ಲೇಖಕ ಕೆ.ಬಿ. ಶ್ರೀಧರ್ ಅವರ ಕಾದಂಬರಿಯ ಬನಗಿರಿ. ಈ ಕಾದಂಬರಿಯಲ್ಲಿ ಮಾನವ ಸಮಾಜವು ಕ್ರಮಿಸಿರುವ ಹಾದಿಯಲ್ಲಿ ಎರಡು ಬೇರೆ ಬೇರೆ ಕಾಲಘಟ್ಟಗಳನ್ನು ಆರಿಸಿ, ಆ ಸಮಯದಲ್ಲಿ ನಡೆದಿರುವ ಸಂಘರ್ಷವನ್ನು ಕಾದಂಬರಿಯ ರೂಪದಲ್ಲಿ ಸೆರೆಯಿಡಿಯಲಾಗಿದೆ. ಕ್ರಿ.ಶ. 2015-16 ರಲ್ಲಿ ಬೆಂಗಳೂರಿನ ಕೆಲವು ‘ಗೇಟೆಡ್ ಕಮ್ಯುನಿಟಿ’ ಹಾಗೂ ಅವುಗಳ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳ ನಡುವೆ ನಡೆದ ಜಟಾಪಟಿಯು ಪ್ರಸ್ತುತ ಕಾಲಘಟ್ಟವಾದರೆ; ಎರಡನೆಯದು ಮುನ್ನೂರೈವತ್ತು ವರ್ಷಗಳಷ್ಟು ಹಳೆಯದಾದ ಐತಿಹಾಸಕಕ್ಕೆ ಸೇರಿದ್ದಾಗಿದೆ. ಜಾತಿ ವ್ಯವಸ್ಥೆ ಹಾಗೂ ವಿವಿಧ ಕಾರಣಗಳಿಂದಾಗಿ ವಡೆಯುವ ತಾರತಮ್ಯವು, ಪ್ರಸ್ತುತ ಕಾಲಘಟ್ಟದ ವಿಷಯವಾದರೆ; ಯುದ್ಧ ಮತ್ತು ಯುದ್ಧದಲ್ಲಿ ಭಾಗವಹಿಸಲೇಬೇಕಾದ ಅವಶ್ಯತೆಗಳ ಬಗೆಗಿನ ವಿಚಾರವು, ಐತಿಹಾಸಿಕ ಕಾಲಘಟ್ಟದ ಸಂಘರ್ಷ. ಕಾಲ ಕಳೆದಂತೆ ಮಾನವ ಸಮಾಜವು ಬಾಹ್ಯ ರೂಪದಲ್ಸಿ ಬದಲಾದಂತೆ ಕಂಡರೂ, ಇಣುಕಿದರೆ ಆಂತರ್ಯದಲ್ಲಿ ಅಂತಹ ವ್ಯತ್ಯಾಸವೇನೂ ಗೋಚರಿಸುವುದಿಲ್ಲ.ಸಮಾಜದಲ್ಲಿ ಕಾಲಕಾಲಕ್ಕೆ ಪ್ರಚಲಿತವಿರುವ ಸತ್ಯಾಸತ್ಯತೆಗಳನ್ನು ಪ್ರಶ್ನಿಸುವ, ಪ್ರಶ್ನಿಸುವಂತೆ ಮಾಡುವ ಆಂತರಿಕ ಸಂಘರ್ಷವೇ; ಇಲ್ಲಿನ ಎರಡು ಕಾಲಘಟ್ಟಗಳನ್ನು ಜೋಡಿಸಿರುವ ತಂತು.
