'ಮಾಯೆ’ ಲೇಖಕಿ ಆಶಾ ರಘು ಅವರ ಕಾದಂಬರಿ. ಚಾರಿತ್ರಿಕ ಹಿನ್ನೆಲೆಯಲ್ಲಿ ಬೆಳೆಯುವ ಇಲ್ಲಿನ ಕತಾಹಂದರವು, ಅದರ ಪಾತ್ರಗಳ ನೆನಪುಗಳ ಸರಮಾಲೆಯಾಗಿಯೇ ಓದುಗನಿಗೆ ತೆರೆದುಕೊಳ್ಳುವುದು ಕಾದಂಬರಿಯ ವಿಶೇಷ. ಕೃತಿಗೆ ಬೆನ್ನುಡಿ ಬರೆದಿರುವ ಕೆ.ಎನ್ ಗಣೇಶಯ್ಯ `ಬಲವಂತದಲ್ಲಿ ಪ್ರೀತಿಯನ್ನು ಪಡೆಯುವ ಛಲ, ನಿಧಿಯ ಬೇಟೆ, ಆಸ್ತಿಯ ಆಸೆ, ಸಿಂಹಾಸನದ ಉತ್ತರಾಧಿಕಾರಿಯ ಜನ್ಮ ರಹಸ್ಯ, ಮುಂತಾದ ಹೆಗ್ಗುರುತುಗಳಿಗೆ ಓದುಗರನ್ನು ಕಟ್ಟಿಹಾಕಿ, ಆ ಹೆಗ್ಗುರುತುಗಳ ನಕ್ಷೆಯೊಳಗೆ ಕತೆಯನ್ನು ಬೆಳೆಸುತ್ತಾರೆ ಲೇಖಕಿ. ಇಲ್ಲಿ ಎರಡು ಬೋಧನೆಗಳು ವ್ಯಕ್ತವಾಗುತ್ತದೆ. ಸುಖ ಪಡೆಯಲೆಂದು ಹೆಣ್ಣು, ಹೊನ್ನು ಹಾಗೂ ಮಣ್ಣಿನ ಹಿಂದೆ ಹೋಗುವಂತಹ ವ್ಯಕ್ತಿ ಯಾವ ರೀತಿಯಾಗಿ ಕಷ್ಟಗಳನ್ನು ಪಡುತ್ತಾನೆ ಹಾಗೂ ಈ ಮೂರು ಆಸೆಗಳನ್ನು ತೊರೆದ ಮನುಷ್ಯನ ಜೀವಕ್ಕೆ ಆಹ್ಲಾದಕರ ಆನಂದದ ಜೊತೆಗೆ ಪಾರಮಾರ್ಥಿಕ ಸುಖವೂ ದೊರೆಯುತ್ತದೆ ಎಂಬುದನ್ನು ಲೇಖಕಿ ವಿವರಿಸುತ್ತಾರೆ. ಕಥಾನಾಯಕ ಅತಿಯಾಗಿ ಪ್ರೀತಿಸಿದ್ದ ಬಾಲ್ಯದ ಪ್ರೇಯಸಿಯು ವಿಧಿಯ ಕೈಚಳಕದಿಂದ ದೂರವಾದ ನಂತರ, ಆಕೆಯ ಸ್ಥಾನದಲ್ಲಿ ನೆಲೆಯಾದ ಮತ್ತೊಂದು ಹೆಣ್ಣು ಅವನ ನೈತಿಕ ಸಮತೋಲನವನ್ನು ಸಂಪೂರ್ಣವಾಗಿ ಕದಡಿ ಅವನಲ್ಲಿ "ಮಾನವನ ಸಹಜ ದುರಾಸೆಗಳನ್ನು ಆಳವಾಗಿ ಬಿತ್ತಿ ಬೆಳೆಸುತ್ತಾಳೆ. ಅದರ ಪರಿಣಾಮವಾಗಿ, ತನ್ನದಲ್ಲದ ಮಣ್ಣನ್ನು ಕಬಳಿಸಿ, ಪರರ ಹೊನ್ನಿಗೆ, ಹೆಣ್ಣಿಗೆ ಕೈ ಚಾಚಿದ ಅವನ ಜೀವನ ಕೊನೆಗೆ ಸುಂಟರಗಾಳಿಗೆ ಸಿಕ್ಕ ತರಗೆಲೆಯಂತಾಗುತ್ತದೆ ಈತನ ಅಮಾನವೀಯ ಕೃತ್ಯಗಳಿಗೆ ಕನ್ನಡಿ ಹಿಡಿಯುವಂತೆ ಸೃಷ್ಟಿಸಲಾಗಿರುವ ಮತ್ತೊಂದು ಪಾತ್ರದ ಅಮಾಯಕ ವ್ಯಕ್ತಿ ತಾನು ವಾರಸುದಾರನಾಗಿದ್ದ ಹೊನ್ನನ್ನೂ, ಅಧಿಕಾರವನ್ನೂ ದೂರ ತಳ್ಳಿ, ಸ್ನೇಹಕ್ಕೆ, ಸತ್ಯಕ್ಕೆ ಜೋತುಬಿದ್ದ ಕಾರಣ, ಸರಳವಾದರೂ ಸುಂದರ ಹಾಗೂ ಆನಂದಮಯ ಜೀವನ ಸಾಗಿಸುತ್ತಾನೆ. ಒಟ್ಟಿನಲ್ಲಿ, ಸುತ್ತಲೂ ಸುಖ ಇದ್ದರೂ ಅದನ್ನು ಗ್ರಹಿಸದೆ, ಮತ್ತೆಲ್ಲೋ ಅದು ಸಿಗುತ್ತದೆ ಎಂಬ ಭ್ರಮೆಯ 'ದೂರ ತೀರಕೆ ಕರೆದೊಯ್ಯುವ ’ ಮೋಹನ(ದ) ಮುರುಳಿ’ಯ ಕರೆಗೆ ಬಲಿಯಾಗುವ ಎಲ್ಲ ಮನಸುಗಳಿಗೆ ಎಚ್ಚರಿಕೆಯ ಕರೆ ಗಂಟೆಯಂತೆ ಆಶಾ ಅವರ ಈ ಕಾದಂಬರಿ ಮೂಡಿ ಬಂದಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಶಾ ರಘು ಅವರು ಕನ್ನಡದ ಪ್ರಮುಖ ಕಾದಂಬರಿಗಾರ್ತಿಯರಲ್ಲಿ ಒಬ್ಬರು. ಇವರು ಕೇಶವ ಅಯ್ಯಂಗಾರ್ ಹಾಗೂ ಸುಲೋಚನ ದಂಪತಿಗಳ ಹಿರಿಯ ಮಗಳಾಗಿ 1979ರ ಜೂನ್ 18 ನೇ ತಾರೀಖಿನಂದು ಬೆಂಗಳೂರಿನಲ್ಲಿ ಹುಟ್ಟಿದರು. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉಪನ್ಯಾಸಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿರುವ ಇವರು, ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಗಳಲ್ಲಿಯೂ ಕಲಾವಿದೆಯಾಗಿ, ಸಂಭಾಷಣೆಕಾರರಾಗಿ, ಸಹಾಯಕ ನಿರ್ದೇಶಕರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. 'ಆವರ್ತ', 'ಗತ', 'ಮಾಯೆ', 'ಚಿತ್ತರಂಗ', ಕೆಂಪು ದಾಸವಾಳ, ವಕ್ಷ ಸ್ಥಲ ಕಾದಂಬರಿಗಳನ್ನು, 'ಆರನೇ ಬೆರಳು', 'ಬೊಗಸೆಯಲ್ಲಿ ಕಥೆಗಳು', 'ಅಪರೂಪದ ಪುರಾಣ ಕಥೆಗಳು' ಮೊದಲಾದ ಕಥಾಸಂಕಲನಗಳನ್ನೂ, 'ಚೂಡಾಮಣಿ', ...
READ MORE'ಮಾಯೆ' ಕೃತಿಯ ಕುರಿತು ಕವಿ ಆಶಾ ರಘು ಅವರ ಮಾತು.…
‘ಮಾಯೆ’ ಕೃತಿಯ ಕುರಿತು ವಿಮರ್ಶೆ
ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲಿ ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ.
ಪ್ರಥಮ ಸ್ತ್ರೀವಾದಿ ಪುರುಷ ಎಂದು ಗುರುತಿಸಬಹುದಾದ ಅಲ್ಲಮನ ಈ ವಚನ, ಹೆಣ್ಣು ಮೇಲಿರುವ ಆರೋಪವನ್ನು ಅಲ್ಲಗಳೆಯುವಂತಹ ಕೆಲಸವನ್ನು ಮಾಡುತ್ತಿರುವುದು ಇಂದಿಗೂ ಸ್ತುತ್ಯಾರ್ಹ. ಆದರೂ ಹೆಣ್ಣು ಮಾಯೆ ಎಂಬ ಆರೋಪ ಈಗಲೂ ಅವಳನ್ನು ಹಿಂಬಾಲಿಸುತ್ತಿರುವುದು ಸತ್ಯ. ಇಷ್ಟು ದಿನ ವಿಚಾರ ಸಂಕಿರಣಗಳಲ್ಲಿ ವೇದಿಕೆಗಳ ಮೇಲೆ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ಅಲ್ಲಗಳೆದ ನಂತರ, ಒಂದು ಕಾದಂಬರಿಯ ಮೂಲಕ ಈ ಮಿಥೈಯ ಅನುಸಂಧಾನ ಆಗುತ್ತಿರುವುದು ವಿಶೇಷ.
