ಮೂಡಲ ಮರೆಯಲ್ಲಿ-ಲೇಖಕ ಡಾ. ಎಂ. ವೆಂಕಟಸ್ವಾಮಿ ಅವರು ಕಾದಂಬರಿ. ಕನ್ನಡ ಪ್ರಭ ದಿನ ಪತ್ರಿಕೆಯಲ್ಲಿ 2002ರಲ್ಲಿ ಪ್ರಕಟಗೊಂಡಿದೆ. ಪ್ರಪಂಚಕ್ಕೆ ಪ್ರೀತಿ, ಪ್ರೇಮ, ದಯೆ, ದಾಕ್ಷಿಣ್ಯಗಳನ್ನು ಬೋಧಿಸಿದ ಬುದ್ಧ, ಏಸು, ಬಸವ, ಗಾಂಧಿ ಇನ್ನೂ ಅನೇಕ ಮಹಾತ್ಮರ ವಿರುದ್ಧ ಈ ಸಮಾಜ ನಿರ್ದಾಕ್ಷಿಣ್ಯವಾಗಿ ಸೇಡು ತೀರಿಸಿಕೊಂಡಿತು. ಮಾನವನ ಹುಟ್ಟಿನಿಂದಲೂ ನ್ಯಾಯ ಮತ್ತು ಅನ್ಯಾಯದ ನಡುವೆ ತೀವ್ರ ಸಂಘಷಣೆ ನಡೆಯುತ್ತಲೇ ಇದೆ. ಈ ಕಾದಂಬರಿಯಲ್ಲಿ ಬರುವ ಜಿರಂಜೀವಿ ಕೇವಲ ಕಥೆ ಕಾದಂಬರಿಗಳಲ್ಲಿ ಬರುವ ಪಾತ್ರವಲ್ಲ. ನಿಜ ಜೀವನದಲ್ಲೂ ಪ್ರತಿ ಘಳಿಗೆಯಲ್ಲೂ ನಮ್ಮ ಸುತ್ತ ಮುತ್ತಲಿರುವ ಪ್ರಸ್ತುತ ಪಾತ್ರ. ಹಾಗಾದರೆ ಈ ಚಿರಂಜೀವಿ ಎಂತಹವನು? ಸಮಾಜಕ್ಕೆ ಏನೆಲ್ಲ ಮಾಡಿದ? ಸಮಾಜ ಅವನಿಗೆ ಪ್ರತಿಯಾಗಿ ಏನು ಬಳುವಳಿ ನೀಡಿತು? ಎಂಬುದು ಕಾದಂಬರಿಯ ವಸ್ತು.
ಈ ಕಾದಂಬರಿಯಲ್ಲಿ ಬರುವ ಚಿರಂಜೀವಿ ಪಾತ್ರ ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಎನ್ನುವ ನಮ್ಮ ಸುತ್ತಲಿರುವ ಒಂದು ಮಹದಾಶೆಯ ಒಂದು ಪಾತ್ರವಾಗಿದೆ. ಮನಕಲಕುವಂತಹ ಘಟನೆಗಳು ಮತ್ತು ಇಂದಿನ ವಾಸ್ತವ ಸಂಗತಿಗಳಿಗೆ ಅತ್ಯಂತ ಹತ್ತಿರವಾಗುವ ಕಥೆಯಲ್ಲಿ ನಿಷ್ಠಾವಂತ ಮತ್ತು ಜನಪ್ರಿಯ ಅಧಿಕಾರಿಯಾದ ಚಿರಂಜೀವಿಯನ್ನು ಈ ದುಷ್ಟ ಸಮಾಜ ಹೇಗೆ ನಡೆಸಿಕೊಳ್ಳುತ್ತದೆ ಎನ್ನುವುದನ್ನು ಮಾರ್ಮಿಕವಾಗಿ ಚಿತ್ರಿಸಲಾಗಿದೆ.
ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಗೆ ಸೇರಿದ ಡಾ.ಎಂ.ವೆಂಕಟಸ್ವಾಮಿ ಅವರು 06.11.1955 ರಂದು ಜನಿಸಿದರು, ಪ್ರಾಥಮಿಕ ಶಿಕ್ಷಣ ತನ್ನ ಊರಿನಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಘಟ್ಟುಮಾದಮಂಗಳದಲ್ಲಿ ಪೂರೈಸಿದರು. ಕೆ.ಜಿ.ಎಫ್‍ನ ಮುನಿಸಿಪಲ್ ಬಾಯ್ಸ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮತ್ತು ಕೆಜಿಎಫ್ ಪ್ರ.ದ.ಕಾಲೇಜಿನಲ್ಲಿ ಬಿ.ಎಸ್ಸಿ. ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (ಭೂವಿಜ್ಞಾನ) ಎಂ.ಎಸ್ಸಿ., ಮುಗಿಸಿದರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾದರು. ಅದಕ್ಕೆ ಮುಂಚೆ ಸ್ವಲ್ಪ ಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿ (SAIL) ಕೆಲಸ ಮಾಡಿದ್ದರು. ‘ಕೋಲಾರ ಚಿನ್ನದ ಗಣಿಗಳು'' ಮಹಾಪ್ರಬಂಧಕ್ಕೆ ...