ಮೂಲತಃ ತುಮಕೂರಿನವರಾದ ಡಾ. ಕೆ.ಬಿ. ಶ್ರೀಧರ್ ಅವರು ಜನಿಸಿದ್ದು 1976 ಏಪ್ರಿಲ್ 28ರಂದು. ತುಮಕೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬಳ್ಳಾರಿಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿ ಪಡೆದರು. ನಿಮ್ಹಾನ್ಸ್ ಹಾಗೂ ಸೆಂಟ್‌ಜಾನ್ಸ್ ವೈದ್ಯಕೀಯ ಕಾಲೇಜುಗಳಲ್ಲಿ ಮನೋರೋಗ ಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಮನೋರೋಗ ತಜ್ಞರಾಗಿ ಸುಮಾರು ಹತ್ತು ವರ್ಷಗಳು ಕಾರ್ಯನಿರ್ವಹಿಸಿ ಪ್ರಸ್ತುತ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪಂಚಮುಖಿ ಇವರ ಚೊಚ್ಚಲ ಕಾದಂಬರಿ. ಈ ಕಾದಂಬರಿಗೆ 2016ನೇ ಸಾಲಿನ ಕನ್ನಡ ಸಾಹಿತ್ಯ ಅಕಾಡೆಮಿಯ ಮಧುರಚೆನ್ನ ದತ್ತಿ ಬಹುಮಾನ ದೊರೆತಿದೆ. ಸುಪ್ತ ...
READ MORE‘ಬನಗಿರಿ (ಗೇಟೆಡ್ ಕಮ್ಯುನಿಟಿ)’ ಕಾದಂಬರಿಯ ಕುರಿತು ಪುಟ್ಟ ವಿಮರ್ಶೆ.
ಮೇಲ್ನೋಟಕ್ಕೆ ದೊಡ್ಡ ನಗರದ ಜನರ ನಡುವಿನ ʻಒತ್ತುವರಿ ಜಾಗದʼ ಕುರಿತಾದ ಕತೆಯಂತಷ್ಟೇ ಕಾಣುವ ʻಬನಗಿರಿʼ ಕಾದಂಬರಿಯು, ʻಆಧುನಿಕʼ ಇಂಡಿಯಾದ ಜಾತಿ-ಪದ್ಧತಿಯ ಕುರಿತಾದ ಕೃತಿ.
ನಗರಗಳಿಗೆ ಜನರು ವಲಸೆ ಹೋಗಿ ಹಳ್ಳಿಗಳು ನಾಶವಾದರಷ್ಟೇ ಜಾತಿ-ಪದ್ಧತಿಯು ನಿರ್ಮೂಲಗೊಳ್ಳಲು ಸಾಧ್ಯ ಎಂದು ನಂಬಿದ್ದAತಹ ಕಾಲವೊಂದಿತ್ತು. ಹಳ್ಳಿಗಳಲ್ಲಿನ ಜಾತಿ-ಪದ್ಧತಿಯ ಕ್ರೌರ್ಯ ನಗರಗಳಲ್ಲಿ ಮೇಲ್ನೋಟಕ್ಕೆ ಕಾಣದೇ ಹೋದದ್ದನ್ನು ಕೂಡ ʻಈಗೆಲ್ಲಿ ಜಾತಿ ಇದೆ ಬಿಡಿʼ ಎಂದಾಡುವವರ ಸಹಾಯಕ್ಕೆ ನಿಲ್ಲುತ್ತಿದ್ದು. ನಗರಗಳಲ್ಲಿನ ಜಾತಿ-ಪದ್ಧತಿಯ ರೀತಿ ರಿವಾಜುಗಳು ಮೊದಲ ನೋಟಕ್ಕೆ ದಕ್ಕುವುದಿಲ್ಲ, ಹೌದು. ನಗರೀಕರಣ ವೇಗ ಪಡೆದುಕೊಳ್ಳುತ್ತಿರುವಂತೆಯೇ ಜಾತಿ-ವ್ಯವಸ್ಥೆಯೂ ಹೇಗೆ ಬಲ ಪಡೆದುಕೊಂಡಿತು ಎನ್ನುವುದಕ್ಕೆ ಉದಾಹರಣೆಯಂತಿದೆ ‘ಬನಗಿರಿ (ಗೇಟೆಡ್ ಕಮ್ಯುನಿಟಿ)’ ಕಾದಂಬರಿ.
