ಬಿಳಿಯ ಚಾದರ

Author : ಗುರುಪ್ರಸಾದ ಕಾಗಿನೆಲೆ



Year of Publication: 2002
Published by: ಮನೋಹರ ಗ್ರಂಥ ಮಾಲಾ
Address: ಧಾರವಾಡ

Synopsys

`ಬಿಳಿಯ ಚಾದರ’ ಕೃತಿಯು ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿಯಾಗಿದೆ. ಈ ಕೃತಿಯು ಕೆಲವು ವಿಲಕ್ಷಣ ಸಂಗತಿಗಳನ್ನು ಇಟ್ಟುಕೊಂಡು ಅವುಗಳನ್ನೇ ಕುರಿತು ಧೇನಿಸುತ್ತಿರುವಂತೆ ಸಾಗುತ್ತದೆ. ಅಷ್ಟೇನೂ ಸನಾತನಿಯಲ್ಲದ ಮಾಧವರಾಯರ ತಂದೆ ತಾಯಿಗಳಿಗೆ ಕಟ್ಟಾ ಸಂಪ್ರದಾಯನಿಷ್ಠ ಮಾಧವರಾಯರಂಥ ಮಗ ಹುಟ್ಟುತ್ತಾನೆ. ಸಂಪ್ರದಾಯದಿಂದ ಆಧುನಿಕತೆಯತ್ತ ಹೊರಳುತ್ತಿರುವ ಸುತ್ತಲಿನ ಜಗತ್ತಿಗೆ ಒಂದು ಅಚ್ಚರಿಯಾಗಿ, ಕೆಲವಂಶ ಅಪಭ್ರಂಶವಾಗಿ, ಇನ್ನು ಕೆಲವಂಶ ಕಿರಿಕಿರಿಯಾಗಿ ಮಾಧವರಾಯರು ಕಾಣುವಾಗಲೂ ಅವರ ಅವಳಿ ಮಕ್ಕಳಾದ ರಶ್ಮಿ ಮತ್ತು ಶ್ರೀಧರ ಸಾಫ್ಟ್‌ವೇರ್, ಮೆಡಿಕಲ್ ಎಂದು ತಮ್ಮದೇ ಮಾರ್ಗಗಳನ್ನು ಆಯ್ದುಕೊಳ್ಳಲು ಅಡ್ಡಿಯಾಗುವಷ್ಟು ಅದು ಬೆಳೆಯುವುದಿಲ್ಲ. ಈ ಮಾಧವರಾಯರ ಅವಳಿ ಮಕ್ಕಳ ಹೆರಿಗೆಯೂ ಕೊಂಚ ವಿಲಕ್ಷಣ ಸಂಗತಿಯೇ. ಮೊದಲಿಗೆ ಅದು ಒಂದು ಹೆಣ್ಣು, ಒಂದು ಗಂಡು. ಗಂಡು ಪೀಚು ಪೀಚಾಗಿದ್ದರೆ ಹೆಣ್ಣು ಕೆಂಪಗೆ ಗುಂಡುಗುಂಡಾಗಿ ಇರುವುದರಿಂದಲೇ ಗರ್ಭದಲ್ಲೇ ಹೆಣ್ಣು ತನ್ನ ಅವಳಿ ಗಂಡಿನ ಪಾಲನ್ನು ಕಬಳಿಸಿಕೊಂಡೇ ಹುಟ್ಟಿದೆ ಎನ್ನುವ ಭಾವನೆ ಮಾತ್ರ ಬದುಕಿನುದ್ದಕ್ಕೂ ಉಳಿದು ಬರುವುದು ಇಲ್ಲಿನ ವಿಶೇಷವಾಗಿದೆ. ಇಡೀ ಕಥಾನಕದ ಹೆಚ್ಚಿನ ಭಾಗ ಘಟಿಸುವುದು ಅಮೆರಿಕದಲ್ಲಾದರೂ ಒಂದೆರಡು ಪಾತ್ರಗಳನ್ನು ಬಿಟ್ಟರೆ ಉಳಿದೆಲ್ಲಾ ಪಾತ್ರಗಳು ಭಾರತೀಯ ಅಥವಾ ಭಾರತೀಯ ಮೂಲದವು. ಇನ್ನು ಇಲ್ಲಿ ಬರುವ ಒಂದು ಪ್ರಧಾನವಾದ ವಿದೇಶೀ ಪಾತ್ರ ಬೆಟ್ಟಿ ಮಗು ಹುಟ್ಟುವುದು ದೈವಕೃಪೆಯಿಂದ ಎಂದು ತಿಳಿಯುವ ಮಟ್ಟಿಗೆ ಸನಾತನಿ! ಭಾರತದ ಸರ್ಕಾರಿ ಆಸ್ಪತ್ರೆಗಳು, ಆರೋಗ್ಯ ವಿಮೆಯ ಪರಿಕಲ್ಪನೆಯನ್ನಿಟ್ಟುಕೊಂಡೇ ಓದುವ ಕನ್ನಡದ ಓದುಗರಿಗೆ ಇಲ್ಲಿ ಸಿಗುವ ಶುದ್ಧ ಅಮೆರಿಕೆಯ ಆಸ್ಪತ್ರೆ, ಅರೋಗ್ಯ ವಿಮೆ ಇತ್ಯಾದಿ ಕುರಿತ ವಿವರಗಳು ಕೂಡ ಒಂದು ಬಗೆಯ ಅನುವಾದದ, ಅನಂತಮೂರ್ತಿಯವರು ಹೇಳುವಂತೆ ಒಂದಕ್ಕೊಂದು ಅನುವಾಗುವ, ಎದುರಾಗುವ ಅನಿವಾರ್ಯತೆಯನ್ನು ಉಂಟುಮಾಡುತ್ತದೆ. ಹಾಗೆಯೇ ಇಲ್ಲಿ ಬರುವ ಲಕ್ಕಿ ಅಲಿ, ಅಖ್ತರ್, ರಾಘವೇಂದ್ರ ಘೂಗೆ, ಮಿಸೆಸ್ ಬೆನೆಟ್, ಡ್ಯಾನ್ ದಾಮೋದರ ರೆಡ್ಡಿ, ಬೆಟ್ಟಿ, ಜಾನಕಮ್ಮ ಎಲ್ಲರಲ್ಲೂ ಎದ್ದು ಕಾಣುವ ವಿಲಕ್ಷಣ ಅಂಶಗಳಿವೆ, ಪರಸ್ಪರ ಹೊಂದಿಕೆಯಾಗದ ಯಾವುದರೊಂದಿಗೋ ಅನಿವಾರ್ಯವಾಗಿ ಏಗುತ್ತಿರುವವರಂತೆ ಇವರು ಕಾಣಿಸಿಕೊಳ್ಳುತ್ತಾರೆ. ವಾಸ್ತವವಾಗಿ ಈ ಎಲ್ಲ ವಿಲಕ್ಷಣ ಸಂಗತಿಗಳೇ ಇಡೀ ಕಥಾನಕದ ಅಂತರ್ಗತ ಇರಬಹುದೇ ಎನಿಸುವಂತೆ ಮಾಡುತ್ತವೆ ಪ್ರಮುಖವಾಗಿ ನಮ್ಮನ್ನು ಕಾಡುವ ಇಲ್ಲಿನ ಎರಡು ಸಂಗತಿಗಳು. ಒಂದು ವ್ಯಕ್ತಿಗತ ನೆಲೆಯದ್ದು, ಇನ್ನೊಂದು ಸಾಮಾಜಿಕ ನೆಲೆಯದ್ದು. ಒಂದು ಹುಟ್ಟಿನಿಂದ ತೊಡಗಿದರೆ ಇನ್ನೊಂದು ಸಾವಿನಿಂದ ತೊಡಗುವುದು ಗಮನಾರ್ಹವಾಗಿದೆ..

About the Author

ಗುರುಪ್ರಸಾದ ಕಾಗಿನೆಲೆ

ಗುರುಪ್ರಸಾದ್ ಕಾಗಿನೆಲೆ ಅವರು ಹುಟ್ಟಿದ್ದು ಶಿವಮೊಗ್ಗದಲ್ಲಿ, ಬೆಳೆದದ್ದು ಮೈಸೂರು ಮತ್ತು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ. ಬಳ್ಳಾರಿಯ ಸರಕಾರಿ ವೈದ್ಯಕೀಯ ವಿದ್ಯಾಲಯದಲ್ಲಿ ಎಂಬಿಬಿಎಸ್ ಮತ್ತು ಎಂಡಿ ಪದವಿ. ಡೆಟ್ರಾನ್ಸ್‌ನ ವೇಯ್ಡ್ ಸ್ಟೇಟ್ ವಿಶ್ವವಿದ್ಯಾನಿಲಯ ಹಾಗೂ ವಿಸ್ಕಾನ್ಸಿನ್ ವಿಶ್ವವಿದ್ಯಾಲಯಗಳಲ್ಲಿ ತರಬೇತಿ. ಸದ್ಯಕ್ಕೆ ಮಿನೆಸೊಟಾ ರಾಜ್ಯದ ರಾಚೆಸ್ಟರ್‌ನಲ್ಲಿ ವಾಸ, ನಾರ್ತ್ ಮೆಮೊರಿಯಲ್ ಆಸ್ಪತ್ರೆಯ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪ್ರಕಟಿತ ಕೃತಿಗಳು: 'ನಿರ್ಗುಣ' ಕಥಾಸಂಕಲನ, 'ವೈದ್ಯ, ಮತ್ತೊಬ್ಬ' ಲೇಖನ ಸಂಗ್ರಹ ಮತ್ತು 'ಗುಣ' ಕಾದಂಬರಿ, ಸಂಪಾದಿತ ಕಥಾಸಂಕಲನ 'ಆಚೀಚೆಯ ಕಥೆಗಳು'. ಇತ್ತೀಚಿನ ಕಾದಂಬರಿ 'ಹಿಜಾಬ್ ಸೇರಿದಂತೆ ಹಲವಾರು ...

READ MORE

Related Books