'ಕಾರ್ಕೋಟಕ' ತ.ರಾ.ಸು ಅವರ ಕಾದಂಬರಿ. ಇಂದಿನ ಸಮಾಜ ಜೀವನವನ್ನು ತನ್ನ ಇರುವಿಕೆಯಿಂದ ವಿಷಮಗೊಳಿಸಿ, ವಿಕಾರವಾಗಿಸುತ್ತಿರುವ ದೃಷ್ಟಿಯಿಂದ ವೀಕ್ಷಿಸಿದಾಗ ಇಂಥ ವ್ಯಕ್ತಿಗಳು, ಸಾಕಷ್ಟು ಸಂಖ್ಯೆಯಲ್ಲಿ ಯಾರೊಬ್ಬರ ಕಣ್ಣಿಗಾದರೂ ಬೀಳಬಹುದು. ಎಲ್ಲಕ್ಕಿಂತ ಹೆಚ್ಚಾಗಿ, ಇಂದಿನ ರಾಜಕೀಯ ರಂಗ, ಇಂಥ ಕಾರ್ಕೊಟಕಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಹಾವಿನ ಹುತ್ತವಾಗಿದೆ. ತನ್ನ ಸ್ವಾರ್ಥ, ಅದರ ತೃಪ್ತಿಯೇ ಹಿರಿದು ಎಂದು ಭಾವಿಸುವ ವ್ಯಕ್ತಿಗಳು ಯಾವ ಕಾಲಕ್ಕೂ ಅಪರೂಪವಲ್ಲ ಆದರೆ, ನಮ್ಮ ಸಮಾಜ, ನಾಗರಿಕತೆ ಇಂದು ಬೆಳೆದಿರುವ ವಿಚಿತ್ರ ಪರಿಸ್ಥಿತಿಯಲ್ಲಿ ಇಂಥ ಒಬ್ಬ ಸ್ವಾರ್ಥದ ಆಧಾರಕನಾದ ವ್ಯಕ್ತಿಯಿಂದ, ಇಡೀ ದೇಶವೇ ಶಾಪಗ್ರಸವಾದಂತೆ ಬಳಲಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಒಂದು ಕಾಲಕ್ಕೆ ವ್ಯಕ್ತಿಯ ಸ್ವಾರ್ಥ, ಕೇವಲ ತನ್ನ ಸುತ್ತಲ ಹತ್ತಾರು ವ್ಯಕ್ತಿಗಳ ಮೇಲೆ ಮಾತ್ರ ಪರಿಣಾಮ ಬೀರಲು ಶಕ್ತವಾಗಿದ್ದರೆ, ಇಂದು ರಾಜಕೀಯದ ಮುಖವಾಡ ಧರಿಸಿ, ಇಡೀ ದೇಶವನ್ನೇ ಶೋಷಿಸಿ, ದಹಿಸುವುದು ಸಾಧ್ಯವಾಗಿದೆ. ಈ ಬಗೆಯ ವ್ಯಕ್ತಿಯೊಬ್ಬನ ಬಾಳು, ಅದು ಬೆಳೆದ ರೀತಿ, ಅದರಿಂದ ಜನತೆಯ ಮೇಲಾಗುವಂತಹ ಪರಿಣಾಮಗಳನ್ನು ಚಿತ್ರಿಸುವ ಉದ್ದೇಶದಿಂದಲೇ ರಚಿತವಾಗಿರುವ ಕಾದಂಬರಿ 'ಕಾರ್ಕೋಟಕ'.
ಪ್ರಥಮ ಭಾಗದಲ್ಲಿ ಈ ವಿಷ ಜೀವನದ ಬಾಲ್ಯ, ಯೌವನಾವಸ್ಥೆ ಮಾತ್ರ ಚಿತ್ರಿತವಾಗಿದೆ. ಮುಂದಿನ ಎರಡು ಭಾಗಗಳಲ್ಲಿ ಈ ಚಿತ್ರಣ ಸಂಪೂರ್ಣವಾಗುತ್ತದೆ. ದೇಶಕ್ಕೆ ಘಾತುಕವಾಗುವ ಜೀವನದ ಆರಂಭ ಹೇಗಾಗುತ್ತೆ ಎಂಬುದನ್ನು ಚಿತ್ರಿಸಿದ್ದಾರೆ.
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE