‘ವರ್ಣಕ’ ತತ್ವಶಿಲೆಯಲ್ಲಿ ಮತ್ತೆ ಜೀವತಳೆದ ಭಾಷಾವಿಲಾಸ’- ಭಾರತೀಯ ಭಾಷಾ ಗಣಕ ಪಿತಾಮಹರೆಂದೇ ಪ್ರಸಿದ್ಧರಾದ ಕೆ.ಪಿ. ರಾವ್ ಅವರ ಕಾದಂಬರಿ. ಕಲ್ಪನೆ, ತಾರ್ಕಿಕತೆಗಳನ್ನು ಮೇಳವಿಸಿಕೊಂಡ ವಿಶಿಷ್ಟ ಕಾದಂಬರಿ 'ವರ್ಣಕ'. ಈ ಕೃತಿಗೆ ಎನ್. ತಿರುಮಲೇಶ್ವರ ಭಟ್ಟ ಅವರು ಮುನ್ನುಡಿ ಬರೆದಿದ್ದಾರೆ. ವರ್ಣಕ ಎಂಬ ಕೃತಿ ಸ್ಪಷ್ಟವಾಗಿ ಕಥನ ರೂಪದಲ್ಲಿದೆ. ಆದರೆ ಮೊದಲಿಂದ ಕೊನೆಯವರೆಗೂ ಕಥನ ಒಂದೇ ರೀತಿಯದಲ್ಲ. ನಿಜ, ಸರ್ವಜ್ಞರಾದ ಕಥನಕಾರರೊಬ್ಬರನ್ನು ಇಲ್ಲಿ ಗುರುತಿಸುವುದು ಸಾಧ್ಯ ಎನ್ನುತ್ತಾರೆ ತಿರುಮಲೇಶ್ವರ ಭಟ್ಟ. ಕೃತಿಯ ಶರೀರದಲ್ಲಿ ಸ್ಪಷ್ಟವಾಗಿ ಮೂರು ಭಾಗಗಳನ್ನು ಗುರುತಿಸಬಹುದು. ಮೊದಲ ಭಾಗದಲ್ಲಿ ಸರ್ವಜ್ಞರಾದ ನಿರೂಪಕರೊಬ್ಬರು ಶಂಭು ಮಹಾಜನರನ್ನು ಪರಿಚಯಿಸುತ್ತಾರೆ. ಆದರೆ ಅವರ ಪೂರ್ವ ವೃತ್ತಾಂತವು ಅವರೇ ಮನಸ್ಸಿನಲ್ಲಿ ನೆನಪಿಸಿಕೊಳ್ಳುವಂತೆ ರಚನೆಯಾಗಿದೆ. ಅಂದರೆ ಇಲ್ಲಿ ಸಿಂಹಾವಲೋಕನ ಅಥವಾ ಫ್ಲಾಶ್-ಬ್ಯಾಕ್ ತಂತ್ರಗಾರಿಕೆಯ ಉಪಯೋಗವಾಗಿದೆ. ಇವುಗಳಲ್ಲಿ ಒಂದರಲ್ಲಿ ಶಂಭು ಮಹಾಜನರು ವಿದೇಶಿಕನ್ಯೆಯನ್ನು ವರಿಸುವ ತಮ್ಮ ನಿರ್ಣಯವನ್ನು ತಮ್ಮ ಹೆತ್ತವರಿಗೆ ತಿಳಿಸುವ ಆಶಯದಿಂದ ಬಂದು ತಂದೆಯವರಿಂದ ಅವಮಾನಿತರಾಗಿ ಮರಳಿ ವಿದೇಶಕ್ಕೆ ಹೋಗುವ ಸಂದರ್ಭ. ಇದರಲ್ಲಿ ಭಾಷಾ ಸಂಬಂಧಿ ವಿಚಾರಗಳು ಕ್ವಚಿತ್ತಾಗಿ ಇವೆ ಎನ್ನುತ್ತಾರೆ ತಿರುಮಲೇಶ್ವರ ಭಟ್ಟ.
‘ವರ್ಣಕ’ ಕೃತಿಯ ವಿಮರ್ಶೆ
ನಾಲ್ಕು ವರ್ಷಗಳ ದೀರ್ಘಕಾಲದ ಬರಹದೊಂದಿಗೆ ರೂಪುಗೊಂಡ ಕಾದಂಬರಿ ಎನ್ನಬಹುದಾದ ಪ್ರಕಾರದಲ್ಲಿರುವ ಕೃತಿ ‘ವರ್ಣಕ’. ಹಾಗೆ ನೋಡಿದರೆ, ಇದನ್ನು ಕಾದಂಬರಿ ಎಂದರೆ ತುಸು ಹೃಸ್ವವಾದದಂತೆ ಭಾಸವಾಗುತ್ತದೆ. ಬಣ್ಣದ ಹೂವುಗಳ ಮಾಲೆಯನ್ನು ನೇಯ್ದಂತೆ, ಭಾಷಾ ಕ್ಷೇತ್ರದ ವೈವಿಧ್ಯಮಯ ಬೆಳವಣಿಗೆಗಳನ್ನು ಕಥೆಯೆಂಬ ಸೂತ್ರದಲ್ಲಿ ಲೇಖಕರು ಬಂಧಿಸಿದ್ದಾರೆ . ಅಲ್ಲಿ ಕಥೆಯ ಮುನ್ನಡೆಗೋಸ್ಕರ ವಿಸ್ಮಯ, ಭ್ರಮೆಯೆಂಬಂತಹ ಕಲ್ಪನೆಗಳ ನೆರವನ್ನು ಪಡೆದಿದ್ದಾರೆ. ಭಾರತೀಯ ಭಾಷಾ ಗಣಕ ಪಿತಾಮಹ ಕಿನ್ನಿಕಂಬಳ ಪದ್ಮನಾಭ ರಾವ್ ಬರೆದ ‘ವರ್ಣಕ’ ಕಾದಂಬರಿಯ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಬರಹ ಇಲ್ಲಿದೆ.
ವೈಯಕ್ತಿಕವಾದ ಏನೊಂದೂ ವಿಚಾರಗಳನ್ನು ವಿಲಂಬಿಸಿ ಮಾತನಾಡಲು ಬಯಸದ ಕೆ.ಪಿ.ರಾಯರು ಒಳ್ಳೆಯ ಮಾತುಗಾರರು. ಅವರೊಡನೆ ಒಂದಿಷ್ಟು ಹೊತ್ತು ಕಳೆಯುವುದೆಂದರೆ ಹೊಸದೊಂದು ವಿಚಾರವನ್ನು ಬೊಗಸೆಗೆ ತುಂಬಿಕೊಂಡಂತೆ. ನಮ್ಮ ಗ್ರಹಿಕೆಯ ಸಾಮರ್ಥ್ಯಕ್ಕೆ ತಕ್ಕಂತೆ ಅವರ ಮಾತುಗಳನ್ನು ಅರಗಿಸಿಕೊಳ್ಳುತ್ತ, ಆ ಮೂಲಕ ನಾವು ವೈಚಾರಿಕ ಹೊಳಹುಗಳನ್ನು ಪಡೆದುಕೊಳ್ಳಬಹುದು. ಇಂತಹ ಅನೇಕ ಹೊಳಹುಗಳು ಇರುವ ಕೃತಿಯೊಂದನ್ನು ಅವರು ತಮ್ಮ 81ರ ಹರೆಯದಲ್ಲಿ ರಚಿಸಿದ್ದಾರೆ.
