ಶಬ್ದಗಳು

Author : ಕೆ.ಟಿ.ಗಟ್ಟಿ

₹ 125.00




Year of Publication: 2006
Published by: ಅಭಿರುಚಿ ಪ್ರಕಾಶನ
Address: ಮೈಸೂರು

Synopsys

ಕೆ.ಟಿ.ಗಟ್ಟಿ ಅವರ ಮೊದಲ ಕಾದಂಬರಿ ‘ಶಬ್ದಗಳು’, 1973-74 ರಲ್ಲಿ "ಸುಧಾ" ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು. ಮಾನವೀಯ ಸಂಬಂಧಗಳ ಒಳಗನ್ನು ಬಿಚ್ಚಿಟ್ಟು,ಜೀವನದ ಕಹಿ ಸತ್ಯವನ್ನು ಮಾರ್ಮಿಕವಾಗಿ ನಿರೂಪಿಸುವ ಈ ಕಾದಂಬರಿ ಓದುಗರ ಮನದಲ್ಲಿ ಶಬ್ದಗಳ ತರಂಗಗಳನ್ನು ಎಬ್ಬಿಸುತ್ತದೆ. ಈ ಕಥೆಯ ಕೇಂದ್ರ ಪಾತ್ರಧಾರಿ ಕಿರಣ್ ಶಂಕರ್. ಪ್ರಥಮ ಮುದ್ರಣ 1976, 4ನೇ ಮುದ್ರಣ 2006

About the Author

ಕೆ.ಟಿ.ಗಟ್ಟಿ
(22 July 1938)

ಕಾದಂಬರಿಕಾರ, ಭಾಷಾತಜ್ಞ, ಸಮರ್ಥ ಪ್ರಾಧ್ಯಾಪಕರೆನಿಸಿದ ಕೆ.ಟಿ. ಗಟ್ಟಿಯವರು ಕಾಸರಗೋಡು ಸಮೀಪದ ಕೂಡ್ಲೂವಿನಲ್ಲಿ ಜನಿಸಿದರು. ತಂದೆ ಧೂಮಪ್ಪಗಟ್ಟಿಯವರು ಕೃಷಿಕರಾದರೂ ಯಕ್ಷಗಾನ ಕಲೆಯ ಬಗ್ಗೆ ಅಪಾರ ಒಲವಿದ್ದವರು. ತಾಯಿ ಪರಮೇಶ್ವರಿ ತುಳು-ಮಲಯಾಳಂ ಪಾಡ್ದನ ಹಾಡುಗಳನ್ನು ಕಲಿತವರು. ಉತ್ತಮ ಭಾಷೆ, ಆಕರ್ಷಕ ಶೈಲಿ, ಹೊಸ ಹೊಸ ವಸ್ತು, ಸರಳ ನಿರೂಪಣೆಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಮನೆ ಮಾತಾದ ಹಿರಿಯ ಕಥೆಗಾರ ಕೆ.ಟಿ.ಗಟ್ಟಿ ಅವರು ಎಲ್ಲಾ ಓದುಗರಿಗೆ ಚಿರಪರಿಚಿತರು. ಕೇರಳ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿಎಡ್ ಪದವಿ ಪಡೆದಿರುವ ಕೆ.ಟಿ.ಗಟ್ಟಿ ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯವರು. ಜನಿಸಿದ್ದು 1938ರಲ್ಲಿ. ಸದ್ಯ ...

