ಕನ್ನಡ ಕಾದಂಬರಿ ಲೋಕದಲ್ಲಿ ನಿಸರ್ಗವನ್ನು ಕೇಂದ್ರ ಬಿಂದುವಾಗಿ ಮಾಡಿಕೊಂಡ ಕಾದಂಬರಿಗಳು ಹತ್ತು ಹಲವು. ಕಾರಂತರಿಂದ ಹಿಡಿದು ಪೂರ್ಣಚಂದ್ರ ತೇಜಸ್ವಿ ವರೆಗೂ ನಿಸರ್ಗ ಎಂಬುದು ಕಥಾನಕದ ಚಲನೆಯ ಭೂಮಿಕೆ ಯಾಗಿ ಹರವಿ ನಿಂತಿರುವುದು.ರಾವ್ ಬಹದ್ದೂರ್ ಅವರ ಗ್ರಾಮಾಯಣ, ಕುವೆಂಪು ಅವರ ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ಕಾರಂತರ ಬೆಟ್ಟದ ಜೀವ ದಿಂದ ಹಿಡಿದು ನಾ ಡಿಸೋಜರ ದ್ವೀಪ, ಆಲನಹಳ್ಳಿ ಶ್ರೀಕೃಷ್ಣ ರ ಕಾಡು, ತೇಜಸ್ವಿಯವರ ಚಿದಂಬರ ರಹಸ್ಯ, ಕರ್ವಾಲೋ ಈ ಸದ್ಯ ನನ್ನ ನೆನಪಿನ ಮಿತಿಯಲ್ಲಿ ಹೊರಟ ಉದಾಹರಣೆಗಳು. ಇಲ್ಲೆಲ್ಲಾ ನಿಸರ್ಗ ಎನ್ನುವುದು ವರವಾಗಿ, ಶಾಪವಾಗಿ ಮತ್ತು ಕಾಡುವ ಪ್ರಶ್ನೆಯಾಗಿ ಲೇಖಕರನ್ನು ಕೈಬೀಸಿ ಕರೆದಿದೆ. ಒಬ್ಬಂಟಿಯಾಗದ ಮನುಷ್ಯ ತನ್ನ ನೆರಳನ್ನು ನಿಸರ್ಗದಲ್ಲೇ ಕಂಡುಕೊಂಡ ಕಥನಗಳು ಹತ್ತು ಹಲವು. ಈ ಮೇಲಿನ ಮಾತುಗಳು ನನಗೆ ಏಕೆ ನೆನಪಾದವು ಎಂದರೆ ಪ್ರಸ್ತುತ, ಕಾಮತರ ಕಾದಂಬರಿಯ ಎಂಬ ಕಥನ ಅಜ್ಞಾತದ ಹಂದರವೂ ಕೂಡ ನಿಸರ್ಗವನ್ನು ಅನಾವರಣಗೊಳಿಸಿದೆ. ಒಬ್ಬಂಟಿಯಾಗಿ ನಿಂತ ಮನುಷ್ಯ ಮತ್ತು ಅವನನ್ನು ಒಂಟಿಯಾಗಿರಲು ಬಿಡದ ನಿಸರ್ಗದ ನಡುವಿನ ಮಾತುಕತೆಯ ಹಾಗಿದೆ. ಇಲ್ಲಿನ ಕಾಯಕನಾಥ ಎಂಬ ಭಾವುಕ ಮನಸ್ಸಿನ ಜೀವವೊಂದು ಎದುರಿಸುವ ಜೀವ ತೊಳಲಾಟಗಳಿಗೆ ಇರುವ ಏಕೈಕ ಸಾಕ್ಷಿ ಎಂದರೆ ನಿಸರ್ಗ ಮಾತ್ರ. ಬೇರೆ ಎಲ್ಲರೂ ಬಿಟ್ಟು ಹೋದರೂ ಮತ್ತೆ ಮತ್ತೆ ಕೈಬೀಸಿ ಕರೆವ ನಿಸರ್ಗ ಹೊಸ ಬಾಳನ್ನು ತೋರಿಸುವ ಶಕ್ತಿಯಾಗುತ್ತದೆ. ಆದರೆ ಈ ನಿಸರ್ಗದ ಧಾತುಗಳು ಕೇವಲ ಗಿಡ-ಮರ ಬೆಟ್ಟ ನದಿ ಮಾತ್ರ ಅಲ್ಲ. ಬದಲಿಗೆ ಮಿನಾಲಿ, ಸಾರಂಗ, ಜಂಪಣ್ಣ, ಯೋಗೀಶ, ಕಮಲಿ, ಪಾಂಡುರಂಗ ಎಲ್ಲರೂ. ಇವರೆಲ್ಲರ ಭಿತ್ತಿಗೆ ನೀರೆರೆದವಳು ಕುಮುದಿನಿ ನದಿ. ಅನ್ನ ಕೊಟ್ಟವರು ಅಜ್ಜರಕಾಡು