ಭಾರತೀಯ ಭಾಷಾ ಗಣಕ ಪಿತಾಮಹ ಕಿನ್ನಿಕಂಬಳ ಪದ್ಮನಾಭ ರಾವ್ ಎಲ್ಲರ ಪ್ರೀತಿಯ ಕೆ.ಪಿ. ರಾವ್. ಹೊಸ ತಲೆಮಾರಿನವರ ಜೊತೆಗೆ ಪ್ರೀತಿಯಿಂದ ಮಾತನಾಡುತ್ತ, ತಮ್ಮ ಜ್ಞಾನ ಸಂಗ್ರಹವನ್ನು ಅವರಿಗೊಪ್ಪುವ ರೀತಿಯಲ್ಲಿ ಹೇಳಬಲ್ಲವರು. ಕೇರಳದ ಸಿನಿಮಾ ಲೋಕವನ್ನು, ಮುಂಬಯಿಯ ಸಂಗೀತ ಲೋಕವನ್ನು, ಕ್ವಾಂಟಂ ಫಿಸಿಕ್ಸ್‌ನಲ್ಲಿ ತೋರುವ ಸಂದಿಗ್ಧಗಳನ್ನು, ಹೊಸತಲೆಮಾರಿನ ಎಂಜಿನಿಯರ್‌ಗಳು ಎದುರಿಸುತ್ತಿರುವ ಸವಾಲುಗಳನ್ನು ಮಾತನಾಡಬಲ್ಲವರು.
ಅವರು ತುಷಾರ ಪತ್ರಿಕೆಗೆ ತಮ್ಮ ಆತ್ಮಕತೆ ‘ಪದುಮನಾಭನ ಧ‍್ಯಾನ’ ಸರಣಿಯನ್ನು ಬರೆಯಲು ಶುರು ಮಾಡಿದಾಗ, ಭಾಷಾ ವಿಜ್ಞಾನಕ್ಕೆ ಸಂಬಂಧಿಸಿದ ಕಾದಂಬರಿಯೊಂದನ್ನು ಬರೆಯಬೇಕು ಎಂದು ನಿರ್ಧರಿಸಿದರು. ಹಾಗೆ ರೂಪುಗೊಂಡ ಪಾತ್ರವೇ ಪ್ರೊ. ಶಂಭು ಮಹಾಜನರು. ನಾಲ್ಕು ವರ್ಷಗಳ ದೀರ್ಘಕಾಲದ ಬರಹದೊಂದಿಗೆ ರೂಪುಗೊಂಡ ಕಾದಂಬರಿ ಎನ್ನಬಹುದಾದ ಪ್ರಕಾರದಲ್ಲಿರುವ ಕೃತಿ ‘ವರ್ಣಕ’. ಹಾಗೆ ನೋಡಿದರೆ, ಇದನ್ನು ಕಾದಂಬರಿ ಎಂದರೆ ತುಸು ಹೃಸ್ವವಾದದಂತೆ ಭಾಸವಾಗುತ್ತದೆ. ಭಾಷಾ ಜ್ಞಾನಕೋಶವೆಂದರೆ ಹೆಚ್ಚು ಸರಿಯೆನಿಸುತ್ತದೆ.
ಕೃತಿಯನ್ನು ಪ್ರಧಾನವಾಗಿ ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದ್ದು, ಮೊದಲನೆಯ ಭಾಗದ ಕತೆಯು, ಎರಡನೇ ಭಾಗದಲ್ಲಿ ಮಂಡನೆಯಾಗುವ ಜಿಜ್ಞಾಸೆಗೆ ಪೂರ್ವಪೀಠಿಕೆಯಂತೆ ಮೂಡಿ ಬಂದಿದೆ. ಶಂಭುಮಹಾಜನ ಅವರ ಪಾತ್ರ ಚಿತ್ರಣ ಮತ್ತು ಜೀವನಕಥನವಿರುವ ಮಹತ್ವದ ಭಾಗವು ಮೊದಲನೇ ಭಾಗವಾದ ‘ಪ್ರಸ್ಥಾನ’ದಲ್ಲಿದೆ. ಎರಡನೆಯ ಭಾಗವಾದ ‘ಪ್ರಯಾಣ’ದಲ್ಲಿ ಶಂಭುಮಹಾಜನರು ಪಾಕಿಸ್ತಾನದ ತಕ್ಷಶಿಲೆಗೆ ಪ್ರಯಾಣಿಸುವ ಕತೆಯಿದೆ. ಈ ಪ್ರಯಾಣವು ಮೇಲುನೋಟಕ್ಕೆ ಶಂಭುಮಹಾಜನರು ಜಿ.ಟಿ. ಎಕ್ಸ್‌ಪ್ರೆಸ್ ಎಂಬ ವಿಶೇಷ ರೈಲಿನಲ್ಲಿ ನಡೆಸುವ ಪ್ರಯಾಣದಂತೆ ಕಂಡುಬಂದರೂ, ಅದು ಸಾವಿರಾರು ವರ್ಷಗಳ ಅವಧಿಯಲ್ಲಿ ಭಾಷಾ ವಿಜ್ಞಾನ ಕ್ಷೇತ್ರದಲ್ಲಿ ಬಹುಮುಖೀ ಜಿಜ್ಞಾಸೆಯು ಹೇಗೆ ಮುಂದುವರೆಯಿತು ಎಂಬ ಪ್ರಯಾಣದ ಕಥನವೂ ಹೌದು. ಪ್ರೊ. ಶಂಭು ಮಹಾಜನರು ಪ್ರಯಾಣಿಸುವ ರೈಲು, ತಕ್ಷಶಿಲೆಯನ್ನು ತಲುಪಿದಾಗ ಅಲ್ಲೊಂದು ಭಾಷಾ ಸತ್ರವು ಅನಾವರಣಗೊಳ್ಳುತ್ತದೆ. ಕೌಟಿಲ್ಯ ವಿಷ್ಣುಗುಪ್ತರ ಸಂಪಾದಕತ್ವದಲ್ಲಿ ತಕ್ಷಶಿಲೆಯಲ್ಲಿ ನಡೆದ ಭಾಷಾ ಅಧಿವೇಶನದ ಅಥವಾ ಭಾಷಾ ಸತ್ರದ ವರದಿಯು ‘ಪ್ರಬೋಧನ’ ಎಂಬ ಮೂರನೆಯ ಭಾಗದಲ್ಲಿದೆ. ಮೂರೂ ಭಾಗಗಳು ಒಂದಕ್ಕೊಂದು ಪೂರಕವಾಗಿರುವುದು ಸಹಜವಾಗಿದ್ದರೂ, ಮೊದಲನೆಯ ಭಾಗವು ದಟ್ಟವಾದ ಕಥನ ಕ್ರಮವನ್ನು ಒಳಗೊಂಡಿದೆ. ಎರಡನೆಯ ಭಾಗವು ಭಾಷಾ ಜಿಜ್ಞಾಸೆ, ವಿಚಾರ ಮಂಥನಗಳೊಂದಿಗೆ ಓದುವಿಕೆಯನ್ನು ತುಸು ಜಟಿಲವಾಗಿಸುತ್ತ ಹೋಗುತ್ತದೆ. ಮೂರನೆಯ ಭಾಗದಲ್ಲಿ ಕಥನ ಕ್ರಮಕ್ಕೆ ಹೆಚ್ಚೇನೂ ಆದ್ಯತೆ ಕೊಡದೇ, ಈ ಕ್ಷೇತ್ರದಲ್ಲಿ ಜ್ಞಾನದಾಹ ಹೊಂದಿದವರಿಗೆ ಯಥೇಷ್ಟವಾದ ಹೂರಣವನ್ನು ಕಲ್ಪಿಸಿಕೊಡಲಾಗಿದೆ.