READ MORE

Reviews

‘ಶಬ್ಧಗಳು’ ಕೃತಿಯ ವಿಮರ್ಶೆ

ಶಬ್ದಗಳ ಲೋಕದಲ್ಲಿ ನಿಶ್ಶಬ್ದವಾದ ಲೋಕ. ಅಲ್ಲಿ ನಡೆವುದೆಲ್ಲವೂ ಶಬ್ದಾತೀತವಾಗಿಯೇ. ಶಬ್ದಗಳಿಗೆ ಅರ್ಥ ಹುಡುಕುವುದು ಹಾಸ್ಯಾಸ್ಪದ. ಅರ್ಥವೇ ಇಲ್ಲದ ಸಂಕೇತಗಳಿಗೆ ರೂಪಕ ಕೊಟ್ಟು ವಿವರಣೆ ಹೇಳಿದಂತೆ. ಅರಿವಿಗೆ ಬಾರದ ಶಕ್ತಿಯೊಂದು ಸೂತ್ರ ಹಿಡಿದು ಎಲ್ಲವನ್ನು ನಿರ್ಣಯಿಸಿ ನಿಭಾಯಿಸುವಂತೆ, ಗದ್ದಲವೇ ಇಲ್ಲದ ಲೋಕದಲ್ಲಿ ಶಬ್ದಗಳ ಅವಶ್ಯಕತೆಯೇ ಇಲ್ಲದಂತೆ, ಶಬ್ದಾತೀತವಾಗಿ ಮನುಷ್ಯನ ಆಗುಹೋಗುಗಳನ್ನ ನಿಯಂತ್ರಿಸಬಲ್ಲ ಶಕ್ತಿಯಾದರೂ ಯಾವುದಿರಬಹುದೆನ್ನುವ ಪ್ರಶ್ನೆಗೆ ಉತ್ತರ ಮೌನವೇ ಆಗಿರುತ್ತದೆ. 

ಬದುಕಿನ ಹಲವು ಸಾಧಕ ಬಾಧಕಗಳನ್ನು ನಿಶ್ಚಿತ ಚೌಕಟ್ಟಿಗೆ ಹಾಕಿ ಇಂತಿಷ್ಟೇ ಎಂದು ಹೇಗೆ ನುಡಿಯಲು ಬರುವುದಿಲ್ಲವೋ ಹಾಗೆ ಶಬ್ದಗಳ ಲೋಕದಲ್ಲಿ ಶಬ್ದಾತೀತವಾಗಿ, ಹತ್ತಿರವಿದ್ದೂ ಅಂತರ ಕಾಯ್ದುಕೊಂಡಂತೆ, ದೂರವಿದ್ದೂ ಸನಿಹದಲ್ಲಿರುವ ಭ್ರಮೆ ಹುಟ್ಟಿಸುವಂತೆ, ಅಲ್ಲಿ ನಡೆಯುವ ಕ್ರಿಯಾ ಕಲಾಪಗಳನ್ನು ಕೂಡ 'ಇಷ್ಟೇ!' ಎಂದು ಒಂದೇ ನಿಲುವಿಗೆ ನಿರ್ಧರಿಸಲಾಗುವುದಿಲ್ಲ. ಶಬ್ದಗಳ ಲೋಕದಲ್ಲಿ ಅಂತಹ ನಡೆಗಳಿಗೆ ನಡೆಯಿಲ್ಲ, ಅರ್ಥವಿಲ್ಲ. 

ಅದರಲ್ಲೂ ಸಂಬಂಧಗಳು ಕಾಲ ಸರಿದಂತೆ, ಅರಿವಿಲ್ಲದೆಯೋ ಯಾ ಅರಿವಿನ ಹೊರತಾಗಿಯೋ, ತಮ್ಮ ರೂಪುರೇಷೆಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಬಣ್ಣಗೆಟ್ಟ ಸಂಬಂಧಗಳು ಮೇಲುನೋಟಕ್ಕೆ ತಣ್ಣನೆ ಹರಿವ ಧಾರೆಯಂತೆ ಕಂಡರೂ, ಆಳದಲ್ಲಿ, ತನ್ನ ಸ್ನಿಗ್ದತೆಯನ್ನು ಕಳೆದುಕೊಂಡು
ಕಾಲ ಕೋಶದಲ್ಲಿ ಹುದುಗಿಟ್ಟ ಕಹಿಸತ್ಯದಂತೆ ಭಾಸವಾಗುತ್ತದೆ. ಸತ್ಯ ಎಂದಿಗಾದರೂ ಕಹಿಯೇ. ಸಂಬಂಧಗಳು ಕಾಲದ ಹೊಡೆತಕ್ಕೆ ಸಿಕ್ಕು ಮಾಸಿದಾಗ ಮೂಡುವ ಭಾವನೆಯೂ ಕಹಿಯೇ. ಎದುರಿಸದೇ ನಿರ್ವಾಹವಿಲ್ಲ.

