ಇಳಿಹೊತ್ತು ಹಾಗೂ ಅಂತ್ಯ ಅಲ್ಲದ ಆರಂಭ

Author : ವೇದಾಮಂಜುನಾಥನ್ ಬೆಳಗೆರೆ



Year of Publication: 2019
Published by: ಕೆ.ಕೆ.ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್

Synopsys

ವೇದಾ ಮಂಜುನಾಥನ್ ಅವರ ಕೃತಿ ಇಳಿಹೊತ್ತು ಹಾಗು ಅಂತ್ಯ ಅಲ್ಲದ ಆರಂಭ. ಇಳಿಹೊತ್ತು ಹೆಸರೇ ಸೂಚಿಸುವಂತೆ ಸಂಜೆ ಅಂದರೆ ವೃದ್ಧಾಪ್ಯ. ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಮಕ್ಕಳಿಗೆ ವೃದ್ಧ ತಂದೆ ತಾಯಿ ಬೇಡದಿರುವುದೇ ಇದಕ್ಕೆ ಮುಖ್ಯ ಕಾರಣ. ಇದು ನಮ್ಮ ಭಾರತೀಯ ಸಂಸ್ಕೃತಿ ಅಲ್ಲ. ವಿದೇಶಗಳಲ್ಲಿ ಓಲ್ಡೇಜ್ ಹೋಂಗಳು ಇರುತ್ತವೆ. ಏಕೆಂದರೆ ಅಲ್ಲಿ ಕುಟುಂಬ, ಅದರಲ್ಲೂ ಕೂಡುಕುಟುಂಬದ ಪರಿಕಲ್ಪನೆಯೇ ಇಲ್ಲ. ವೃದ್ಧಾಶ್ರಮ ಎಂಬುದು ಪಾಶ್ಚಾತ್ಯರ ಅಂಧಾನುಕರಣೆಯೇ ಸರಿ. ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳನ್ನು ಡೇಕೇರ್ ಸೆಂಟರುಗಳಲ್ಲಿ, ವೃದ್ಧರನ್ನು ಆಶ್ರಮಗಳಲ್ಲಿ ಬಿಡುವುದು ಸಾಮಾನ್ಯವಾಗಿ ಹೋಗಿದೆ. ತಂದೆ ತಾಯಿ ಹತ್ತು ಜನ ಮಕ್ಕಳನ್ನು ಸಾಕುತ್ತಾರೆ, ಅದೇ ಹತ್ತು ಜನ ಮಕ್ಕಳು ತಂದೆ ತಾಯಿ ಇಬ್ಬರನ್ನು ಸಾಕಲಾರರು ಎಂಬುದು ವಿಪರ್ಯಾಸವೇ ಸರಿ! ಈ ಕಿರುಕಾದಂಬರಿಯಲ್ಲಿ ವೃದ್ಧಾಶ್ರಮವೊಂದರ ಕಥೆ ಇದೆ. ಇಲ್ಲಿ ನಾನಾ ರೀತಿಯ ವಯೋವೃದ್ಧರು ಬಂದು ಸೇರಿರುತ್ತಾರೆ. ಅವರನ್ನೆಲ್ಲಾ ತನ್ನ ಸ್ವಂತ ತಂದೆ ತಾಯಿಯಂತೆ ನೋಡಿಕೊಳ್ಳುವ ಸಹೃದಯ ಹೆಣ್ಣು ಸುಷ್ಮಾ. ಆಶ್ರಮದಲ್ಲಿ ಸೌಲಭ್ಯಗಳನ್ನು ಹೊಂದಿದ್ದು, ಮುಖ್ಯವಾಗಿ ಮನೆಯಲ್ಲಿ ಸಿಗದ ಪ್ರೀತಿ, ಮಮತೆ, ಆದರಗಳನ್ನು ಸುಷ್ಮಾ ಆ ನೊಂದ ಹೃದಯಗಳಿಗೆ ನೀಡುತ್ತಾಳೆ. ತಿಂಗಳಿಗೆ ಒಂದು ಬಾರಿ ವೃದ್ಧರನ್ನು ಪರೀಕ್ಷಿಸಲು ಬರುವ ಯುವ ವೈದ್ಯ ಸೂರ್ಯಪ್ರಸಾದ್. ಸೂರ್ಯನಿಗೆ ಹಿರಿಯರ ಬಗ್ಗೆ ಇರುವ ಕಾಳಜಿ, ಪ್ರೀತಿ ಎಲ್ಲರಿಗೂ ಹಿಡಿಸುತ್ತದೆ. ಸುಷ್ಮಾ ಹಾಗು ಸೂರ್ಯ ಮದುವೆಯಾದರೆ ಸಮಾನ ಮನಸ್ಕರುಳ್ಳ ಅವರ ದಾಂಪತ್ಯ ಚೆನ್ನಾಗಿರುತ್ತದೆ ಮತ್ತು ಮುಂದೆ ಆಶ್ರಮವನ್ನು ನಡೆಸಿಕೊಂಡು ಹೋಗಬಹುದು ಎಂಬುದು ಹಿರಿಯರ ಆಶಯ. ಆದರೆ ಸುಷ್ಮಾ ವರ್ಗ ಸ್ಥರದಲ್ಲಿ ಕೆಳಗಿರುವ ತಾನೊಬ್ಬ ಅನಾಥೆ ಎಂದು ತನ್ನ ಮನದಲ್ಲಿ ಸೂರ್ಯನ ಬಗ್ಗೆ ಪ್ರೀತಿ ಅಂಕುರಿಸಿದ್ದರೂ ಹಿಂದೇಟು ಹಾಕುತ್ತಾಳೆ! ಸೂರ್ಯನ ತಾಯಿಯೂ ಪ್ರಖ್ಯಾತ ವೈದ್ಯೆಯಾಗಿದ್ದು, ಸ್ವಂತ ಆಸ್ಪತ್ರೆ ಹೊಂದಿರುತ್ತಾರೆ. ಅವರಿಗೆ ಸುಷ್ಮಾಳಂತಹ ಬಡ, ಅನಾಥ ಹುಡುಗಿಯನ್ನು ಸೊಸೆಯನ್ನಾಗಿ ಸ್ವೀಕರಿಸಲು ಇಷ್ಟವಿರುವುದಿಲ್ಲ! ಇದರ ನಡುವೆ ಆಶ್ರಮಕ್ಕೆ ಬಂದು ಸೇರುವ ಶಮಂತಕಮಣಿ ಒಬ್ಬ ಏಡ್ಸ್ ಪೀಡಿತೆ. ಆಕೆಯ ದುರಂತ ಬದುಕಿಗೆ ಕಾರಣ ಒಬ್ಬ ಶ್ರೀಮಂತ. ಶಮಂತಕಮಣಿಗೆ ಒಂದು ಮಗುವನ್ನು ನೀಡಿ, ಆತ ಪರಾರಿಯಾಗಿರುತ್ತಾನೆ. ಕೊನೆಗೆ ಶಮಂತಕಮಣಿಗೆ ತನ್ನ ಮಗು ಸಿಕ್ಕಿತೇ, ಸುಷ್ಮಾ ಹಾಗೂ ಸೂರ್ಯ ಒಂದಾದರೇ.. ಇಷ್ಟಕ್ಕೂ ಶಮಂತಕರಿಗೆ ಕೈ ಕೊಟ್ಟು ಹೋದ ಆ ವ್ಯಕ್ತಿಯಾದರೂ ಯಾರು.. ಎಂಬ ಎಲ್ಲಾ ಗೊಂದಲಗಳಿಗೂ ಕೊನೆಯಲ್ಲಿ ಉತ್ತರವಿದೆ. ಕುತೂಹಲಕ್ಕೆ ಕಾದಂಬರಿ ಓದಲೇಬೇಕು.