ವೈವಿಧ್ಯಮಯ ಬಣ್ಣದ ಹೂವುಗಳ ಮಾಲೆಯನ್ನು ನೇಯ್ದಂತೆ, ಭಾಷಾ ಕ್ಷೇತ್ರದ ಬೆಳವಣಿಗೆಗಳನ್ನು ಕಥೆಯೆಂಬ ಸೂತ್ರದಲ್ಲಿ ಲೇಖಕರು ಬಂಧಿಸಿದ್ದಾರೆ. ಅಲ್ಲಿ ಕಥೆಯ ಮುನ್ನಡೆಗೋಸ್ಕರ ವಿಸ್ಮಯ, ಭ್ರಮೆಯೆಂಬಂತಹ ಕಲ್ಪನೆಗಳ ನೆರವನ್ನು ಪಡೆದಿದ್ದಾರೆ. ವ್ಯಾಕರಣ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದ, ಸಾಧಕರ ಪೂರ್ವಾಪರಗಳೊಂದಿಗೆ ವಿಚಾರ ಮಂಡನೆಯನ್ನು ಮಾಡಿದ್ದಾರೆ.
ದೂರದ ಇಂಗ್ಲೆಂಡ್ ನಲ್ಲಿ ಸಾಧಕನಾಗಿ ಬೆಳೆದ ಪ್ರೊ. ಶಂಭುಮಹಾಜನರು, ನಿವೃತ್ತಿಯ ಬಳಿಕ ಭಾರತದಲ್ಲಿ ತಮ್ಮ ಹುಟ್ಟೂರಿಗೆ ಬರುತ್ತಾರೆ. ಇಲ್ಲೋ, ಬದಲಾವಣೆಯ ಮಹಾಪರ್ವವೇ ನಡೆದಿರುವುದನ್ನು ಗಮನಿಸುತ್ತಾರೆ. ಅಷ್ಟರಲ್ಲಿ ಅವರಿಗೊಂದು ಆಹ್ವಾನ ಬರುತ್ತದೆ. ಪಾಕಿಸ್ತಾನದ ಟಾಕ್ಸಿಲಾ ತಾಂತ್ರಿಕ ವಿಶ್ವವಿದ್ಯಾಲಯವು ಯುನೆಸ್ಕೋದ ಸಹಯೋಗದೊಂದಿಗೆ ಇಸ್ಲಾಮಾಬಾದಿನ ಟ್ಯಾಕ್ಸಿಲಾ ವಿಶ‍್ವವಿದ್ಯಾಲಯದ ಆವರಣದಲ್ಲಿ ಭಾಷಾಶಾಸ್ತ್ರದ ವಿಶ್ವಸಮ್ಮೇಳನವನ್ನು ಆಯೋಜಿಸಿದ್ದು, ಅದರ ಸರ್ವಾಧ್ಯಕ್ಷತೆಯನ್ನು ವಹಿಸುವಂತೆ ಟ್ಯಾಕ್ಸಿಲಾ ವಿಶ್ವವಿದ್ಯಾಲಯದ ಡಾ. ಮಹಮದಾಲಿ ಅವರು ಮಹಾಜನರನ್ನು ಆಹ್ವಾನಿಸುತ್ತಾರೆ. ಈ ಆಹ್ವಾನವನ್ನು ಮಹಾಜನರು ಒಪ್ಪಿಕೊಳ್ಳುತ್ತಾರೆ.
ಒಂದಿಷ್ಟು ದಿನ ಊರಿನಲ್ಲಿಯೇ ಇರುವ ಶಂಭುಮಹಾಜನರು, ಮಂಗಳೂರು ವಿಶ್ವವಿದ್ಯಾಲಯದಲ್ಲಿ ‘ಸಂಸ್ಕೃತ ಭಾಷೆಗೆ ತಕ್ಷಶಿಲೆಯ ಮತ್ತು ವಿದೇಶಿಯರ ಕೊಡುಗೆ, ಭಾಷಾಶಾಸ್ತ್ರದ ದೃಷ್ಟಿಯಿಂದ’ ಎಂಬ ಶೀರ್ಷಿಕೆಯಡಿ ಉಪನ್ಯಾಸ ನೀಡುತ್ತಾರೆ. ಪಾಣಿನಿಯವರು, ಪಾಣಿನಿಯವರ ‘ಅಷ್ಟಾಧ್ಯಾಯಿ’ ಮತ್ತು ಸಂಸ್ಕೃತ ಭಾಷೆಗೆ ತಕ್ಷಶಿಲೆಯ ಕೊಡುಗೆಯನ್ನು ಪೂರ್ವಪೀಠಿಕೆಯಾಗಿ ವಿವರಿಸಿ, ವಿದೇಶೀಯರಿಗೆ ಇಲ್ಲಿನ ಭಾಷೆಗಳನ್ನು ಕಲಿಯುವ ಅವಶ್ಯಕತೆ ಏನು, ನಮ್ಮ ದೃಷ್ಟಿಕೋನವನ್ನು ಸಂಕುಚಿತಗೊಳಿಸುವ ಮೂಢನಂಬಿಕೆಗಳೇನು, ಮೊದಲ ತೌಲನಿಕ ಭಾಷಾ ಶಾಸ್ತ್ರಜ್ಞ ಆಲ್ ಬಿರೂನೀ, ದಕ್ಷಿಣ ಏಷ್ಯಾ ಮತ್ತು ಭಾರತದ ಪರ್ಷಿಯನ್ ಭಾಷೆ, ಆಧುನಿಕ ಕಾಲದಲ್ಲಿ ಭಾಷೆಗಳು, ಹೊರದೇಶಗಳಲ್ಲಿ ಭಾಷಾ ವಿಜ್ಞಾನ -ಎಂಬೆಲ್ಲ ವಿಷಯಗಳನ್ನು ಮಂಡಿಸುತ್ತಾರೆ.
