ಕುರುಕ್ಷೇತ್ರ

Author : ಸಿ.ಎಂ.ಗೋವಿಂದರೆಡ್ಡಿ

Pages 188

₹ 188.00




Year of Publication: 2018
Published by: ಮಹಿಮಾ ಪ್ರಕಾಶನ
Address: ಮಹಿಮಾ ಪ್ರಕಾಶನ, ನಂ. ೧೩೯೩/೨, ಸಿ.ಹೆಚ್.-೩೧, ೬ನೇ ಕ್ರಾಸ್, ಕೃಷ್ಣಮೂರ್ತಿಪುರಂ , ಮೈಸೂರು-೫೭೦೦೦೪
Phone: 9448759815

Synopsys

‘ಕುರುಕ್ಷೇತ್ರ’ ಮಕ್ಕಳಿಗಾಗಿ ರಚಿಸಿದ ಮಹಾಭಾರತದ ಮೂರನೆಯ ಭಾಗ. ಈ ಭಾಗದಲ್ಲಿ ಕಥನವು ಕುರುಪಾಂಡವರ ಯುದ್ಧದ ಸಿದ್ಧತೆಯಿಂದ ಪ್ರಾರಂಭವಾಗಿ, ಯುದ್ಧ ಮುಗಿಯುವವರೆಗೆ ಹರಡಿಕೊಂಡಿದೆ. ದ್ವಿಪದಿಯಲ್ಲಿರುವ ಈ ಕಾವ್ಯದ ಸರಳ ಭಾಷೆ ಈವತ್ತಿನ ಆಡುನುಡಿಗೆ ಹತ್ತಿರದ್ದು. ಹಾಗಾಗಿ ಮಹಾಭಾರತ ಈವತ್ತಿನ ಕಥೆಯಾಗಿ ಭಾಷಿಕವಾಗಿಯೂ ತನ್ನನ್ನು ತೋರಿಸಿಕೊಳ್ಳುವುದು. ನಿಷ್ಠುರವಾದ ಜೀವನಪರ ನಿಲುವು ಕಥನದ ಉದ್ದಕ್ಕೂ ಕಂಡುಬರುವುದು. ಸಮಾಜಮುಖತೆ, ಶೋಷಿತ ವರ್ಗದ ಪರವಾದ ನಿಲುವು ಭಾರತ ಕಥೆಗೆ ಒಂದು ಹೊಸ ಪರಿವೇಷವನ್ನೇ ನೀಡಿವೆ. ಮಕ್ಕಳಿಗಾಗಿ ತಾನು ಭಾರತವನ್ನು ಪುನಾರಚಿಸುತ್ತಿರುವೆನು ಎಂಬ ಸ್ಪಷ್ಟ ನಿಲುವಿನಿಂದಲೇ ಕವಿಯು ಹೊರಟಿರುವುದರಿಂದ ಸರಳತೆ, ಸ್ಪಷ್ಟತೆ, ಸಂಕ್ಷಿಪ್ತತೆಯ ಮಾರ್ಗವನ್ನು ಅವರು ಅನುಸರಿಸುತ್ತಾರೆ. ಸಹಜಧರ್ಮದಲ್ಲಿ ಸಲೀಸಾಗಿ ಸಾಗುವ ಮನೋಹರವಾದ ಕಥನವು ಮಕ್ಕಳಿಗೆ ಮಾತ್ರವಲ್ಲ ಭಾರತ ಕಥೆಯಲ್ಲಿ ಆಸಕ್ತಿಯುಳ್ಳ ಹಿರಿಯರಿಗೂ ಪ್ರಿಯವಾಗುವುದರಲ್ಲಿ ಸಂಶಯವಿಲ್ಲ.

About the Author

ಸಿ.ಎಂ.ಗೋವಿಂದರೆಡ್ಡಿ
(11 August 1958)

ಮಕ್ಕಳ ಸಾಹಿತಿ ಎಂದು ಹೆಸರಾಗಿರುವ ಡಾ.ಸಿ.ಎಂ.ಗೋವಿಂದರೆಡ್ಡಿಯವರು ಮಕ್ಕಳ ಸಾಹಿತ್ಯದ ಜೊತೆಗೆ ಇತರೆ ಸಾಹಿತ್ಯದಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಇವರು ೧೯೫೮ರ ಆಗಸ್ಟ್ ೧೧ರಂದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಚನ್ನಿಗರಾಯಪರ ಗ್ರಾಮದ ಮುನಿಸ್ವಾಮಿರೆಡ್ಡಿ ಮತ್ತು ಸುಬ್ಬಮ್ಮ ದಂಪತಿಗಳ ಮಗನಾಗಿ ಜನಿಸಿದರು. ತಾಳಕುಂಟೆ, ಲಕ್ಕೂರು ಮತ್ತು ಮಾಲೂರಿನಲ್ಲಿ ಕ್ರಮವಾಗಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣವನ್ನು ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡದ್ದಲ್ಲದೆ ‘ಕೋಲಾರಜಿಲ್ಲೆಯ ಜಾತ್ರೆಗಳು’ ಎಂಬ ವಿಷಯದಲ್ಲಿ ಪಿಎಚ್.ಡಿ. ಮಹಾಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪದವಿಯನ್ನೂ ಪಡೆದರು. ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕರಾಗಿ, ಪ್ರೌಢಶಾಲಾ ...

