ತಲೆಮಾರುಗಳ ಅಂತರ- ಆತ್ಮ ಹೇಳಿದ ಕಥೆ. ಡಾ. ಎಂ. ವೆಂಕಟಸ್ವಾಮಿ ಅವರ ಕಾದಂಬರಿ. ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ. ಮುಖ್ಯ ಪಾತ್ರ ಕೃಷ್ಣನ ಸಾವಿನೊಂದಿಗೆ ಕಾದಂಬರಿ ತೆರೆದುಕೊಳ್ಳುತ್ತದೆ. ಕೃಷ್ಣ, ಸ್ವಾತಂತ್ರ್ಯಪೂರ್ವ ಮತ್ತು ನಂತರದ ಕೊಂಡಿಯಾಗಿ ಅವನ ಬೇರುಗಳು ಹಳ್ಳಿಯಲ್ಲಿರುತ್ತವೆ. ಆದರೆ ಅವನ ಮಕ್ಕಳು ಬೆಂಗಳೂರು ಮತ್ತು ವಿದೇಶಗಳ ನಾಗರಿಕರಾದರೆ , ಇನ್ನು ಕೃಷ್ಣನ ಮೊಮ್ಮಕ್ಕಳು ಭಾರತದ ಬೇರುಗಳಿರುವ ವಿದೇಶಿಗರೆ ಆಗಿಬಿಡುತ್ತಾರೆ. ಕಥೆ ಮೂರು ಟಿಸಿಲಾಗಿ ಹೊಡೆದುಕೊಂಡು ಓದುಗರ ಮುಂದೆ ಅನಾವರಣಗೊಳ್ಳುತ್ತದೆ. 1. ಸತ್ತುಬಿದ್ದಿರುವ ಕೃಷ್ಣನ ಹೆಣದ ಮುಂದೆ ನಡೆಯುವ ಘಟನೆಗಳು. 2. ಕೃಷ್ಣನ ಆತ್ಮ ಗೋಡೆಮೇಲೆ ಕುಳಿತುಕೊಂಡು ತನ್ನ ಕಥೆಯನ್ನು ಓದುಗರ ಮುಂದೆ ಹೇಳಿಕೊಳ್ಳುವುದು. 3.ಆತ್ಮ-ಪ್ರೇತಾತ್ಮದ ಬಗ್ಗೆ ನಡೆಯುವ ದ್ವಂದ್ವಗಳು. ಜೊತೆಗೆ ಕೃಷ್ಣನ ಸಾವು ಹೇಗೆ ಸಂಭವಿಸಿತು ಎನ್ನುವ ಕುತೂಹಲವೂ ಕೊನೆಯವರೆಗೂ ಉಳಿದುಕೊಳ್ಳುತ್ತದೆ. ಜಗತ್ತು ಒಂದು ಜಾಗತಿಕ ಹಳ್ಳಿ ಎನ್ನುವ ಇಂದಿನ ಕಾಲಘಟ್ಟದಲ್ಲಿ ಸಾಮಾಜಿಕ ದಿವಾಳಿತನ ಮತ್ತು ತಲೆಮಾರುಗಳ ಅಂತರವನ್ನು ಈ ಕಾದಂಬರಿಯಲ್ಲಿ ನೋಡಬಹುದು.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಗೆ ಸೇರಿದ ಡಾ.ಎಂ.ವೆಂಕಟಸ್ವಾಮಿ ಅವರು 06.11.1955 ರಂದು ಜನಿಸಿದರು, ಪ್ರಾಥಮಿಕ ಶಿಕ್ಷಣ ತನ್ನ ಊರಿನಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಘಟ್ಟುಮಾದಮಂಗಳದಲ್ಲಿ ಪೂರೈಸಿದರು. ಕೆ.ಜಿ.ಎಫ್‍ನ ಮುನಿಸಿಪಲ್ ಬಾಯ್ಸ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮತ್ತು ಕೆಜಿಎಫ್ ಪ್ರ.ದ.ಕಾಲೇಜಿನಲ್ಲಿ ಬಿ.ಎಸ್ಸಿ. ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (ಭೂವಿಜ್ಞಾನ) ಎಂ.ಎಸ್ಸಿ., ಮುಗಿಸಿದರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾದರು. ಅದಕ್ಕೆ ಮುಂಚೆ ಸ್ವಲ್ಪ ಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿ (SAIL) ಕೆಲಸ ಮಾಡಿದ್ದರು. ‘ಕೋಲಾರ ಚಿನ್ನದ ಗಣಿಗಳು'' ಮಹಾಪ್ರಬಂಧಕ್ಕೆ ...