ಹಾಗಾದರೆ ಸಂಬಂಧಗಳನ್ನು ಮುನ್ನಡೆಸುವ, ಮೂಲರೂಪ ಚಕ್ಕು ಚದುರದಂತೆ ಕಾಪಿಡುವ ಅಂಶವಾದರೂ ಯಾವುದೆಂದು ನೋಡಿದರೆ ಮತ್ತೊಮ್ಮೆ ಎದುರಾಗುವುದು ಅದೇ ಅರ್ಥವಿಲ್ಲದೆ ಶಬ್ದ ಕಳೆದುಕೊಂಡ ಸವಕಲು ನೆಪಗಳು. ನೆಪಕ್ಕೆ ನೂರು ಮುಖ; ಪ್ರೀತಿ ಪ್ರೇಮ ಪ್ರಣಯ ಮೋಸ ಕಾಮ ಸುಳ್ಳು ವಂಚನೆ ಲಾಲಸೆ ಅಕ್ರಮ ಅನ್ಯಾಯ ದುಷ್ಟತೆ ನಂಬಿಕೆ ಅಪನಂಬಿಕೆ.. ಸಂಬಂಧಗಳಿಗೆಷ್ಟು ಮುಖಗಳಿವೆಯೋ ಅದನ್ನು ಅರ್ಥಹೀನವನ್ನಾಗಿಸಲು ಇರುವ ಒಳಕೋವೆಗಳೂ ಅಷ್ಟೇ ಇವೆ. ಸಂಬಂಧಗಳು ಹೊರಸೂಸುವ ಅರ್ಥಹೀನ ಶಬ್ದಗಳನ್ನೋ ಅಥವಾ ಅರಿವಿಗೇ ಎಟುಕದ ಶಬ್ದಾತೀತ ಸಂಜ್ಞೆಗಳನ್ನೋ ಅರಿಯಲು ಎಲ್ಲದರಿಂದ ಹೊರಬಂದು ವ್ಯಕ್ತಿ, ಪರಿಸರ, ಸಮಾಜವನ್ನು ನಿರ್ಲಿಪ್ತತೆಯಿಂದ ನೋಡುವ ಅನುಭಾವಿತನ ನಮಗಾದರೂ ಎಷ್ಟಿದೆ? ಯಕಃಶ್ಚಿತ್ ಭವ ಬಂಧನಗಳ ಸುರುಳಿಯೊಳಗೆ ಸೆರೆ ಸಿಕ್ಕ ಮಿಡತೆಗಳು ನಾವು. 

ಅದಲು ಬದಲಾಗದಂತೆ ವ್ಯಕ್ತಿ, ವ್ಯಕ್ತಿತ್ವ ಮತ್ತು ಪರಿಸರವನ್ನು ಹಾಳುಗೆಡವದೇ ಬದುಕಿನ ಕೊನೆಯ ಉಸಿರಿರುವ ತನಕ ಉಳಿಸಿಕೊಳ್ಳಲೇಬೇಕೆನ್ನುವ ಪ್ರಯತ್ನದಲ್ಲಿ ಹಿಂದಿರುಗಿ ನೋಡಲು ಅವಕಾಶವೂ ಇಲ್ಲದಂತೆ ನಮ್ಮೆಲ್ಲರ ಬಾಳು ಸವೆದು ಹೋಗಿರುತ್ತದೆ. 

