ರಾಜ್ ಸಿನಿಮಾ ಪ್ರಪಂಚದ ಅಶ್ವತ್ಥವೃಕ್ಷ, ಅವರು ಜನ ಮಾನಸದ ಕಲ್ಪನೆಗಳಲ್ಲಿ ಅರಳುತ್ತ ಹಲವು ಸಂಕಥನಗಳಾಗಿದ್ದಾರೆ. ಮುತ್ತು ರಾಜನ ಜೀವನದ ಕಥೆ ಒಂದಾದರೆ ರಾಜಕುಮಾರ್ ಎಂಬ ರೂಪಕದ ಕಥೆ ಹಲವು ಬಗೆಗಳದ್ದು. ರಾಜಕುಮಾರ್ ಅವರನ್ನ ಕುರಿತು ಸಹನಟರು, ಪೋಷಕ ನಟರು, ನಟಿಯರು, ನಿರ್ದೇಶಕರು, ತಂತ್ರಜ್ಞರು, ಭಿನ್ನ ಭಿನ್ನವಾಗಿ ನಿರೂಪಿಸಿದ್ದಾರೆ. ಕವಿಗಳು, ಗೀತ ರಚನೆಕಾರರು, ನಿರ್ದೇಶಕರು, ಸಂಗೀತಗಾರರು ಅವರನ್ನ ವಿಶಿಷ್ಟ ಸಾಮಾಜಿಕ ಮೌಲ್ಯಗಳ ರೂಪಕವಾಗಿಸಿದ್ದಾರೆ. ಜನ ಸಾಮನ್ಯರ ಪ್ರಜ್ಞೆಗಳಲ್ಲಿ, ಕನಸುಗಳಲ್ಲಿ ರಾಜ್ ಜೀವನದಿಯಂತೆ ವಿಸ್ತರಿಸುತ್ತಲೇ ಹೋಗಿದ್ದಾರೆ. ರಾಜ್ ಅವರ ಭೌತಿಕ ಶರೀರ ನಾಶವಾದರು ಕಾಲ್ಪನಿಕ ರೂಪ ಬೆಳೆಯುತ್ತಲೇ ಇದೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಹುಲಿಹೈದರ್'ನ ಶಿವನಾಯಕ ದೊರೆ ಅವರ 'ಮುತ್ತುರಾಜನ ವಿಜಯ್’ ಬಂದಿದೆ. ದೊರೆಯವರು ಕನ್ನಡಿಗರ ವಿಜಯನಗರ ಸಾಮ್ರಾಜ್ಯದೊಂದಿಗೆ ರಾಜ್ ಅವರನ್ನ ಬೆಸೆಯುತ್ತಾ ಸಮುದಾಯದೊಳಗಿನ ಕೇಡಿಗರನ್ನು ನಾಶಮಾಡುವ ರಾಜ್ ಅವರ ಸಿನಿಮೀಯ ವ್ಯಕ್ತಿತ್ವವನ್ನ ಬಸಿದು ಕಾಲ್ಪನಿಕ ಕಾದಂಬರಿಯಾಗಿಸಿದ್ದಾರೆ. ಜೊತೆಗೆ ಪತ್ತೆದಾರಿ ಕಾದಂಬರಿಗಳ ರೋಚಕ ಎಳೆಗಳನ್ನ ಹೊಸೆದು ಸಾಮಾನ್ಯರಿಗೆ ಆಪ್ತವೆನಿಸುವಂತೆ ಕಡೆದು ನಿಲ್ಲಿಸಿದ್ದಾರೆ. ಇದು ಅನುಭವದ ಕಥನವಲ್ಲ, ಕೇಳಿ ಸಂಗ್ರಹಿಸಿದ ಜೀವನದ ಕಥೆಯಲ್ಲ, ಅಭಿಮಾನಿಯೊಬ್ಬ ತನ್ನದೇ ಸೃಜನ ಶೀಲ ಪ್ರತಿಭೆಯಿಂದ ರೂಪಿಸಿದ ಸ್ವತಂತ್ರ್ಯ ಕಥನ. ಈ ಪ್ರೀತಿಯಲ್ಲಿ ಕೌಶಲ್ಯತೆ ಇದೆ, ಪ್ರಾಯೋಗಿಕತೆ ಇದೆ, ಜನಪ್ರೀಯರು ನಿರಂತರವಾಗಿ ಸ್ಫೂರ್ತಿಧಾರೆಗಳಾಗಿರುತ್ತಾರೆ ಎಂಬ ಬೆಳಕಿದೆ. ಎಂದು ಶಿವಕುಮಾರ್ ಕಂಪ್ಲಿ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ಶಿವನಾಯಕದೊರೆ ಹುಲಿಹೈದರ ಮೂಲತಃ ಹೈದ್ರಾಬಾದ್ ಕರ್ನಾಟಕದ ಕೊಪ್ಪಳ ಜಿಲ್ಲೆಯ `ಹುಲಿಹೈದರ'ದವರು. ಪಿಯುಸಿ ವಿದ್ಯಾರ್ಥಿಯಾಗಿದ್ದಾಗಲೇ ಬರವಣಿಗೆಯತ್ತ ಆಸಕ್ತಿ ಹೊಂದಿದ ಅವರು ನೀನಾಸಂ ಪದವಿ ಪಡೆದು, ಒಂದು ವರ್ಷ ಸುವರ್ಣವಾಹಿನಿಯ ಕಲಾನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು 2008ರಲ್ಲಿ ಸರ್ಕಾರದಿಂದ ನಾಟಕ ಶಿಕ್ಷಕರಾಗಿ ಆಯ್ಕೆಯಾಗಿ, ಈಗ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಡೇಲಡಕು ಗ್ರಾಮದ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ವೃತ್ತಿಯ ಜೊತೆಗೆ ಕತೆ, ನಾಟಕ, ಕಾದಂಬರಿಗಳನ್ನು ಬರೆದಿದ್ದಾರೆ. “ಮುತ್ತುರಾಜನ ವಿಜಯ” ಇವರ ಮೊದಲ ಕೃತಿ . ಪ್ರಸ್ತುತ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ವಾಸವಾಗಿದ್ದಾರೆ. ಕೃತಿಗಳು: ಮುತ್ತುರಾಜನ ವಿಜಯ ...
READ MORE