ʻಶ್ರೇಷ್ಠವಾದುದು ತನ್ನ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳಬೇಕಾದರೆ ಪ್ರತ್ಯೇಕವಾಗಿರಬೇಕು’, ʻಅಮೂಲ್ಯವಾದುದು ಎಲ್ಲರ ಕೈಗೆಟುಕುವಂತಾದರೆ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆʼ ಎನ್ನುವ ಅಭಿಪ್ರಾಯಗಳು ಬನಗಿರಿಯ ಪ್ರಮುಖರಲ್ಲೊಬ್ಬರಾದ ಸುಧೀಂದ್ರ ರಾವ್ರದ್ದು. ಮೇಲ್ನೋಟಕ್ಕಿದು ಬನಗಿರಿಯ ಜಾಗದ ಕುರಿತಾಗಿದೆಯಾದರೂ, ಸುಧೀಂದ್ರ ರಾವ್ರ ಜಾತಿ ವ್ಯಸನದ ಸೂಚಕವೂ ಹೌದು.
ಉಳಿದ ದೇಶಗಳಲ್ಲಿ ವರ್ಗ, ವರ್ಣಪ್ರಜ್ಞೆ ಸಾಮಾಜಿಕ ಪಿಡುಗಾದರೆ, ನಮ್ಮಲ್ಲಿ ಜಾತಿಪ್ರಜ್ಞೆ ಬಹುದೊಡ್ಡ ಸಾಮಾಜಿಕ ಪಿಡುಗು. ವರ್ಗಪ್ರಜ್ಞೆಯು ಈ ಜಾತಿಪ್ರಜ್ಞೆಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಶೋಷಣೆಗೊಳಗಾದ ಜಾತಿಯಿಂದ ಬಂದAತಹ ಡಾ. ಉಜ್ವಲ್ ನಾಯಕ್ ಸ್ವಪ್ರಯತ್ನದಿಂದ ಉನ್ನತ ಹಂತಕ್ಕೇರುತ್ತಾರೆ. ಶೋಷಕ ಜಾತಿಯ ಸುಧೀಂದ್ರ ರಾವ್ರಿಗೆ ಸಡ್ಡು ಹೊಡೆಯುತ್ತಾರೆ. ಆದರೂ ಸಹ ಬನಗಿರಿಯ ಜಾಗದ ವಿಷಯಕ್ಕೆ ಬಂದಾಗ ಉಜ್ವಲ್ ನಾಯಕರ ವರ್ಗಪ್ರಜ್ಞೆ ಜಾಗೃತವಾಗಿ ಸುಧೀಂದ್ರ ರಾವ್ರ ಜಾತಿಪ್ರಜ್ಞೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಬ್ರಾಹ್ಮಣ್ಯದ ಬಹುಮುಖ್ಯ ಗೇಟ್ ಕೀಪರುಗಳಾಗಿ ಶೋಷಿತ ಜಾತಿಯವರೇ ನಿಲ್ಲುತ್ತಾರೆ.
ಬೆಂಗಳೂರಿನAತಹ ನಗರಗಳನ್ನು ದೂರದಿಂದ ನೋಡುವವರಿಗೆ ಈ ಕಾದಂಬರಿಯಲ್ಲಿರುವಷ್ಟು ಜಾತಿ ನಿಜಕ್ಕೂ ಇರಲು ಸಾಧ್ಯವೇ ಎನ್ನಿಸಬಹುದು. ಎಂಟತ್ತು ವರ್ಷದಿಂದ ಬೆಂಗಳೂರಿನಲ್ಲಿರುವ ನನ್ನಂತವರಿಗ ಇದು ನಮ್ಮ ಅಕ್ಕಪಕ್ಕದಲ್ಲೇ ನಡೆಯುವ ಕಥನದಂತೆ ಕಾಣಿಸುತ್ತದೆ. ಜಾತಿ, ವರ್ಗ, ಕುಟಿಲತನ, ರಾಜಕೀಯ, ಭ್ರಷ್ಟಾಚಾರ, ʻದೊಡ್ಡʼ ಜನರ ಸಣ್ಣತನ, ʻಸಣ್ಣʼಜನರ ದೊಡ್ಡತನಗಳೆಲ್ಲವೂ ಹಿತಮಿತವಾಗಿ ಸೇರಿಕೊಂಡು ವಾಸ್ತವತೆಯನ್ನು ನಮ್ಮೆದುರಿಗಿಟ್ಟಿದೆ. ಕಾದಂಬರಿಯ ಅಂತ್ಯ ತರಾತುರಿಯಲ್ಲಾಗಿಬಿಟ್ಟಿತಾ, ಇನ್ನೊಂದಷ್ಟು ಓದಲಿರಬೇಕಿತ್ತು ಎನ್ನಿಸಿದ್ದೌದು.
