‘ಚೆಕ್ ಪೋಸ್ಟ್’ ಲೇಖಕ ರಾಜು ಗಡ್ಡಿ ಅವರ ಕಾದಂಬರಿ. ಲೇಖಕಿ ಸುನಂದಾ ಕಡಮೆ ಬೆನ್ನುಡಿ ಬರೆದಿದ್ದಾರೆ. ಸಂಯಮದಿಂದ ಮಾಂತ್ರಿಕವಾಗಿ ಕತೆ ಹೆಣೆದಿದ್ದು, ಒಂದು ಅರ್ಥಪೂರ್ಣತೆಯನ್ನು ತಂದುಕೊಡುವ ಲೇಖಕ ರಾಜು ಗಿಡ್ಡಿ ಅವರ ಎಂಟನೇ ಕಾದಂಬರಿ ಇದು. ಉತ್ತಮ ಪುರುಷ ನಿರೂಪಣೆಯಲ್ಲಿರುವ ನೈಜ ಹಾಗೂ ಅನುಭವ ನಿಷ್ಠವಾದ , ಲಾರಿ ಚಾಲಕನ ಆತ್ಮ ವೃತ್ತಾಂತದಂತಹ ಈ ಕೃತಿಗೆ ಸಹೃದಯರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ. ಬೈಪಾಸ್ ರಸ್ತೆಯಲ್ಲಿ ಡಕಾಯಿತರು ಬೆನ್ನಟ್ಟುವ ಕಾರಣಕ್ಕೆ ಭೀತಿ ಪಟ್ಟು, ಟೈರುಗಳಿಂದ ಬರುವ ವಿಚಿತ್ರ ಸುಟ್ಟ ವಾಸನೆಗೆ ಲಾರಿಯ ಬಾನೆಟ್ ಒಳಗೆ ಮೊಬೈಲ್ ಬೆಳಕಲ್ಲಿ ರಿಪೇರಿ ಕೈಗೊಂಡು, ಸವೆದು ಹೋದ ಗಾಲಿಯ ನಟ್ಟು ಬೋಲ್ಟು ತಿರುವಿ, ಪಂಜಾಬಿ ಡಾಬಾ ಹೊಕ್ಕು ಬಿಸಿ ಚಹ ಹೀರಿ, ಕಟ್ಟುವ ಸಾಲದ ಕಂತಿನ ಆತಂಕದಲ್ಲಿ ಒಮ್ಮೊಮ್ಮೆ ಡಿಸೇಲ್ ದುಡ್ಡು ತೆಗೆಯುವುದೇ ಕಷ್ಟವೆಂಬ ರೀತಿಯ ನಿಶಾಚರಿ ಚಾಲಕರದು ನಿರಂತರ ಹೋರಾಟದ ಬದುಕು. ಹಳೆಯ ಗೆಳತಿಯ ನವಿರಾದ ಅನುಭೂತಿಯು ಇಲ್ಲಿ ತುಡಿಯುವ ಅಪ್ಪಟ ಜೀವನ ಪ್ರೀತಿಗೆ ಸಾಕ್ಷಿ. ಚಾಲಕರ ಶ್ರಮದ ಕಾಸು ಕಣ್ಣೆದುರೇ ಲಂಚದಂತೆ ಅಧಿಕಾರಿಗಳ ಕೈಸೇರುವ ಸನ್ನಿವೇಶವು ಇಂದಿನ ಭ್ರಷ್ಟ ಸಾಮಾಜಿಕತೆಯನ್ನು ತೆರೆದಿಡುತ್ತದೆ’ ಎಂದು ಪ್ರಶಂಸಿಸಿದ್ದಾರೆ.
ರಾಜು ಗಡ್ಡಿ ಅವರು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಶ್ವಿನಹಳ್ಳಿ ಗ್ರಾಮದವರು. ‘ಜನ್ಮ-ಧರ್ಮ’ ಎಂಬ ಕೃತಿಯ ಮೂಲಕ ಸಾಹಿತ್ಯ ವಲಯ ಪ್ರವೇಶಿಸಿದ ಇವರು ‘ಒಂದು ನೂರು ರೂಪಾಯಿಗಳು’, ‘ಶಿಶ್ವನಹಳ್ಳಿ ರೇಲ್ವೆ ಸ್ಟೇಷನ್’, ‘ಹೆಣಗಾಟ’ ಕಾದಂಬರಿಗೆ 2011ನೇ ಸಾಲಿನ ಬೇಂದ್ರೆ ಪ್ರಶಸ್ತಿ ದೊರೆತಿದೆ. ಇವರ ಮತ್ತೊಂದು ಕೃತಿ ‘ನಾನು’ ಪ್ರಕಟವಾಗಿದೆ. ...
READ MORE