ಅಂತರರಾಷ್ಟ್ರೀಯ ಮಟ್ಟದಲ್ಲೂ ಬಹಳಷ್ಟು ಚರ್ಚೆಗೆ ಒಳಗಾದ ಕೃತಿ ಯು.ಆರ್. ಅನಂತಮೂರ್ತಿ ಅವರ ’ಸಂಸ್ಕಾರ’. 2015ನೇ ಇಸವಿಗೆ ಕಾದಂಬರಿ ಐವತ್ತು ವರ್ಷಗಳನ್ನು ಪೂರೈಸಿದೆ. ಈ ಐವತ್ತು ವರ್ಷಗಳಲ್ಲಿ ಕಾದಂಬರಿ ಸಹೃದಯರೊಳಗೆ ಧುಮ್ಮಿಕ್ಕಿ ಹರಿದಿದೆ.
ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕ ವಿ.ಎಸ್. ನೈಪಾಲ್, ’ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಅನಂತಮೂರ್ತಿ ಒಂದು ಬರ್ಬರ ನಾಗರಿಕತೆಯನ್ನು ಚಿತ್ರಿಸಿದ್ದಾರೆ’ ಎಂದು ಗ್ರಹಿಸಿದ್ದಾರೆ. ಮನೋವಿಜ್ಞಾನಿ ಎರಿಕ್ ಎರಿಕ್ಸನ್ ’ಸಂಸ್ಕಾರ’ ಸಿನಿಮಾ ನೋಡಿ ’ಇದು ಕಾಮದ ಅನುಭವ ಪಡೆಯದೆ ವೃದ್ಧನಾಗುವ ಆತಂಕವನ್ನು ಹೇಳುವ ಕತೆ ಎಂದು ವ್ಯಾಖ್ಯಾನಿಸಿದ್ದಾರೆ.
ಇನ್ನು ’ಸಂಸ್ಕಾರ’ವನ್ನು ವಿಮರ್ಶೆ ಮಾಡದ ಕನ್ನಡದ ಪ್ರಮುಖ ವಿಮರ್ಶಕರೇ ಇಲ್ಲ ಎನ್ನುವಷ್ಟು ಕಾದಂಬರಿ ಸಾರಸ್ವತ ವಲಯದಲ್ಲಿ ಜನಪ್ರಿಯ. ಕೃತಿಗೆ ಐವತ್ತು ವರ್ಷ ತುಂಬಿದ ಸಂದರ್ಭದಲ್ಲಿ ಪ್ರಜಾವಾಣಿಗೆ ಬರೆದ ಅಂಕಣದಲ್ಲಿ ವಿಮರ್ಶಕ ನಟರಾಜ ಹುಳಿಯಾರ್ ’...ಕಾದಂಬರಿಯ ಸಾಂಕೇತಿಕ ಅರ್ಥಗಳ ಒರತೆ ಇನ್ನೂ ಬತ್ತಿಲ್ಲ’ ಎಂದಿದ್ದಾರೆ.
ನವ್ಯ ಸಾಹಿತ್ಯದ ಕೆಲವು ಮೂಲಭೂತ ಪ್ರವೃತ್ತಿಗಳ ಸಮರ್ಥ ಆವಿಷ್ಕಾರ ಇದರಲ್ಲಿದೆ. ಹಳೆಯ ಸಂಸ್ಕಾರಗಳನ್ನು ಒರೆಗೆ ಹಚ್ಚಿ ನೋಡಿ, ಸತ್ವಹೀನವಾದವುಗಳನ್ನು ಕಳಚಿ ಒಗೆದು, ದ್ವಂದ್ವಕ್ಕೆ ಘರ್ಷಣೆಗೆ ದುಃಖಕ್ಕೆ ಅಳುಕದೆ, ಧೈರ್ಯದಿಂದ ಪ್ರಾಮಾಣೀಕತೆಯಿಂದ ಹೊಸ ಮೌಲ್ಯಗಳನ್ನು ಅನ್ವೇಷಿಸುವ ಪ್ರವೃತ್ತಿ ಹೊಂದಿದ್ದ ಯು.ಆರ್. ಅನಂತಮೂರ್ತಿಯವರ ಆಲೋಚನೆಗೆ ಅಕ್ಷರ ರೂಪ ನೀಡಿದ ಕೃತಿ ಇದಾಗಿದೆ. ಸಂಕೀರ್ಣವಾದ ಜಾತಿ ಭಿಕ್ಕಟ್ಟಿನ ಬಗ್ಗೆ ಅನಂತಮೂರ್ತಿ ಅವರು ವಿವರಿಸಿರುವ ರೀತಿ, ಹೊಸ ಕಾಲಕ್ಕೆ ತಕ್ಕಂತೆ ಬದಲಾಗಬೇಕಾದ ಜಾತಿ ವ್ಯವಸ್ಥೆ ಬಗ್ಗೆ ಈ ಕಾದಂಬರಿಯು ವಿವರಿಸುತ್ತದೆ. ಈ ಕಾದಂಬರಿಯು ಸಿನಿಮಾ ಆಗಿ ರೂಪುಗೊಂಡಿದೆ.
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MORE