ಬಳಿಕ ಡಾ.ಮಹಮದಾಲಿ ಅವರು ಮಾಡಿದ ವ್ಯವಸ್ಥೆಯಂತೆ ಮಂಗಳೂರಿನಿಂದ ಪೇಶಾವರಕ್ಕೆ ಹೊರಡುವ ಜಿ.ಟಿ. ಎಕ್ಸ್‌ಪ್ರೆಸ್ ರೈಲಿನಲ್ಲಿ ತಕ್ಷಶಿಲೆಯ ಕಡೆಗೆ ಪ್ರಯಾಣ ಬೆಳೆಸುತ್ತಾರೆ. ಈ ರೈಲು ಪ್ರಯಾಣದ ಸಂದರ್ಭದಲ್ಲಿ ಅವರನ್ನು ಭೇಟಿಯಾಗುವ ಅನೇಕ ವಿದ್ವಾಂಸರು ಚರ್ಚೆ ನಡೆಸುತ್ತಾರೆ.
ರೈಲಿನ ಲೈಬ್ರರಿಯಲ್ಲಿ ಪುಸ್ತಕವೊಂದು ತನ್ನ ಕತೆ ಹೇಳತೊಡಗುತ್ತದೆ. ಲೈಬ್ರರಿಯಲ್ಲಿ ದೊರೆಯುವ ಪುಸ್ತಕವೊಂದು ಮೇಲ್ಪತ್ತೂರು ನಾರಾಯಣ ಭಟ್ಟತಿರಿಪಾದರ ಕತೆಯನ್ನು ಹೇಳುತ್ತದೆ. ನಾರಾಯಣ ಭಟ್ಟತಿರಿಯ ಸ್ನೇಹಿತ ವಾಸುದೇವನೇ ಈ ಪುಸ್ತಕದಲ್ಲಿರುವ ಕಥನಕಾರ. ಬಹಳ ವಿವರವಾದ ಅಧ್ಯಾಯವಿದು. ನಾರಾಯಣನ ಬಾಲ್ಯ, ಅವನು ಜ್ಞಾನಪಿಪಾಸುವಾಗಿ ಗುರುಗಳಾದ ಅಚ್ಯುತ ಪಿಶಾರೋಡಿ ಅವರ ಆಶ್ರಮಕ್ಕೆ ಬರುವುದು, ಅಲ್ಲಿ ವಿದ್ಯಾರ್ಜನೆ, ಮೌನವಾಗಿ ಸಾಗುವ ಪ್ರೇಮ, ನಾರಾಯಣೀಯದ ರಚನೆ, ಮೀಮಾಂಸೆ ಪ್ರವೇಶ ರಚನೆ, ‘ಮಾನಮೇಯೋದಯ’ದ ರಚನೆಯ ವಿವರಗಳಿವೆ. ತಮ್ಮ ಗುರುದಕ್ಷಿಣೆ ರೂಪದಲ್ಲಿ ಅವರ ರೋಗವನ್ನು ರೋಗಪ್ರತಿಗ್ರಹದ ಮೂಲಕ ಸ್ವೀಕರಿಸುವ ವಿವರಗಳಿವೆ. ಹೀಗೆ ಅಧ್ಯಾಯದಲ್ಲಿ ಸುಂದರವಾದ ಕಥನ ಕ್ರಮದಲ್ಲಿಅನೇಕ ವಿಚಾರಗಳನ್ನು ಹೇಳಿದ್ದಾರೆ.
ಭಟ್ಟತಿರಿಯವರು ರಚಿಸಿದ ‘ಪ್ರಕ್ರಿಯಾ ಸರ್ವಸ್ವಂ’ ಕೃತಿಯ ಸಾರವನ್ನು ಒಂದು ಪುಟದಲ್ಲಿ ಸಂಗ್ರಹಿಸಿ ವಿವರಿಸುವ ಕೆ.ಪಿ.ರಾಯರು, ಅದರಿಂದ ಬಹಳ ಪ್ರಭಾವಿತರಾದಂತೆ, ಅದರ ಅಪಾರ ಸಾಧ್ಯತೆಗಳ ಕುರಿತೂ ವಾಸುದೇವನ ಪಾತ್ರದ ಮೂಲಕ ವಿವರಿಸುತ್ತಾರೆ.
ರಾಸವಿಲಾಸವಿಲೋಲಂ ಭಜತ ಮುರಾರೇರ್ಮನೋರಮಂ ರೂಪಂ
ಪ್ರಕೃತಿಷುಯತ್ ಪ್ರತ್ಯಯವತ್ ಪ್ರತ್ಯೇಕಂ ಗೋಪಿಕಾಸು ಸಮ್ಮಿಲಿತಂ.
(ಭಾಷೆಯಲ್ಲಿ ಪ್ರಕೃತಿ ಪ್ರತ್ಯಯಗಳು ಸೇರಿಕೊಂಡು ಒಂದಾಗಿರುವ ಹಾಗೆ ಪ್ರತಿಯೋರ್ವ ಗೋಪಿಕೆಯಲ್ಲಿ ಒಂದಾಗಿ ರಾಸಕ್ರೀಡೆಯಲ್ಲಿ ಮಗ್ನನಾಗಿರುವ ಮುರಾರಿಯ ಮನೋಹರ ರೂಪವನ್ನು ಭಜಿಸಿರಿ) ಎಂಬ ಶ್ಲೋಕದೊಂದಿಗೆ ಆರಂಭವಾಗುವ ‘ಪ್ರಕ್ರಿಯಾ ಸರ್ವಸ್ವಂ’ ಒಂದು ಬೌದ್ಧಿಕ ನಿಧಿಯಾಗಿದೆ ಎನ್ನುತ್ತಾರೆ.
ಈ ಪ್ರಯಾಣವು ಮೇಲುನೋಟಕ್ಕೆ ಶಂಭುಮಹಾಜನರು ಜಿ.ಟಿ. ಎಕ್ಸ್‌ಪ್ರೆಸ್ ಎಂಬ ವಿಶೇಷ ರೈಲಿನಲ್ಲಿ ನಡೆಸುವ ಪ್ರಯಾಣದಂತೆ ಕಂಡುಬಂದರೂ, ಅದು ಸಾವಿರಾರು ವರ್ಷಗಳ ಅವಧಿಯಲ್ಲಿ ಭಾಷಾ ವಿಜ್ಞಾನ ಕ್ಷೇತ್ರದ ಜಿಜ್ಞಾಸೆಯು ಹೇಗೆ ಮುಂದುವರೆಯಿತು ಎಂಬ ಪ್ರಯಾಣದ ಕಥನವೂ ಹೌದು. ರೈಲು ತಕ್ಷಶಿಲೆಯೆನ್ನು ತಲುಪಿದಾಗ ಅಲ್ಲೊಂದು ಭಾಷಾ ಸತ್ರವು ಅನಾವರಣಗೊಳ್ಳುತ್ತದೆ.