ಆಶಾ ರಘು ಅವರ ಕಾದಂಬರಿ, 'ಮಾಯೆ' ಇಂತಹದ್ದೊಂದು ವಿನೂತನ ಪ್ರಯತ್ನಕ್ಕೆ ಸಾಕ್ಷಿಯಾಗಿದೆ. ಇದನ್ನು ಓದಿದಾಗ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಆರಂಭದಲ್ಲಿ ಕಗ್ಗಂಟಿನಂತೆ ಕಾಣುವ ಕಥೆಯ ಎಳೆಗಳನ್ನು ಬಿಡಿಸುತ್ತಾ ಹೋದಂತೆ ಒಂದು ವಿಶಾಲವಾದ ಭೂಮಿಕೆ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಪ್ರಾಚೀನ ಕಾಲವನ್ನು ನಮ್ಮ ಮುಂದೆ ಸಾಕಷ್ಟು ಶಕ್ತಿಯುತವಾಗಿ ಕಟ್ಟಿಕೊಡುವ ಈ ಕಾದಂಬರಿಯು, ಆ ನಿಟ್ಟಿನಲ್ಲಿ ಒಂದು ಅಪರೂಪದ ಪ್ರಯತ್ನ.
'ಮಾಯೆ' ಕಾದಂಬರಿ 12ನೇ ಶತಮಾನದ ಸುಮಾರಿಗೆ ನಡೆಯುವ ಕತೆ, ಇಲ್ಲಿ ಒಂದು ಬಾಲ್ಯದಿಂದ ಬೆಳೆದು ಬಂದ ಪ್ರೇಮ ಕತೆಯಿದೆ, ವಿಫಲ ಪ್ರೇಮವಿದೆ, ఆస్తి ಜಗ್ಗಾಟವಿದೆ, ನಿಧಿ-ನಿಕ್ಷೇಪ ಹುಡುಕುವ ಸಾಹಸಗಾಥೆಯಿದೆ, ಸ್ವಾರ್ಥ, ದ್ರೋಹ, ಮಿತ್ರತ್ವ, ಕುರುಡುಪ್ರೇಮ, ಕೊನೆಯಲ್ಲಿ ಜ್ಞಾನೋದಯದ ಎಳೆಯಿದೆ.
ಕಾದಂಬರಿಯ ಸಿಕ್ಕಿಗೆ ಸಿಲುಕಿರುವ ಮನುಷ್ಯನಾದರೆ, ಅವನ ಸ್ನೇಹಿತ ಮದನದು, ಮಾಯೆಗಳ ಕಟ್ಟಿಗೆ ಮನುಷ್ಯ ಸಿಲುಕುವುದು ಅವನ ದೌರ್ಬಲ್ಯವಷ್ಟೇ ಎಂಬ ಸತ್ಯವನ್ನು ಪ್ರತಿಪಾದಿಸಲಿರುವ ಮೌಲ್ಯಯುತ ವ್ಯಕ್ತಿತ್ವ, ವೈಶಾಲಿಯೊಂದಿಗಿನ ಜಯಕೀರ್ತಿಯ ವಿಫಲ ಪ್ರೇಮಕ್ಕೆ ಕಾರಣ ಹೊನ್ನು, ತನ್ನ ದಾಯಾದಿಗಳೊಂದಿಗಿನ ಕಲಹಕ್ಕೆ ಕಾರಣ ಮಣ್ಣು, ಜಯಕೀರ್ತಿಯ ನೈತಿಕ ಅಧಃಪತನಕ್ಕೆ ಕಾರಣ ಹೊನ್ನು ಮತ್ತು ಮಣ್ಣಿನ ಆಸೆಗೆ ಬಿದ್ದ ಆತನ ಪತ್ನಿ ಮಂಗಳೆ, ಹೆಣ್ಣು! ಹೀಗೆ ಜೀವನದ ಎಲ್ಲ ಕ್ರಿಯೆಗಳಲ್ಲಿ ಹೆಣ್ಣು ಹೊನ್ನು ಮಣ್ಣುಗಳು ಕಾರಣರ್ಕತೃಗಳಾಗಬಹುದು ಎಂಬುದನ್ನು ಹೇಳುತ್ತಲೇ, ಅವುಗಳ ಸಿಕ್ಕನ್ನು ಬಿಡಿಸಿಕೊಳ್ಳುವ ಅಂತಃಶಕ್ತಿಯೂ ಮನುಷ್ಯನಿಗಿದೆ. ಎಂಬುದನ್ನು ಆಶಾ ರಘು ಬಹಳ ಜಾಣೆಯಿಂದ ನಿರೂಪಿಸುತ್ತಾರೆ.