READ MORE

Reviews

 

 

 

 

 

 

 

ಡಾ.ಸಿ.ಎಂ.ಗೋವಿಂದರೆಡ್ಡಿಯವರ

ಮತ್ತೊಂದು ಮಹಾಭಾರತ’’

                                       -ಡಾ.ಎಲ್.ಜಿ.ಮೀರಾ

ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯಾಗಿ ಮಾಡುವುದು ಉತ್ತಮ’’- ಇದು ವಿವೇಕಿಗಳ ಅನುಭವದ ಮಾತು. ಮಕ್ಕಳನ್ನು ಆಸ್ತಿಯಾಗಿ ಮಾಡುವುದೆಂದರೆ ಅವರ ಹೃದಯಶ್ರೀಮಂತಿಕೆಯನ್ನು ಹೆಚ್ಚಿಸುವುದು. ಮಕ್ಕಳ ಹೃದಯಶ್ರೀಮಂತಿಕೆಯನ್ನು ಹೆಚ್ಚಿಸುವಲ್ಲಿ ಪುರಾಣ, ಇತಿಹಾಸಗಳ  ಜ್ಞಾನ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ. ಚಿತ್ರಕಲೆ, ಶಿಲ್ಪಕಲೆ ಮುಂತಾದವುಗಳ ಪಾತ್ರ ಇದೆ. ನಾವು ಸಾಕಷ್ಟು ಸವಾಲುಗಳ ನಡುವೆ ಬದುಕುತ್ತಿದ್ದೇವೆ. ಜಾಗತೀಕರಣದಿಂದಾಗಿ ಎಲ್ಲೆಡೆ ಹರಡಿರುವ ಕೊಳ್ಳುಬಾಕತನದ ಸನ್ನಿವೇಶದಲ್ಲಿ, ಮಕ್ಕಳ ಮನಸ್ಸನ್ನು ಅರಳಿಸುವುದಕ್ಕಿಂತ ಕೆರಳಿಸುವ ಸಂದರ್ಭಗಳು ಹೆಚ್ಚಾಗುತ್ತಿವೆ. ದೇಸೀ ಭಾಷೆ ಮತ್ತು ಸಂಸ್ಕೃತಿಗಳು ತಮ್ಮ ಅಸ್ತಿತ್ವ ಮತ್ತು ಅಭಿವೃದ್ಧಿಗಾಗಿ ಹೊಸ ದಾರಿಗಳನ್ನು ಕಂಡುಕೊಳ್ಳಬೇಕಾದ ಬಿಕ್ಕಟ್ಟನ್ನು ಎದುರಿಸುತ್ತಿವೆ. ಹೊತ್ತಿನಲ್ಲಿ ಮಕ್ಕಳ ಹೃದಯಶ್ರೀಮಂತಿಕೆಯನ್ನು ಹೆಚ್ಚಿಸುವ ಕೆಲಸ ಮತ್ತಷ್ಟು ಸವಾಲಿನದ್ದಾಗಿದೆ.

ಮಕ್ಕಳ ಮನಸ್ಸನ್ನು ಅರಳಿಸುವ ಸವಾಲನ್ನು ಕೆಲವು ಹಿರಿಯರು ಸ್ವೀಕರಿಸಿ ತಮ್ಮದೇ ಆದ ರೀತಿಯ ಕೊಡುಗೆಗಳನ್ನು ಕೊಡುತ್ತಿದ್ದಾರೆ. ಅದರಲ್ಲಿ ಡಾ.ಸಿ.ಎಂ.ಗೋವಿಂದರೆಡ್ಡಿ ಒಬ್ಬರು. ಈಗಾಗಲೇ ಮಕ್ಕಳಿಗಾಗಿ ಅನೇಕ ಕೃತಿಗಳನ್ನು ಬರೆದಿರುವ ಕನ್ನಡ ಪ್ರಾಧ್ಯಾಪಕರುಅವರಿಗಾಗಿ ಒಂದು ಮಹಾತ್ವಾಕಾಂಕ್ಷಿ ಕೃತಿಯನ್ನು ರಚಿಸಿದ್ದಾರೆ. ಅದು ಮತ್ತೊಂದು ಮಹಾಭಾರತ. ಕೃತಿಯಲ್ಲಿ ಹಲವು ವೈಶಿಷ್ಟ್ಯಗಳಿವೆ. ಮಕ್ಕಳಿಗಾಗೆಂದೇ ವಿಶೇಷವಾಗಿ ರಚಿಸಲಾಗಿರುವ ಮಹಾಕಾವ್ಯವು ಸಾಕಷ್ಟು ಗಾತ್ರವನ್ನು ಹೊಂದಿದೆ. ಆರು ನೂರ ಹದಿನಾಲ್ಕು ಪುಟಗಳುಳ್ಳ ಕೃತಿಯನ್ನು ಹಸ್ತಿನಾಪುರ, ಪರ್ವತಾರಣ್ಯ, ಕುರುಕ್ಷೇತ್ರ ಮತ್ತು ಮಹಾಪ್ರಸ್ಥಾನ ಎಂಬ ನಾಲ್ಕು ಭಾಗಗಳಲ್ಲಿ ವಿಂಗಡಿಸಲಾಗಿದೆ. ಒಂದೊಂದು ಭಾಗದಲ್ಲೂ ಇಪ್ಪತ್ತೆಂಟು ಅಧ್ಯಾಯಗಳಿವೆ.