ವಾಸುದೇವ ಹೇಳುವ ಕಥೆಯ ಪ್ರಕಾರ, ಅಂದಿನ ವಿದ್ವಾಂಸರು, ಭಕ್ತಿನಿಧಿಯಾದ ನಾರಾಯಣೀಯದ ರಚನಕಾರ ಎಂದು ಭಟ್ಟತಿರಿ ಅವರನ್ನು ಗುರುತಿಸಲು ಇಷ್ಟಪಟ್ಟರೇ ಹೊರತು ಬೌದ್ಧಿಕ ನಿಧಿಯನ್ನು ಓದುವ, ಚರ್ಚಿಸುವ ಉತ್ಸಾಹವನ್ನೇ ತೋರಲಿಲ್ಲ. ವೈನತೇಯ ಪಂಡಿತ ಎಂಬ ಹೆಸರಿನ ವ್ಯಕ್ತಿ ಅವರ ಕೃತಿಯು ಅಪಾಣಿನೀಯ ಎಂದು ಪರಿಗಣಿಸಿ ಮನ್ನಣೆಗೆ ಯೋಗ್ಯವಲ್ಲ ಎಂದು ತಿರಸ್ಕರಿಸುತ್ತಾನೆ. ಇಂತಹ ಅವಮಾನಗಳು ನಡೆದಾಗ, ಸಿಟ್ಟು ಮತ್ತು ದುಃಖದಿಂದ, ಭಟ್ಟತಿರಿ ಅವರು ಅಪಾಣಿನೀಯ ಪ್ರಾಮಾಣ್ಯ ಸಾಧನಂ ಹೆಸರಿನ ಕ್ರೋಡಪತ್ರವನ್ನು ಸಂಸ್ಕೃತದಲ್ಲಿ ಬರೆಯುತ್ತಾರೆ.
‘ಭಾಷೆಯ ವ್ಯಾಪ್ತಿಯು ಅಗಾಧವೂ, ವಿಸ್ತಾರವೂ ಆಗಿದೆ. ವ್ಯಾಕರಣವು ಬಳಕೆಯಲ್ಲಿ ಅನಿಶ್ಚಿತತೆಯನ್ನು ಕಡಿಮೆ ಮಾಡಲು ಒಂದು ನೆರವು ಮಾತ್ರ.ಅನೇಕ ಪ್ರಸಿದ್ಧ ಬರಹಗಾರರು ಪಾಣಿನಿ ಮತ್ತು ಅವರ ಅನುಯಾಯಿಗಳು ಗಮನಿಸದ ರೂಪಗಳನ್ನು ಬಳಸಿದ್ದಾರೆ. ನಾವು ಆ ಬಳಕೆಗಳನ್ನು ತಿರಸ್ಕರಿಸಬೇಕೇ. ? ಪಾಣಿನೀಯ ವ್ಯಾಕರಣದಲ್ಲಿ ಅವುಗಳಿಗೆ ನಿಯಮಗಳು ಕಂಡು ಬರುವುದಿಲ್ಲವೆಂಬ ಕಾರಣಕ್ಕೆ ಆ ಪ್ರಯೋಗಗಳೇ ತಪ್ಪೆಂದು ನಿಶ್ಚಯಿಸಬೇಕೇ ? ಪಾಣಿನಿಯವರು ಗಮನಿಸದಿದ್ದರೂ ಸಹ ಆ ಬಳಕೆಗಳನ್ನು ಸರಿಯಾದ ಮತ್ತು ಸ್ವೀಕಾರಾರ್ಹವೆಂದು ನಾವು ಪರಿಗಣಿಸಬೇಕೇ ? ಮತಾಂಧರು ದೃಢೀಕರಣದ ಮೊದಲ ಪ್ರಶ್ನೆಗೆ ಉತ್ತರಿಸುತ್ತಾರೆ ಮತ್ತು ಈ ಗ್ರಂಥವು ಅವರಿಗೆ ಸೂಕ್ತವಾದ ಉತ್ತರವಾಗಿದೆ’ ಎನ್ನುತ್ತಾರೆ ಭಟ್ಟತಿರಿಯವರು. ಅಂದರೆ ಪಾಣಿನೀಯ ಮತದ ಪರವಾಗಿರುವ ಭಟ್ಟತಿರಿಯವರು ಇತರ ವ್ಯಾಕರಣಗಳು ಅಧಿಕೃತವಲ್ಲವೆಂದು ಒಪ್ಪಿಕೊಳ್ಳುವುದಿಲ್ಲ ಎಂಬ ವಿವರಗಳಿವೆ.
ಪುಸ್ತಕ ಹೇಳುವ ಕತೆಯ ಬಳಿಕ, ಚರ್ಚೆಯು ಇನ್ನೊಂದು ರೂಪದಲ್ಲಿ ಮುಂದುವರೆಯುತ್ತದೆ. ರೈಲಿನೊಳಗೆ ಪಂಡಿತ ಪದ್ಮನಾಭ ಪೋತಿಯವರ ಪ್ರವೇಶವಾಗುತ್ತದೆ. ಅವರೊಡನೆ ಸಾಗುವ ಮಾತುಕತೆಯಲ್ಲಿ, ವ್ಯಾಕರಣ ಜಿಜ್ಞಾಸೆಯು ‘ಪ್ರಕ್ರಿಯಾ ಸರ್ವಸ್ವಂ’ನ ಮೌಲ್ಯಮಾಪನದವರೆಗೂ ಸಾಗುತ್ತದೆ.
