ಕಾದಂಬರಿಕಾರ ರತ್ನಾಕರ ಗಡಿಗೇಶ್ವರ ಅವರ ಚೊಚ್ಚಲ ಕಾದಂಬರಿ ಬಫರ್ zone. ಲೇಖಕ ಗಿರಿಮನೆ ಶ್ಯಾಮರಾವ್ ಅವರು ಈ ಕಾದಂಬರಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ರತ್ನಾಕರ ಗಡಿಗೇಶ್ವರರವರ ಮೊದಲ ಕೃತಿ ಇದು. ಆದರೆ ಓದುವಾಗಂತೂ ಮೊದಲ ಕೃತಿ ಎನಿಸುವುದಿಲ್ಲ. ಅನುಭವದ ಮೂಸೆಯಿಂದ ಬರೆದ ಕೃತಿ ಎನಿಸುತ್ತದೆ. ಬದುಕನ್ನು ಹತ್ತಿರದಿಂದ ನೋಡಿದ ಅನುಭವವಿಲ್ಲದೆ ವಾಸ್ತವಕ್ಕೆ ಹತ್ತಿರವಾಗಿ ಬರೆಯಲು ಸಾಧ್ಯವಿಲ್ಲ. ದೂರದೃಷ್ಟಿ ಇಲ್ಲದ ಸರಕಾರದ ನಿರ್ಧಾರಗಳು, ಕಾನೂನನ್ನು ಜಾರಿ ಮಾಡುವ ಹೊಟ್ಟೆ ತುಂಬಿದ ಅಧಿಕಾರಿಗಳ ನಡುವೆ ಮೊದಲೇ ಕಷ್ಟದಲ್ಲಿರುವ ಕೃಷಿಕ ತನ್ನ ನೆಲೆಯನ್ನೂ ಕಳೆದುಕೊಂಡರೆ ಅನುಭವಿಸುವ ಯಾತನೆ ಎಷ್ಟು? ನೊಂದ ಮನಸ್ಸು ಚಟಕ್ಕೆ ದಾಸನಾದರೆ ಆಗುವ ಕಷ್ಟ ನಷ್ಟಗಳೆಷ್ಟು? ಇವೆಲ್ಲದರ ಹಸಿ ಹಸಿ ದೃಶ್ಯ ಓದುವಾಗ ನಿಮ್ಮ ಕಣ್ಣಿಗೆ ಕಟ್ಟಿ ಮನಸ್ಸನ್ನು ತಟ್ಟುತ್ತದೆ. ಅಲ್ಲಿನ ಆಡುಭಾಷೆ ಅದಕ್ಕೊಂದು ಕಳೆ ತಂದುಕೊಟ್ಟಿದೆ. ಭದ್ರಾ ಅಣೆಕಟ್ಟಿನಿಂದ ಅಭಯಾರಣ್ಯದ ಆಚೀಚೆ ಓಡಾಡಿ ಅಲ್ಲಿನ ದೃಶ್ಯ, ಬದುಕನ್ನು ಕಣ್ಣಾರೆ ಕಂಡ ಅನುಭವವಾಗುತ್ತದೆ. ಕಾಡಿನೊಳಗೇ ತನ್ನ ಬದುಕನ್ನು ಕಟ್ಟಿಕೊಳ್ಳುವ ಹುಲಿ, ಮನುಷ್ಯರನ್ನೇಕೆ ಹೆದರಿಸುತ್ತದೆ ಎನ್ನುವುದರ ಸೂಕ್ಷ್ಮವೂ ಇದರಲ್ಲಿದೆ. ಈಗ ಹಣ ತರುವ ಬೆಳೆ ಎಂದೇ ಹೆಸರಾದ ಅಡಿಕೆಯ ಕುಯ್ತು, ಒಣಗಿಸುಏಕೆ, ಅಲ್ಲಿನ ಕಷ್ಟ, ಬವಣೆಗಳ ಮಾಹಿತಿಯೂ ನಿಮಗೆ ಕತೆಯ ಜೊತೆಗೆ ದೊರೆಯುತ್ತವೆ. ಅವಿದ್ಯಾವಂತರೇ ಆದರೂ ಹಳ್ಳಿಗರ ಮೂಢನಂಬಿಕೆಗೆ ಪೂರಕವಾಗಿಯೇ ಪರಿಸರ ಹಾಳಾಗದಂತೆ ಕಾಪಾಡಿದವರದ್ದು ಒಂದು ಕಡೆಯಾದರೆ, ಸುಶಿಕ್ಷಿತ ಮತ್ತು ವಿದ್ಯಾವಂತ ನಾಗರಿಕರು ಎಂದುಕೊಂಡವರು ಅಂಥವರನ್ನೂ ಪರಿಸರವನ್ನೂ ಸೇರಿಸಿ ಮಾಡುವ ಸುಲಿಗೆ ಮತ್ತೊಂದು ಕಡೆ. ನಿಜಕ್ಕೂ ಕಾಡುನಾಶ ಮಾಡುವವರು ಯಾರು?' ಎನ್ನುವುದಕ್ಕೆ ಇದರಲ್ಲಿ ಉತ್ತರ ಸಿಗುತ್ತದೆ. ಕೆರೆಗಳ ಹೂಳೆತ್ತದೆ ಅದರ ಹೆಸರಲ್ಲಿ ಹಣ ನುಂಗಿ ಈಗ ಎತ್ತಿನ ಹೊಳೆ ಡ್ಯಾಂ ಹೆಸರಲ್ಲಿ ಕೋಟಿ ಕೋಟಿ ಸೂರೆ ಮಾಡುವುದನ್ನು ಕಣ್ಣಾರೆ ನೋಡುತ್ತಿದ್ದೇವೆ. ನೀರಿನ ಹೆಸರಲ್ಲಿ ಅರಣ್ಯನಾಶದ ಜೊತೆಗೆ ಭೂಮಿಯ ಮೇಲ್ಪದರ ಹರಿದು ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾಗುವ ಅಂಶ ನೋವು ಕೊಡುತ್ತಿದೆ. ಪಶ್ಚಿಮಘಟ್ಟದ ಕಾಡು, ಪರಿಸರಕ್ಕೆ ಕೈ ಹಾಕಬೇಕಾದರೆ ನೂರು ಸಲ ಯೋಚಿಸಬೇಕು. ಅವೈಜ್ಞಾನಿಕವಾಗಿ ಅಥವಾ ಹಣ ಮಾಡುವ ದೃಷ್ಟಿಯಿಂದ ಇದರತ್ತ ದೃಷ್ಟಿ ಇಟ್ಟರೆ ಅಂಥವರಿಗೆ ಇಲ್ಲಿ ಕಾಣುವುದೆಲ್ಲಾ ಮುಂದೆ ಅಪಾರ ನಷ್ಟದ ಅರಿವಿಲ್ಲದ ತತ್ಕಾಲದ ಲಾಭದ ಚಿಂತನೆಗಳೇ, ಇವೆಲ್ಲದರ ಮತ್ತೊಂದು ರೂಪದಂತೆ ಅಭಯಾರಣ್ಯದ ಹೆಸರಿನಲ್ಲಿ ಮಾಡುವ ಸುಲಿಗೆಯ ಪ್ರತ್ಯಕ್ಷ ದರ್ಶನ ಮಾಡಿಸುತ್ತಾರೆ ರತ್ನಾಕರ ಗಡಿಗೇಶ್ವರ ಅವರು ಎಂಬುದಾಗಿ ಹೇಳಿದ್ದಾರೆ.
ರತ್ನಾಕರ್ ಗಡಿಗೇಶ್ವರ ಅವರು ನರಸಿಂಹರಾಜಪುರ ತಾಲ್ಲೂಕಿನ ಗಡಿಗೇಶ್ವರ ಮೂಲದವರು. ಪ್ರೌಢಶಾಲ ಶಿಕ್ಷಣ ಸರ್ಕಾರಿ ಪ್ರೌಢಶಾಲೆ ಗಡಿಗೇಶ್ವರ, ಪಿಯು,ಸರ್ಕಾರಿ ಪದವಿ ಪೂರ್ವ ಕಾಲೇಜು ನರಸಿಂಹರಾಜಪುರ, ಕುವೆಂಪು ವಿಶ್ವವಿದ್ಯಾನಿಲಯ ಶಂಕರ ಘಟ್ಟದಿಂದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾಬ್ಯಾಸ ಮುಗಿಸಿದ್ದಾರೆ.. ಪ್ರಸ್ತುತ ಕೃಷಿಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿ : ಬಫರ್ zone ...
READ MORE