ಕೃತಿ ಮಹಾತ್ವಾಕಾಂಕ್ಷೆಯುಳ್ಳದ್ದು ಎಂದು ಈಗಾಗಲೇ ಪ್ರಸ್ತಾಪಿಸಿದ್ದೇನೆ. ಪ್ರಾಚೀನ ಕಾವ್ಯಮೀಮಾಂಸಕರು ಹೇಳುವ ಎಲ್ಲ ರೀತಿಯ ಕಾವ್ಯ ಪ್ರಯೋಜನಗಳನ್ನು  ಲೇಖಕರು ಮನಸ್ಸಿನಲ್ಲಿಟ್ಟುಕೊಂಡಂತೆ ತೋರುತ್ತದೆ. ಮಹಾಭಾರತ ಕಥಾ ಪರಿಚಯ, ಮನರಂಜನೆ, ನೀತಿಬೋಧೆ, ಲೋಕವ್ಯವಹಾರದ ಬಗ್ಗೆ ಅರಿವು, ಉತ್ತಮ ಬಾಳಿಗಾಗಿ ಮಾರ್ಗದರ್ಶನ ಎಲ್ಲವೂ ಇಲ್ಲಿ ಸಿಗಬೇಕು ಎಂಬ ಉನ್ನತ ಅಪೇಕ್ಷೆಯು ರಚನೆಯ ಹಿಂದೆ ಕೆಲಸ ಮಾಡಿದೆ.

ಮತ್ತೊಂದು ಮಹಾಭಾರತ ಕೃತಿಯು ಈಗಾಗಲೇ ನಾವು ಕೇಳಿರುವ, ಓದಿರುವ ಮಹಾಭಾರತಗಳ ಚರ್ವಿತ ಚರ್ವಣ ಪುನರುಕ್ತಿಯಲ್ಲ, ಇದೊಂದು ಪುನರ್ಸೃಷ್ಟಿ ಎಂಬುದು ಗಮನಿಸಬೇಕಾದ ವಿಷಯ. ಕಾಲಕ್ಕೆ ಬೇಕಾಗಿರುವ ಮೌಲ್ಯಗಳ ದೃಷ್ಟಿಯಿಂದ ಕಥಾವಸ್ತು ನಿರ್ವಹಣೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಅವುಗಳೆಂದರೆ ಉದಾಹರಣೆಗೆ ಪಾಂಡವರ ಜನನದ ಪ್ರಸಂಗ. ಪಾಂಡವರು ಹುಟ್ಟಿದ್ದು ಯಾವುದೇ ವರಪ್ರಸಾದದಿಂದ ಅಲ್ಲ. ಕುಂತಿ ಮಾದ್ರಿಯರು ದೇವರ ಹೆಸರುಳ್ಳ ಸಿದ್ಧ ಪುರುಷರೊಂದಿಗೆ ನಿಯೋಗ ಪದ್ಧತಿಯಲ್ಲಿ ಕೂಡಿದ್ದರಿಂದ ಹುಟ್ಟಿದ್ದು.

ಇನ್ನು ಕಿಂದಮ ಋಷಿಯ ಕಥೆ. ಜಿಂಕೆಯ ರೂಪದಲ್ಲಿ ಹೆಂಡತಿಯನ್ನು ಕೂಡುವ ಋಷಿಯ ವೃತ್ತಾಂತವು ಪಾಂಡುವಿನ ಕನಸಿನಲ್ಲಿ ಬರುತ್ತದೆಯೇ ಹೊರತು ನಿಜವಾಗಿ ನಡೆಯುವುದಿಲ್ಲ. ಗಾಂಧಾರಿಯು ಕುಂತಿಯ ಮೇಲಿನ ಅಸೂಯೆಯಿಂದ ಹೊಟ್ಟೆಯನ್ನು ಹಿಸುಕಿಕೊಂಡಿದ್ದು ಕೂಡ ಒಂದು ಕನಸು. ವಾಸ್ತವವಾಗಿ ಅವಳು ಮತ್ತು ಅರಮನೆಯ ದಾಸಿಯರು ಸೇರಿ ಹೆತ್ತ ಒಟ್ಟು ಮಕ್ಕಳ ಸಂಖ್ಯೆ ನೂರ ಒಂದು. ಕುಂತಿ ಹಣ್ಣನ್ನು ಹಂಚಿಕೊಳ್ಳಿ ಎಂದದ್ದಕ್ಕಾಗಿ ಪಂಚಪಾಂಡವರು ದ್ರೌಪದಿಯನ್ನು ಮದುವೆಯಾದದ್ದಲ್ಲ. ಅರ್ಜುನನನ್ನು ಬಿಟ್ಟು ಉಳಿದ ನಾಲ್ಕು ಜನ ಪಾಂಡವರು ದ್ರೌಪದಿಯನ್ನು ಗೆದ್ದು ತರುವಲ್ಲಿ ನಮ್ಮ ಪ್ರಯತ್ನವೂ ಇದೆ. ಅವಳ ಮೇಲೆ ನಮಗೂ ಹಕ್ಕಿದೆ ಎಂದು ವಾದ ಹೂಡಿ ಹಠ ಮಾಡಿದ್ದರಿಂದ ಪಂಚಪತಿಪ್ರಸಂಗ ನಡೆದದ್ದು.