ಮತ್ತು ಕಾರಗದ್ದೆ. ವಿವೇಕಾನಂದ ಕಾಮತರ ಅಜ್ಞಾತ ಕಾದಂಬರಿಯನ್ನು ನಾನು ಇಲ್ಲಿ ವಿಮರ್ಶೆ ಮಾಡಲು ಹೊರಡಲ್ಲ. ಬದಲಿಗೆ ಕಾದಂಬರಿಯ ಶಕ್ತಿ ಮತ್ತು ವ್ಯಾಪ್ತಿಯನ್ನು ಕುರಿತು ಆಲೋಚಿಸಿದ್ದೇನೆ. ಇಡೀ ಕಾದಂಬರಿಯಲ್ಲಿ ಉಸಿರು ಬಿಗಿ ಹಿಡಿದು ನಿಲ್ಲಿಸುವಂತೆ ಮಾಡುವ ಸಂಗತಿ ಎರಡು. ಒಂದು ಕಾಯಕನಾಥನ ಸಂಯಮ, ಮತ್ತೆ ಎರಡನೆಯದು ನಿಸರ್ಗದ ಅಚಾನಕ್ ಆದ ಪಲ್ಲಟಗಳು. ಕಾಯಕ ನಾಥನ ನಿಸ್ವಾರ್ಥ ಅಂತಃಕರಣ ಇಲ್ಲಿ ಕಾಡುತ್ತದೆ. ಹೋದ ಕಡೆಯಲ್ಲೆಲ್ಲ ನೋವು ಘಾಸಿ ಅನುಭವಿಸುವ ಕಾಯಕ ನಾಥನ ವ್ಯಕ್ತಿತ್ವ ಬಹುಕಾಲ ಕಾಡುವಂತದ್ದು. ನಿರ್ಲಿಪ್ತ ಭಾವದ ತತ್ವಜ್ಞಾನಿಯ ಹಾಗೆ ಚಿತ್ರಿತಗೊಂಡ ವ್ಯಕ್ತಿತ್ವವನ್ನು ಕಾಮತರು ಬಹಳ ಕಾಲ ಧ್ಯಾನಿಸಿ ಕಡೆದಂತಹ ಜೀವಂತ ಶಿಲ್ಪದಂತೆ ಅನುಭವಕ್ಕೆ ಬರುತ್ತದೆ. ಇದಕ್ಕೆ ಪೂರ್ವಕವಾಗಿ ಬರುವ ತಂತುಗಳ ಹಾಗೆ ಉಳಿದ ಪಾತ್ರಗಳು ಬಂದು ಹೋಗುತ್ತವೆ . ಹಾಗೇ ಕುಮುದಿನಿಯ ಪ್ರವಾಹ ಕೂಡ.
ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ವಿವೇಕಾನಂದ ಕಾಮತ್ ಅವರು 100ಕ್ಕೂ ಹೆಚ್ಚು ಕತೆ ಹಾಗೂ 60 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಅವರು ಜನಿಸಿದ್ದು 1976ರ ಜನವರಿ 21ರಂದು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಪದವಿ ಪಡೆದ ಈಗ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ಸೊಗಸಾದ ಭಾಷೆ, ಸರಳ ಶೈಲಿ, ಆಕರ್ಷಕ ನಿರೂಪಣೆಗಳಿರುವ ಕತೆ ಬರೆಯುವ ವಿವೇಕಾನಂದ ಅವರು 1994ರಲ್ಲಿ ಬರವಣಿಗೆ ಆರಂಭಿಸಿದ ಅವರಿಗೆ ಕಾದಂಬರಿಯ ಪ್ರಕಾರದಲ್ಲಿ ಒಲವು. 40 ಕಾದಂಬರಿಗಳು, 150ಕ್ಕೂ ಹೆಚ್ಚು ಕಥೆ, 20 ಮಿನಿ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳು ನಾಡಿನ ಬಹುತೇಕ ...
