L - ಲೇಖಕ ಜೋಗಿ ಅವರ ಕಾದಂಬರಿ. ಜೋಗಿ ತಮ್ಮೀ ಕಾದಂಬರಿಗೆ ಹೊಸ ಬಗೆಯ ಉಕ್ತಿಭಂಗಿಯೊಂದನ್ನು ಆಯ್ದುಕೊಂಡಿದ್ದಾರೆ ಎನ್ನುತ್ತಾರೆ ಹರೀಶ್ ಕೇರ. ಇದು ತೇಜಸ್ವಿ ಬಳಸಿದ ಪದ, ಮಾಯಾಲೋಕಕ್ಕೆ ಬರೆದ ಮುನ್ನುಡಿಯಲ್ಲಿ ಅವರು ಕನ್ನಡ ಸಾಹಿತ್ಯ ಹೊಸ ಉಕ್ತಿಭಂಗಿಗಳನ್ನು ಹುಡುಕಿಕೊಳ್ಳಬೇಕಾಗಿದೆ ಎಂದು ಬರೆದಿದ್ದರು. ಇಲ್ಲಿರುವ ಕವಿ ರೊಚ್ಚಿಗೆದ್ದಿದ್ದಾನೆ. ಬದುಕಿನ ಸಂಭವ ಅಸಂಭವಗಳು ಆತನನ್ನು ಭರ್ಚಿಯಂತೆ ಇರಿದಿವೆ. ಇದನ್ನು ಕೆಂಡದಂತೆ ಹಿಡಿದಿಡಲಾಗದ ಕವಿತೆ ಇದ್ದರೆಷ್ಟು ಬಿಟ್ಟರೆಷ್ಟು ಎಂಬ ಭಾವವಿರುವ ಆತ ಸಿನಿಕ, ಅವನ ಮಾತು ಕಟು. ತನ್ನ ಕವಿತೆಗಳ ಬಗ್ಗೆ ಆತನಿಗೆ ಗೌರವವಿಲ್ಲ. ಓದುಗರ, ವಿಮರ್ಶಕರ ಬಗೆಗೂ ಗೌರವವಿಲ್ಲ. ಆದರೆ ಆತನ ಸಿನಿಕತೆಯ ರಹಸ್ಯ ಏನು ಎಂಬುದು ಆತನ ಬದುಕಿನ ಅತ್ಯಂತಿಕ ದುರಂತವನ್ನು ಬಲ್ಲವರು ಮಾತ್ರ ಗುರುತಿಸಲು ಸಾಧ್ಯ.
ಈ ಕಾದಂಬರಿಯಲ್ಲಿ ಎಲ್ ಎಂಬ ಕವಿ ತನ್ನ ಕಾವ್ಯದ ಬಗ್ಗೆ ಮೊದಲು ಮಾಡಿ, ನಂತರ ತನ್ನ ಬದುಕಿನ ಕಥನವನ್ನು ಹೇಳುತ್ತಾ ಹೋಗುತ್ತಾನೆ. ಹಾಗೇ ಆತ ಹೇಳುವ ಕ್ರಮದಲ್ಲೇ ತನ್ನ ಬದುಕಿನ ಹಾಗೂ ಸಮಾಜದ ವಿನ್ಯಾಸದ ಬಗ್ಗೆ ಟೀಕೆ, ಸಿಟ್ಟು ವ್ಯಕ್ತಗೊಳ್ಳುತ್ತಾ ಹೋಗುತ್ತದೆ. ಬದುಕಿನ ದುರಂತದ ಅರಿವು ಗಾಢವಾಗಿ ತಟ್ಟುತ್ತದೆ.
ಜೋಗಿ, ಜಾನಕಿ, ಎಚ್. ಗಿರೀಶ್ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್ ರಾವ್ ಹತ್ವಾರ್ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್ 16ರಂದು. ಮೂಲತಃ ಸೂರತ್ಕಲ್ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಾಯ್ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...
