ಕ್ರಾಂತಿ ಕಲ್ಯಾಣ ಕಾದಂಬರಿಯು ಬಿ. ಪುಟ್ಟಸ್ವಾಮಯ್ಯ ಅವರ ಉದಯರವಿ, ರಾಜ್ಯಪಾಲ, ಕಲ್ಯಾಣೇಶ್ವರ ಹಾಗೂ ಮುಗಿಯದ ಕನಸು ಕಾದಂಬರಿಯ ಮುಂದುವರೆದ ಭಾಗವಾಗಿದೆ. ಈ ಕಾದಂಬರಿಯಲ್ಲಿ ಬಸವೇಶ್ವರನ ನಿರ್ವಾಸನಾನಂತರ ಕಲ್ಯಾಣದಲ್ಲಿ ತಲೆದೋರಿದ ನಿರಾಶೆಯ ಪರಿಸ್ಥಿತಿ, ತನ್ನ ವಿರುದ್ಧ ನಡೆಯುತ್ತಿದ್ದ ಸಂಚನ್ನು ಎದುರಿಸಲು ಬಿಜ್ಜಳನ ತಂತ್ರ, ಶರಣ ಧರ್ಮದ ವಿನಾಶಕ್ಕಾಗಿ ಬಿಜ್ಜಳನ ನಿರ್ಧಾರ, ಮಧುವರಸಾದಿಗಳ ಕಗ್ಗೂಲೆ,ಜಗದೇಕಮಲ್ಲ-ಬೊಮ್ಮರಸರಿಂದ ಬಿಜ್ಜಳನ ವಧೆಗೆ ಹೂಡಿದ ಸಂಚು ಕಾರ್ಯಗತವಾದುದು, ಬಿಜ್ಜಳನ ದಬ್ಬಾಳಿಕೆ, ದುರಾಡಳಿತಗಳಿಂದ ತಪ್ಪಿಸಿಕೊಳ್ಳಲು ಶರಣರು ಕಲ್ಯಾಣವನ್ನು ಬಿಟ್ಟುಹೋದದ್ದು, ಮುಂತಾದ ವಿಷಯಗಳ ಬಗ್ಗೆ ವಿವರಿಸಿದ್ದಾರೆ.
ಬಿ. ಪುಟ್ಟಸ್ವಾಮಯ್ಯನವರ 'ಕ್ರಾಂತಿಕಲ್ಯಾಣ' ಬಸವೇಶ್ವರನ ಕಾಲ? ಜೀವನಗಳನ್ನು ಕುರಿತು ಅವರೇ ರಚಿಸಿದ ಕಾದಂಬರೀ ಮಾಲೆಯ ಕೊನೆಯ ಹೊತ್ತಿಗೆ. ಮೊದಲ ಕಾದಂಬರಿಗಳಾದ 'ಉದಯರವಿ' ’ರಾಜ್ಯಪಾಲ' 'ಕಲ್ಯಾಣೇಶ್ವರ' 'ಮುಗಿಯದ ಕನಸು’ ಇವುಗಳ ಮುಂದಿನ ಭಾಗ 'ಕ್ರಾಂತಿ ಕಲ್ಯಾಣ.' ಹಾಗೆ ಮುಂದುವರಿಕೆಯ ಭಾಗವಾದರೂ, ಇದು ತನ್ನಷ್ಟಕ್ಕೇ ಸ್ವತಂತ್ರವೂ ಆಗಿದ್ದು, ಪ್ರತ್ಯೇಕ ಪರಿಶೀಲನೆಗೆ ಅರ್ಹವಾಗಿದೆ. 516 ಪುಟಗಳ ಈ ಕಾದಂಬರಿಯಲ್ಲಿ ಒಟ್ಟು ಏಳು ಭಾಗಗಳಿವೆ. ಇಲ್ಲಿ “ಬಸವೇಶ್ವರನ ನಿರ್ವಾಸನಾನಂತರ ಕಲ್ಯಾಣದಲ್ಲಿ ತಲೆದೋರಿದ ನಿರಾಶೆಯ ಪರಿಸ್ಥಿತಿ, ತನ್ನ ವಿರುದ್ಧ ನಡೆಯುತ್ತಿದ್ದ ಸಂಚನ್ನು ಎದುರಿಸಲು ಬಿಜ್ಜಳನ ತಂತ್ರ, ಶರಣ ಧರ್ಮದ ವಿನಾಶಕ್ಕಾಗಿ ಬಿಜ್ಜಳನ ನಿರ್ಧಾರ, ಮಧುವರಸಾದಿಗಳ ಕಗ್ಗೂಲೆ,ಜಗದೇಕಮಲ್ಲ-ಬೊಮ್ಮರಸರಿಂದ ಬಿಜ್ಜಳನ ವಧೆಗೆ ಹೂಡಿದ ಸಂಚು ಕಾರ್ಯಗತವಾದುದು, ಬಿಜ್ಜಳನ ದಬ್ಬಾಳಿಕೆ, ದುರಾಡಳಿತಗಳಿಂದ ತಪ್ಪಿಸಿಕೊಳ್ಳಲು ಶರಣರು ಕಲ್ಯಾಣವನ್ನು