READ MOREಬದುಕಿನಲ್ಲಿ ವಿಪರೀತ ನೊಂದಾಗ ವ್ಯಕ್ತಿಯ ಬಾಳಲ್ಲಿ ವೈರಾಗ್ಯ ಪ್ರವೇಶಿಸುತ್ತದೆ. ಸಮಾಜದ ಸಹವಾಸ ಸಾಕೆನ್ನಿಸಿ, ಪ್ರಕೃತಿಯ ಸನ್ನಿಧಿಯಲ್ಲಿ ನೆಮ್ಮದಿಯನ್ನು ಪಡೆಯಲು ಮನಸ್ಸು ಹಪಹಪಿಸುತ್ತದೆ. ಮನುಷ್ಯ ನಿರ್ಮಿತ ವಸ್ತು, ವ್ಯವಸ್ಥೆಗಳೆಲ್ಲವೂ ಅಸಹ್ಯವನ್ನು ತರಿಸಿದರೆ, ನಿಸರ್ಗ ಸೃಷ್ಟಿ ಮಾತ್ರ ಸತ್ಯವೆನ್ನಿಸುತ್ತದೆ. ಆದರೆ ಈ ವೈರಾಗ್ಯಭಾವ ಶಾಶ್ವತವೆ? ಮನುಷ್ಯ ಯಾವತ್ತೂ ಸಂಘಜೀವಿ ಅಲ್ಲವೆ? ಕಾಡಿನಲ್ಲಿ ಹೋಗಿ ಬದುಕು ಮಾಡಿದರೂ, ಅದು ಹೇಗೋ ನಾಡು ನಮ್ಮನ್ನು ಸಡಿಲ ಮಣ್ಣಿನ ಕೆಸರಿನಂತೆ ನಮ್ಮ ಅರಿವಿಗೂ ತಿಳಿಯದಂತೆ ಒಳಕ್ಕೆ ಎಳೆದುಕೊಳ್ಳುತ್ತಾ ಹೋಗುವುದಿಲ್ಲವೆ? ಹಾಗಿದ್ದರೆ ಮನುಷ್ಯನ ಶಾಶ್ವತ ಆಯ್ಕೆ ಯಾವುದಿರಬೇಕು – ನಿಸರ್ಗವೆ ಅಥವಾ ಸಂಘಜೀವನವೆ? ನಮ್ಮ ನತದೃಷ್ಟ ಬದುಕಿಗೆ ಕೇವಲ ವಿಧಿ ಮಾತ್ರ ಕಾರಣವೆ ಅಥವಾ ಆಸೆಬುರುಕ ಸಮಾಜವು ಕೆಡುಕನ್ನು ತಂದೊಡ್ಡುತ್ತದೆಯೆ? ಮೇಲಿನೆಲ್ಲಾ ಅಧ್ಯಾತ್ಮಿಕ ಪ್ರಶ್ನೆಗಳನ್ನು ತಮ್ಮೆದುರು ಇಟ್ಟುಕೊಂಡು ವಿವೇಕಾನಂದ ಕಾಮತ್ ಅವರು ಈ ಕಾದಂಬರಿಯನ್ನು ರಚಿಸಿದ್ದಾರೆ. ಅತ್ಯಂತ ಸರಳ ಭಾಷೆ, ನಿತ್ಯ ಕಣ್ಣೆದುರೇ ನಡೆವ ಸಂಗತಿಗಳು, ತಡವರಿಸದ ನಡೆಯಲ್ಲಿ ಅವರು ಕತೆ ಹೇಳುವುದನ್ನು ರೂಢಿಸಿಕೊಂಡಿದ್ದಾರೆ. ಹಲವು ಕಾದಂಬರಿಗಳನ್ನು ಈಗಾಗಲೇ ಬರೆದಿರುವುದರಿಂದ, ಶ್ರೀಸಾಮಾನ್ಯನು ಪುಸ್ತಕದ ಓದಿನಲ್ಲಿ ಬಯಸುವುದೇನು ಎನ್ನುವುದನ್ನು ಅವರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಓದಿನ ಓಘಕ್ಕೆ ತೊಂದರೆಯಾಗದಂತೆ ಸುಲಲಿತವಾಗಿ ಕತೆ ಹೇಳುವುದು ಅವರಿಗೆ ಸಿದ್ದಿಸಿದೆ. ಅಪರಿಚಿತ ದೇಶಗಳನ್ನೂ ತಮ್ಮ ಕಥನಕ್ಕೆ ಒಗ್ಗಿಸಿಕೊಳ್ಳುವ ಪ್ರಬುದ್ಧತೆ ಅವರಿಗೆ ದಕ್ಕಿದೆ. ಎಲ್ಲಾ ಕಾಲಗಳಲ್ಲೂ ಮತ್ತು ಎಲ್ಲಾ ದೇಶಗಳಲ್ಲೂ ಮನುಷ್ಯರನ್ನು ಕಾಡಿದ ಈ ಪ್ರಶ್ನೆಗಳು ಕಾಮತ್ ಅವರನ್ನೂ ಈ ಹೊತ್ತು ಕಾಡಿರುವುದು ಅಚ್ಚರಿಯೇನಲ್ಲ. ಆದರೆ ಈ ಪ್ರಶ್ನೆಗಳಿಗೆ ಉತ್ತರಗಳು ಮಾತ್ರ ಅತ್ಯಂತ ಸಾಪೇಕ್ಷವಾದುವುಗಳಾಗಿವೆ. ಎಲ್ಲ ಕಾಲದಲ್ಲೂ ಅ ಹೊತ್ತಿಗೆ ಸರಿಹೊಂದುವ ಉತ್ತರಗಳನ್ನು ಮನುಷ್ಯರು ಕಂಡುಕೊಂಡಿದ್ದಾರೆ. ನಮ್ಮ ಈ ಸಂಕಷ್ಟದ ದಿನಗಳಲ್ಲಿ ಕಾಮತ್ ಅವರೂ ತಮ್ಮದೇ ಸಮಾಧಾನಗಳನ್ನು ಈ ಚಿರಂಜೀವಿ ಪ್ರಶ್ನೆಗಳಿಗೆ ಕಂಡು ಕೊಂಡು, ಈ ಕಾದಂಬರಿಯ ಮೂಲಕ ಅವನ್ನು ಕಲಾತ್ಮಕವಾಗಿ ದಾಖಲಿಸುತ್ತಾರೆ.
-ಸಾಹಿತಿ ವಸುಧೇಂದ್ರ