*** 
'ಶಬ್ದಗಳು' ಓದಿ ಮುಗಿಸಿದ ನಂತರ ಈ ಕ್ಷಣದಲ್ಲಿ ನನಗಾಗುತ್ತಿರುವ ಅನುಭವ ಮೇಲಿನ ಅಕ್ಷರಗಳ ಮೂಲಕ ಹೊರಬಂದಿವೆ. ಮೊದಲಿನಿಂದಲೂ ನನಗೆ ಪ್ರಯತ್ನಪೂರ್ವಕವಾಗಿಯೋ ಯಾ ಅಪ್ರಯತ್ನಪೂರ್ವಕವಾಗಿಯೋ ಮಾನವ ಸಹಜ ಸಂಬಂಧಗಳ ಬಗ್ಗೆ ತೀರದ ಕುತೂಹಲ ಆಸಕ್ತಿ ಇದ್ದದ್ದೇ. ಬೂದಿ ಮುಚ್ಚಿದ ಕೆಂಡದಂತೆ ಅಂತರಂಗದಲ್ಲೇ ಅಲೆಯುತ್ತಿರುವ ಕೌತುಕಾಸಕ್ತಿಗಳು ಇಂತಹ ಕಾದಂಬರಿಯನ್ನೋದಿದಾಗ, ಸುಳಿವು ನೀಡದೆ ಧಿಮಿಲ್ಲನೇಳುವ ಬುಗ್ಗೆಯಂತೆ, ಹೃದಯಕ್ಕೆ ಲಗ್ಗೆ ಹಾಕುತ್ತವೆ. ಹಾಗಾದಾಗ ನನ್ನನ್ನು ನಾನು ಸಮಾಧಾನಿಸಿಕೊಳ್ಳಲು, ಮೇಲೆ ಬರೆದಂತೆ ಅರ್ಥವಿಲ್ಲದ ಸಾಲುಗಳನ್ನು ಬರೆದುಕೊಳ್ಳುವ ಮೂಲಕ ರಮಿಸಲು ಯತ್ನಿಸುತ್ತೇನೆ. 

ಪ್ರೀತಿ ಪ್ರೇಮ ಸಂಬಂಧಗಳ ಉಳಿವಿಗೆ ನಂಬಿಕೆ ಸಹಕಾರ ಸಹಿಷ್ಣತೆ ಒಂದು ಮುಖವಾದರೆ ದ್ರೋಹ ವಂಚನೆ ಮೋಸ ಅಪನಂಬಿಕೆ ಇನ್ನೊಂದು ಮುಖ. ಏನೇ ನಾಲ್ಕು ದಿನದ ಬದುಕು ಎಂದರೂ ಬದುಕಿನ ಯಾವುದೋ ಅನೂಹ್ಯ ತಿರುವಿನಲ್ಲಿ ಮುಖವಾಡವನ್ನು ಧರಿಸಬೇಕಾದ ಸಂದರ್ಭ ಪ್ರತಿಯೊಬ್ಬರಿಗೂ ಬರದಿರದು. ಅದು ಅವಶ್ಯಕ ಕೂಡ. ಹಾಗೆ ಸಮಯಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ನಿರೀಕ್ಷಣೆಯ ಪ್ರಣತಿ ಹಚ್ಚುತ್ತಾ ಕಾದು ಕುಳಿತವನ ಬದುಕಿನ ಅರ್ಥಹೀನ ಸಂಬಂಧಗಳ ಕತೆಯೇ 'ಶಬ್ದಗಳು'