ಪದ್ಮನಾಭ ಪೋತಿಯವರು ಮತ್ತು ಶಂಭು ಮಹಾಜನರು ತಕ್ಷಶಿಲೆಯ ಫ್ಲಾಟ್ ಪಾರಮ್ಮಿನಲ್ಲಿ ಇಳಿಯುವಾಗ ಭೀಮಕಾಯದ ಶ್ರಮಣನೊಬ್ಬನೊಡನೆ ತಕ್ಷಶಿಲೆ ವಿಶ್ವವಿದ್ಯಾಲಯಕ್ಕೆ ದಾರಿ ಕೇಳುತ್ತಾರೆ. ಭಾಷೆ ಕುರಿತು ನಡೆಯುವ ವಿಚಾರ ಸಂಕಿರಣಕ್ಕೆ ತಾವು ಆಹ್ವಾನಿತರಾಗಿದ್ದು, ಅದು ನಡೆಯುವ ಸ್ಥಳವೆಲ್ಲಿ ಎಂದು ಪ್ರಶ್ನಿಸುತ್ತಾರೆ. ಅವನೋ ಗಹಗಹಿಸಿ ನಗುತ್ತ,’ತಕ್ಷಶಿಲೆಯಲ್ಲಿ ಭಾಷಾ ವಿಚಾರ ಸಂಕಿರಣ ನಡೆದು, ಎರಡು ಸಾವಿರದ ನಾಲ್ಕುನೂರ ಇಪ್ಪತ್ತೆರಡು ವಸಂತಗಳು ಕಳೆದವು. ಆ ವಿಚಾರ ಸಂಕಿರಣದ ನಡಾವಳಿಯನ್ನು ವಿಷ್ಣುಗುಪ್ತ ಕೌಟಿಲ್ಯರು ಸಂಪಾದಿಸಿ ಭೂರ್ಜಪತ್ರದ ಮೇಲೆ ಬರೆಸಿದರು. ತಕ್ಷಶಿಲೆಯಲ್ಲಿ ಮೂರು ದಿನ ಎನ್ನುವ ಹೆಸರಿನಲ್ಲಿ ಅದು ಪ್ರಖ್ಯಾತವಾಗಿದ್ದು ಪ್ರತೀ ನೂರು ವರ್ಷಗಳಿಗೊಮ್ಮೆ ಆಯಾ ಕಾಲದ ಪ್ರಚಲಿತ ಲಿಪಿಯಲ್ಲಿ ಪ್ರತಿ ಮಾಡಿ ಇಡುತ್ತಾರೆ. ಹೊಸದಾದ ಪ್ರತಿ ಇಲ್ಲಿದೆ , ಓದಿ ಕೊಡಿ’ ಎಂದು ಅವರ ಕೈಗಿಡುತ್ತಾನೆ.
ಇಬ್ಬರೂ ಕುತೂಹಲದಿಂದ ಅದನ್ನು ಓದಲಾರಂಭಿಸುತ್ತಾರೆ. ಅದುವೇ ವಿಷ್ಣುಗುಪ್ತ ಕೌಟಿಲ್ಯರ ಸಂಪಾದಕತ್ವದಲ್ಲಿ ಮೂಡಿ ಬಂದ ಜ್ಞಾನಗಂಗೆ ‘ಭಾಷಾ ವಿಚಾರ ಸಂಕಿರಣದ ಅಭಿಲೇಖ’. ತಕ್ಷಶಿಲೆಯಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ವಸಂತ ಕಾಲದಲ್ಲಿ ನಡೆಯುವ ಸಾಹಿತ್ಯೋತ್ಸವದಲ್ಲಿ ಮೂರು ದಿನಗಳ ಕಾಲ ಸಂಕಿರಣ ನಡೆಯುತ್ತದೆ. ಅದರಲ್ಲಿ ಮೊದಲ ದಿನದ ಕಾರ್ಯಕ್ರಮಗಳು ಆಚಾರ್ಯ ವರ್ಷರ ಅಧ್ಯಕ್ಷತೆಯಲ್ಲಿ ನಡೆದರೆ, ಎರಡನೆಯ ದಿನವನ್ನು ಭಗವಾನ್ ಉಪವರ್ಷರು ನಡೆಸಿಕೊಟ್ಟರು. ಮೂರನೆಯ ದಿನ ಆಚಾರ್ಯ ಪಾಣಿನಿಯರು ಕಾರ್ಯಕ್ರಮಗಳ ಕೇಂದ್ರವಾದರು. ಹಾಗಿದ್ದರೆ ಈ ಮೂರು ದಿನಗಳ ಕಾಲ ನಡೆದ ಚರ್ಚೆಯ ಮುಖ್ಯ ಸಾರವೇನು ? ಅದನ್ನು ಹೀಗೆ ಪಟ್ಟಿ ಮಾಡಬಹುದು:
• ಆ ಕಾಲದ ಭಾಷಾ ವಿಜ್ಞಾನಕ್ಕೆ ‘ಅಷ್ಟಾಧ್ಯಾಯಿ’ಯು ಮಹತ್ವದ ಕೊಡುಗೆ ನೀಡಿದೆ ಎಂದು ಎಲ್ಲರೂ ಒಪ್ಪಿದುದು.
• ಭಾಷಾ ನಿಕಾಯದ ಮತ್ತೊಂದು ಫಲಶ್ರುತಿಯಾದ ಶಿಷ್ಟಭಾಷೆ ಎಂಬುದರ ರಚನೆ-ಅಗತ್ಯ- ಉಪಯೋಗಗಳ ಅರಿವು ಮೂಡಿಸಿದ್ದು.
• ತಕ್ಷಶಿಲೆಯಲ್ಲಿ ಪ್ರಚಲಿತವಿದ್ದ ಹೊಸ ಶಿಕ್ಷಣ ಪದ್ಧತಿಯು ಈ ಸಂಕಿರಣದ ಮೂಲಕ ಜಗತ್ತಿಗೆ ಪರಿಚಯವಾದ್ದು.
• ಹಲವಾರು ಬರಹಗಾರರು ಶಿಷ್ಟಭಾಷೆಯಲ್ಲಿ ಗ್ರಂಥ ರಚನೆ ಮಾಡಲು ನಿರ್ಧಾರ ಮಾಡಲು ಈ ಸಂಕಿರಣ ಪ್ರೇರಣೆಯಾದ್ದು.
ಹೀಗೆ ಅಭಿಲೇಖದ ವಿವರವು 131 ಪುಟಗಳ ಷ್ಟು ದೀರ್ಘವಾಗಿ ಸಾಗುತ್ತದೆ. ವರ್ಷ ಉಪವರ್ಷರ ಕಥೆ, ವರ್ಷರ ಭಾಷಣವೆಂಬ ಶಿಖರೋಪನ್ಯಾಸ, ಮೊದಲೆರಡು ದಿನಗಳಲ್ಲಿ ಮಹಾತ್ಮ ವರ್ಷರ ಭಾಷಣ, ಕಾಶ್ಯಪ ದಶಬಲರ ವಿಚಾರ ಮಂಡನೆ, ಶಾಕಪೂಣಿಯವರ ಕಥೆ, ಶ್ರಮಣಭಿಕ್ಕು ಹರಿಯ ವೃತ್ತಾಂತ, ವರ್ಷರು ಶಾರ್ಙರವರಿಗೆ ಹೇಳಿದ ಕಥೆಗಳು ಸಾಗಿದರೆ ಮೂರನೆಯ ದಿನ ಪಾಣಿನಿಯವರ ನೇತೃತ್ವದಲ್ಲಿ ವಿಚಾರ ಮಂಥನ ನಡೆಯುತ್ತದೆ.
