ಮೂರು ತಲೆಮಾರುಗಳ ಹಂತಹಂತದ ಜೀವನಚಿತ್ರಣ ವ್ಯಕ್ತವಾಗಿರುವ ಕಾದಂಬರಿ ‘ಸ್ತ್ರೀಯಾನ’. ಸ್ತ್ರೀಯರೇ ಕೇಂದ್ರಬಿಂದುವಾಗಿರುವ ಈ ಕಾದಂಬರಿಯ ಕಥಾವಸ್ತು ಮನೆಯನ್ನೂ, ಮನೆತನವನ್ನೂ ಕಟ್ಟುತ್ತಾ, ಉಳಿದವರ ಬದುಕಿಗೆ ಚಿಮ್ಮುಹಲಗೆಯಾಗುತ್ತಾ, ಸೇವೆಯೇ ತಮ್ಮ ಜೀವ-ಜೀವನದ ಸಾರ್ಥಕ್ಯವೆಂದು ಹಿರಿದಾಗಿ ಬಾಳಿದ ಮಹಿಳೆಯರು ಓದುಗರ ಅನುಕಂಪ ಮತ್ತು ಪ್ರೀತಿಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಸುಮಾರು ಐವತ್ತು-ಅರುವತ್ತು ವರ್ಷಗಳ ಹಿಂದಿನ ಮೈಸೂರು, ಶ್ರೀರಂಗಪಟ್ಟಣ ಮೊದಲಾದ ಹಳೆಯ ಮೈಸೂರು ಪ್ರಾಂತ್ಯದ ಚಿತ್ರಣ ಅತ್ಯಂತ ವಾಸ್ತವಿಕವಾಗಿ ಮತ್ತು ಯಶಸ್ವಿಯಾಗಿ ಮೂಡಿಬಂದಿದೆ. ಕತೆಯ ಹಿನ್ನೆಲೆಗೆ ಇವು ಸಮರ್ಥ ಪೂರಕವಾಗಿ ದುಡಿದಿದೆ. ಆ ಕಾಲಮಾನದ ಜನಜೀವನವು ಸಹಜವಾಗಿ ಮತ್ತು ನಿರಾಡಂಬರವಾಗಿ ದಾಖಲಾಗಿದೆ. ಬಡತನ ಮತ್ತು ಸಿರಿತನಗಳೆರಡೂ ಸಮವಾಗಿ ಅಷ್ಟೇ ಸಮತೂಕವಾಗಿ ಚಿತ್ರಿತವಾಗಿದೆ. ಇಡೀ ಕಾದಂಬರಿಯ ಮೂಲ ಮಾನವೇ ಆರ್ಥಿಕ ವಿಚಾರ. ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡು ಮೋಸ ಮಾಡುವ ಇಲ್ಲಿನ ಕೆಲ ಪಾತ್ರಗಳು ಓದುಗರಲ್ಲಿ ವ್ಯಗ್ರತೆಯನ್ನು ಹುಟ್ಟು ಹಾಕುತ್ತವೆ.
ಎಂ.ಆರ್. ಆನಂದ ಅವರು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಅಧಿಕಾರಿ. 1950 ಅಕ್ಟೋಬರ್ 16ರಂದು ಜನನ. ಪ್ರಸ್ತುತ ಮೈಸೂರಿನಲ್ಲಿ ವಾಸವಿದ್ದಾರೆ. ನಿವೃತ್ತಿಯ ನಂತರ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಕತೆ, ಕವನಗಳು ಪ್ರಿಯಾಂಕ, ತುಷಾರ, ಮಂಗಳ, ಲಹರಿ, ಸವಿಗನ್ನಡ ಸಹಿತ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ. ಕೃತಿಗಳು: ಮೊಗ್ಗರಳುವಾಗ, ಸ್ತ್ರೀಯಾನ(ಕಾದಂಬರಿ), ಕಥಾ ಕಲರವ, ಕಥಾ ನಿನಾದ(ಕಥಾ ಸಂಕಲನ), ಜೀವಯಾನ(ಕವನ ಸಂಕಲನ) ...
READ MORE