READ MOREತಲೆಮಾರುಗಳ ಅಂತರ (ಕಾದಂಬರಿ)
ವಿಮರ್ಶೆ : `ತಲೆಮಾರುಗಳ ಅಂತರದಲ್ಲಿ ಆತ್ಮಕ್ಕೆ ಕಂಡ ಬೀಜಗಳು’
ಎಂ.ವೆಂಕಟಸ್ವಾಮಿ ಎಂದೊಡನೆ ಮೊದಲು ನೆನಪಾಗುವುದು ಕೋಲಾರ ಚಿನ್ನದ ಗಣಿಗಳು. ಭಾರತೀಯ ಭೂವೈಜ್ಞಾನಿ ಸರ್ವೇಕ್ಷಣಾ ಇಲಾಖೆಯಲ್ಲಿ (ಜಿಎಸ್ಐ) ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಅವರು, ಕೆಜಿಎಫ್ ಚರಿತ್ರೆಯ ಮೇಲೆ ಅಧಿಕಾರಯುತವಾಗಿ ಮಾತನಾಡಬಲ್ಲರು. ಗಣಿ ಕಾರ್ಮಿಕರ ಬದುಕು ಬವಣೆಗಳನ್ನೂ ಹತ್ತಿರದಿಂದ ಬಲ್ಲವರು. `ಕೋಲಾರದ ಚಿನ್ನದ ಗಣಿಗಳು' ಪ್ರಬಂದಕ್ಕಾಗಿಯೇ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿಯನ್ನೂ ಪಡೆದವರು. ಸಾಹಿತ್ಯ ಕೃಷಿಯಲ್ಲಿ ಸಹ ಅವರ ತೊಡಗಿಕೊಂಡಿದ್ದು, ಅವರ ಎಂಟನೇ ಕಾದಂಬರಿ `ತಲೆಮಾರುಗಳ ಅಂತರ'. `ಸುಧಾ' ವಾರಪತ್ರಿಕೆ ಓದುಗರಿಗೆ ಈ ಹೆಸರು ಚಿರಪರಿಚಿತ. ಏಕೆಂದರೆ, ಈ ಕಾದಂಬರಿಯು ಮೊದಲು ಧಾರಾವಾಹಿಯಾಗಿ ಪ್ರಕಟವಾಗಿದ್ದು ಆ ಪತ್ರಿಕೆಯಲ್ಲೇ. ಓದುಗರಿಂದ ಅಪಾರ ಮನ್ನಣೆಯನ್ನೂ ಅದು ಗಳಿಸಿತ್ತು.
