ಎಸ್.ಎಲ್. ಭೖೆರಪ್ಪನವರ “ತಬ್ಬಲಿಯು ನೀನಾದೆ ಮಗನೆ” ಕಾದಂಬರಿಯು, ಧರಣಿ ಮಂಡಲ ಮಧ್ಯದೊಳಗೆ…ಎಂಬ ಪದ್ಯದೊಂದಿಗೆ ಆರಂಭವಾಗುತ್ತದೆ. ಈ ಪದ್ಯದಲ್ಲಿ ಬರುವ ಕಾಳಿಂಗನೆಂಬ ಗೊಲ್ಲನ ವಂಶಜನೆಂದು ಕಾಳಿಂಗ ಗೌಡ, ಕಾಳೇನ ಹಳ್ಳಿಯಲ್ಲಿ ಊರಿನ ಮುಖ್ಯವ್ಯಕ್ತಿಯಾಗಿ ಪ್ರಸಿದ್ದಿ ಹೊಂದಿರುವುದರ ಜೊತೆಗೆ ಪದ್ಯದಲ್ಲಿ ಬರುವ ಪುಣ್ಯಕೋಟಿ ಗೋವಿನ ತಳಿ ಅವನ ದೊಡ್ಡಿಯಲ್ಲಿರುತ್ತದೆ.
ಗೋವನ್ನು ಸರ್ವದೇವತೆಗಳ ಸ್ವರೂಪವೆಂದು ಪೂಜಿಸುವ ಕಾಳಿಂಗಜ್ಜ ಮತ್ತು ಅದನ್ನು ಹಾಲು ಮಾಂಸಗಳನ್ನು ಕೊಡುವ ಪ್ರಾಣಿ ಮಾತ್ರ ಎಂದು ಭಾವಿಸುವ ಅಮೇರಿಕೆಯಿಂದ ಹಿಂದಿರುಗಿದ ಮೊಮ್ಮಗ, ಇವರ ಮೌಲ್ಯ ಸಂವೇದನೆಗಳ ನಡುವೆ ನಡೆಯುವ ತಿಕ್ಕಾಟವೇ ಈ ಕಾದಂಬರಿಯ ಕಥಾವಸ್ತು. ಆದರೆ ವಿದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮುಗಿಸಿ ವಿದೇಶಿ ಹೆಣ್ಣನ್ನು ಮದುವೆಯಾಗಿ ಬರುವ ಮೊಮ್ಮಗ ಮಾತ್ರ, ಗೋವು, ಪ್ರಾಣಿಗಳಿರುವುದು ಮನುಷ್ಯನ ಆಹಾರಕ್ಕಾಗಿ, ಮಾಂಸಕ್ಕಾಗಿಯೆಂದು ವಾದಿಸುತ್ತಾನೆ. ಇದರಿಂದಾಗಿ ಮನೆಯವರ ಜೊತೆಗೆ ಊರಿನವರಿಂದ ದೂರವಾಗುತ್ತಾನೆ. ಇಂತಹ ಒಂಟಿತನದ ಬದುಕಿನಿಂದ ಬೇಸರಗೊಂಡು ಮರಳಿ ತನ್ನ ಹಿಂದಿನ ಶ್ರದ್ದೆಗೆ ಮರಳುವುದರೊಳಗೆ, ಪಡೆದಿದ್ದಕಿಂತ ಹೆಚ್ಚಿನದನ್ನು ಕಳೆದುಕೊಂಡು ತಬ್ಬಲಿಯಾಗುತ್ತಾನೆ.ಗೋವುಗಳನ್ನು ದೇವತೆಗಳ ಸ್ವರೂಪವೆಂದು ಪೂಜಿಸುವ ಕಾಳಿಂಗಜ್ಜ ಮತ್ತು ಅದರ ವ್ಯತಿರಿಕ್ತ ಸ್ವಭಾವದ ಮೊಮ್ಮಗನ ನಡುವಿನ ಮೌಲ್ಯಗಳ ತಿಕ್ಕಾಟವೇ ಕಾದಂಬರಿಯ ಕಥಾವಸ್ತು.
ಪ್ರಾಯಶಃ ಭಾರತದ ಎಲ್ಲ ಭಾಷೆಗಳಲ್ಲಿಯೂ ಪ್ರಚಲಿತವಿರುವ ಗೋವಿನ ಹಾಡಿನ ಹಿನ್ನೆಲೆಯಲ್ಲಿ ಆರಂಭವಾಗುವ ಕಾದಂಬರಿಯು, ಭಾರತೀಯ ಸಂಸ್ಕೃತಿಯ ಮೂಲ ಬೇರುಗಳನ್ನು ಹಿನ್ನಲೆಯಲ್ಲಿ ಕಾಣಿಸುತ್ತದೆ. ಈ ಕೃತಿಯನ್ನಾಧರಿಸಿ ಕನ್ನಡ ಮತ್ತು ಹಿಂದಿಯಲ್ಲಿ ನಿರ್ಮಿಸಿರುವ ಚಲನ ಚಿತ್ರಗಳು ರಾಷ್ಟೀಯ ಮತ್ತು ಅಂತರರಾಷ್ಟ್ರಿಯ ಮನ್ನಣೆ ಪಡೆದಿವೆ.
ಈ ಕಾದಂಬರಿಯ ಹಿಂದಿ ಅನುವಾದವು ಅಪಾರವಾದ ಮೆಚ್ಚುಗೆ ಪಡೆದಿದೆ. ಇದೊಂದು ಉತ್ಕೃಷ್ಟ ಸಾಹಿತ್ಯಕೃತಿ ಎಂದು ಭಾವಿಸುವವರಿರುವಂತೆಯೆ, ಪ್ರಗತಿವಿರೋಧಿ, ಪ್ರತಿಗಾಮಿ ಮೌಲ್ಯಗಳನ್ನು ಪ್ರತಿಪಾದಿಸುವ ತೀರ ಕಳಪೆ ಕಾದಂಬರಿ ಎಂದು ಇದನ್ನು ದ್ವೇಷಿಸುವವರೂ ಇದ್ದಾರೆ. ಪ್ರೀತಿ ದ್ವೇಷಗಳೆರಡನ್ನು ಪ್ರಚೋದಿಸುವ ಗುಣವು ಈ ಕಾದಂಬರಿಯ ಶಕ್ತಿಯ ಗುರುತಾಗಿದೆ.ಈ ಕಾದಂಬರಿಯ ಕನ್ನಡ ಚಲನಚಿತ್ರ ರೂಪಾಂತರವನ್ನು ( ಕನ್ನಡದಲ್ಲಿ "ತಬ್ಬಲಿಯು ನೀನಾದೆ ಮಗನೆ" ಹಾಗೂ ಹಿಂದಿಯಲ್ಲಿ " ಗೋಧೂಳಿ") ಶ್ರೀ ಬಿ.ವಿ.ಕಾರಂತ ಹಾಗೂ ಶ್ರೀ ಗಿರೀಶ ಕಾರ್ನಾಡ ನಿರ್ದೇಶಿಸಿದ್ದಾರೆ.
ಜನಪ್ರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ಮೀಮಾಂಸಕರೂ ಹೌದು. ಹಾಸನ ಜಿಲ್ಲೆ ಚೆನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ 1931ರ ಆಗಸ್ಟ್ 20ರಂದು ಜನಿಸಿದರು. ತಂದೆ ಲಿಂಗಣ್ಣಯ್ಯ- ತಾಯಿ ಗೌರಮ್ಮ. ತಮ್ಮ ಹುಟ್ಟೂರಿನ ಸುತ್ತಮುತ್ತಲ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮೈಸೂರಿಗೆ ಬಂದು ಶಾರದಾವಿಲಾಸ ಪ್ರೌಢಶಾಲೆಯಲ್ಲಿ ಓದಿ, ಮಹಾರಾಜ ಕಾಲೇಜಿನಲ್ಲಿ ಬಿ.ಎ. ಮಾಡಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಗಳಿಸಿದರು. ಅನಂತರ ಹುಬ್ಬಳ್ಳಿಯ ಕಾಡುಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕ (1958-60), ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ (1960-66), ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಶಿಕ್ಷಣ ಸಂಸ್ಥೆಯಲ್ಲಿ ಉಪಪ್ರಾಧ್ಯಾಪಕ (1967-1971) ...
READ MORE