ಭೂಮಿ ಹುಣ್ಣಿಮೆ-ಲೇಖಕ ಲಕ್ಷ್ಮಣ ಕೊಡಸೆ ಅವರ ಕಾದಂಬರಿ. ಮಲೆನಾಡಿನ ರೈತಾಪಿ ಶೂದ್ರ ಸಮುದಾಯಗಳ ಬದುಕಿನ ಪಲ್ಲಟಗಳನ್ನು; ಕಾಲಾಂತರದಲ್ಲಿ ಆದ ಕುಟುಂಬಗಳಲ್ಲಿ ಮೌಲ್ಯ ಬದಲಾವಣೆಗಳನ್ನು ಅತ್ಯಂತ ಸಾವಧಾನದಿಂದ, ಪಕ್ವವಾದ ದೃಷ್ಟಿಕೋನದಿಂದ ಸರಳ ಹಾಗೂ ಕೃತಕವಲ್ಲದ ಸಹಜ ಚೆಲುವಿನ ಭಾಷೆಯ ಮೂಲಕ ತೆರೆದಿಡುವ ಈ ಕಾದಂಬರಿ ಅಪರೂಪದ ಗುಣವನ್ನು ಹೊಂದಿದೆ. ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ, ಚಿದಂಬರ ರಹಸ್ಯ (ಮತ್ತು ತೇಜಸ್ವಿ ಅವರ ಕಥೆಗಳು) ಮಲೆನಾಡಿನ ಶೂದ್ರರ ಬದುಕಿನ ಚೆಲುವನ್ನು ಒಂದು ಬಗೆಯಲ್ಲಿ ಸೆರೆ ಹಿಡಿದರೆ ಈ ಕಾದಂಬರಿ ಅದೇ ಕೆಲಸವನ್ನು ಇನ್ನೊಂದು ಅಂಚಿನಲ್ಲಿ ನಿಂತು ಮಾಡುತ್ತದೆ.
ಮುಂಜಾವಿನ ಸರಳ ವಿವರಣೆಯೊಂದಿಗೆ ಆರಂಭವಾಗುವ ಕಥೆ ಬೆಳೆಯುತ್ತ ಸುರುಳಿಯಂತೆ ಸುತ್ತಿಸುತ್ತಿ ಅತ್ಯಂತ ಸಂಕೀರ್ಣ ಪದರುಗಳನ್ನು ಬಿಡಿಸುತ್ತ ಹೋಗುವ ಪರಿ ಮನೋಜ್ಞವಾಗಿದೆ. ಮಲೆನಾಡಿನ ಸಾಂಸ್ಕೃತಿಕ ವಿವರಗಳು ಸೊಗಸಾಗಿ ದಾಖಲಾಗಿವೆ. ಜತೆಗೆ, ಅಲ್ಲಿಯ ಒಟ್ಟಾರೆ ಬದುಕು ರೂಪಾಂತರ ಪ್ರಕ್ರಿಯೆಗೆ ಒಳಗಾಗುತ್ತಿರುವುದನ್ನು ಸಮರ್ಥವಾಗಿ ದಾಖಲಿಸುತ್ತವೆ ಎಂದು ವಿಮರ್ಶಕ ಕೇಶವ ಮಳಗಿ ಈ ಕಾದಂಬರಿಯನ್ನು ವಿಶ್ಲೇಷಿಸಿದ್ದಾರೆ.
ಕತೆಗಾರ, ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು 1953 ಏಪ್ರಿಲ್ 12ರಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೊಡಸೆ ಗ್ರಾಮದಲ್ಲಿ ಜನಿಸಿದರು. ತಾಯಿ ಭರ್ಮಮ್ಮ, ತಂದೆ ಕರಿಯನಾಯ್ಕ. ಹುಟ್ಟೂರು ಹಾಗೂ ಹೊಸನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಜಾವಾಣಿಯಲ್ಲಿ ಉಪಸಂಪಾದಕರಾಗಿ, ಮುಖ್ಯವರದಿಗಾರರಾಗಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ‘ಅಪ್ಪನ ಪರಪಂಚ, ಕೊಡಚಾದ್ರಿ, ಸಹಪಥಿಕ, ಅವ್ವ, ಬಿ. ವೆಂಕಟಾಚಾರ್ಯ, ಕುವೆಂಪು ಮತ್ತು, ಕನ್ನಡ ವಿಮರ್ಶಾ ವಿವೇಕ, ಹಾಯಿದೋಣಿ’ ಅವರ ಪ್ರಮುಖ ಕೃತಿಗಳು. ...
READ MORE`ವ್ಯಕ್ತಿ ಮತ್ತು ಪ್ರಕೃತಿಯ ಪ್ರಭಾವೀ ಅಂತರ್ ರೂಪಣೆಯನ್ನು ಕಟ್ಟುವ ಹಾಗೂ ಸಂಬಂಧದ ಸ್ವಾರ್ಥ ಲಾಲಸೆಗಳನ್ನು ಬಯಲು ಮಾಡುವ ಹಿನ್ನೆಲೆಯಿಂದ ಮಾತ್ರವಲ್ಲ, ರಕ್ತ ಸಂಬಂಧಗಳ ಒಳಗೆ ಕೂಡ `ಅನ್ಯ'ರನ್ನು ಸೃಷ್ಟಿಸುತ್ತಾ ಅವರೊಡನೆ ಮುಖಾಮುಖಿಗೊಳ್ಳುವ ತಲ್ಲಣದಿಂದಲೇ ತನ್ನೆಲ್ಲಾ ಶಕ್ತಿಯನ್ನು ವ್ಯರ್ಥಗೊಳಿಸುವಂತೆ ಬಾಳುವ ವ್ಯಕ್ತಿಗಳ ಜೀವದರ್ಶನದ ನೆಲೆಯಿಂದ `ಭೂಮಿ ಹುಣ್ಣಿಮೆ' ಒಂದು ಧ್ವನಿಪೂರ್ಣ ರಚನೆಯಾಗಿದೆ. ಕಾದಂಬರಿಯು ಅದರ ಶೀರ್ಷಿಕೆ ವಸ್ತು ಮತ್ತು ಪಾತ್ರಗಳ ಪ್ರಸ್ತುತತೆಯಲ್ಲಿಯೇ ಮೂರು ತಲೆಮಾರಿನ ವ್ಯಕ್ತಿ ಸಂಬಂಧದ ಒಂದು `ಚಲನೆ'ಯನ್ನು, ಚಲನೆಯ ದಿಕ್ಕನ್ನು ಇಲ್ಲಿ ಗುರುತಿಸಬಹುದು. ಕೃತಿಯ ಆಕೃತಿ, ಚಾರಿತ್ರಿಕ ಪ್ರಾಮಾಣಿಕತೆ ಮತ್ತು ಭವಿಷ್ಯವಾದೀ ಸೂಚನಾತ್ಮಕತೆಯಿಂದ ಈ ಪಠ್ಯದ ಜೊತೆಗೆ ಒಂದು ಅರ್ಥಪೂರ್ಣವಾದ ಸಂವಾದ ನಡೆಸುವುದು ಸಾಧ್ಯವಾಗುತ್ತದೆ.
- ಡಾ. ಕವಿತಾ ರೈ , ವಿಮರ್ಶಕಿ