ಈ ಕುಟಿಲತನ, ರಾಜಕೀಯ, ನೆಲೆಗೊಳ್ಳಬಯಸುವ ಮನುಷ್ಯನ ಹಂಬಲ, ಅಧಿಕಾರಸ್ಥರು ಜನಸಾಮಾನ್ಯರನ್ನು ತಮ್ಮನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ರೀತಿ; ಆಧುನಿಕ ಕಾಲಕ್ಕಷ್ಟೇ ಸೀಮಿತವಾದ ಸಂಗತಿಯಲ್ಲ. ತುಮಕೂರಿನ ದೇವರಾಯನದುರ್ಗದಲ್ಲಿ ಸಿಕ್ಕ ಪಳೆಯುಳಿಕೆಗಳ ಮೂಲಕ ಶತಮಾನಗಳಷ್ಟು ಹಿಂದಕ್ಕೆ ನಮ್ಮನ್ನೊತ್ತುಯ್ಯುತ್ತಾರೆ ಲೇಖಕರು. ಮಲೆಬಸವನ ಮೂಲಕ ಯುದ್ಧಗಳು ನಾಶಪಡಿಸುವ ಜನರ ಬದುಕಿನ ಕಥನವನ್ನು ನಮ್ಮ ಮುಂದಿಡುತ್ತದೆ. ಯುದ್ಧದ ವಿವರಗಳು, ಸಂಚುಗಳು ಬೇರೊಂದೇ ಪ್ರಪಂಚಕ್ಕೆ ನಮ್ಮನ್ನು ಕರೆದೊಯ್ಯುತ್ತದೆ.
ಆಧುನಿಕ ಗೇಟೆಡ್ ಕಮ್ಯುನಿಟಿಯ ಕಥೆಯ ಜೊತೆ, ಹಿಂದಿನ ಬದುಕಿನ ಕತೆ ಜೊತೆಯಾಗುವ ಅವಶ್ಯಕತೆಯಿತ್ತಾ? ಎರಡೂ ಕತೆಗಳು ಬೇರೆ ಬೇರೆ ಕಾದಂಬರಿಯಾಗಬಹುದಿತ್ತಲ್ಲವೇ ಎಂದು ನನಗನ್ನಿಸಿತಾದರೂ; ಭೂಮಿ – ನೆಲೆ – ಬದುಕಿನ ಕುರಿತ ಮನುಷ್ಯ ಪ್ರಜ್ಞೆಯಲ್ಲಿ ಶತಮಾನಗಳು ಕಳೆದು ಹೋದರೂ, ಹೆಚ್ಚಿನ ಬದಲಾವಣೆಯಾಗಿಲ್ಲವೆನ್ನುವುದನ್ನು ಓದುಗರಿಗೆ ಮನದಟ್ಟು ಮಾಡಿಸಲೆಂದೇ ಲೇಖಕರು ಎರಡು ಕಾಲಘಟ್ಟದ ಕತೆಯನ್ನು ಜೊತೆಯಾಗಿಸಿದ್ದಾರೆಂದನ್ನಿಸಿತು.
ಡಾ. ಅಶೋಕ್. ಕೆ. ಆರ್.
-----