ಇಲ್ಲಿ ಕೃಷ್ಣ ದೇವರಂತಹ ಮನುಷ್ಯನೇ ಹೊರತು ದೇವರಲ್ಲ. ದ್ರೌಪದಿಗೆ ಕೃಷ್ಣ ಅಕ್ಷಯಾಂಬರ ಕೊಡಲಿಲ್ಲ, ಅವಳೇ ತನ್ನ ಆತ್ಮಶಕ್ತಿಯಿಂದ ಪ್ರಸಂಗವನ್ನು ನಿರ್ವಹಿಸಿದ್ದು, ಊರ್ವಶಿ ಅರ್ಜುನನಿಗೆ ನಪುಂಸಕನಂತೆ ಇರು ಎಂದಳೇ ಹೊರತು ಶಾಪವನ್ನೇನೂ ಕೊಡಲಿಲ್ಲ. ಜಯದ್ರಥನ ಅಂತ್ಯವಾಗಿದ್ದು ಸೂರ್ಯಗ್ರಹಣವಾಗಿದ್ದರಿಂದಲೇ ಹೊರತು ಕೃಷ್ಣ ಸೂರ್ಯನನ್ನು ತನ್ನ ಚಕ್ರದಿಂದ ಮರೆಮಾಡಿದ್ದರಿಂದ ಅಲ್ಲ.

ಒಟ್ಟಿನಲ್ಲಿ ಕಥನದಲ್ಲಿ ಪವಾಡ ಪ್ರಸಂಗಗಳನ್ನು ವಾಸ್ತವದ ತರ್ಕ ಮತ್ತು ವೈಚಾರಿಕತೆಯ ಅರಿವುಗಳು ಸ್ಥಳಪಲ್ಲಟಿಸಿವೆ

          ವೇದವ್ಯಾಸಲಿಖಿತ ಮಹಾಭಾರತವನ್ನು ಕನ್ನಡದಲ್ಲಿ ಅನೇಕ ಕವಿಗಳು ಮರುಲೇಖನಕ್ಕೆ ಒಳಪಡಿಸಿದ್ದಾರಷ್ಟೆ. ಪಂಪ, ರನ್ನ, ಕುಮಾರವ್ಯಾಸ, ಭೈರಪ್ಪ ಮುಂತಾದವರು ತಮ್ಮದೇ ದೃಷ್ಟಿಕೋನದಲ್ಲಿ ಮರುಲೇಖನಕ್ಕೆ ಒಳಪಡಿಸಿರುವ ಮಹಾಭಾರತಗಳನ್ನು ಸಿ.ಎಂ. ಗೋವಿಂದರೆಡ್ಡಿಯವರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಇರಾವತಿ ಕರ್ವೆಯವರ ಯುಗಾಂತ ಕೃತಿ ಕೂಡ ಇವರ ಮನಸ್ಸಿನಲ್ಲಿದೆ. ಮಹಾಭಾರತದ ಬೇರೆ ಬೇರೆ ಕಾಲದ ಬೇರೆ ಬೇರೆ ಅವತರಣಿಕೆಗಳನ್ನು ಗಮನಿಸಿ ತಮ್ಮದೇ ಆದ ಒಂದು ಹೊಸ ದಾರಿಯನ್ನು ಕಂಡುಕೊಳ್ಳಲು ಲೇಖಕರು ಗಂಭೀರವಾಗಿ ಪ್ರಯತ್ನಿಸಿದ್ದಾರೆ. ಕೃತಿಗೆ ಮುನ್ನುಡಿಯನ್ನು ಬರೆದಿರುವ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ಹೇಳಿರುವಂತೆ ಯಾವ ಲೇಖಕರೂ ಮಕ್ಕಳನ್ನೇ ಗಮನದಲ್ಲಿಟ್ಟುಕೊಂಡು ಭಾರತದ ಪುನರ್ಕಥನಕ್ಕೆ ತೊಡಗಿದವರಲ್ಲ. ಗೋವಿಂದರೆಡ್ಡಿ ಭಿನ್ನರಾಗುವುದು ಇಲ್ಲಿಯೇ. ಪದ್ಯರೂಪದಲ್ಲಿ ಅವರು ಮಹಾಭಾರತದ ಕಥೆಯನ್ನು ಸಾದ್ಯಂತವಾಗಿ ನಿರೂಪಿಸುತ್ತಾರೆ’’. ಕವಿಯ ಅರಿಕೆ ಹೀಗಿದೆ-

 

ಹಿಂದಿನ ಕಥೆಯನು ಇಂದಿಗೆ ಹೊಂದಿಸಿ ಸುಮಧುರ ಕನ್ನಡದಲ್ಲಿಂದು

ಅಂದದ ಚೆಂದದ ಸುಂದರ ಬಂಧದಿ ಹೇಳುತ ಸಾಗುವೆ ನಾನಿಂದು

ಕನ್ನಡ ಬಂಧುಗಳೆಲ್ಲರು ಹರಸಿರಿ ಗೋವಿಂದನ ಕೃತಿಯನ್ನು

         

ಇದು ಮಕ್ಕಳಿಗಾಗಿ ರಚಿಸಿರುವ ಕೃತಿ, ಹೀಗಾಗಿ ಭಾಷೆ ಸರಳವಾಗಿದೆ. ಕೃತಿಯ ಓಟ ಸುಲಲಿತವಾಗಿದೆ. ಲಯದ ಮೇಲೆ ಉತ್ತಮ ಹಿಡಿತವುಳ್ಳ ಬರವಣಿಗೆ ಇವರದು. ಕೃತಿಯ ಬಂಧ ಅಚ್ಚುಕಟ್ಟಾಗಿದೆ. ಲೇಖಕರು ಪ್ರತಿ ಅಧ್ಯಾಯದ ಪ್ರಾರಂಭದಲ್ಲೂ ಐದಾರು ವಾಕ್ಯಗಳ ಗದ್ಯಪೀಠಿಕೆಯನ್ನು ಕೊಡುತ್ತಾರೆ. ನಂತರ ಸ್ಪಷ್ಟವಾಗಿ, ಚುರುಕಾಗಿ ಕಥೆಯನ್ನು ಪದ್ಯರೂಪದಲ್ಲಿ ಹೇಳುತ್ತಾರೆ.

