`ಶುಭ ಸಮಯ' ಅ ನ ಕೃ ಅವರ ಕೃತಿಯಾಗಿದೆ. ಸಣ್ಣಮ್ಮ ಮತ್ತು ಬ್ಯಾಟಪ್ಪ ದಂಪತಿಗಳಿಗೆ ಹಾಸಿ ಹೊದ್ದುಕೊಳ್ಳುವ ಬಡತನ. ಇದಕ್ಕೆ ಮುಖ್ಯ ಕಾರಣ ಬ್ಯಾಟಪ್ಪನ ಕುಡಿತದ ಚಟ. ತನ್ನ ಸಂಸಾರದ ಮೇಲೆ ಅತಿಯಾದ ಪ್ರೀತಿ ಇದ್ದರೂ ಕುಡಿತವನ್ನು ಬಿಡಲಾಗದೆ ಪ್ರತೀ ಬಾರಿ ಕುಡಿದಾಗಲೂ ಪಶ್ಚಾತ್ತಾಪ ಪಟ್ಟು, 'ಇನ್ನು ಕುಡಿಯುವುದಿಲ್ಲ' ಎಂದು ಹೆಂಡತಿಯ ಬಳಿ ಹೇಳಿ ಅತ್ತರೂ ಮರುದಿನ ಇದೇ ಕಥೆಯ ಪುನರಾವರ್ತನೆ. ಪತಿಯ ದುಶ್ಚಟದ ಬಗ್ಗೆ ಅವಳಿಗೆ ಬೇಸರವಿದ್ದರೂ ಸಾರಾಯಿ ಅಂಗಡಿ ಕಂಡಾಗೆಲ್ಲ ಚಂಚಲಗೊಳ್ಳುವ ಅವನ ಮನಸ್ಸಿನ ಬಗ್ಗೆ ಕನಿಕರ. ಮರಿಯಪ್ಪನ ಪ್ರೆಸ್ ನಲ್ಲಿ ದುಡಿಯುವ ಬ್ಯಾಟಪ್ಪ ನಂಬಿಕೆಯ ಆಳು. ಬೇರೊಂದು ಪ್ರೆಸ್ ನಲ್ಲಿ ದುಡಿಯುತ್ತಿದ್ದ ಮರಿಯಪ್ಪನಿಗೆ ತಮ್ಮ ಮಗಳು ಕುಮುದಾಳನ್ನು ಕೊಟ್ಟು ಮದುವೆ ಮಾಡಿ ಅಳಿಯನನ್ನಾಗಿ ಮಾಡಿಕೊಂಡ ಅನುಕೂಲವಂತ ಭೈರಪ್ಪನವರು ಅಳಿಯನಿಗೆಂದು ಹೊಸ ಮುದ್ರಣಾಲಯ ಮಾಡಿಕೊಟ್ಟರು. ಮರಿಯಪ್ಪ ಸಹಾಯಜೀವಿ, ತನ್ನ ಸುತ್ತಲಿನವರ ಕಷ್ಟ ಸುಖಗಳಿಗೆ ಸದಾ ಸ್ಪಂದಿಸಿ ಅವರಿಗೆ ಕೈಲಾದ ಸಹಾಯ ಮಾಡುವುದು ಅವನ ರೀತಿ. ಅವನಲ್ಲಿ ಸಹಾಯ ಕೇಳಿಕೊಂಡು ಬರುವ ಎಲ್ಲರಲ್ಲಿ ಬ್ಯಾಟಪ್ಪನ ಪತ್ನಿ ಸಣ್ಣಮ್ಮನೂ ಒಬ್ಬಳು.
‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...
READ MORE