ಬಿಟ್ಟುಹೋದದ್ದು, ಅದರಿಂದ ಶರಣರಿಗಾಗುವ ಕಷ್ಟಪರಂಪರೆ ಈ ಪ್ರಸಂಗಗಳನ್ನು ವರ್ಣಿಸಿದೆ. ಈ ಎಲ್ಲ ಘಟನೆಗಳ ಬಗೆಗೆ ಚರಿತ್ರೆ, ಪುರಾಣ, ದಂತಕಥೆಗಳಲ್ಲಿಯ, ಶರಣರ ವಚನಗಳೇ ಮೊದಲಾದವುಗಳಲ್ಲಿಯೂ ದೊರಕುವ, ಅನೇಕ ಸಂದರ್ಭಗಳಲ್ಲಿ ಪರಸ್ಪರ ವಿಸಂವಾದಿಯಾದ ಉಲ್ಲೇಖನೆಗಳನ್ನು ಕಲ್ಪನೆಯ ಆಶ್ರಯದಿಂದ ಸಮನ್ವಯಗೊಳಿಸಿ ಕಲ್ಯಾಣ ಕ್ರಾಂತಿಯ ಕೊನೆಯ ದಿನಗಳನ್ನು ಪುನರಚಿಸಲು ಪ್ರಯತ್ನ ಪಟ್ಟಿದೆ” ಎಂದು ಲೇಖಕರು ಹೇಳಿದ್ದಾರೆ. ಇದು ಬಹುಮಟ್ಟಿಗೆ ಸಾಧಿತವಾಗಿದೆ.
ಮುಖ್ಯವಾಗಿ ಇದು ರಾಜಕೀಯ ತಂತ್ರ ತಳತಂತ್ರಗಳನ್ನೊಳಗೊಂಡ ಕಾದಂಬರಿ. ಬಸವೇಶ್ವರನ ನಿರ್ಗಮನಾನಂತರ ಬಿಜ್ಜಳನ ವಿರುದ್ಧ ರೂಪು ಗೊಳ್ಳುವ ಸಂಚು ಪ್ರತಿಭಟನೆಗಳು, ಅವುಗಳ ವಿಫಲತೆಗಾಗಿ ಬಿಜ್ಜಳ ಹೂಡುವ ಪ್ರತಿ ಸಂಚುಗಳು, ಇವು ಕಥಾನಕದ ಪ್ರಮುಖ ಸಂಗತಿಗಳು. ಇವುಗಳ ಸಂಘರ್ಷದಲ್ಲಿ ಬಿಜ್ಜಳನ ವೈಯಕ್ತಿಕ ದೋಷ ದೌರ್ಬಲ್ಯಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.
ಈ ಸಂಘರ್ಷದ ವಸ್ತು ಪರಿಣಾಮಕಾರಿಯಾಗಿದ್ದು ಒಂದು ನಿರ್ದಿಷ್ಟ ಐತಿಹಾಸಿಕ ರಾಜಕೀಯ ಪರಿವಲಯದಲ್ಲಿ ಪದರಗಳನ್ನು ಬಿಚ್ಚಿಕೊಳ್ಳುತ್ತದೆ. ಅದಕ್ಕೆ ತಕ್ಕನಾದ ಸನ್ನಿವೇಶ ನಿರ್ಮಾಣ, ವರ್ಣನೆ, ನಿರೂಪಣಗಳಿಂದ ಒಟ್ಟಾರೆ ಕಥಾನಕವು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.
ಇಲ್ಲಿ ಸರ್ವಾಧಿಕಾರಿ ಬಿಜ್ಜಳ ಎದುರಿಸಬೇಕಾಗಿರುವುದು ಎರಡು ಬಲಶಾಲಿ ಶಕ್ತಿಗಳನ್ನು. ಒಂದು, ಚಾಲುಕ್ಯ ರಾಜ್ಯತ್ವದ ಪುನಃ ಪ್ರತಿಷ್ಠಾಪನೆಗಾಗಿ ಸಂಚು ನಡೆಸಿದ ಚಾಲುಕ್ಯ ವಿಧವೆ ರಾಣಿ ಕಾಮೇಶ್ವರಿ ಮತ್ತು ಅವಳ ಬೆಂಬಲಿಗರು, ಇನ್ನೊಂದು ವರ್ಣಾಶ್ರಮಧರ್ಮದ ನಿರ್ಮೂಲನೆಗಾಗಿ ಚಳುವಳಿ ನಡೆಸಿರುವ ಶರಣರು, ಬಿಜ್ಜಳನ ಈ ಎರಡೂ ಪ್ರತಿಷ್ಠಿತ ವಿರೋಧಿ ರ್ಬಣಗಳಲ್ಲಿ ಸೌಹಾರ್ದ, ಸಾಮರಸ್ಯ ಇದೆ.