ರೂಪ- ಭಾಷೆ:
ಉಪವರ್ಷರ ಮಾತುಗಳನ್ನು ಉದ್ಘರಿಸುತ್ತ, ಪಾಣಿನಿಯವರು ಮಾತು ಶುರು ಮಾಡುವುದು ಹೀಗೆ ‘ ರೂಪದ ಮೂಲ ವಸ್ತುವು ನಾವು ಕಾಣುವ ಮತ್ತು ಅನುಭವಿಸುವ ಲೋಕದ ಮೂಲವಸ್ತುವೇ ಆಗಿದೆ. ಮಾತು ರೂಪದ ಹಾಗಿಲ್ಲ. ಅದು ಮುಟ್ಟಲು ಬರುವುದಿಲ್ಲ. ಆದರೆ ನಮ್ಮನ್ನು ತಟ್ಟುತ್ತದೆ. ಕಾಣಿಸುವುದಿಲ್ಲ. ಆದರೆ ತೋರಿಸುತ್ತದೆ. ಮಾತು ‘ಅಮೂರ್ತವೇ ಮೂರ್ತವೇ?’ ಎನ್ನುವುದು ಸುಲಭವಾಗಿ ಉತ್ತರಿಸಲಾಗದ ಸಮಸ್ಯೆ. ಮನುಷ್ಯನ ಮಾತು ಮುಖದಲ್ಲಿ ಪಂಚಭೂತಗಳಲ್ಲಿ ಒಂದಾದ ವಾಯುವಿನ ಕಂಪನಗಳಾಗಿ ಜನ್ಮತಾಳುತ್ತದೆ. ವಿಶ್ವವಿಶಾಲ ತತ್ವವಾದ ಆಕಾಶದಲ್ಲಿ ಪಸರಿಸುತ್ತದೆ. ಕಣ್ಣಿಗೆ ಕಾಣಿಸದೇ ಇದ್ದರೂ ಮನಸ್ಸಿಗೆ ತೋಚುವ ಹಲವು ರೂಪಗಳಿಂದ ಇರಬಲ್ಲ ಭಾಷೆಯು ಮಾತಾಗಿ, ಕ್ಷಣಿಕಆಯುಸ್ಸುಳ್ಳದ್ದು. ಆದರೆ ಶ್ರಾವಕನ ನೆನಪಿನಲ್ಲಿ ಉಳಿದು ನಿತ್ಯ ನಿರಂತರವಾಗಿರಬಲ್ಲುದು. ನೆನಪಿಸಿಕೊಂಡಾಗಲೆಲ್ಲ ತನ್ನ ವಾಂಛಿತ ಅರ್ಥವನ್ನು ಉಳಿಸಿಕೊಳ್ಳಬಲ್ಲುದು. ಇನ್ನುಳಿದ ಭೂತ ತತ್ವಗಳಿಗೂ ಭಾಷೆಗೂ ಸಂಬಂಧವಿದೆಯೇ ಎಂಬುದು ನಮ್ಮನ್ನು ಬಹಳ ದಿನಗಳಿಂದ ಕಾಡುತ್ತಿದ್ದ ಜಟಿಲ ಪ್ರಶ್ನೆ. ಈ ಪ್ರಶ್ನೆಗೆ ನಮಗೆ ಉತ್ತರ ದೊರಕಿದುದು ಇಲ್ಲಿಉಪಸ್ಥಿತರಿರುವ ನಮ್ಮ ಮಿತ್ರರಿಂದ…’ ಎನ್ನುತ್ತ ಚರ್ಚೆಯನ್ನು ಮುಂದುವರೆಸುತ್ತಾರೆ.
ನಿರುಕ್ತ- ಅಷ್ಟಾಧ್ಯಾಯಿ
ಮಣ್ಣಿನ ವೃತ್ತಿ ಅಂದರೆ ಕುಲಾಲ ಕಾಯಕದ ಹಿನ್ನೆಲೆಯ, ಹಳಪ್ಪದ ಜನಪದದ ವ್ಯಾಡಿಯವರು ತಮ್ಮ ಪರಂಪರೆಯು ಕೆಲವು ವೈಶಿಷ್ಟ್ಯಗಳನ್ನು ಹೇಳುತ್ತ, ಮಣ್ಣು ಹೇಗೆ ಮಾತನಾಡುತ್ತದೆ ಎಂಬುದನ್ನು ವಿವರಿಸುತ್ತಾರೆ. ಮಾತಿಲ್ಲದ ಯೋಗಸಿದ್ಧರ ದೇಹಭಾಷೆಯನ್ನು ವಿಷ್ಣುಗುಪ್ತರು ಸಭೆಗೆ ತಿಳಿಸುತ್ತಾರೆ. ನಿರುಕ್ತ ವ್ಯಾಕರಣಗಳನ್ನು ಹಲವು ದೇಶಗಳಲ್ಲಿ ಹಲವು ಮೂಲಗಳಿಂದ ಅಭ್ಯಸಿಸಿದ ಕಾತ್ಯಾಯನರು ಯಾಸ್ಕರ ಪರಂಪರೆಯ ಬಗ್ಗೆ ನಿರುಕ್ತದ ಬಗ್ಗೆ ತಮ್ಮ ತರ್ಕವನ್ನು ಮಂಡಿಸುತ್ತಾರೆ. ನಿರುಕ್ತವು ನಾಮಪದಗಳ ಅರ್ಥ ವಿಶ್ಲೇಷಣೆಯನ್ನು ಕ್ರಮಬದ್ಧವಾಗಿ ಮಾಡುವ ಕೃತಿಯಾದರೆ, ಪಾಣಿನಿಯವರ ಗ್ರಂಥಗಳು ಶಬ್ದಾನುಶಾಸನದ ಗ್ರಂಥ ಸಮುಚ್ಛಯ ಎಂದು ಹೇಳುತ್ತ, ಗಣಪಾಠ ಮತ್ತು ಧಾತುಪಾಠಗಳನ್ನು ಉಲ್ಲೇಖಿಸಿ ಚರ್ಚಿಸುತ್ತಾರೆ. ಒಟ್ಟಿನಲ್ಲಿ ಅಷ್ಟಾಧ‍್ಯಾಯೀ ಕುರಿತ ದೀರ್ಘ ವಿಶ್ಲೇಷಣೆ ಇಲ್ಲಿದೆ. ನಿರುಕ್ತವು ಋಗ್ವೇದದ ಕೆಲವಷ್ಟೇ ಋಚೆಗಳ ಅರ್ಥವನ್ನು ನಿಘಂಟು ಮತ್ತು ಬ್ರಾಹ್ಮಣಗಳ ಸಹಾಯದಿಂದ ವಿವರಿಸುತ್ತದೆ. ಅಷ್ಟಾಧ್ಯಾಯಿಯು ಎಲ್ಲ ತರಹದ ಭಾಷಾ ರಚನೆಯನ್ನು ವಿಶ್ಲೇಷಿಸುವ ಸ್ವತಂತ್ರ ಕೃತಿಯಾಗಿದೆ ಎನ್ನುತ್ತಾರೆ.