ಅಪಘಾತಕ್ಕೀಡಾಗಿ ಅರ್ಧ ಭಾಗ ದೇಹದ ಸ್ವಾಧೀನ ಕಳೆದುಕೊಳ್ಳುತ್ತಾನೆ ಕಥಾ ನಾಯಕ ಕಿರಣಶಂಕರ. ಬದುಕಿರುವ ತನಕ ಹಾಸಿಗೆಯ ಮೇಲೆ, ವೀಲ್ ಚೇರಿನ ಮೇಲೆ ಇರಬೇಕಾದ ಅನಿವಾರ್ಯತೆ. ಕಡೆಯ ಉಸಿರಿನವರೆಗೂ ಇನ್ನೊಬ್ಬರ ಮೇಲೆ ಅವಲಂಬಿತವಾಗಬೇಕಾದ ಅಸಹಾಯಕತೆ. ಇದರಿಂದಾಗಿ ದಿನೇದಿನೇ ಕುಗ್ಗಿ ಹೋಗುತ್ತಾನೆ. ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳುತ್ತಾನೆ. ಮ್ಲಾನನಾಗುತ್ತಾನೆ. ತಿಂಗಳ ಹಿಂದಷ್ಟೇ ಮದುವೆ ಆಗಿರುತ್ತದೆ. ಮನಮೆಚ್ಚಿದ ಮಡದಿ ಅಪಘಾತದಿಂದ ಆಘಾತಕ್ಕೊಳಗಾಗುತ್ತಾಳೆ. ಸಾಂಸಾರಿಕ ಜೀವನದ ಅಭದ್ರತೆಯ ಜೊತೆಗೆ ಮುಂದಿನ ಭವಿಷ್ಯ ನೆನೆದು ಪರಿತಪಿಸುವಂತಾಗುತ್ತದೆ. 

ಕಾಲ ಎಲ್ಲಕ್ಕೂ ಮದ್ದು. ಹೆಂಡತಿ ರಮಾಳ ವೇದನೆ ನೋವು ಸಂತಾಪ ದುಃಖ ಅವಳು ಓದುವುದನ್ನು ಪುನರಾರಂಭಿಸುವ ಮೂಲಕ ಒಂದು ಹಂತಕ್ಕೆ ಬರುತ್ತದೆ. ಬೆಂಗಳೂರಿಗೆ ಓದಲು ಬರುತ್ತಾಳೆ. ಶಿಕ್ಷಣದಲ್ಲಿ ತಲ್ಲೀನಳಾಗುತ್ತಾಳೆ. ಮೊದಲಿನಷ್ಟಲ್ಲವಾದರೂ ಕ್ರಮೇಣ ಪರಿಸರಕ್ಕೆ ಹೊಂದಿಕೊಳ್ಳುತ್ತಾಳೆ. ಅವಳದೇ ನೆನಪಿನಲ್ಲಿ, ಅವಳನ್ನೇ ಬದುಕಿನ ಗಮ್ಯ ಮತ್ತು ಏಕೈಕ ಗುರಿಯನ್ನಾಗಿರಿಸಿಕೊಂಡ ನಾಯಕ ಕಿರಣಶಂಕರ? ನಿರೀಕ್ಷೆಯ ಪ್ರಣತಿ ಹಚ್ಚಿಟ್ಟುಕೊಂಡು ಅತ್ತ ಹೆಂಡತಿಗೆ ಗಂಡನಾಗದ ಅಸಹಾಯಕತೆ, ಇತ್ತ ಅವಳನ್ನು ಬಿಟ್ಟುಕೊಡಲಾಗದ ಸಂದಿಗ್ದತೆಗೆ ಅನುಕ್ಷಣವೂ ಪರಿತಪಿಸುತ್ತಿರುತ್ತಾನೆ. 

ಚೈತ್ರದ ಚಿಗುರು ಸಂತಸ ತರುವಂತೆ ಅನುತಾಪವನ್ನು ಬೇಗುದಿಯನ್ನೂ ತರಬಲ್ಲದು. ಓದಲಿಕ್ಕೆ ಬಂದುದು ರಮಾಳಿಗೆ ಒಂದು ರೀತಿಯ ಹೊಸತನವನ್ನು ತಂದರೂ ವಯೋ ಸಹಜ ಬಯಕೆ, ಉದ್ವೇಗವನ್ನು ಹತ್ತಿಕ್ಕುವಲ್ಲಿ ಸೋಲುತ್ತಾಳೆ. ಪ್ರೊಫೆಸರನೊಬ್ಬನ ದಾಳಕ್ಕೆ ಸಹಜವಾಗಿಯೇ ಆಕರ್ಷಿತಳಾಗುತ್ತಾಳೆ. ಬದುಕು ಹಳಿ ತಪ್ಪುತ್ತದೆ. 

