`ಪಿ.ಎಚ್.ಸಿ. ಕವಲುಗುಡ್ಡ’ ಕೃತಿಯು ಡಾ. ಲಕ್ಷ್ಮಣ ವಿ.ಎ ಅವರ ಕಾದಂಬರಿಯಾಗಿದೆ. ಇದು ಕೋವಿಡ್ ಸಾಂಕ್ರಮಿಕ ರೋಗವು ವಿಶ್ವವ್ಯಾಪಿಯಾಗಿ ಹರಡಿ ಮಾನವ ಕುಲದ ಅಸ್ತಿತ್ವಕ್ಕೆ ಕುಠಾರಪ್ರಾಯವಾಗಿ ಇನ್ನಿಲ್ಲದ ಸಾವುಗಳನ್ನು ತಂದೊಡ್ಡಿ ಇಡಿ ಮಾನವ ಕುಲ ಸಾವಿನ ಭಯದಿಂದ ಕಂಗಾಲಾದ ಕಾಲದಲ್ಲಿಯೂ ಭ್ರಷ್ಟಾಚಾರದ ಕದಂಬ ಬಾಹುಗಳು ಹೇಗೆ ಹರಡಿದ್ದವು ಎಂದು ಚಿಂತಿಸುವ ಕೃತಿ. ಕಾರಂತರ ಕಾದಂಬರಿಗಳಂತೆ ಇದು ವಾಸ್ತವದ ನೆಲೆಯನ್ನೇ ಹಿಡಿದು ಸಾಗುವ ಕೃತಿ. ಆದರೆ ಹಾಗೆ ತನ್ನಲ್ಲಿಯೇ ಪರಿಪೂರ್ಣ ಜಗತ್ತನ್ನು ಪಡೆದಂತಹ ಕೃತಿಯಲ್ಲ. ಈ ಕಾದಂಬರಿಯಲ್ಲಿ ಭ್ರಷ್ಟ ನೌಕರಶಾಹಿಯು ತನ್ನ ತಪ್ಪಿನಿಂದ ಸಾಂಕ್ರಮಿಕ ರೋಗವನ್ನು ತಡೆಗಟ್ಟಲು ಅಸಾಹಯಕವಾದರೂ, ಅದರಿಂದ ಜನರಿಗೆ ತೊಂದರೆಗಳು, ಅವರ ಸಾವುಗಳಾದರೂ ಕೈಕೆಳಗಿನ ಉದ್ಯೋಗಿಗಳಾದ ಕಾಂಟ್ರೆಕ್ಟ್ ವೈದ್ಯರನ್ನು ಆರೋಪಿಯಾಗಿಸುವ ಕ್ರೌರ್ಯವನ್ನು ನೋಡ ಬಹುದು.
ಇಲ್ಲಿ ಕೇಳಿ ಬರು ಪ್ರಶ್ನೆಗಳು ನೈತಿಕತೆಯದಲ್ಲ ಬದಲಾಗಿ ಮಾನವೀಯತೆಯದು. ಅತ್ಯಂತ ಪ್ರಾಮಾಣಿಕನಾದ ಡಾ ಸುಹಾಸ್, ಅವನ ಹೋರಾಟದ ಅಪಾಯಗಳಿಗೆ ಬೆಚ್ಚುವ ಅವನ ಹೆಂಡತಿ ನಳಿನಿ, ಡಿ ಎಚ್ ಓ ವೈದ್ಯಾಧಿಕಾರಿ ತಿಪ್ಪೇರುದ್ರ ಸ್ವಾಮಿ ಹೀಗೆ ಬಹುಅಯಾಮದಲ್ಲಿ ಸಾಗುವ ಕೃತಿ ಸಮಾಜಸೇವೆ ಮತ್ತು ರಾಜಕೀಯ ಒತ್ತಡಗಳ ನಡುವಿನ ಘರ್ಷಣೆಯನ್ನು ಹಂತ ಹಂತವಾಗಿ ಚಿತ್ರಿಸುತ್ತಾ ಹೋಗುತ್ತದೆ.
