’ಕೃಷ್ಣವೇಣಿ’ ಕೃತಿಯು ಲೇಖಕ ವೆಂಕಟಗಿರಿ ಕಡೇಕಾರ್ ಅವರ ಕಾದಂಬರಿಯಾಗಿದೆ. ವೆಂಕಟಗಿರಿ ಕಡೇಕಾರ್ ಅವರು ತಮ್ಮ ಕೃತಿಗಳನ್ನು ರಚಿಸಿದ್ದು 1977-78 ರ ಕಾಲಘಟ್ಟದಲ್ಲಿ. ಇನ್ನೂ ಸ್ತ್ರೀವಾದದ ಗಂಧಗಾಳಿಯೂ ಸೋಕಿರದ ಕಾಲಘಟ್ಟದಲ್ಲಿ ತಮ್ಮ ಕಾಲಕ್ಕಿಂತ ಮುಂದೆ ನಿಂತ ತಮ್ಮ ಹಿಂದಿನ ಕಾಲಘಟ್ಟದ ಬಾಲವಿಧವೆಯರ ಕಥೆ ಹೇಳಹೊರಟವರು. ಕೃಷ್ಣವೇಣಿ ಕಾದಂಬರಿಯಲ್ಲಿ ಕಿಟ್ಟಮ್ಮಕ್ಕನ ಬದುಕುಕಟ್ಟುವ ಕಥೆ, ಕಾರಂತರ ಅರ್ಧಕಟ್ಟಿಬಿಟ್ಟ ಯಾವುದೋ ಪಾತ್ರ ವೆಂಕಟಗಿರಿಯವರ ಕಾದಂಬರಿಯಲ್ಲಿ ಮರುಹುಟ್ಟು ಪಡೆದಂತೆ ಕಾಣಿಸುತ್ತದೆ. ಬಾಲವಿಧವೆಯೊಬ್ಬಳು ಸಮಾಜಮುಖಿಯಾಗಿ ಬೆಳೆಯುವ ಕಿಟ್ಟಮ್ಮಕ್ಕನ ಕಥೆ ಓದುಗರನ್ನು ಸೆಳೆದಿಡುತ್ತದೆ. ಸ್ತ್ರೀವಾದದ ಸುಳಿವೂ ಇಲ್ಲದ ಕಾಲವೊಂದರಲ್ಲಿ ಇಂತಹ ಸ್ತ್ರೀವಾದಿ ಪಾತ್ರವೊಂದನ್ನು ಕೇಂದ್ರವಾಗಿಸಿಕೊಂಡು ಕಥೆ ಹೇಳುವ ವೆಂಕಟಗಿರಿ ಕಡೇಕಾರ್ ಬರವಣಿಗೆ ನಿಜಕ್ಕೂ ಬೆರಗುಟ್ಟಿಸುತ್ತದೆ.