READ MOREಜೋಗಿಯವರು ಭಾಷೆಯನ್ನು ಪಳಗಿಸಿಕೊಂಡಿರುವ ರೀತಿ ಅಚ್ಚರಿ ಮೂಡಿಸುತ್ತದೆ. ಅದು ಅವರು ಹೇಳಿದಂತೆ ಮಾತು ಕೇಳುತ್ತದೆ. ಅವರ ನುಡಿ ಪುಂಗಿಗೆ ನಮ್ಮೆಲ್ಲಾ ದರ್ಪಗಳು ಪಳಗಿ, ಸುಮ್ಮನೆ ಹೆಡೆಯಾಡಿಸುತ್ತಾ ಕುಳಿತು ಬಿಡಬೇಕೆನ್ನಿಸುತ್ತದೆ. ಕವಿತೆ ನಮ್ಮನ್ನು ಕೊಲ್ಲುತ್ತದೆ ಎಂದರೂ ಹೂಂ ಎನ್ನಬೇಕು, ಕವಿತೆ ಬದುಕಿನ ಸಂಜೀವಿನಿ ಎಂದರೂ ಅಹುದಹುದು ಎನ್ನಬೇಕು - ಹಾಗೆ. ಎಲ್ಲಾ ದ್ವಂದ್ವಗಳ ಅದಿಬದಿಗಳನ್ನೂ ಅಚ್ಚುಕಟ್ಟಾಗಿ ಸಮರ್ಥಿಸಿ ಹೇಳುವ ಶಕ್ತಿ ಅವರ ನುಡಿಗಿದೆ. ಓದುಗರ ಪ್ರಾಣಪಕ್ಷಿಗಳನ್ನು ಅವರು ತಮ್ಮ ಅಕ್ಷರಗಳಲ್ಲಿ ಅಡಗಿಸಿ ಇಡುತ್ತಾರೆ.
L ಕೃತಿಯಲ್ಲಿ ಕಥನಕ್ಕೆ ಅವಕಾಶವಿಲ್ಲ. ಇದ್ದರೂ ಅದು ನೆಪ ಮಾತ್ರ. ಇರುವ ಪುಟ್ಟ ಕತೆಯೇ ಬಹು ದೊಡ್ಡ ರಮ್ಯತೆಯ ಲೋಕವೊಂದನ್ನು ಹೊತ್ತುಕೊಂಡ ಹಾಗಿದೆ; ಐಸ್‌ಕ್ರೀಮ್ ಕಡ್ಡಿಯು ಇಡೀ ರುಚಿಯ ಗುಡ್ಡವನ್ನು ಕಚ್ಚಿಕೊಂಡ ಹಾಗೆ. ಅವರಿಗೆ ಕೃತಿಯಲ್ಲಿ ಮುಖ್ಯ ಐಸ್‌ಕ್ರೀಂ ಹೊರತು ಕಡ್ಡಿಯಲ್ಲ. ರೂಢಿಗತ ಕಥನ ಕ್ರಮವನ್ನು ಧಿಕ್ಕರಿಸಿ ಹೊಸದಾರಿಗೆ ಅವರು ಒಡ್ಡಿಕೊಳ್ಳುತ್ತಾರೆ.
ಜೋಗಿಯ ಬರಹವನ್ನು ಮನಸ್ಪರ್ಶಿ ಎನ್ನುವುದು ಸೂಕ್ತ. ಅವರ ಒಂದೊಂದು ವಾಕ್ಯವೂ ಮನಸ್ಸಿಗೆ 'ಆಹಾ!' ಎನ್ನುವ ತಂಪೆರೆಯುತ್ತದೆ. ಅದರ ಜಾಣತನಕ್ಕೆ ಬೆರಗಾಗುತ್ತದೆ. ಅವುಗಳ ಶ್ಲೇಷೆಗೆ ಮನಸ್ಸು ಅರಳುತ್ತದೆ. ಕೇವಲ ನಾಲ್ಕೇ ಸಾಲು ಬರೆದು ಅದನ್ನು ಕಾದಂಬರಿಯ ಒಂದು ಅಧ್ಯಾಯ ಮಾಡುವ ಶಕ್ತಿ ಅವರ ಲೇಖನಿಯದು.
ಪಾತ್ರಗಳನ್ನು ಕಟ್ಟುವುದರಲ್ಲಿ ಜೋಗಿಗೆ ಆಸಕ್ತಿಯಿಲ್ಲ. ಕವಿತೆಗೆ ಪಾತ್ರಗಳ ಅಗತ್ಯವಿಲ್ಲ ಎಂದು ಅವರು ಹೇಳುತ್ತಾರೆ. ಬರವಣಿಗೆಯ ಶಕ್ತಿಯೇ ಭಾವಗಳನ್ನು ಉದ್ದೀಪಿಸಬೇಕು, ಪಾತ್ರಗಳ ಮೂಲಕವಲ್ಲ ಎಂದು ಕಾದಂಬರಿ ಹೇಳುತ್ತದೆ. ಆದ್ದರಿಂದ ಹೃದಯಸ್ಪರ್ಶಿ ಸಂಗತಿಗಳನ್ನು ಅವರು ಬೇಕೆಂದೇ ದೂರವಿಟ್ಟು, ಮನಸ್ಪರ್ಶಿ ಗುಣಕ್ಕೆ ತೆರೆದುಕೊಳ್ಳುತ್ತಾರೆ. ಆದ್ದರಿಂದ ಕಾದಂಬರಿಯ ಓದಿನಲ್ಲಿ ಕಣ್ಣು ಆರ್ದ್ರವಾಗುವುದಕ್ಕೂ ಹೆಚ್ಚಾಗಿ, ಮನಸ್ಸು ಅರಳುತ್ತದೆ.