ಕೈಕೆಳಗಿನ ನೌಕರರಿಗೆ ಪುಢಾರಿಯೊಬ್ಬ ಲಂಚ ಕೊಟ್ಟು ತಮಗೆ ಬೇಕಾದವರಿಗೆ ವ್ಯಾಕ್ಸಿನ್ ಹಾಕಿಸುತ್ತಾನೆ ಹಣ ತೆಗೆದುಕೊಂಡ ಚಿತ್ರವನ್ನು ವಿಡಿಯೋ ಮಾಡಿ, ಕವಕಗುಡ್ಡದ ವೈದ್ಯಾಧಿಕಾರಿಯನ್ನು ಈ ಪ್ರಕರಣದಲ್ಲಿ ಸಿಕ್ಕಿಸಿ ಹಾಕಿ ಅಂತಿಮವಾಗಿ ಭ್ರಷ್ಟಾಚಾರದ ಆರೋಪದ ಮೇಲೆ ಕೆಲಸದಿಂದ ಡಿಸ್ ಮಿಸ್ ಆಗುತ್ತಾನೆ. ಇದು ಎತ್ತುವ ಪ್ರಶ್ನೆ ಸಮಾಜದ ದೃಷ್ಟಿಯಲ್ಲಿ ನೀವು ಒಳ್ಳೆಯವರೋ ಜನೋಪಕಾರಿಗಳೋ ಎನ್ನುವುದಲ್ಲ ಬದಲಾಗಿ ನಿಮಗೆ ನೀವು ಪ್ರಾಮಾಣಿಕರಾಗಿದ್ದೀರಿಯೋ ಎನ್ನುವುದು. ಒಬ್ಬ ಲೇಖಕ ಬಿಗಿಯಾದ ಬಂಧವನ್ನು ರಚಿಸುವ ಆಸೆ ಹೊಂದಿದವನಾಗಿಯೂ ಇನ್ನೊಂದು ಕಡೆ ತನ್ನ ಅನುಭವವನ್ನು ವಾಸ್ತವದ ನೆಲೆಯಲ್ಲಿ ದಾಖಲಿಸಲು ಬಯಸುವವನಾಗಿಯೂ ಆದಾಗ ಏನಾಗುತ್ತದೆ ಎನ್ನುವುದಕ್ಕೆ ಈ ಕೃತಿಯ ಸಂರಚನೆ ಸಾಕ್ಷಿಯಾಗಿದೆ. ಸುಹಾಸ್ ಪ್ರತಿನಿಧಿಸುತ್ತಿದ್ದ ಕವಲಗುಡ್ಡ ಪಿ.ಎಚ್. ಸಿಯು ವಿವರಗಳ ಮೂಲಕವೇ ಕ್ರಮೇಣ ರೂಪಕದ ಕಡೆಗೆ ಸಾಗುತ್ತದೆ. ಇಡೀ ತಾಲೂಕಿಗೇ ಮೊದಲ ಸ್ಥಾನದಲ್ಲಿತ್ತು. ಇದು ಬೇರೆ ಆರೋಗ್ಯ ಕೇಂದ್ರಗಳ ಕಣ್ಣು ಕೆಂಪಾಗಿಸಿತ್ತು. ಐವತ್ತು ಸಾವಿರ ಜನಸಂಖ್ಯೆಯುಳ್ಳ ಕೇವಲ ಒಬ್ಬೇ ಒಬ್ಬ ನರ್ಸು ಒಬ್ಬ ಲ್ಯಾಬ್ ಟೆಕ್ನಿಷಿಯನ್ ನಿಂದ ಈ ಸಾಧನೆ ಮಾಡಿದ್ದು ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎನ್ನುವ ಸಂಗತಿಗಳು ಪ್ರಜ್ಞೆಯ ವಿಘಟನೆಯಾಗಿಯೂ ಮಾರ್ಪಾಟುಗೊಳ್ಳುತ್ತವೆ. ನೈತಿಕತೆಯ ಹಿಂದಿ ಪ್ರಶ್ನೆಗಳನ್ನು ಪರೀಕ್ಷೆಗೆ ಒಡ್ಡುವ ಆಹ್ವಾನ ಕಾದಂಬರಿಯ ಕೊನೆಯ ಭಾಗದಲ್ಲಿ ಚುರುಕಾಗಿ ಬಂದಿದೆ.
ಡಾ. ಲಕ್ಷ್ಮಣ ವಿ.ಎ ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮದವರು. ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ಓದು, ಬರಹವನ್ನು ಹವ್ಯಾಸವಾಗಿಸಿಕೊಂಡಿರುವ ಲಕ್ಷ್ಮಣ್ ಅವರು ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ ಎಂಬ ಕವನ ಸಂಕಲವನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಖಾಸಗೀ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಅಪ್ಪನ ಅಂಗಿ’ ಅವರ ಇತ್ತಿಚಿನ ಕೃತಿ. ...
READ MORE