About the Author

ವೇದಾಮಂಜುನಾಥನ್ ಬೆಳಗೆರೆ

ಬೆಳಗೆರೆಯಂತಹ ಸಾಹಿತ್ಯ ವಾತಾವರಣದಿಂದ ಬಂದ ವೇದಾರವರು, ಬಾಲ್ಯದಿಂದಲೇ ಬರವಣಿಗೆಯನ್ನು ರೂಢಿಸಿಕೊಂಡವರು. ಪದವಿ ವ್ಯಾಸಂಗದಲ್ಲಿ ಕನ್ನಡ ಐಚ್ಛಿಕ ವಿಷಯವಾಗಿ ತೆಗೆದುಕೊಂಡಿರುತ್ತಾರೆ. ಇದಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತಿನವರು ನಡೆಸುವ ಕನ್ನಡ ಜಾಣ ಹಾಗು ರತ್ನ ಪರೀಕ್ಷೆಗಳಲ್ಲಿ ಕರ್ನಾಟಕ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಗಳಿಸಿರುತ್ತಾರೆ.  ಕತೆ, ಕವನ ಕಾದಂಬರಿ, ಲೇಖನ, ಹಾಸ್ಯ ಬರೆಯುವ ವೇದಾರವರು ಇದುವರೆಗೂ 30 ಕೃತಿಗಳನ್ನು ರಚಿಸಿದ್ದಾರೆ. ಇವರ ಬರವಣಿಗೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ಇದಲ್ಲದೆ ವೇದಾರವರು ಟಿವಿ ಧಾರಾವಾಹಿ ಹಾಗು ಕಿರುಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿರುತ್ತಾರೆ. ಇವರ ಕಥೆಗಳು ಆಕಾಶವಾಣಿಯಲ್ಲಿಯೂ ಬಿತ್ತರಗೊಂಡಿವೆ. ವೇದಾಮಂಜುನಾಥನ್ ರವರ ಮಕ್ಕಳ ...

READ MORE

Related Books