ಈ ಕಾದಂಬರಿಯ ಪುಟಗಳು ಮುಂದೋಡಿದಂತೆಲ್ಲಾ ಕಾಲ ಹಿಂಚಲಿಸುತ್ತದೆ. ಈ ತಂತ್ರವನ್ನು ಉಪಯೋಗಿಸುವ ಆಶಾ, ಎಲ್ಲಿಯೂ ಪಾತ್ರಗಳ ವರ್ತಮಾನ ಸ್ಥಿತಿ ತಿಳಿಯದಂತೆ ಜಾಣ್ಮೆಯಿಂದ ಕುತೂಹಲವನ್ನು ಕಾಯ್ದಿಡುವುದನ್ನು, ಉತ್ತಮವಾಗಿ ನಿರ್ವಹಿಸಿದ್ದಾರೆ. ಹನ್ನೆರಡನೆಯ ಶತಮಾನದಲ್ಲಿ ಕತೆ ನಡೆಯುವುದರಿಂದ, ಮಂಗಳೆಯ ಕೈಲಿ ವಚನಗಳನ್ನು ಹಾಡಿಸುವ ಪರಿ ಮೆಚ್ಚುವಂಥದ್ದು. ನಿಧಿ ಹುಡುಕಲು ಹೋಗುವ ಬರುವ ದಾರಿಯಲ್ಲಿ ಜಯಕೀರ್ತಿಯ ಹೃದಯ ಪರಿವರ್ತನೆ ಉಂಟಾದರೆ, ದೈಹಿಕವಾಗಿ ದುರ್ಬಲವಾಗಿರುವ ಮದನನ ಆಂತರಿಕ ಶಕ್ತಿ ಅರಿವಾಗುತ್ತದೆ. ಮನೋವ್ಯಾಪಾರಗಳ ಜೊತೆ, ನಿಧಿಯ ಹುಡುಕಾಟದ ಸಮಯದಲ್ಲಿನ ಪ್ರಕೃತಿಯ ಮೋಹಕ ವಿವರಣೆ ಕಾದಂಬರಿಯನ್ನು ಇನ್ನಷ್ಟು ಆಕರ್ಷಕವಾಗಿಸುತ್ತವೆ. ಪಾತ್ರಗಳಿಗೆ, ರಾಜ್ಯಗಳಿಗೆ ಆಶಾ ಅವರು ಬಳಸಿರುವ ಪೌರಾಣಿಕ ಹೆಸರುಗಳು ಕಾದಂಬರಿಗೆ ಒಂದು ಗಾಂಭೀರ್ಯವನ್ನು ತಂದುಕೊಟ್ಟಿವೆ.
'ಮಾಯೆ' ಕಾದಂಬರಿ, ಓದುಗನಿಗೆ ತನ್ನ ಮುಖಾಮುಖಿಗೆ, ತನ್ನ ಇರಸರಿಕೆಯ ಸಿಂಹಾವಲೋಕನಕ್ಕೆ ಪ್ರೇರೇಪಿಸುವಂತಿರುವುದು ಅದರ ಶಕ್ತಿ. ಎಲ್ಲಿಯೂ ರಭಸವಾಗಿ ಭೋರ್ಗರೆಯದೆ, ತಣ್ಣಗೆ ಹರಿವ ನೀರಿನಂತೆ ಪ್ರವಹಿಸುವ ಆಶಾರ ಶೈಲಿ ನಿಧಾನಕ್ಕೆ ಚಿಂತನೆಗೆ ಹಚ್ಚುತ್ತದೆ. ಮಾಯೆ ಕವಿಯುವುದು ಸರಿಯುವುದಕ್ಕೆ ಎಂಬುದು ಕಾದಂಬರಿಯ ಆಶಯ.
(ಕೃಪೆ : ವಿಶ್ವವಾಣಿ, ಬರಹ : ನಿವೇದಿತಾ ಹೆಚ್)