ತಾರುಣ್ಯದ ಚಿಲುಮೆ ಉಕ್ಕುವ ಕಥನ ಜಯಪ್ರಕಾಶ್ ಮಾವಿನಕುಳಿ ಅವರ ‘ಅನುರೂಪ’ ಕಾದಂಬರಿ. ಮನೋವೈಜ್ಞಾನಿಕ ನೆಲೆಯಲ್ಲಿ ಸಾಮಾಜಿಕ ಕಥನವನ್ನು ಒಳಗೊಂಡಿರುವ ಕೃತಿ ಇದಾಗಿದ್ದು, ಅಂತರಂಗದ ತಳಮಳದ ಚಿತ್ರಣವನ್ನು ಓದುಗರಿಗೆ ಕಟ್ಟಿಕೊಡುತ್ತದೆ. ಕಾದಂಬರಿಯ ಕಥಾನಾಯಕಿ ಸುವರ್ಣ ಕತೆಯನ್ನು ಹೇಳುವ ಪರಿ ಇಲ್ಲಿ ಭಿನ್ನ. ಶಾಲಾ ಪ್ರವಾಸದಿಂದ ಆರಂಭವಾಗುವ ಕತೆ, ಒಬ್ಬರು ಅಧ್ಯಾಪಕರು, ನಾಲ್ಕಾರು ವಿದ್ಯಾರ್ಥಿ ಮಿತ್ರರು, ಶಾಲೆಯ ಪರಿಸರ, ಪ್ರವಾಸ ಹೋಗುವ ಊರಿನ ವಿವರಗಳೆಲ್ಲವನ್ನು ತಿಳಿಸಿಕೊಡುತ್ತದೆ. ಆಗಷ್ಟೇ ಇಪ್ಪತ್ತಕ್ಕೆ ಕಾಲಿಟ್ಟ ಹುಡುಗಿಯ ಸಹಜ ಕುತೂಹಲ, ಪ್ರೇಮವಾಂಛೆ, ಹೊಸ ಬದುಕಿನ ಹಂಬಲ, ಮನೆಯ ಕಟ್ಟುನಿಟ್ಟಿನ ವಾತಾವರಣ, ಅಪ್ಪನ ಆಕ್ರೋಶ- ಎಲ್ಲದರ ನಡುವೆಯೇ ಗುಪ್ತಗಾಮಿನಿಯಾಗಿ ಸಾಗುವ ಪ್ರೀತಿಯ ಸೆಲೆಯೇ ಈ ಕಾದಂಬರಿಯ ಮುಖ್ಯ ವಸ್ತು. ಸುವರ್ಣಳ ಮುಗ್ಧಪ್ರೇಮದ ಕತೆಯನ್ನು ಹೇಳುತ್ತಲೇ, ಪ್ರೇಮವು ಕಾಮವಾಗುವ ಅಪೂರ್ವ ಹಾಗೂ ಭೀಕರ ಕ್ಷಣವನ್ನು ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ಹಾಗೂ ಅವರನ್ನು ನೋಡಲು ಬರುವ ಗುಪ್ತ ಪ್ರೇಮಿಯ ಮೂಲಕ ತೋರಿಸಿರುವ ಪ್ರಸಂಗವಂತೂ ಒಂದು ಥ್ರಿಲ್ಲರ್ ಸಿನಿಮಾದಷ್ಟು ರೋಚಕವಾಗಿದೆ.
ಸಾಹಿತಿ ಜಯಪ್ರಕಾಶ ಮಾವಿನಕುಳಿ ಅವರು ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯಿಕ ಕೃಷಿಯ ಜೊತೆಗೆ ನಾಟಕಕಾರರಾಗಿ, ರಂಗ ನಿರ್ದೇಶಕರಾಗಿ ಮತ್ತು ರಂಗಭೂಮಿ ಚಲನಚಿತ್ರ ನಟರಾಗಿಯೂ ಖ್ಯಾತಿ ಗಳಿಸಿದ್ದಾರೆ. ಕನ್ನಡ ಸಾಹಿತ್ಯಲೋಕಕ್ಕೆ ಹಲವು ನಾಟಕಗಳು, ಕಾದಂಬರಿ, ಸಣ್ಣಕತೆಗಳು, ಕಾವ್ಯ ಮತ್ತು ಇತರರೊಡನೆ ಹಲವು ಕೃತಿಗಳ ಸಂಪಾದನೆ ಸೇರಿದಂತೆ ಸುಮಾರು ಎಪ್ಪತ್ತು ಪುಸ್ತಕಗಳನ್ನು ನೀಡಿದ್ದಾರೆ. 1978ರಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದು 4 ಕಥಾ ಸಂಕಲನಗಳು, 4 ಕವನ ಸಂಕಲನಗಳು, 7 ನಾಟಕಗಳು, 12 ಸಂಪಾದಿತ ಕೃತಿಗಳು ಹಾಗೂ ಇತರ ಕೃತಿಗಳೊಂದಿಗೆ 60ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. 'ಪೊಲಿಟಿಕ್ಸ್ ಆ್ಯಂಡ್ ಕಲ್ಚರ್' ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ...
READ MORE