ಜೀವನಪಾಠ. ಲೋಕನೀತಿ ಇಂಥವು ಬಂದಾಗ ಅಕ್ಷರಗಳನ್ನು ಗಾಢ ಬಣ್ಣದಲ್ಲಿ ಮುದ್ರಿಸಲಾಗಿದೆ. ಕಾವ್ಯ ಮಾತ್ರ ಕೊಡಬಲ್ಲ ಜೀವನಾನುಭವ, ಸಾಂತ್ವನ, ಲೋಕವಿಚಾರ ಪಾಠಗಳನ್ನು ಇಂತಹ ಗಾಢ ಅಕ್ಷರಗಳುಳ್ಳ ಸಾಲುಗಳು ನೀಡುತ್ತವೆ.

ಎಲ್ಲ ರೀತಿಯ ಸಮಾನತೆಗಾಗಿ ತುಡಿವ ಮನಸ್ಸು ಲೇಖಕರದು. ಲಿಂಗಸಮಾನತೆಯ ಪ್ರಜ್ಞೆ, ಕುಲಸಮಾನತೆಯ ಪ್ರಜ್ಞೆ ಕೃತಿಯುದ್ದಕ್ಕೂ ಜೀವತಂತಿಯಾಗಿ ಮಿಡಿದಿವೆ. ಇದರೊಂದಿಗೆ ಎದ್ದು ಕಾಣುವ ವಿಷಯವೆಂದರೆ ಲೇಖಕರ ಯುದ್ಧವಿರೋಧಿ ನಿಲುವು. ಯುದ್ಧದ್ದೇ ಕಥೆಯಾದರೂ ಯಾಕೆ ಯುದ್ಧ ಬೇಕು? ಎಂಬ ಪ್ರಶ್ನೆ ಇಲ್ಲಿ ಏಳುತ್ತಲೇ ಇರುತ್ತದೆ.

ಅಂಬೆ, ಅಂಬಿಕೆ, ಅಂಬಾಲಿಕೆ, ಕುಂತಿ, ಗಾಂಧಾರಿ, ದ್ರೌಪದಿ ಮುಂತಾದ ಸ್ತ್ರೀಪಾತ್ರಗಳ ಚಿತ್ರಣದಲ್ಲಿ ಲೇಖಕರು ಸ್ತ್ರೀಸಂವೇದನೆಯನ್ನು ತೋರಿದ್ದಾರೆ. ಹೆಣ್ಣಿನ ಮಾತಿಗೆ ಬೆಲೆ ಇಲ್ಲದಿರುವುದು, ಅವಳ ಬಾಳಿನ ನಿರ್ಧಾರಗಳನ್ನು ಬೇರೆಯವರು ತೆಗದುಕೊಳ್ಳುವುದು, ಅವಳನ್ನು ವಸ್ತುವಿನಂತೆ ನೋಡುವುದು ಇಂತಹವನ್ನು ವಿರೋಧಿಸಿದ್ದಾರೆ. ಉದಾಹರಣೆಗೆ ಮಾದ್ರಿಯ ಮದುವೆಯ ಸಂದರ್ಭದಲ್ಲಿ ಅವಳನ್ನು ಕೇಳದೆ ನಿರ್ಧಾರ ತೆಗೆದುಕೊಳ್ಳಲ್ಪಟ್ಟಾಗ ಲೇಖಕರು ಹೀಗೆ ಬರೆದಿದ್ದಾರೆ.

 

ಹೆಣ್ಣಿನ ಇಷ್ಟಾನಿಷ್ಟವ ತಿಳಿಯುವ ಕಾಲವು ಬಂದೂ ಇರಲಿಲ್ಲ

ಹೆಣ್ಣನು ಸುಮ್ಮನೆ ಕೇಳುವುದೇತಕೆ ಎಂದು ಬಗೆದಿತ್ತು ಜಗವೆಲ್ಲ’’

 

ಇಡೀ ಕಾವ್ಯದಲ್ಲಿ ಇಂತಹ ಸ್ತ್ರೀಪರವಾದ ಅನೇಕ ಉದಾಹರಣೆಗಳನ್ನು ಕೊಡಬಹುದು. ಕಾವ್ಯವನ್ನು ಓದುವ ಮಕ್ಕಳ ಮನಸ್ಸಿನಲ್ಲಿ ಎಂತಹ ಮೌಲ್ಯಗಳು ನೆಲೆಗೊಳ್ಳಬೇಕು ಎಂಬ ಸ್ಪಷ್ಟ ಕಲ್ಪನೆ ಲೇಖಕರಿಗಿದೆ. ಅವುಗಳಲ್ಲಿ ಮುಖ್ಯವಾದ ಒಂದು ಮೌಲ್ಯವೆಂದರೆ ಲಿಂಗ ಸಮಾನತೆ.