READ MOREಮೂಡಲ ಮರೆಯಲ್ಲಿ ಕಾದಂಬರಿಗೆ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಇಬ್ಬರು ಓದುಗರ ಪ್ರತಿಕ್ರಿಯೆ
ನ್ಯಾಯ ಎಲ್ಲಿದೆ ಸ್ವಾಮಿ? ಅದೇನಿದ್ದರೂ ಮನುಷ್ಯನ ಪರಿಶುದ್ಧ ಮನುಷ್ಯನ ಮನಸ್ಸಿನಲ್ಲಿ ಮಾತ್ರ ಇರುತ್ತದೆ. ಚಿರಂಜೀವಿಯಂತಹ ಉತ್ಸಾಹಿ ಯುವಕರು ನ್ಯಾಯವಾದ ದಾರಿಯಲ್ಲಿ ನಡೆದರೆ ಅದೆ ಸತ್ಯ. ಚಿರಂಜೀವಿ ಪಾತ್ರಕ್ಕೆ ಅಂತ್ಯ ಇಲ್ಲ, ಯಾಕೆಂದರೆ ಅವನು ಯಾವತ್ತೂ ಚಿರಂಜೀವಿಯಾಗೆ ಉಳಿಯಬೇಕು. ನಮ್ಮ ಮಧ್ಯೆ ಅರಳುವ ಪ್ರತಿ ಒಂದು ಕುಡಿಯನ್ನು ಚೆನ್ನಾಗಿ ಓದಿಸಿ ನ್ಯಾಯದ ದಾರಿ ತೋರಿಸಿ ನಡೆದರೆ ಸಾಕು. ಅದೇ ಚಿರಂಜೀವಿಗೆ ನಾವು ಕೊಡುವ ಗೌರವ. ''ಮೂಡಲ ಮರೆಯಲ್ಲಿ'' ಕಾದಂಬರಿಯನ್ನು ಬರೆದ ಎಂ.ವೆಂಕಟಸ್ವಾಮಿಯವರಿಗೆ ಹಾಗೂ ಕಾದಂಬರಿಯನ್ನು ಓದಲು ಅನುವು ಮಾಡಿಕೊಟ್ಟ ನನ್ನ ಪ್ರೀತಿಯ ''ಕನ್ನಡಪ್ರಭ''ಕ್ಕೆ ಹೃದಯಪೂರ್ವಕ ವಂದನೆಗಳು
- ಎಸ್ ದಾಕ್ಷಾಯಿಣಿ, ಶಿರಾ.
ಎಂ.ವೆಂಕಟಸ್ವಾಮಿಯವರ ''ಮೂಡಲ ಮರೆಯಲ್ಲಿ'' ಇದರ ಮೊದಲ ಕೆಲವು ಕಂತುಗಳನ್ನು ಓದಿದಾಗ ಇದು ಕಥೆಯೇ ಎಂಬ ಪ್ರಶ್ನೆ ಮೂಡಿತು. ಏಕೆಂದರೆ ಇದು ಚಿರಂಜೀವಿಯಂತಹ ಹುಡುಗರಿಗಷ್ಟೇ ಅಲ್ಲ, ಜೀವನದಲ್ಲಿ ಗುರಿ ಸಾಧಿಸಬೇಕೆಂದುಕೊಂಡ ಪ್ರತಿ ವಿದ್ಯಾರ್ಥಿಗೂ ನೀಡಿದ ಮಾಹಿತಿಯಾಗಿತ್ತು. ಲೇಖಕರು ಮನಕಲಕುವಂತಹ ಘಟನೆಗಳನ್ನು ನಿರ್ವಿಕಾರವಾಗಿ , ಸಂಯಮದಿಂದ ಬರೆದಿದ್ದಾರೆ. ಕಥಾನಾಯಕ ವಿಳಂಬವಾದರೂ ನ್ಯಾಯಕ್ಕಾಗಿ ಹೋರಾಡಿ ಗೆಲ್ಲುತ್ತಾನೆ. ಚಿರಂಜೀವಿಯ ಮಟ್ಟಿಗೆ ಇದು ಸಾಧ್ಯವೆನಿಸುತ್ತದೆ
- ಎಸ್.ಕೆ.ಜಯಂತಿ, ಕೊಪ್ಪ.