‘ಪಾಪ-ಪುಣ್ಯ’ ಲೇಖಕಿ ಎ. ಸರಸಮ್ಮ ಅವರ ಕಾದಂಬರಿ. ಈ ಕಾದಂಬರಿಯ ರಚನೆಯ ಬಗ್ಗೆ ತಿಳಿಸುತ್ತಾ ‘ನಾವು ಬಾಳುತ್ತಿರುವ ಈ ಸಮಾಜದಲ್ಲಿ ನಾನಾ ವಿಧವಾದ ಗುಣಗಳನ್ನು ಹೊಂದಿರುವಂತಹ ಮನುಜರಿರುವರು. ಇಂತಹ ಜನರ ನಡುವೆ ಬದುಕು ಸಾಗಿಸುವುದು ಅನಿವಾರ್ಯ, ಆದರೆ ಪ್ರತಿಯೊಬ್ಬರು ಅವರವರ ಮನಸ್ಸಿನ ಭಾವದಂತೆ ತಾವು ಮಾಡುವುದು ಸರಿ ಎಂದುಕೊಂಡು ಮುನ್ನಡೆಯುವರು. ನಾವು ಬೆಳೆಯುವ ವಾತಾವರಣವು ಚೆನ್ನಾಗಿದ್ದರೂ, ಹೆತ್ತವರು ತಮ್ಮ ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸಿದರೂ ಸಹ ಮಕ್ಕಳು ಬೆಳೆದು ದೊಡ್ಡವರಾದಂತೆ ಕೆಲವರಲ್ಲಿ ದುರಾಸೆ, ಸ್ವಪ್ರತಿಷ್ಠೆಗಳು ಹಾಗೂ ಸಿರಿತನದ ವ್ಯಾಮೋಹದ ಸುಳಿಗೆ ಸಿಲುಕಿ ಹಣದ ಗಳಿಕೆಗಾಗಿ ಅಡ್ಡದಾರಿ ಹಿಡಿಯುವರು.
ಆಗ ನ್ಯಾಯ, ನೀತಿ, ಧರ್ಮಗಳನ್ನು ತೊರೆದು ಎಲ್ಲವೂ ತಮ್ಮ ಕೈ ಹಿಡಿತದಲ್ಲಿ ಇರಬೇಕೆಂದು ಮೆರೆಯುವರು. ಇದರಿಂದ ಯಾರಿಗೆ ನೋವಾಗಲಿ, ಅನ್ಯಾಯವಾಗಲಿ ಯಾವುದನ್ನು ಲೆಕ್ಕಿಸದೆ ಕೇವಲ ತಮ್ಮ ಸ್ವಾರ್ಥ ಸಾಧನೆಗಾಗಿ 'ಪಾಪ' ಕಾರ್ಯಗಳಲ್ಲಿ ತೊಡಗುವರು. ಆದರೆ ಇದೆಲ್ಲ ಸ್ವಲ್ಪದಿನ ಮಾತ್ರ ಇಂತಹವರ ದಬ್ಬಾಳಿಕೆಗಳು ನಿರಂತರವಾಗಿ ಸಾಗಿದರೆ ಸಜ್ಜನರ ಬದುಕು ದುಸ್ತರವಾಗಿ ಇಳೆಯಲ್ಲಿ ಮೋಸ, ವಂಚನೆಗಳು ಹೆಚ್ಚಾಗಿ ಜನರ ಬದುಕು ಅಸ್ತವ್ಯಸ್ತವಾಗುತ್ತದೆ ಎನ್ನುತ್ತಾರೆ ಸರಸಮ್ಮ. ಮನುಷ್ಯ ತಮ್ಮಲ್ಲಿರುವ ಗುಣ, ನಡತೆಯಿಂದ ದೊಡ್ಡ ವ್ಯಕ್ತಿಯಾಗುತ್ತಾನೆಯೇ ಹೊರತು ಅವನು ಅನ್ಯಾಯದಿಂದ ಗಳಿಸಿದ ಆಸ್ತಿ, ಐಶ್ವರ್ಯ, ಅಂತಸ್ತಿನಿಂದಲ್ಲ. ತನ್ನ ಕಷ್ಟ ಕಾಲದಲ್ಲಿ ಆಸ್ತಿ, ಐಶ್ವರ್ಯ, ಅಂತಸ್ತು ಯಾವುದೂ ಕಾಪಾಡಲು ಸಾಧ್ಯವಿಲ್ಲ. ಸಿರಿತನವನ್ನು ಗಳಿಸಿದಷ್ಟು ಸುಲಭವಾಗಿ ಕಳೆದುಕೊಳ್ಳಬಹುದು.
ಆದರೆ ನಾವು ಮಾಡುವ ಸತ್ಕಾರ್ಯ, ದಾನ, ಧರ್ಮ, ಸದ್ದುದ್ಧಿಗಳು ಕೊನೆಯ ತನಕ ನಮ್ಮನ್ನು ಕಾಯುತ್ತವೆ. ಇದೆಲ್ಲವನ್ನು ಅರಿತು ಬಾಳಿದಾಗ ಯಶಸ್ಸಿನ ಹಾದಿ ನಮ್ಮದಾಗುತ್ತದೆ. ಮನುಜ ತಾನು ಮಾಡಿದ 'ಪಾಪ' ಕಾರ್ಯದಿಂದ ತಾನೇ ಬಲಿಯಾಗುತ್ತಾನೆ. ನಮ್ಮ ಬಾಳಿನ ಪಯಣದಲ್ಲಿ ಪಾಪ – ಪುಣ್ಯಗಳನ್ನು ಅರಿತು ಬದುಕು ಸಾಗಲು ನಮ್ಮ ಜನ್ಮ ಧನ್ಯವಾಗುತ್ತದೆ ಎಂದಿರುವ ಅವರು ಇದೇ ಪಾಪ-ಪುಣ್ಯಗಳನ್ನೇ ವಸ್ತುವಿಷಯವನ್ನಾಗಿಸಿ ಈ ಕಾದಂಬರಿ ರಚಿಸಿದ್ದಾರೆ.
ಲೇಖಕಿ ಎ. ಸರಸಮ್ಮ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯ ಅವರ ವಿಶೇಷ ಆಸಕ್ತಿಯಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಪ್ರಸ್ತುತ ನಿವೃತ್ತರಾಗಿದ್ದರೆ. ಕೃತಿಗಳು: ಮೋಸದ ಜಾಲ(ಕಾದಂಬರಿ), ಬಾಡಿಗೆ ಮನೆ, ಮನೆ ಮಗ, ನೀತಿ ಕಥೆಗಳು, ದನಗಳ ಚೆನ್ನಿ, ನಂದಾದೀಪ, ಜಾಲಿಯ ನೆರಳು, ಕಾವ್ಯ ಜ್ಯೋತಿ, ವಿಧಿ ನಿಯಮ, ಸನ್ಮಾರ್ಗ, ಹೆಣ್ಣಿನ ಬಾಳು, ಗುರಿ, ಪಾಪ ಪುಣ್ಯ, ಭಕ್ತಿಸಾರ, ಸ್ನೇಹ ಬಂಧನ, ಕಾಮನಬಿಲ್ಲು, ಮೋಸದ ಜಾಲ ...
READ MORE