ಇದೇ ರೀತಿಯಲ್ಲಿ ಏಕಲವ್ಯ, ಕರ್ಣ ಮುಂತಾದವರ ಸನ್ನಿವೇಶ ಬಂದಾಗ ಲೇಖಕರು ಕುಲಸಮಾನತೆಯ ಕುರಿತು ಸ್ಪಷ್ಟ ಕಲ್ಪನೆ ನೀಡಿದ್ದಾರೆ. ಉದಾಹರಣೆಗೆ ಏಕಲವ್ಯನ ಪ್ರಸಂಗದಲ್ಲಿ ಹೀಗೆ ಹೇಳುತ್ತಾರೆ

ಆದಿಯಿಂದಲು ಶೂದ್ರರ ಶೋಷಣೆ ನಡೆಯುತಲಿದ್ದಿತು ಎಡೆಬಿಡದೆ

ಆದರೆ ಶೂದ್ರರು ಮಾನವರಲ್ಲವೆ ಅವರಿಗು ಕಲಿಯಲು ಬಲು ಆಸೆ

ಅಯ್ಯೋ ನೀತಿ ನಿಜಾಯಿತಿ ತಿರುಳನು ಜಾತಿಯು ತಿಂದಿತೆ..’’

 

ಜಾತಿಸಮಾನತೆ, ಕುಲಸಮಾನತೆಗಳ ಅರಿವು ಕೂಡ ಇಲ್ಲಿ ಹರಿಯುವ ಮುಖ್ಯ ವಿಚಾರವಾಹಿನಿಯಾಗಿದೆ. ಹೀಗೆಯೇ ಯುದ್ಧವಿರೋಧಿ ಮೌಲ್ಯವು ಕಾವ್ಯದಲ್ಲಿ ಮೂಡಿರುವ ರೀತಿ ಗಮನೀಯವಾದದ್ದು. ಯುದ್ಧದ ಚರ್ಚೆಗಳ ನಡುವೆ ಕೆಳಕಂಡಂತಹ ಸಾಲುಗಳು ಬರುತ್ತವೆ.

 

ಯುದ್ಧವು ವಿನಾಶಕಾರಕವೆಂಬುದು ತಿಳಿದಿದೆ ಲೋಕದ ಜನಗಳಿಗೆ

ಯುದ್ಧವು ಬೇಡೆಂದೆನ್ನುವುದಾದರೆ ಬದ್ಧತೆ ಬೇಕಿದೆ ಮನದೊಳಗೆ

ಯುದ್ಧವನ್ನು ಮಾಡುವುದೇಕೆಂದರೆ ಉತ್ತರ ಸಿಗುವುದೆ ನಮ್ಮೊಳಗೆ?

ಯುದ್ಧದಿಂದ ಸಮೃದ್ಧಿಯ ಕಾಣಲು ಸಾಧ್ಯವೇನು ಜಗದೊಳಗೆ?’’

 

ಹೀಗೆ ಉತ್ತಮ ಜೀವನಮೌಲ್ಯಗಳನ್ನು ಮುತ್ತುರತ್ನಗಳಂತೆ ಪೋಣಿಸುತ್ತಾ ಮಹಾಭಾರತ ಕಥೆಯ ಹಾರದ ಉಡುಗೊರೆಯನ್ನು ಮಕ್ಕಳಿಗಾಗಿ ಕವಿ ತಯಾರಿಸಿದ್ದಾರೆ. ಭೀಷ್ಮನಿಂದ ಹಿಡಿದು ಕರ್ಣನ ತನಕ, ಕುಂತಿಯಿಂದ ಹಿಡಿದು ಉತ್ತರೆಯ ತನಕ ಎಲ್ಲ ಪಾತ್ರಗಳನ್ನೂ ವಾಸ್ತವಿಕ ನೆಲೆಯಲ್ಲಿ ಗಮನವಿಟ್ಟು ಚಿತ್ರಿಸಿದ್ದಾರೆ. ದುರಾಸೆ, ಅಹಂಕಾರ, ಗರ್ವ, ದಾಯಾದಿ ಮತ್ಸರ, ದ್ವೇಷಗಳು ಹೇಗೆ ಬದುಕನ್ನು ಹಿಂಡುತ್ತವೆ ಎಂಬುದನ್ನು ಪಾತ್ರಗಳ ಸಂದರ್ಭದಲ್ಲಿ ವಿವರಿಸುತ್ತ ಹೋಗುತ್ತಾರೆ. ಓದುಗರು ತಮ್ಮ ಜೀವನಾನುಭವಗಳೊಂದಿಗೆ ತಾಳೆ ಮಾಡಿಕೊಳ್ಳುತ್ತ, ಸ್ವವಿಮರ್ಶೆ ಮಾಡಿಕೊಳ್ಳುತ್ತ ಬದುಕಿನ ಬಗ್ಗೆ ಆಲೋಚಿಸುವುದಕ್ಕೆ ಕಾವ್ಯವು ದಾರಿ ಮಾಡಿಕೊಡುತ್ತದೆ. ಮಕ್ಕಳು ಮಾತ್ರವಲ್ಲದೆ ದೊಡ್ಡವರು ಕೂಡ ಓದಿ ಸವಿಯುವ ಸಾಧ್ಯತೆ ಕೃತಿಗೆ ಇದೆ.

