ಕನ್ನಡ ಕಾದಂಬರಿ ಲೋಕದ ಅನನ್ಯ ಕೃತಿ ’ಗಂಗವ್ವ ಗಂಗಾಮಾಯಿ’. ಕಾನ್ರಾಡನ (Conrode) ಲಾಂಗ್ವೇಜ್ ಆಫ್ ಫ್ಯಾಕ್ಟ್ಸ್ ಎಂಬ ನಿರೂಪಣಾ ತಂತ್ರವನ್ನು ಬಳಸಿ ಶಂಕರ ಮೊಕಾಶಿ ಪುಣೇಕರ ಕಾದಂಬರಿಯನ್ನು ಹೆಣೆದಿದ್ದಾರೆ. ಲೇಖಕರೇ ಹೇಳಿಕೊಂಡಂತೆ ಇದೊಂದು ಸಾಂಪ್ರದಾಯಿಕ ಕಾದಂಬರಿ. ಹದಿನಾಲ್ಕು ಭಾಷೆಗಳಿಗೆ ಅನುವಾದಿತಗೊಂಡಿರುವ ಕನ್ನಡದ ಅತ್ಯುತ್ತಮ ಕೃತಿ.
ಶಂಕರ ಮೋಕಾಶಿ ಪುಣೇಕರ ಅವರ ಮೊದಲ ಕಾದಂಬರಿ. ಐವತ್ತರ ದಶಕದ್ದು. ಗಂಗವ್ವ, ಅವಳ ಮಗ ಕಿಟ್ಟಿ, ಗಂಗವ್ವ ನ ತಮ್ಮ ರಾಘವ, ದೇಸಾಯರು, ಕಿಟ್ಟಿಯ ಹೆಂಡತಿ ರತ್ನ, ಕಿಟ್ಟಿಯ ಕಛೇರಿಯ ಜನ ಇವಿಷ್ಟು ಮುಖ್ಯ ಪಾತ್ರಗಳನ್ನು ಇಟ್ಟುಕೊಂಡು ಈ ಕಾದಂಬರಿಯನ್ನು ರಚಿಸಿದ್ದಾರೆ.
14 ಭಾಷೆಗಳಿಗೆ ಅನುವಾದಗೊಂಡಿರುವ ವಿಶಿಷ್ಟವಾದ ಕಾದಂಬರಿ. ಆ ಕಾಲಕ್ಕೆ ಬರೆದ ಇದು ಒಂದು ಕ್ಲಾಸಿಕ್. ಕಾಶೀ ಯಾತ್ರೆಗೆ ಹೋಗಿಬರುವಾಗ ಗಂಗವ್ವನಿಗೆ ತಾನು ಗಂಗೆಯ ತರುವುದು ಸಾವಿಗಂಜಿ ಅಂತಂದುಕೊಂಡು ಬದುಕಬೇಕು ಅನ್ನುವ ಛಲದಲ್ಲಿ ಗಂಗೆಯು ಬದುಕುತ್ತಾಳೆ. ಅವಳ ಕೊಂಚ ರೊಕ್ಕ ದೇಸಾಯರ ಬಳಿ ಭದ್ರ ವಾಗಿದೆ. ಮಗನ ಮೇಲೆ ಗಂಗವ್ವನ ಹಿಡಿತ ಬಿಗಿ ಯಾಗಿದೆ. ಮಗ ಕಿಟ್ಟಿಗಾದರೋ ಕಛೇರಿಯಲ್ಲಿ ಕೆಲಸ ಹೊಸತಾದ ಕಾರಣ ಹೆಜ್ಜೆ ಹೆಜ್ಜೆಗೂ ಅವಮಾನ ಎದುರಿಸಬೇಕಾಗಿ ಬರುತ್ತದೆ. ಇಂತಹ ಸಂದರ್ಭದಲ್ಲಿ ಗಂಗವ್ವನ ತಮ್ಮ, ಕಿಟ್ಟಿಯ ಸೋದರಮಾವ ರಾಘವನ ಪ್ರವೇಶವಾಗುತ್ತದೆ. ಅವನಿಗೂ ಗಂಗವ್ವನಿಗೂ ಹಳೆಯ ವೈರ. ಈಗ ರಾಘವನಿಗೆ ತನ್ನ ಮಗಳ ಕಿಟ್ಟಿಗೆ ಮಾಡಿಕೊಡಬೇಕೆಂಬ ಆಸೆ; ಅದಕ್ಕಾಗಿ ಕಿಟ್ಟಿಯ ಮೇಲಾಧಿಕಾರಿಗೂ ತನಗೂ ಇದ್ದ ಪರಿಚಯದ ಮೂಲಕ ಕಿಟ್ಟಿಯ ಮೇಲೆ ಪ್ರಭಾವ ಬೀರುತ್ತಾನೆ. ಈ ತಂತ್ರಗಳ ಬಲೆಗೆ ಗಂಗವ್ವ ಪ್ರತಿ ತಂತ್ರ ಹೂಡಿದರೂ ಮಗನ ಆಗ್ರಹಕ್ಕೆ ಮಣಿದು ಮದುವೆಗೆ ಅನುಮತಿ ನೀಡುತ್ತಾಳೆ. ಹೊಸ ಸಂಸಾರದಲ್ಲಿ ಅತ್ತೆ ಸೊಸೆ ಜಗಳ, ಮಗನ ಮಾತಿಗೆ ಕೋಪಗೊಂಡು ಹೊರಟರೆ ಎಲ್ಲಿ ಅವನು ತಮ್ಮ ರಾಘವನ ಬಲೆಯ ಒಳಗೆ ಬೀಳುತ್ತಾನೋ ಎಂಬ ದುಃಖದಿಂದ ಹಲ್ಲು ಮುಡಿ ಕಚ್ಚಿ ಅವಮಾನ ತಾಳಿಕೊಂಡು ಬದುಕುವ ಗಂಗವ್ವ, ಇದರ ನಡುವೆ ದೇಸಾಯರ ಉಡಾಳ ಮಗ ವಸಂತ, ಕಿಟ್ಟಿಯ ಕಛೇರಿಯ ಬದುಕಿನ ಬದಲಾವಣೆಗಳು ಕಾದಂಬರಿಯಲ್ಲಿ ಕಂಡು ಬರುತ್ತದೆ.
ಈ ಕಾದಂಬರಿ-ಗಂಗವ್ವ ಮತ್ತು ಗಂಗಾಮಾಯಿ. ಇದರ ಮೊದಲ ಅಧ್ಯಾಯವು ಕರ್ನಾಟಕದ ಕಾಲೇಜಿನ ಮಿಸಲೆನಿಯಲ್ಲಿ ಕಥಾರೂಪವಾಗಿ (1948) ಪ್ರಕಟವಾಯಿತು. ನಂತರ ಮುಂದಿನ -3-4 ಅಧ್ಯಾಯಗಳನ್ನು ಬರೆದಿದ್ದಾಗಿ ಲೇಖಕರು ಸ್ಪಷ್ಟಪಡಿಸಿದ್ದಾರೆ.
ಮುನ್ನುಡಿ ಬರೆದ ವಿಮರ್ಶಕ ಕೆ.ಡಿ.ಕುರ್ತಕೋಟಿ ‘ ಕಾದಂಬರಿಯ ಶೈಲಿಯು ವೈವಿಧ್ಯಮಯವಾಗಿದೆ. ಶ್ರೇಷ್ಠ ಸಂಭಾಷಣೆಗಳಿವೆ. ಎಲ್ಲಿಯೂ ಭಾಷೆ ಅನಗತ್ಯವಾಗಿ ಅಲಂಕಾರಿಕವಾಗಿಲ್ಲ. ಇಡೀ ಕಾದಂಬರಿಯಲ್ಲಿ ಪ್ರಕೃತಿ ವರ್ಣನೆಗಾಗಲಿ, ವಿಷಯಾಂತರದ ಜಾದೂಗಾರಿಕೆಗಾಗಲಿ ಅವಕಾಶವಿಲ್ಲ. ಉತ್ತರ ಕರ್ನಾಟಕದ ಮಾತಿನ ಬಳಕೆಯೇ ಹೆಚ್ಚಾಗಿದೆ. ನಯ-ನಾಜೂಕು ಕುಸುರಿನ ಕೆಲಸ, ಭಾಷೆಯ ಇಂಪು-ಸೊಂಪು ಹೆಚ್ಚಾಗಿ ಕಾಣುವುದಿಲ್ಲ. ಆದರೆ, ಉತ್ಕಟ ಸನ್ನಿವೇಶದಲ್ಲಿ ಶೈಲಿ ಕಾವ್ಯದ ಕಾವಿನಿಂದ ಆವೇಶಗೊಳ್ಳುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ಕನ್ನಡ ಸಮ್ಮೇಳನದ ಸಾಹಿತ್ಯ ಮಾಲೆಯಡಿ 2018ರಲ್ಲಿ ಈ ಕಾದಂಬರಿಯನ್ನು ಕರ್ನಾಟಕ ಸರ್ಕಾರ ಪ್ರಕಟಿಸಿದೆ.
ಈ ಕಾದಂಬರಿಯು 1956ರಲ್ಲಿ (ಪುಟ: 327, ಬೆಲೆ: 3 ರೂ.) ಮನೋಹರ ಗ್ರಂಥಮಾಲೆಯಿಂದ ಮೊದಲ ಮುದ್ರಣ ಕಂಡಿತ್ತು.
ಶಂಕರ ಮೊಕಾಶಿ ಪುಣೇಕರ ಅವರು ಹುಟ್ಟಿದ್ದು 1928, ಧಾರವಾಡದಲ್ಲಿ. ಅಲ್ಲಿಯೇ ತಮ್ಮ ಶಿಕ್ಷಣವನ್ನು ಮುಗಿಸಿದರು. ಬಿ.ಎ.ಪದವಿ ಮುಗಿದ ನಂತರ ನಾಲ್ಕು ವರ್ಷಗಳ ಕಾಲ ವಿಜಾಪುರ, ಕಾರವಾರ, ಧಾರವಾಡಗಳಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂ.ಎ.ಪದವಿ ಮತ್ತು ಪಿಎಚ್.ಡಿ ಪದವಿಯನ್ನು ಪಡೆದರು. ಬೆಳಗಾವಿಯ ಆರ್.ಪಿ.ಡಿ.ಕಾಲೇಜು, ಲಿಂಗರಾಜ ಕಾಲೇಜು, ಮುಂಬಯಿಯ ಕೆ.ಸಿ.ಕಾಲೇಜು, ಐ.ಐ.ಟಿಗಳಲ್ಲಿ ಅಧ್ಯಾಪಕರಾಗಿ, ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. 1988ರಲ್ಲಿ ನಿವೃತ್ತಿಯ ನಂತರ ಮೂರು ವರ್ಷಗಳ ಕಾಲ ಶ್ರೀ ಸತ್ಯಸಾಯಿಬಾಬಾ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಕನ್ನಡ ಮತ್ತು ಇಂಗ್ಲಿಷ್ ...
READ MORE