ಸಂಬಂಧಗಳು ಬೇಡುವುದು ಮುಟಿಗೆ ಪ್ರೀತಿ, ಪಾವು ನಂಬಿಕೆ, ಚೂರು ಅಂತರ. ವ್ಯಕ್ತಿಯೊಬ್ಬ ಆಗಷ್ಟೇ ಇದ್ದ, ಈಗಿಲ್ಲವಾದ ಎನ್ನುವ ಸ್ಥಿತಿಯನ್ನು ತಲುಪಲಿಕ್ಕೆ, ಅತ್ಯಾಪ್ತರು ದೂರ ಸರಿದಾಗ ಉಂಟಾಗುವ ಖಾಲಿತನಕ್ಕೆ, ಪ್ರೀತಿ ಪಾತ್ರರ ಹಠಾತ್ ಅಗಲುವಿಕೆ ಮೂಡಿಸುವ ನಿರ್ವಾಣ ಸ್ಥಿತಿಗೆ ಒಳಗಾಗುತ್ತಾನೆ ಕಿರಣಶಂಕರ. ಗುರಿಯಿಲ್ಲದೆ ಗಮ್ಯ ತಲುಪಲಾಗದು. ಬದುಕಿನಲ್ಲಿ ಭರವಸೆ ಮತ್ತು ಆಸರೆಯಾಗಬೇಕಿದ್ದ ರಮಾ ತನ್ನ ಪಥ ಬದಲಿಸಿದ ನಂತರ ಕಿರಣಶಂಕರನುಗುಳಿಯುವುದೇನು? ನಿರಾಸೆ ಹತಾಶೆ ಒಂಟಿತನ ಮತ್ತು ಸಂಬಂಧಗಳ 'ಸ್ಥಾನಪಲ್ಲಟ'ವನ್ನು ನಿಭಾಯಿಸಲಾಗದ ಅಸಮರ್ಥತೆ ಮತ್ತು ಅಸಹಾಯಕತೆ. 

ಇದು ಕಾದಂಬರಿಯ ಒಂದು ನೋಟ. ಕಿರಣಶಂಕರನ ತಂಗಿಯಾಗಿ ಕುಸುಮ ಮತ್ತು ಶೈಲೇಶ್ ಎನ್ನುವ ಅವನ ಸ್ನೇಹಿತನ ಪಾತ್ರ ಕೂಡ ಗಟ್ಟಿತನದಿಂದ ಕೂಡಿದೆ. ಮತ್ತು ಕಾಡುವ ಪಾತ್ರವೆಂದರೇ, ಕಿರಣಶಂಕರನಿಗೆ ಓರಗೆಯಲ್ಲಿ ತಂಗಿಯಾಗಬೇಕಾದ ಸಾವಿತ್ರಿಯದು. 

