ಲೇಖಕ ನಾಡೋಜ ಗೀತಾ ನಾಗಭೂಷಣ ಅವರ ಕಾದಂಬರಿ ದಂಗೆ. ಹುಟ್ಟು ತಬ್ಬಲಿಯಾದ ದಲಿತ ಹೆಣ್ಣೊಬ್ಬಳು ಜೀವನದ ಕಲ್ಲು ಮುಳ್ಳುಗಳ ಹಾದಿಯನ್ನು ಕಷ್ಟದಿಂದ ದಾಟಿ ನೆಮ್ಮದಿಯ ನಿಲ್ದಾಣ ತಲುಪಿದಳು ಅನ್ನುವಷ್ಟರಲ್ಲಿ ಮತ್ತೆ ಸಂಕೀರ್ಣವಾದ ತಿರುವಿನಲ್ಲಿ ನಿಲ್ಲುತ್ತಾಳೆ. ಹಿಂದೆ ಹೋಗಲಾರಳು, ಮುಂದೆ ಸಾಗಲು ಸರಿಯಾದ ದಾರಿ ಯಾವುದೆಂದು ನಿರ್ಧರಿಸಲಾರಳು. ಅಂಥಾ ಸಮಸ್ಯೆಯಲ್ಲಿ ಮುಳುಗಿದವಳು ಈ ಕಾದಂಬರಿಯ ನಾಯಕಿ ದುರಗಿ. ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡು ತಂದೆಯ ಜೊತೆಗೆ ಬೆಳೆಯುತ್ತಿದ್ದ ಹುಡುಗಿ ದುರಗಿ. ಹನ್ನೊಂದು ವರ್ಷವಾದಾಗ ತಂದೆಯನ್ನೂ ಕಳೆದುಕೊಂಡು ಅನಾಥಳಾದಾಗ ಆ ಮುದ್ದಾದ ಪುಟ್ಟ ಹುಡುಗಿಗೆ ಇರುವ ಬಂಧುವೆಂದರೆ ಅಕ್ಕ ಮೊಗಲವ್ವ ಮತ್ತು ಭಾವ ಮಾತ್ರ. ದುರಗಿಯ ತಾಯಿಯ ಸವತಿ ಮಗಳು ಆ ಅಕ್ಕ. ತಂಗಿ ಎಂಬ ಅಕ್ಕರೆ ಇಲ್ಲದಿದ್ದರೂ ಊರಿನ ಹಿರಿಯರ ಆದೇಶವನ್ನು ಪಾಲಿಸಲೇಬೇಕಾದ ಇಕ್ಕಟ್ಟಿನಲ್ಲಿ ಸಿಲುಕಿ ಮೊಗಲವ್ವ ಮತ್ತು ಅವಳ ಗಂಡ ದುರಗಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಾರೆ. ಬಡತನ, ತಿರಸ್ಕಾರವನ್ನೇ ಕಂಡ ಜೀವನದಲ್ಲಿ ಪ್ರೀತಿ ವಾತ್ಸಲ್ಯ ತೋರಲು ಸಮಯ ಎಲ್ಲಿದೆ? ಮನೆಕೆಲಸ ಮಾಡಲು ಮತ್ತು ಮಗುವನ್ನು ಸಂಭಾಳಿಸಲು ಬಿಟ್ಟಿಯಾಗಿ ಆಳು ಸಿಕ್ಕಿದಂತಾಯಿತು ಅಕ್ಕ ಭಾವನಿಗೆ. ದುರಗಿಯೂ ಇದ್ದುದರಲ್ಲೇ ಹೊಂದಿಕೊಂಡು ಸ್ವಲ್ಪ ಕಾಲ ಖುಶಿಯಾಗಿದ್ದಳು. ನಿಧಾನವಾಗಿ ಯೌವನ ಅವಳ ಮೈಸೇರಿದ್ದೇ ತೊಡಕಾಯಿತು. ಬೇಲಿಯೇ ಹೊಲ ಮೇಯಲು ಹೊರಟಿತು. ಭಾವ ಪೊದೆಯ ಮರೆಯಲ್ಲಿ ದುರಗಿಯನ್ನು ಎಳೆದು ಅವಳ ಕನಸುಗಳನ್ನು ಸುಟ್ಟುಬಿಟ್ಟ. ಈ ಭಾವನ ಕಾಟದಿಂದ ತಪ್ಪಿಸಿಕೊಳ್ಳಲು ಅವನು ಸೂಚಿಸಿದ ಗಂಡನ್ನು ಮದುವೆಯಾಗಿ ಹೋಗುವುದೊಂದೇ ದಾರಿಯಾಗಿತ್ತು ಅವಳಿಗೆ. ಸಂಸಾರಸ್ಥಳಾದ ಮೇಲೆ ಒಂದೆರಡು ತಿಂಗಳು ಸ್ವರ್ಗವೇ ಧರೆಗಿಳಿದ ಅನುಭವ. ಆಮೇಲೆ ಮೈಗಳ್ಳ ಗಂಡನ ದುರ್ಗುಣಗಳು ಒಂದೊಂದಾಗಿ ಹೊರಬಂದು ದುರಗಿ ಹೊಟ್ಟೆಪಾಡಿಗಾಗಿ ದುಡಿಯಬೇಕಾಯಿತು. ಸಾತಿ ಎಂಬ ಹೆಣ್ಣುಮಗುವನ್ನೂ ಬುಟ್ಟಿಯಲ್ಲಿ ಇಟ್ಟುಕೊಂಡು ಹೊಲಕ್ಕೆ ಕೂಲಿಗೆ ಹೋಗುತ್ತಿದ್ದಳು. ಒಂದು ವರ್ಷದ ನಂತರ ಗಂಡ ಮನೆಗೆ ಬರುವುದನ್ನೇ ಬಿಟ್ಟು ದೂರ ಹೊರಟು ಹೋಗುತ್ತಾನೆ. ಗಂಡನ ಆಸರೆ ಇಲ್ಲದ ಸುಂದರ ಒಂಟಿ ಹೆಣ್ಣನ್ನು ನಿಯತ್ತಿನಿಂದ ಬದುಕಲು ಬಿಡದ ಗಂಡಸರು ಅವಳನ್ನು ಆಗಾಗ ಕೆಣಕುತ್ತಿದ್ದರು. ರಾತ್ರಿ ಬಂದು ಮನೆಬಾಗಿಲು ಬಡಿದು, ಕಲ್ಲು ತೂರಿ ಗಲಾಟೆ ಮಾಡುತ್ತಿದ್ದರು. ಇದರಿಂದ ಪಾರಾಗಲು ತನ್ನ ನಾಲ್ಕು ವರ್ಷದ ಮಗಳೊಂದಿಗೆ ರಾತೋರಾತ್ರಿ ದುರಗಿ ಊರುಬಿಟ್ಟು ಹೋಗುತ್ತಾಳೆ. ಇನ್ನೊಂದು ಊರಿಗೆ ಹೋಗಿ ತಾನು ನಿಮ್ನ ಜಾತಿಯವಳೆಂದು ತಿಳಿಸಿ ಅವರ ಜೊತೆಗೆ ಗುಡಿಸಲು ಕಟ್ಟಿಕೊಂಡು ದಿನ ದೂಡುತ್ತಾಳೆ. ಊರು ಯಾವುದಾದರೇನು? ಜಾತಿ ಯಾವುದಾದರೇನು? ಅಬಲೆ ಒಂಟಿ ಹೆಣ್ಣನ್ನು ಕಂಡಾಗ ಕಾಡುವ ಕಾಮುಕ ಗಂಡುಗಳಿಗೂ ಕಾಡು ಪ್ರಾಣಿಗಳಿಗೂ ಹೆಚ್ಚೇನೂ ವ್ಯತ್ಯಾಸ ಇರುವುದಿಲ್ಲವೆಂಬುದು ದುರಗಿಗೆ ಮತ್ತೊಮ್ಮೆ ಖಚಿತವಾಯಿತು. ಹಲವರ ಬೆಲೆವೆಣ್ಣಾಗಿ ಬದುಕುವುದಕ್ಕಿಂತ ಒಬ್ಬ ಯೋಗ್ಯ ಮನುಷ್ಯನ ರಕ್ಷಣೆಯಲ್ಲಿ ಉಪಪತ್ನಿಯಾಗಿ ಜೀವಿಸುವುದು ಒಳ್ಳೆಯದೆಂದು ನಿರ್ಧರಿಸಿ, ತನ್ನನ್ನು ಬಯಸುತ್ತಿದ್ದ ಉಚ್ಚಕುಲದ ಗೋವಿಂದಯ್ಯ ಕುಕ್ಕಣ್ಣಿ (ಕುಲಕರ್ಣಿ) ಯ ಜೊತೆಗೆ ಗರತಿಯಂತೆ ನಿಷ್ಠೆಯಿಂದ ಬದುಕು ಶುರು ಮಾಡುತ್ತಾಳೆ. ವಿವಾಹಿತನಾಗಿ ಮೂರು ಮಕ್ಕಳ ತಂದೆಯಾದ ಗೋವಿಂದಯ್ಯ ತನ್ನ ತೋಟದಲ್ಲಿ ಮನೆಮಾಡಿ ದುರಗಿ ಮತ್ತವಳ ಪುಟ್ಟ ಮಗಳು ಸಾತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ. ದುರಗಿಯ ಆಸೆಯಂತೆ ಸಾತಿಯನ್ನು ತನ್ನ ಹಿರಿಯ ಮಗ ಶ್ರೀನಿವಾಸ ಓದುವ ಶಾಲೆಗೇ ಕಳಿಸುತ್ತಾನೆ. ಮುಂದೆ ನಗರದಲ್ಲಿ ಹಾಸ್ಟೆಲಿನಲ್ಲಿರಿಸಿ ಇಬ್ಬರನ್ನೂ ಕಾಲೇಜಿಗೂ ಸೇರಿಸುತ್ತಾನೆ. ಮಗಳ ಬಾಳು ತನ್ನ ಬಾಳಿನಂತೆ ಆಗುವುದು ಬೇಡ, ಅವಳು ವಿದ್ಯಾವಂತಳಾಗಿ ಸಭ್ಯ ರೀತಿಯಲ್ಲಿ ಬದುಕಲಿ ಎಂಬುದು ದುರಗಿಯ ಇಚ್ಛೆ ಯಾಗಿತ್ತು. ಮಕ್ಕಳಿಬ್ಬರೂ ಬಾಲ್ಯದಿಂದಲೇ ಸಹಜ ಸ್ನೇಹ ಆಟ ಪಾಠಗಳೊಂದಿಗೆ ಬೆಳೆದ ಕಾರಣ ಅವರ ಅನ್ಯೋನ್ಯತೆಯನ್ನು ಸಹೋದರ ವಾತ್ಸಲ್ಯವೆಂದು ಭಾವಿಸಿದ ಹೆತ್ತವರು ಕಡೆಗೆ ಮೋಸಹೋಗುತ್ತಾರೆ. ಸಾತಿ ರಜೆಯಲ್ಲಿ ಮನೆಗೆ ಬಂದಾಗ ತಾನು ಗೋವಿಂದಯ್ಯನ ಮಗ ಶ್ರೀನಿವಾಸನನ್ನು ವಿವಾಹವಾಗಲಿದ್ದೇನೆಂದು ತಾಯಿಗೆ ತಿಳಿಸುತ್ತಾಳೆ. ಈ ವಿಷಯವನ್ನು ಸಧ್ಯಕ್ಕೆ ತಾಯಿ ದುರಗಿ ಯಾರಿಗೂ ತಿಳಿಸಬಾರದೆಂದೂ ಹೇಳುತ್ತಾಳೆ. ದುರಗಿ ಬೆಚ್ಚಿ ಬೀಳುತ್ತಾಳೆ. ಗೋವಿಂದಯ್ಯನ ಜೊತೆಗಿನ ತನ್ನ ಸಂಬಂಧದಿಂದ ಶ್ರೀನಿವಾಸ ಸಾತಿಗೆ ಅಣ್ಣನಾಗುತ್ತಾನೆಂದು ಹೇಳಿ ಮಗಳ ನಿರ್ಧಾರ ಬದಲಿಸಲು ವಿಫಲ ಯತ್ನ ಮಾಡುತ್ತಾಳೆ. ಶ್ರೀನಿವಾಸನಿಗೆ ಬೆಂಗಳೂರಿನ ಕಾಲೇಜಿನಲ್ಲಿ ಅಧ್ಯಾಪಕನಾಗಿ ಕೆಲಸ ಸಿಕ್ಕಿದ ಕೂಡಲೆ, ತಾನು ಸಾತಿಯನ್ನು ಕಾನೂನು ರೀತ್ಯಾ ಮುಂದಿನ ಹತ್ತನೇ ತಾರೀಕಿನಂದು ಮದುವೆಯಾಗುವೆನೆಂದು ತಂದೆಗೆ ಪತ್ರ ಬರೆಯುತ್ತಾನೆ. ಗಂಡನಿಗೆ ದುರಗಿಯೊಂದಿಗಿದ್ದ ಸಂಬಂಧವನ್ನು ವಿಧಿಯಿಲ್ಲದೆ ಒಪ್ಪಿಕೊಂಡು ಬದುಕುತ್ತಿದ್ದ ಗೋವಿಂದಯ್ಯನ ಪತ್ನಿ ಇದ್ದೊಬ್ಬ ಮಗ ದಲಿತರ ಹೆಣ್ಣನ್ನು ಮದುವೆಯಾಗುವನೆಂದಾಗ ಸಿಡಿದು ಬೀಳುತ್ತಾಳೆ. ಮುಂದೆ ಮದುವೆ ಮಾಡಬೇಕಾಗಿರುವ ತನ್ನ ಇಬ್ಬರು ಹೆಣ್ಣುಮಕ್ಕಳ ಭವಿಷ್ಯದ ಚಿಂತೆಯಲ್ಲಿ ಬೇಯುತ್ತಾಳೆ. ಈ ಸಮಸ್ಯೆಯನ್ನು ಬಗೆಹರಿಸಲು ಗೋವಿಂದಯ್ಯ, ಪೋಲಿಸ್ ಅಧಿಕಾರಿ ಇರಪಾಗಸಿಯ ಮೊರೆ ಹೊಕ್ಕಾಗ ಒಂದು ರಹಸ್ಯ ಯೋಜನೆ ಸಿದ್ಧವಾಗುತ್ತದೆ. ಹಿಂದೆ ದುರಗಿಯನ್ನು ವಶಪಡಿಸಿಕೊಳ್ಳಲು ಹೋಗಿ ಅವಳಿಂದ ಹೊಡೆತ ತಿಂದು ಬಂದ ಅವಮಾನ ಸೇಡಾಗಿ ಪೋಲೀಸನ ಮನದಲ್ಲಿ ಕುದಿಯುತ್ತಿತ್ತು. ಹದಿನಾಲ್ಕು ವರ್ಷಗಳಿಂದ ಮದುವೆಯಾದ ದಂಪತಿಗಳಂತೆ ದುರಗಿ ಮತ್ತು ಗೋವಿಂದಯ್ಯ ಬಾಳುತ್ತಿರುವ ರೀತಿಯನ್ನು ಕಂಡು ಅವನ ಮನಸ್ಸು ಮತ್ಸರಿಸುತ್ತಿತ್ತು. ಅದಕ್ಕಾಗಿ ಸಾತಿಯನ್ನು ಮದುವೆಯಾಗದಂತೆ ತಡೆಯಲು ದೊಡ್ಡ ಬಲೆಯನ್ನೇ ಹೆಣೆಯುತ್ತಾನೆ. ಮದುವೆಗೆಂದು ದುರಗಿಯನ್ನು ಕರೆದುಕೊಂಡು ಗೋವಿಂದಯ್ಯ ಬೆಂಗಳೂರಿಗೆ ಹೋಗುವ ರೈಲು ಹತ್ತುತ್ತಾನೆ. ಸುಸ್ತಾಗಿದ್ದ ದುರಗಿ ತನ್ನ ಸೀಟ್ ನಲ್ಲೇ ಮಲಗುತ್ತಾಳೆ. ಮುಂದೆ ಅಲ್ಲಿ ನಡೆಯುವ ರಹಸ್ಯ ಮಾತುಕತೆ ಮತ್ತು ಘಟನೆಗಳು ಕಲ್ಪನಾತೀತ! ಅಷ್ಟು ವರ್ಷ ತಾನು ಕೈಹಿಡಿದ ಪತಿಯಂತೆ ಕಂಡು ನಿಯತ್ತಿನಿಂದ ಸೇವೆ ಮಾಡಿದ ಗೋವಿಂದಯ್ಯನ ವಿರುದ್ಧ ದಂಗೆಯೆದ್ದ ದುರಗಿ ಮಗಳ ರಕ್ಷಣೆಗಾಗಿ ಅಕ್ಷರಶಃ 'ದುರ್ಗಿ' ಯಾಗುತ್ತಾಳೆ. ಮುಂದೇನಾಗುತ್ತದೆ ಎಂಬುದನ್ನು ತಿಳಿಯಲು ನೀವು ಈ ಕಾದಂಬರಿಯನ್ನು ಓದಲೇಬೇಕು.
©2024 Book Brahma Private Limited.