ಆದರೆ ಇಂಥ ಶಕ್ತಿಗಳ ಜೊತೆಗೆ ನಡೆದ ಹೋರಾಟದಲ್ಲಿ, ಉದ್ದೇಶಿತ ವಾದ ಬಿಜ್ಜಳನ ವಧೆ ಮಾತ್ರ-ಅವನ ರಾಜಕೀಯ ಸಂಘಟನೆಯಲ್ಲಿ ಎಷ್ಟೇ ಬಿರುಕುಗಳಿದ್ದಾಗ ಅವನ ತಂತ್ರಗಳ ವೈಫಲ್ಯದಿಂದಾಗಲಿ, ವಿರೋಧಿ ಶಕ್ತಿಗಳ ನಿಯೋಜಿತ ಕಾರ್ಯಕ್ರಮಗಳಿಂದಾಗಿ ನಡೆದುದಲ್ಲ. ಹಾಗೆ ನೋಡಿದರೆ ಬಿಜ್ಜಳನೇ ಕಾಮೇಶ್ವರಿಯ ಸಂಚನ್ನು ವಿಫಲಗೊಳಿಸುತ್ತಾನೆ. ಶರಣರೊಂದಿಗೆ ಸ್ನೇಹ ನಟಿಸಿ ವಂಚಿಸುತ್ತಾನೆ, ಅವರನ್ನು ಹೆದರಿಸುತ್ತಾನೆ. ಅತಿಕಾಮುಕತೆಯಿಂದಾಗಿ, ತನ್ನನ್ನು ನಂಬಿ ಬಂದ ಕಾವೇರಿಯನ್ನು ಕೆಡಿಸಿ, ಲೋಲುಪ ಚಕ್ರವರ್ತಿ ಜಗದೇಕಮಲ್ಲನ ಕೋಪಕ್ಕೆ ಗುರಿಯಾಗಿ ಅವನಿಂದ ರಹಸ್ಯವಾಗಿ ಹತನಾಗುತ್ತಾನೆ. ಆದರೆ ಬಿಜ್ಜಳ ಸತ್ತರೂ ಅವನು ನಿರ್ಧರಿಸಿದ ಕಾರ್ಯ ಮುಂದುವರಿಯುತ್ತದೆ, ಇದು ಒಂದರ್ಥದಲ್ಲಿ ಬಿಜ್ಜಳನ ಗೆಲುವೇ.
ಇಲ್ಲಿರುವ ಪಾತ್ರಗಳೆಲ್ಲ ನೇರವಾಗಿ ಕಪ್ಪು ಬಿಳುಪಿನ ಪ್ರಪಂಚದಿಂದ ಎದ್ದು ಬಂದವುಗಳು. ಬಿಜ್ಜಳ, ಕರ್ಣದೇವ, ನಾರಣಕ್ರಮಿತ, ಮಾಧವನಾಯಕ ತೀರ ಕೆಟ್ಟವರಾದರೆ ಚೆನ್ನಬಸವಣ್ಣ, ಅಗ್ಗಳ, ಬೊಮ್ಮರಸ, ಮಧುವರಸ, ಹರಳಯ್ಯ ತೀರ ಒಳ್ಳೆಯವರು. ಒಳ್ಳೆಯವರಿಗೆ ದೈವವೂ ನೆರವಾಗುತ್ತದೆ. ಈ ತೆರನಾದ ಪಾತ್ರ ಪರಿಕಲ್ಪನೆಯ ಜೊತೆಗೆ, ಬಿಜ್ಜಳನ ಕೊಲೆಯ ಸಂಬಂಧದಲ್ಲಿ ಶರಣರ ಪ್ರೇರಣೆಯನ್ನೂ ಅಲ್ಲಗಳೆಯಬೇಕಾಗಿದೆ. ಇಂಥ ಅಂಶಗಳಿಂದಾಗಿ ಸಂಘರ್ಷದಲ್ಲಿ ಸೂಕ್ಷ್ಮತೆ ಕಡಮೆಯಾಗಿದೆ. ಒಂದು ಐತಿಹಾಸಿಕ ಪರಿಸ್ಥಿತಿಯನ್ನು ಪುನರಚಿಸುವಲ್ಲಿ ಆ ಕಾಲದ ರಾಜ, ಸಾಮಂತ, ಸೇವಕರ ಜೀವನವನ್ನು ಪರಿಣಾಮಕಾರಿಯಾಗಿ ಚಿತ್ರಿಸುವಲ್ಲಿ ಕಾದಂಬರಿ ವಿಶಿಷ್ಟವಾಗಿದೆ.
-ಸುರೇಶ ಪಾಟೀಲ
ಕ್ರಾಂತಿ ಕಲ್ಯಾಣ (ಕಾದಂಬರಿ)
ಮೊದಲನೆಯ ಆವೃತ್ತಿ 1963 ಶಾರದಾ ಪ್ರಕಟಣಾಲಯ ಅರಳೇಪೇಟೆ ಬೆಂಗಳೂರು-560 053
ಕ್ರೌನ್ ಅಷ್ಟ 555 ಪುಟಗಳು ಬೆಲೆ ರೂ. 6-00
ಕೃಪೆ: ಗ್ರಂಥಲೋಕ, ಜೂನ್ 1981
©2024 Book Brahma Private Limited.