ಲೇಖಕಿ ಪದ್ಮಾಗುರುರಾಜ್ ಅವರ ಕಾದಂಬರಿ ʻಸ್ನೇಹ ಸಿಂಚನʼ. ಪುಸ್ತಕದ ಬೆನ್ನುಡಿಯಲ್ಲಿ, “ಪದ್ಮಾ ಗುರುರಾಜ್ ಅವರು ನಾಲ್ಕು ದಶಕಗಳಿಂದ ಸತತವಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಪ್ರಮುಖ ಲೇಖಕಿ. ನಲವತ್ತಕ್ಕೂ ಹೆಚ್ಚು ಕಾದಂಬರಿಗಳು, ಹಲವಾರು ಕಥಾ ಸಂಕಲನ ಗಳನ್ನು ಪ್ರಕಟಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಕಾಂಗರೂಗಳ ನಾಡಿನಲ್ಲಿ, ಪ್ರವಾಸ ಕಥನ ಹಲವಾರು ಪ್ರಶಸ್ತಿಗಳಿಗೆ ಪಾತ್ರವಾಗಿದೆ. ಈ ರಚನೆಗಳಲ್ಲಿ ಲೇಖಕಿ ಮಾಡಿರುವ ಹೊಸ ರೀತಿಯ ಪ್ರಯೋಗಗಳು ಅಚ್ಚರಿ ಮೂಡಿಸುತ್ತದೆ. ವೈವಿಧ್ಯಮಯ ಕಥಾವಸ್ತುಗಳೊಂದಿಗೆ ವಿಸ್ತಾರವಾದ ಓದಿನ ರೋಚಕ ಅನುಭವ ನೀಡುತ್ತದೆ. ಪದ್ಮಾ ಅವರು ಸ್ವಂತ ಪ್ರಕಾಶನ ಸಂಸ್ಥಯನ್ನೂ ನಡೆಸುತ್ತಿರುವ ಸಾಹಸಿ. ಇವರ ಸ್ನೇಹ ಸಿಂಚನ ಕಾದಂಬರಿಯು ಆಧುನಿಕತೆಯನ್ನು ತಿರಸ್ಕರಿಸದೆ ಪ್ರಗತಿಪರ ಚಿಂತನೆಗಳನ್ನು ಹೊಂದಿದೆ” ಎಂದು ಹೇಳಲಾಗಿದೆ.
ಕಾದಂಬರಿಕಾರ್ತಿ ಪದ್ಮಾ ಗುರುರಾಜ್‌ರವರು ಹುಟ್ಟಿದ್ದು 1942 ರ ಸೆಪ್ಟಂಬರ್ 12 ರಂದು ಕೋಲಾರದ ಬಾಗೇಪಲ್ಲಿಯಲ್ಲಿ. ಕಾಲೇಜು ಪತ್ರಿಕೆಗಳಿಗೆ ಆಗಾಗ್ಗೆ ಬರೆದ ಸಣ್ಣಕತೆ, ಕವನಗಳು ಪ್ರಕಟಗೊಂಡಾಗ ಅವರ ಮನಸ್ಸು ಪುಳಕಗೊಂಡು ಬರೆಯಬೇಕೆಂಬ ಹಠ ಹುಟ್ಟಿತು. ಓದು ಮುಗಿಯುವ ಮುನ್ನವೇ ದಾಂಪತ್ಯ ಜೀವನಕ್ಕೆ ಅಡಿಯಿಟ್ಟು ತುಂಬಿದ ಮನೆಯ ಅವಿಭಕ್ತ ಕುಟುಂಬದಲ್ಲಿ ಪತಿಯೊಡನೆ ಏಕಾಂತದಲ್ಲಿ ಮಾತನಾಡಲೂ ಅವಕಾಶ ಸಿಗದಂತಹ ಪರಿಸ್ಥಿತಿಯಲ್ಲಿ ಇವರ ನೋವು, ನಲಿಗಳು, ತುಮಲಗಳಿಗೆ ಸಾಂತ್ವನ ಮಾಡುವವರೂ ಇಲ್ಲದ ಪರಿಸ್ಥಿತಿಯಲ್ಲಿ, ಕಾಲೇಜು ದಿನಗಳಲ್ಲಿ ಮನಸ್ಸಿನಾಳದಲ್ಲಿ ಬೆಚ್ಚಗೆ ಕುಳಿತಿದ್ದ ಸಾಹಿತ್ಯ ಚಟುವಟಿಕೆಗಳಿಗೆ ಕಾವು ಕೊಟ್ಟಂತಾಗಿ ಸಣ್ಣಕಥೆ, ಹರಟೆ, ಲೇಖನ ರೂಪದಲ್ಲಿ ಹೊರಹೊಮ್ಮತೊಡಗಿದವು. ...
READ MORE