ಹೀಗೆ ಭೂರ್ಜಪತ್ರಗಳನ್ನು ಓದುತ್ತ ಭಾಷಾ ವಿಜ್ಞಾನದ ಆಗುಹೋಗುಗಳ ನಡುವೆ ಕಳೆದು ಹೋಗಿದ್ದ ಇಬ್ಬರು ವಿದ್ವಾಂಸರು ಕೊನೆಗೆ ಏನೆಲ್ಲ ನೆನಪಿಸಿಕೊಳ್ಳುತ್ತಾರೆ. ಭೂರ್ಜಪತ್ರದಲ್ಲಿ ಓದಿದ ವಿಚಾರಗಳು ಪ್ರಸ್ತುತ ಕಾಲಮಾನದಲ್ಲಿ ಎಷ್ಟರ ಮಟ್ಟಿಗೆ ತಾಳೆಯಾಗುತ್ತದೆ ಎಂದು ಗಮನಿಸುತ್ತಾರೆಯೇ..? ಓದುಗರ ಬುದ್ಧಿಗೆ ಕಸರತ್ತು ನೀಡುವ ಸಾಕಷ್ಟು ವಿಚಾರಗಳು ಇಲ್ಲಿವೆ.
ಅದೇನೇ ಇರಲಿ, ಕಾಲದ ಮಹಾ ಪ್ರವಾಹದಲ್ಲಿ ಒಂದು ಹಿಮ್ಮುಖ ಯಾನದಂತೆ ಸಾಗುವ ಕಾದಂಬರಿಯಲ್ಲಿ, ಎರಡು ಮತ್ತು ಮೂರನೇ ವಿಭಾಗಗಳ ಪ್ರತೀ ಅಧ್ಯಾಯವೂ ಭಾಷಾವಿಜ್ಞಾನದ ಒಂದೊಂದೇ ಮಗ್ಗುಲನ್ನು ಪರಿಚಯಿಸುವ ಪ್ರಯತ್ನ ಮಾಡುತ್ತದೆ.
ಎರಡು ಸಾವಿರದ ನಾಲ್ಕುನೂರ ಇಪ್ಪತ್ತೆರಡು ವರ್ಷಗಳ ಹಿಂದಕ್ಕೆ ಸಾಗಿದ ಪಯಾಣದಲ್ಲಿ ಭಾಷೆಯ ನಡಿಗೆಯನ್ನು ದಾಖಲಿಸುವುದು ಸುಲಭವೇನಲ್ಲ. ಅಂತಹ ದಾಖಲೆಯ ಪ್ರಕ್ರಿಯೆಯಲ್ಲಿ ಲೇಖಕರು ತರ್ಕಪ್ರಧಾನವಾಗದೇ ಜ್ಞಾನಪ್ರಧಾನವಾಗಿ ಸಾಗುತ್ತಾರೆ ಎಂದು ಅನೇಕಬಾರಿ ಅನಿಸುತ್ತದೆ. ಒಳಿತನ್ನಷ್ಟೇ ಬರೆಯಬೇಕು ಎಂಬ ಧಾಟಿಯು ಕಾದಂಬರಿಯುದ್ದಕ್ಕೂ ಸ್ಪಷ್ಟವಾಗಿ ಕಾಣಿಸುತ್ತದೆ. ಕೆಡುಕನ್ನು ವೈಭವೀಕರಿಸುವ ಮೂಲಕ ಒಳಿತಿನ ಹೊಳಪನ್ನು ಹೆಚ್ಚು ಮಾಡುವ ಕಿಂಚಿತ್ ಪ್ರಯತ್ನವೂ ಇಲ್ಲಿಲ್ಲ.
ಯಾವುದೇ ಒಂದು ಜ್ಞಾನಶಾಖೆಯು ಪ್ರಧಾನವಾಗಿ ಮೆರೆಯುತ್ತಿದ್ದರೆ, ಅದನ್ನು ಮೀರಿದ ಇತರ ಅಂಶಗಳನ್ನೂ ಗಮನಿಸಬೇಕು ಎನ್ನುವ ಕೆ.ಪಿ ರಾಯರು ಈ ಕೃತಿಯನ್ನು ನಾಲ್ಕು ವರ್ಷಗಳಿಗೂ ದೀರ್ಘಕಾಲ ಬರೆದರು. ಬರವಣಿಗೆಯ ಸಂದರ್ಭದಲ್ಲಿ ಪೂರಕ ಪುಸ್ತಕಗಳನ್ನುಓದಿ ಸಂಭ್ರಮಿಸಿದ್ದರು. ‘ಬರೆಯುತ್ತಿದ್ದೇನೆ, ಈ ಭಾರೀ ಚೆನ್ನಾಗಿ ಸಾಗುತ್ತಾ ಉಂಟು. ಪುಸ್ತಕ ಪ್ರಕಟವಾಗುತ್ತೋ ಎನ್ನುವ ವಿಚಾರಕ್ಕಿಂತ ಇದಕ್ಕಾಗಿ ಓದುತ್ತ, ಯೋಚಿಸುತ್ತಾ ನನಗೆ ಬಹಳ ಸಂತೋಷವಾಗುತ್ತಿದೆ’ ಎಂದು ಅನೇಕ ಬಾರಿ ಹೇಳಿದ್ದುಂಟು.
ಹಾಗೆಂದು ಪುಸ್ತಕದ ಓದುವಿಕೆಯು ಖಂಡಿತಾ ಸುಲಭಕ್ಕೆ ದಕ್ಕುವಂತಿಲ್ಲ. ಕಾದಂಬರಿ ಎಂಬ ಹೆಸರಿದ್ದರೂ, ಓದುವಿಕೆಗಿಂತ ಮುನ್ನ ಪೂರ್ವಜ್ಞಾನವಿದ್ದರೆ ಮಾತ್ರ ಓದಿನ ಸಂಪೂರ್ಣ ಸಂತಸವು ಪ್ರಾಪ್ತಿಯಾಗಬಹುದು. ಸಂಸ್ಕೃತ ಓದಿನ ಹಿನ್ನೆಲೆಯಿದ್ದಾಗ ಪ್ರಬೋಧನ ವಿಭಾಗದಲ್ಲಿ ಅದ್ಭುತವಾಗಿ ಅನಾವರಣಗೊಂಡಿರುವ, ಭಾಷಾ ವಿಲಾಸ ವೈಭವ ಹೆಚ್ಚು ಆಪ್ತವಾಗಬಹುದು.
(ಕೃಪೆ : ಕೆಂಡಸಂಪಿಗೆ)
ವರ್ಣಕ(ಕೆಂಡಸಂಪಿಗೆ)
©2024 Book Brahma Private Limited.