ಸಾವಿತ್ರಿ ಎನ್ನುವ ಅಮಾಯಕ ಮತ್ತು ಮುಗ್ದೆ ತನಗಿರುವ ಒಕ್ಕಣ್ಣಿನ ದೋಷದಿಂದ ಮದುವೆ ಸಂಸಾರ ಇತ್ಯಾದಿ ಭಾಗ್ಯಗಳಿಂದ ವಂಚಿತಳಾಗಿರುತ್ತಾಳೆ. ಅದೇ ಯೋಚನೆಯಲ್ಲಿ ಅಂತರ್ಮುಖಿಯಾಗುತ್ತಾಳೆ. ಸಮಾಜ ಅದನ್ನು ಹುಚ್ಚು ಎನ್ನುತ್ತದೆ. ಆಡಿಕೊಳ್ಳುವರ ಬಾಯಿಗೆ ಹಣ್ಣಾದರೂ ಹೆಸರು ಕೆಡಿಸಿಕೊಂಡಿರುವುದಿಲ್ಲ ಸಾವಿತ್ರಿ. ಭರಪೂರ ಯೌವ್ವನ ತುಂಬಿ ತುಳುಕುವ ನಡುವೆಯೂ ಸಂಯಮಿಯಾಗಿರುತ್ತಾಳೆ. ಆದರೆ ಅಚಾತುರ್ಯ ಪರಿಸ್ಥಿತಿಯಲ್ಲಿ, ಸಹಜವೋ ಅಸಹಜವೋ ಎನ್ನುವಂತೆ ಶೈಲೇಶನನ್ನು ಆಕ್ರಮಿಸುತ್ತಾಳೆ. ವಯಸ್ಸು, ಪುಟಿಯುವ ಯೌವ್ವನ, ಬಾಧಿಸುವ ಬಯಕೆ ಅವಳನ್ನು ಆ ರೀತಿ ಹಾದಿ ತಪ್ಪುವಂತೆ ಮಾಡಿರುತ್ತದೆ. ಅದು ಅವಳ ಉದ್ದೇಶಪೂರ್ವಕ ನಡೆಯಲ್ಲ ಎನ್ನುವುದನ್ನು ಅರಿಯುವಷ್ಟು ಪ್ರಬುದ್ಧತೆ ಸಮಜಕ್ಕೆಲ್ಲಿಯದು? ಬಯಸದೆ ಬಂದ ಬಸಿರನ್ನು ಬಲವಂತವಾಗಿಳಿಸಿಸುವ ಮೂಲಕ ಸಮಾಜ ಅವಳನ್ನು ಶಾಶ್ವತವಾಗಿ ರೀತಿ ರಿವಾಜುಗಳ ಸಂಕೋಲೆಗಳಲ್ಲಿ ಬಂಧಿಸುತ್ತದೆ. 

ಕುಸುಮಾ ಕಿರಣಶಂಕರನ ತಂಗಿ. ದಿಟ್ಟ. ಪ್ರಬುದ್ಧೆ. ವಿದ್ಯಾವಂತೆ. ಸಾವಿತ್ರಿಗಾದ ಅನ್ಯಾಯಕ್ಕೆ ಅಣ್ಣನ ಸ್ನೇಹಿತ ಶೈಲೇಶನೇ ನೇರ ಕಾರಣ ಎಂದು ತಿಳಿದಿದ್ದರೂ ಪರಿಸ್ಥಿತಿಯ ಕೈಗೊಂಬೆಯಾಗಿ ಕೊನೆಗೆ ಅವನನ್ನೇ ಮದುವೆಯಾಗುತ್ತಾಳೆ. ಶೈಲೇಶನನ್ನು ವರಿಸುವಂತೆ ಕುಸುಮಾಳನ್ನು ಪ್ರೇರೇಪಿಸಿದ ಸಂಗತಿಯಾದರೂ ಯಾವುದೆಂದು ಅರಿಯದೆ ಕಿರಣಶಂಕರ ಮತ್ತಷ್ಟು ಆತಂಕ ಮತ್ತು ಉದ್ವಿಗ್ನಗೊಳ್ಳುತ್ತಾನೆ. ತಾನು ನಂಬಿದ್ದ, ಸ್ವಂತದವರೆಂದು ಭಾವಿಸಿದ್ದವರಿಂದಲೇ ಹೀಗೆ ಒಂದಾದ ಮೇಲೊಂದರಂತೆ ಘಾತಕ್ಕೊಳಗಾಗುತ್ತಾನೆ ಕಿರಣಶಂಕರ.

