿದೆ. ಆದರೆ, ಅಲ್ಲಿ ಲಿಯೊ ತಾನೇ ತನ್ನ ಕತೆಯನ್ನು ಹೇಳಿಕೊಂಡಿದೆ. ಆದರೆ ‘ಪಯಣ’ದಲ್ಲಿ ‘ಸ್ನೂಪಿ’ ಉರ್ಫ್ ‘ಆರ್ಚಿ’ಯ ಕತೆಯನ್ನು ಶಿವಪ್ರಸಾದ್ ನಿರೂಪಿಸಿದ್ದಾರೆ. ಹೀಗೆ ವಿಭಿನ್ನ ಶೈಲಿಯಲ್ಲಿರುವ ಈ ಎರಡೂ ಕೃತಿಗಳು ಮೌಲಿಕವಾಗಿವೆ.
ಈ ಕೃತಿಗೆ ತಲಸ್ಪರ್ಶಿ ಮುನ್ನುಡಿ ಬರೆದಿರುವ ಪ್ರಸಿದ್ಧ ವಿಮರ್ಶಕ ಟಿ.ಪಿ.ಅಶೋಕ ಅವರು ಗುರುತಿಸಿರುವಂತೆ, ವಿವಿಧ ಸಾಮಾಜಿಕ ಮತ್ತು ಔದ್ಯೋಗಿಕ ಹಿನ್ನೆಲೆಗಳಿಂದ ಬಂದ ಲೇಖಕರು ತಮ್ಮ ವೈವಿಧ್ಯಮಯ ಅನುಭವಗಳಿಂದ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಕಳೆದ ಎರಡು ದಶಕಗಳಿಂದ ಇನ್ನಷ್ಟು ಶ್ರೀಮಂತ ಹಾಗೂ ಸಮೃದ್ಧಗೊಳಿಸುತ್ತಿದ್ದಾರೆ. ಇವರಲ್ಲಿ ಕೆಲವರು ಬೇರೆ ಬೇರೆ ದೇಶ/ಪರಿಸರಗಳಲ್ಲಿ ವಾಸಿಸುತ್ತಿದ್ದು ಅಲ್ಲಿನ ಅನುಭವಗಳನ್ನು ಕನ್ನಡದಲ್ಲಿ ನಿರೂಪಿಸುತ್ತಿದ್ದಾರೆ. ಅಂತಹ ಪ್ರತಿಭಾವಂತ ಬರಹಗಾರರಲ್ಲಿ ಶಿವಪ್ರಸಾದ್ ಸಹ ಒಬ್ಬರಾಗಿದ್ದು ಈ ಗಮನಾರ್ಹ ಕಾದಂಬರಿಗಾಗಿ ಅಭಿನಂದನೀಯರಾಗಿದ್ದಾರೆ.
‘ಪಯಣ’ವನ್ನು ಓದಿದ ಬಳಿಕ, ‘ಸ್ನೂಪಿ’ ಉರ್ಫ್ ‘ಆರ್ಚಿ’ ಎಂಬ ಆ ಮುಗ್ಧಮುಖದ ಮುದ್ದು ಚೂಟಿ ಬೀಗಲ್ ನಾಯಿಯು ಚಿರಕಾಲ ಓದುಗರ ನೆನಪಿನಲ್ಲಿ ಅಚ್ಚಳಿಯದೆ ಉಳಿಯುವುದರಲ್ಲಿ ಸಂದೇಹವಿಲ್ಲ.
ಬಿ.ಆರ್. ಲಕ್ಷ್ಮಣರಾವ್
ಕೃಪೆ : ಪ್ರಜಾವಾಣಿ (2021 ಫೆಬ್ರುವರಿ 28)