ಕಾದಂಬರಿಯ ಕೇಂದ್ರಬಿಂದು ಕೃಷ್ಣನ ಸಾವಿನೊಂದಿಗೆ ಆರಂಭವಾಗಿ ಆತನ ಸಮಾಧಿಯಲ್ಲಿ ಅಂತ್ಯಗೊಳ್ಳುವುದು ಇಲ್ಲಿನ ಕಥಾವಸ್ತು. ಕೃಷ್ಣನ ಆತ್ಮವೇ ಇಲ್ಲಿ ಕಥೆ ಹೇಳುತ್ತಾ ಹೋಗುತ್ತದೆ. ವ್ಯಕ್ತಿಯೊಬ್ಬ ದಶಕಗಳ ಕಾಲ ಬಾಳಿ, ಬದುಕಿ ಸಮೃದ್ಧ ಅನುಭವಗಳನ್ನೂ ಕಟ್ಟಿಕೊಂಡು ಅಸುನೀಗಿದ ಬಳಿಕ, ಆತನ ಆತ್ಮವು ಅದೇ ಬದುಕಿನ ಹಿಂಪುಟಗಳ ಮೇಲೆ ನಡೆಸುವ `ಸರ್ವೇಕ್ಷಣ’ ಶೈಲಿಯಲ್ಲಿ ಸಾಗುವ ಇಲ್ಲಿನ ಕಥನದ ತಂತ್ರಗಾರಿಕೆ ತುಂಬಾ ವಿಶಿಷ್ಟವಾಗಿದೆ. ಜಿಎಸ್ಐ ಭಾಷೆಯಲ್ಲೆ ಹೇಳುವುದಾದರೆ ಸರ್ವೇಕ್ಷಕರು ಟೇಪ್ ಹಿಡಿದು, ಅಳತೆ ಮಾಡಿ, ಸೈಟ್ ನ ಗುಣಲಕ್ಷಣಗಳ ನಿಖರ ವರದಿ ನೀಡುವಂತೆ, ಕಾದಂಬರಿಯ ಪಾತ್ರಗಳ ಕಥೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಮಧ್ಯೆ ಬಂದು ಸೇರಿಕೊಳ್ಳುವ ರೋಚಕ ತಿರುವುಗಳು ಕಥನ ಕುತೂಹಲವನ್ನು ಹೆಚ್ಚಿಸುತ್ತವೆ. ಹಾಗೆ ನೋಡಿದರೆ, ಇಲ್ಲಿನ ತಂತ್ರಗಾರಿಕೆ ಬೇರೆಯಾದರೂ ವ್ಯಕ್ತಿಯೊಬ್ಬನ ಸಾವಿನ ಬಿಂದುವಿನಿಂದ ಶುರುವಾಗಿ, ಮೂಲದವರೆಗೂ ಚಲಿಸುವ ಕಥೆಗಳು ಕನ್ನಡದಲ್ಲಿ ಈ ಹಿಂದೆ ಹಲವು ಬಂದಿವೆ. ಶಿವರಾಮ ಕಾರಂತರ `ಮರಳಿ ಮಣ್ಣಿಗೆ' ಕೃತಿ ಅಂಥವುಗಳಲ್ಲಿ ಕಳಶಪ್ರಾಯವಾಗಿ ನಿಲ್ಲುತ್ತದೆ. ಆ ಕೃತಿಯಂತೆ ಇಲ್ಲಿಯೂ ಬದುಕಿನ ಮೌಲ್ಯಗಳದ್ದೇ ಹೋರಾಟ. ಕಾಲಘಟ್ಟ ಮಾತ್ರ ಬೇರೆ, ಬೇರೆ, ಜಾಗತೀಕರಣದಿಂದ ಕೌಟಂಬಿಕ ಮೌಲ್ಯಗಳು ಮೂಲೆಗುಂಪಾಗಿರುವ, ಸಂಬಂಧಗಳು ಮುರಿದುಬಿದ್ದಿರುವ ಹಳಹಳಿಕೆ ಕಾದಂಬರಿಯಲ್ಲಿ ಎದ್ದುಕಾಣುತ್ತದೆ. ಸಾಮಾಜಿಕ ದಿವಾಳಿತನ ಹಾಗೂ ತಲೆಮಾರುಗಳ ಅಂತರದ ಚರ್ಚೆಯೂ ಕಥೆಯುದ್ದಕ್ಕೂ ನೆರಳಿನಂತೆ ಹಿಂಬಾಲಿಸುತ್ತದೆ.
- ಪ್ರಜಾವಾಣಿ, 20.11.2020.