ಅವರಿಗೆ ತರ್ಕದಲ್ಲಿ ನಂಬಿಕೆಯಿಲ್ಲ. ಆದ್ದರಿಂದ ತರ್ಕಾತೀತವಾದ ಹೊಸ ಲೋಕವೊಂದು ಅವರ ಕಾದಂಬರಿ ಕಾಣಿಸುತ್ತದೆ. ಅದರಲ್ಲಿ ನಮ್ಮ ಯಾವತ್ತಿನ ನೀರಸ ಬದುಕಿನ ಒಣ ಪ್ರಶ್ನೆಗಳನ್ನು ಕೇಳುವುದು ತಪ್ಪಾಗುತ್ತದೆ. ಅದನ್ನು ಮೀರಿ ಓದಿದಾಗಲೇ ಕಾದಂಬರಿಯ ರುಚಿ ನಮಗೆ ದಕ್ಕುತ್ತದೆ.
ತಂದೆಯೊಬ್ಬನಿಗೆ ಮಗಳ ಮೇಲೆ ಇರುವ ಪ್ರೀತಿಯಂತೆಯೇ ಅವರು ಕವಿತೆಯನ್ನು ಪ್ರೀತಿಸುತ್ತಾರೆ. ತಮ್ಮ ಆರಂಭದ ಕಾಲದಿಂದಲೂ ಕವಿತೆಗಳ ಮೋಡಿಯ ಕುರಿತು ಅವರು ಬರೆಯುತ್ತಲೇ ಬಂದಿದ್ದಾರೆ. ಆ ಪ್ರೀತಿ ಇಲ್ಲಿ ಮತ್ತೊಂದು ಹಂತಕ್ಕೇರಿ ಕವಿತೆಯೇ ಕಾದಂಬರಿಯ ಮುಖ್ಯಪಾತ್ರವಾಗಿ ಬಿಟ್ಟಿದೆ. ಕವಿತೆಯೊಂದರ ಆತ್ಮ ಮಾತಾಡುವಂತೆ ಅವರು ಈ ಬರವಣಿಗೆಯನ್ನು ನಡೆಸಿದ್ದಾರೆ. ಜಾನಕಿ ಕಾಲಂ ಕೃತಿಗಳ ಅಪರೂಪದ ಹಲವು ಅಧ್ಯಾಯಗಳನ್ನು ಒಟ್ಟಿಗೇ ಓದಿದ ಅನುಭವವನ್ನು L ನಮಗೆ ನೀಡುತ್ತದೆ.
ಕನ್ನಡ ಓದುಗಲೋಕ ಎಲ್ಲ ಬಗೆಯ ಹೊಸ ಬರವಣಿಗೆಗಳನ್ನೂ ಸ್ವಾಗತಿಸಿದೆ. ಆದ್ದರಿಂದ L ಸಂಭ್ರಮದ ಸ್ವಾಗತವನ್ನು ಪಡೆದದ್ದು ಬಹು ಸಹಜವೆನ್ನಿಸುತ್ತದೆ.
ಜೋಗಿಯ ಅಕ್ಷರ ಜಾದೂ ಹೀಗೇ ನಿರಂತರವಾಗಿರಲಿ. ಅವರ ಈ ನುಡಿಸಾಧನೆ ಯಾವ ಉನ್ನತ ಮಟ್ಟದ್ದೆಂದರೆ, ಇನ್ನೂ ನೂರು ಕಾದಂಬರಿಗಳನ್ನು ಅವರು ಬರೆದರೂ ನನಗೆ ಅಚ್ಚರಿಯಿಲ್ಲ. ಅಂತಹ ಸೌಭಾಗ್ಯ ಕನ್ನಡಕ್ಕೆ, ಕನ್ನಡಿಗರಿಗೆ ಸಿಗಲಿ ಎಂದು ಹಾರೈಸುವೆ.
- ವಸುಧೇಂದ್ರ