          ವಿಶ್ವಕ್ಕೆ ಭಾರತದೇಶವು ನೀಡಿರುವ ಅತಿ ದೊಡ್ಡ ಕೊಡುಗೆಗಳಲ್ಲಿ ಮಹಾಭಾರತದ ಕಥೆಯು ಮುಖ್ಯವಾದುದು. ಯುಗಾಂತ ಕೃತಿಯಲ್ಲಿ ಇರಾವತಿ ಕರ್ವೆಯವರು ಗುರುತಿಸುವಂತೆ ಪ್ರಖರವಾದ ಕರ್ತವ್ಯ, ಕಠೋರವಾದ ವೃತ್ತಾಂತ ಮಹಾಭಾರತದ ಕಥೆಯಾಗಿದೆ’’. ಕಥೆಯಲ್ಲಿ ಬರದೆ ಇರುವ ಮಾನವ ಜೀವನ ವಿಚಾರವು ಜಗತ್ತಿನಲ್ಲಿಲ್ಲ ಎಂದು ಹೇಳಲಾಗುತ್ತದೆ. ಮಕ್ಕಳಿಗಾಗಿ ರಚಿಸಿರುವ ಬೃಹತ್ಕೃತಿಯಲ್ಲಿ ಲೇಖಕರು ಮಾನವ ಸ್ವಭಾವದ ವಿವಿಧ ಮಗ್ಗುಲುಗಳನ್ನು ಚಿಕಿತ್ಸಕ ದೃಷ್ಟಿಯಿಂದ ದಾಖಲಿಸಿದ್ದಾರೆ. ಶರಶಯ್ಯೆಯಲ್ಲಿರುವ ಭೀಷ್ಮನು ಪಾಂಡವರಿಗೆ ಕೊಡುವ ಉಪದೇಶದಲ್ಲಿ  ಮಾನವ ಸ್ವಭಾವದ ವೈಚಿತ್ರ್ಯ ಮತ್ತು ದುರಂತಗಳು ಮಡುಗಟ್ಟಿವೆ ಅನ್ನಿಸುತ್ತದೆ.

 

ಎಲ್ಲ ಪಾಪಗಳ ಮೂಲವು ಇರುವುದು ಮಾನವ ದುರಾಸೆ ಮನದಲ್ಲಿ

ದುರಾಸೆಯಿಂದಲಿ ಮೋಸ ಕ್ರೌರ್ಯಗಳು ಮುಂದಕೆ ಬರುವವು ಭರದಲ್ಲಿ

ಧರ್ಮವನ್ನು ಕಡೆಗಣಿಸದೆ ಬದುಕಿರಿ ಮನಕೆ ನೆಮ್ಮದಿಯು ದೊರಕುವುದು

ಧರ್ಮವನ್ನು ಕಾಪಾಡದೆ ಹೋದರೆ ಮಾನವನೇತಕೆ ಬದುಕುವುದು?’’

 

ಹೀಗೆ ಪಾಂಡವರ, ಕೌರವರ ವಿವಿಧ ಮುಖಗಳನ್ನು ತೋರುತ್ತ ಮಾನವ ಸ್ವಭಾವದ ಆಳವನ್ನು ಗುರುತಿಸಲು ಪ್ರಯತ್ನ ಮಾಡುವ ಕಾವ್ಯ ಇದು. ಬುದ್ಧನು ಹೇಳಿದ್ದು ಆಸೆಯೇ ದುಃಖಕ್ಕೆ ಮೂಲ ಎಂಬ ಮಾತು. ಕಾವ್ಯ ಹೇಳುವುದು ದುರಾಸೆಯೇ ವಿನಾಶಕ್ಕೆ ಮೂಲ ಎಂಬ ಮಾತು. ಎರಡೂ ಎಷ್ಟು ನಿಜ! ದುರಾಸೆಯೇ ವಿನಾಶಕ್ಕೆ ಮೂಲ ಎಂಬ ಒಂದೇ ಮಾತಿನಲ್ಲಿ ಕಾವ್ಯದ ಸಾರಾರ್ಥವನ್ನು ತಿಳಿದುಕೊಳ್ಳಬಹುದು.

ಕಾವ್ಯವು ಸೂಕ್ಷ್ಮ ಪ್ರಶ್ನೆಯೊಂದಕ್ಕೂ ದಾರಿ ಮಾಡಿಕೊಡುತ್ತದೆ. ಧರ್ಮವನ್ನು ಆಚರಿಸಿ ಧರ್ಮ ಬೆಳಕಿನಲ್ಲಿ ಬೆಳಕಾಗಿ ಹೋಗುತ್ತಾನೆ. ನಿಜ. ಆದರೆ ಯಾವುದು ಧರ್ಮ ಎಂಬುದು ತುಸು ಸಂದಿಗ್ಧ ಪ್ರಶ್ನೆ. ಪ್ರಶ್ನೆಗೆ  ಮತ್ತೊಂದು ಪ್ರಶ್ನೆಯೇಳದ ಉತ್ತರ ಕೊಡಲು ಮನುಕುಲಕ್ಕೆ ಇನ್ನೂ ಸಾಧ್ಯವಾಗಿಲ್ಲ