ಬದುಕು ಎಂದಾದರೊಂದು ದಿನ ಟಿಸಿಲೊಡೆದು ಬೆಳ್ಳಿ ಬೆಳಕು ಮೂಡುವ ಭರವಸೆ ಹೊತ್ತಿದ್ದ ಕಿರಣಶಂಕರನ ಬಾಳಲ್ಲಿ ಬೇರುಬಿಟ್ಟ ಸಂಬಂಧಗಳು, ಕುಂಭದ್ರೋಣ ಮಳೆಗೆ ಸಿಕ್ಕ ಸವಕಲು ಬಣ್ಣ ಕಳೆಗುಂದುವಂತೆ, ಕರಗಿ ಹೋಗುತ್ತವೆ. ಸಂಬಂಧಗಳ ನಿರರ್ಥಕತೆ, ಜೀವನದ ನಶ್ವರತೆ, ಅಂಧಕಾರ ಅವನನ್ನು ಆವರಿಸುತ್ತವೆ. ಬದುಕು ಬರಡಾಗಿ, ಒಬ್ಬಂಟಿತನ ಆವರಿಸಿ ಮುಂದಿನ ಜೀವನ ಖಾಲಿ ಎನಿಸುತ್ತದೆ. ಹೆಂಡತಿ ರಮಾಳಿಗೆ ಹೇಳಬೇಕೆಂದುಕೊಂಡಿದ್ದ ಅಂತರಂಗದ ಉದಾತ್ತ ಭಾವನೆಗಳನ್ನು
ಹೇಳಲಾಗದೆ, ಇತ್ತ ಅವಳಿಂದಾದ ಮೊಸವನ್ನು ಅರಗಿಸಿಕೊಳ್ಳಲಾಗದ ಸ್ಥಿತಿಗೆ ಕಿರಣಶಂಕರ ಬಂದು ತಲುಪಿರುತ್ತಾನೆ ಅಥವಾ ಬದುಕು ಅವನನ್ನು ತಂದು ಹಾಗೆ ಅಲ್ಲಿರಿಸಿರುತ್ತದೆ. 

ಮಗುವಾದ ನಂತರ ರಮಾಳ ಮುಂದಿನ ಭವಿಷ್ಯವೇನು? ಮಗುವಿನ ಬಗ್ಗೆ ಅವಳ ನಿಲುವು ಏನಿತ್ತು? ತಿಳಿಯುವುದಿಲ್ಲ. ಮಗುವನ್ನು ಹೆರುತ್ತಾಳೆನೋ ಸರಿ. ಆದರೆ ಹೆರುವಷ್ಟರ ತನಕ ಅಷ್ಟಾಗಿ ಪ್ರೀತಿಸುವ ಗಂಡ ಕಿರಣಶಂಕರನ ಬಗ್ಗೆ ಅವಳು ಯೋಚಿಸಿರಲಿಲ್ಲವೇ? ಪ್ರಾಯಶ್ಚಿತ್ತದ ಭಾಗವಾಗಿ ಅವಳಿಗೆ ಕೊನೆಗಾದರೂ ತನ್ನಿಂದಾದ ತಪ್ಪನ್ನು ಗಂಡನ ಬಳಿ ಅರುಹಬೇಕೆಂದೆನಿಸಿರಲಿಲ್ಲವೇ? ಅವಳನ್ನು ಆ ಸ್ಥಿತಿಗೆ ತಂದಿಟ್ಟ ಡಾಕ್ಟರ್ ವಿಷ್ಣುಮೂರ್ತಿ ಏನಾದ? ಕುಸುಮಾ ಮತ್ತು ಶೈಲೇಶ್ ಮದುವೆಯಾದ ನಂತರ ಏನಾದರು? ಹಲವು ಪ್ರಶ್ನೆಗಳಿಗೆ ಉತ್ತರ ಓದುಗರ ವಿವೇಕ ಮತ್ತು ವಿವೇಚನೆಗೆ ಬಿಟ್ಟದ್ದು. 

(ಬರಹ ; ಮೋಹನ್ ಕುಮಾರ್ ಡಿ ಎನ್)

Related Books