‘ಸಂಗಮ’ ಹೆಚ್.ಆರ್. ವಿಶ್ವಾಸ ಅವರ ಕಾದಂಬರಿಯಾಗಿದೆ. ಕೃತಿಯ ಕುರಿತು ಶ್ರೀನಿವಾಸ ವರಖೇಡಿ ಅವರು ಹೀಗೆ ಹೇಳಿದ್ದಾರೆ; ಇದೊಂದು ಸಮಕಾಲೀನ ಹೊಸ ಸಾಮಾಜಿಕ ಸಮಸ್ಯೆಯ ಕಥೆ. ಹಾಗೆಯೇ ಆ ಸಮಸ್ಯೆಯ ಪರಿಹಾರಕ್ಕೆ ಕಂಡುಕೊಂಡ ಉಪಾಯದ ಬಗೆ, ಅದಕ್ಕೂ ಮಿಗಿಲಾಗಿ ಈ ಸಹಜ ಸಾಮಾಜಿಕ ಪ್ರಕ್ರಿಯೆಯಲ್ಲಿ ಉದಯವಾದ ಹೊಸ ಸಂಸ್ಕರತಿಯ ಚಿತ್ರಣ. ದಕ್ಷಿಣೋತ್ತರಗಳ ದೂರವನ್ನೂ ಕ್ರಮಿಸಿ ಎರಡು ವಿಭಿನ್ನ ಜೀವನ ಪದ್ಧತಿಗಳು ಮೇಳೈಸಿದ ರೀತಿ; ಎರಡು ಮೈಮನಗಳು ಮಾತ್ರವಲ್ಲ, ಎರಡು ದೂರದ ಪರಿವಾರಗಳು, ಅಷ್ಟೇ ಅಲ್ಲ, ಎರಡು ದೂರದ ಭಾಷೆ-ಸಂಸ್ಕೃತಿಯ ಸಮಾಜಗಳು ಸಂಧಿಸಿದ ಪ್ರಕ್ರಿಯೆ, ಮತ್ತೆ ಸಮರಸವಾಗಿ ಬೆರೆತುಹೋದ ‘ಸಂಗಮ’ದ ಸೂಕ್ಷ್ಮ ಪದರುಗಳು ಕತೆ. ಈ ದೀರ್ಘವಲ್ಲದ ಆದರೂ ಸಂಗಮದ ಪರ್ಯಂತ ನಡೆಯುವ ಎರಡು ಸಾಮಾಜಿಕ ಪ್ರವಾಹಗಳ ಸುದೀರ್ಘ ಯಾತ್ರೆಯ ಚಿತ್ರಣ ‘ವಿಶ್ವಾಸ’ರ ಲೇಖನಿಯಲ್ಲಿ ಹದವಾಗಿ ಮೂಡಿಬಂದಿದೆ. ಕಥನಕಾರನೇ ಹೇಳಿದಂತೆ ಮೊದಲು ಸಂಸ್ಕೃತದಲ್ಲಿ ಬರೆದ ಕಥನದ ಕನ್ನಡ ರೂಪಾಂತರ ಹೊಂದಿದ ಕಾದಂಬರಿಯಾಗಿಯೇ ತೆರೆದುಕೊಳ್ಳುತ್ತದೆ. ಹಾಗೆ ನೋಡಿದರೆ ಉತ್ತರಕನ್ನಡ ನೆಲದ ಸ್ವಲ್ಪ ಮಿಶ್ರರಾಗವೆನಿಸುವ ಭಾಷೆ, ಮತ್ತದರ ಸಂಸ್ಕೃತಿಗಳು ಕನ್ನಡದಲ್ಲೇ ಹೆಚ್ಚು ಸಹಜವಾಗಿ ಅನಾವರಣಗೊಳ್ಳುತ್ತವೆ. ಲೇಖಕ ಸ್ವತಃ ಬದುಕಿದ ಪರಿಸರ ಅವರ ಲೇಖನಿಯಲ್ಲಿ ಸಹಜವಾಗಿ ಚಿತ್ರಿತವಾಗಿದೆ.
ಮಲೆನಾಡಿನ ಕೊಪ್ಪ ತಾಲೂಕಿನ ಹುಲಿಯಾಳಿ ಗ್ರಾಮದ ವಿಶ್ವಾಸ ಅವರು ಸಂಸ್ಕೃತ ವಿದ್ವಾಂಸರು. ಎಂ.ಎ. ಮತ್ತು ಪಿ.ಹೆಚ್.ಡಿ. ಪದವೀಧರರು. ಸಂಸ್ಕೃತ - ಕನ್ನಡ ಎರಡೂ ಭಾಷೆಗಳಲ್ಲಿ ಕೃಷಿ ಮಾಡಿದ್ದಾರೆ. ಎಸ್. ಎಲ್. ಭೈರಪ್ಪನವರ ‘ಆವರಣ’ ಕಾದಂಬರಿಯ ಸಂಸ್ಕೃತ ಅನುವಾದಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ, ‘ದಾಟು’ ಕಾದಂಬರಿಯ ಸಂಸ್ಕೃತ ಅನುವಾದಕ್ಕಾಗಿ ಉತ್ತರಪ್ರದೇಶ ಸಂಸ್ಕೃತ ಅಕಾಡೆಮಿ ಹಾಗೂ ಸಂಸ್ಕೃತದಲ್ಲಿ ಬಾಲಸಾಹಿತ್ಯಕ್ಕಾಗಿಯೂ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದಲೂ ಪುರಸ್ಕೃತರಾಗಿದ್ದಾರೆ. ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ‘ವಾಚಸ್ಪತಿ’ (ಡಿ.ಲಿಟ್) ಪದವೀಧರರು. ಸಾಹಿತಿ ಎಚ್. ಆರ್. ವಿಶ್ವಾಸ ಪ್ರಸ್ತುತ ಮಂಗಳೂರಿನ ಸಂಘನಿಕೇತನದಲ್ಲಿ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಿಎಚ್.ಡಿ. ...
READ MORE