ಇನ್ನೊಂದು ವಿಷಯದ ಚರ್ಚೆ ಆಗಬೇಕಾಗಿದೆ. ಇಲ್ಲಿ ಲೇಖಕರು ವಾಸ್ತವಮಾರ್ಗವನ್ನು ಅನುಸರಿಸುವುದರಿಂದ ಅದ್ಭುತ ರಮ್ಯ ಕಲ್ಪನಾ ಜಗತ್ತನ್ನು ನಿರಾಕರಿಸುತ್ತಾರೆ. ಆದರೆ ಮಕ್ಕಳ ಮನಸ್ಸನ್ನು ತಲುಪುವ ಅತ್ಯಂತ ಹತ್ತಿರದ ದಾರಿಯೆಂದರೆ ಅದ್ಭುತರಮ್ಯ ಲೋಕದ್ದು. ಎಚ್.ಎಸ್.ವಿ. ಅವರು ಕೇಳುವಂತೆ ಅಸಂಭಾವ್ಯವನ್ನು ನಿರಾಕರಿಸುವುದರಿಂದ ಕಾವ್ಯಕ್ಕಾದ ನಷ್ಟವೇನು? ಎಂಬ ಪ್ರಶ್ನೆ ಇಲ್ಲಿ ಏಳುತ್ತದೆ. ಮಕ್ಕಳ ಕಲ್ಪನಾಶಕ್ತಿಯನ್ನು ಉದ್ದೀಪಿಸುವ ಅದ್ಭುತ ರಮ್ಯ ಪ್ರಪಂಚ ಇಲ್ಲಿದ್ದಿದ್ದರೆ ಕಾವ್ಯ ಯಾವ ಸ್ವರೂಪವನ್ನು ಪಡೆಯಬಹುದಿತ್ತು? ಪ್ರಶ್ನೆಯೂ ಚಿಂತನೆಯನ್ನು ಬೇಡುತ್ತದೆ. ಬಹುಶಃ ಮಕ್ಕಳಲ್ಲಿ ಚಿಂತನಾಶಕ್ತಿ ಬೆಳೆಯಲಿ ಎಂಬ ಉದ್ದೇಶದಿಂದ ಲೇಖಕರು ವಾಸ್ತವಮಾರ್ಗವನ್ನು ಹಿಡಿದಿರಬೇಕು. ಅವರು ಲೇಖಕನ ಮಾತು ಭಾಗದಲ್ಲಿ ಹೇಳಿರುವುದು ಹೀಗೆ - ನಮ್ಮಲ್ಲಿ ಬರುಬರುತ್ತ ಅಸಹಿಷ್ಣುತೆ ಹೆಚ್ಚಾಗುತ್ತಿದ್ದು ಮಕ್ಕಳಿಗೆ ಎಳೆಯ ಹಂತದಿಂದಲೇ ಮುಂದೆ ಮನುಷ್ಯರಾಗಿ ಬದುಕುವುದನ್ನು ಕಲಿಸುವ ಪ್ರಯತ್ನವನ್ನೂ ಮಾಡಬೇಕಾಗಿದೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ? ಇದಕ್ಕೆ ಸಾಹಿತ್ಯವೇ ಮದ್ದು. ಆದ್ದರಿಂದ ಮಕ್ಕಳಲ್ಲಿ ಸಾಹಿತ್ಯಾಸಕ್ತಿಯನ್ನು ಬೆಳೆಸುವುದು ಜರೂರಿನ ಕೆಲಸವಾಗಿದೆ’’. ಸಾಹಿತ್ಯದ ಮನೋರಂಜನಾತ್ಮಕ ಅಂಶಕ್ಕಿಂತ ಅದರ ಮನೋಬೆಳವಣಿಗೆಯ ಗುಣಕ್ಕೆ ಲೇಖಕರು ಹೆಚ್ಚು ಪ್ರಾಮುಖ್ಯ ಕೊಟ್ಟಿರುವುದರಿಂದ ಕೃತಿಯು ಈಗಿರುವ ಸ್ವರೂಪವನ್ನು ಪಡೆದಿದೆ ಅನ್ನಿಸುತ್ತದೆ.

ಎಲ್ಲ ಚರ್ಚೆಗಳೂ ಒತ್ತಟ್ಟಿಗಿರಲಿಇಡೀ ಮಹಾಭಾರತ ಕಥೆಯನ್ನು ಇಡಿಯಾಗಿ ಸರಳವಾಗಿ ಮಕ್ಕಳಿಗಾಗಿ ಜೀವನ ಮೌಲ್ಯಗಳೊಂದಿಗೆ ಹೇಳಿರುವುದು ನಿಜಕ್ಕೂ ಪ್ರಶಂಸನೀಯವಾದುದು. ಇದರೊಂದಿಗೆ ಪ್ರತಿ ಅಧ್ಯಾಯದ ಪ್ರಾರಂಭದಲ್ಲೂ ಶ್ರೀಯುತ ಸು.ವಿ.ಮೂರ್ತಿ ಅವರು ಬರೆದಿರುವ ಕಥಾನುಸಾರೀ ಚಿತ್ರಗಳನ್ನು ಸೇರಿಸಿರುವುದು ಕೃತಿಯ ಮಹತ್ವವನ್ನು ಹೆಚ್ಚಿಸಿದೆ. ಕಾವ್ಯವನ್ನು ಓದುವುದರಿಂದ ಮಕ್ಕಳಿಗೆ ಬಾಳಿನ ರೀತಿ, ಮಾನವ ಸ್ವಭಾವಗಳ ವೈವಿಧ್ಯ, ವರ್ತನೆಗಳ ಅತಿರೇಕದಿಂದ ಆಗುವ ದುರಂತಗಳು, ಜೀವನದಲ್ಲಿ ವಿಧಿಯ ಆಟ, ಲಿಂಗಸಮಾನತೆ, ಕುಲಸಮಾನತೆಗಳ ಮಹತ್ವ ವಿಚಾರಗಳು ಮನದಟ್ಟಾಗುವುದರಲ್ಲಿ ಸಂಶಯವಿಲ್ಲ. ಭಾಷಾ ಸಂಪತ್ತಿನ ಹೆಚ್ಚಳವಂತೂ ಇದ್ದೇ ಇದೆ. ಕಾವ್ಯದಿಂದ ಪ್ರಯೋಜನ ಇರಲೇಬೇಕು ಎನ್ನುವುದಾದರೆ ಇದಕ್ಕಿಂತ ಪ್ರಯೋಜನ ಬೇಕೆ

---

 

 

 

Related Books