ವೈಷ್ಣವ ಜನತೋ

Author : ಲೋಕೇಶ್ ಅಗಸನಕಟ್ಟೆ

Pages 420

₹ 365.00




Year of Publication: 2021
Published by: ಅಹರ್ನಿಶಿ ಪ್ರಕಾಶನ
Address: ಜ್ಞಾನವಿಹಾರ ಬಡಾವಣೆ, ಕಂಟ್ರಿ ಕ್ಲಬ್ ಎದುರು, ವಿದ್ಯಾನಗರ ಶಿವಮೊಗ್ಗ
Phone: 9742225779

Synopsys

‘ವೈಷ್ಣವ ಜನತೋ’ ಕೃತಿಯು ಲೋಕೇಶ ಅಗಸನಕಟ್ಟೆ ಅವರ ಕಾದಂಬರಿ. ಓದುವವರಿಗೆ ಈ ಕಾದಂಬರಿ ಕೆಲವು ಸವಾಲುಗಳನ್ನು ಒಡ್ಡುತ್ತದೆ. ಒಟ್ಟು ಕಥನದಲ್ಲಿ ಕೃಷಿ, ಪಶುಪಾಲನೆ ಉತ್ಪಾದನೆಯ ವ್ಯವಸ್ಥೆಯ ಮೇಲೆ ಬದುಕು ಕಟ್ಟಿಕೊಂಡಿದ್ದ ಹಳ್ಳಿಯೊಂದು ಗ್ರಾಮೋದ್ಯೋಗ, ಕಾರ್ಖಾನೆಗಳ ಪದರಕ್ಕೆ ಹೊರಳಿಕೊಳ್ಳುವಾಗ ಉಂಟಾಗುವ ಬಿಕ್ಕಟ್ಟುಗಳು ಕುಟುಂಬದ ಒಳಗೆ ಮತ್ತು ಸಾಮಾಜಿಕ ನೆಲೆಯಲ್ಲಿ ತಲೆದೋರತೊಡಗುವುದು; ಗಾಂಧಿ, ಅಂಬೇಡ್ಕರ್ ಅವರ ಚಿಂತನೆ, ಕಾರ್ಯಯೋಜನೆಗಳು ಅವುಗಳ ಒಳಗಿನ ವಿರೋಧಗಳ ಮೂಲಕ ಊರಿನಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ವೈಷಮ್ಯಗಳು ಮೈಮುರಿದೇಳುವಂತಾಗುವುದು ವ್ಯಕ್ತಿಗತ ನಂಟುಗಳು ಸಾಮಾಜಿಕ ಚೌಕಟ್ಟಿನಲ್ಲಿ ನಿಯಂತ್ರಿತವಾಗುತ್ತ ಹೋಗುವುದು ಇದೆಲ್ಲವೂ ಈ ಕಾದಂಬರಿಯ ನೇಯ್ಗೆಯಲ್ಲಿ ಸೇರಿಕೊಂಡಿದೆ.

 

About the Author

ಲೋಕೇಶ್ ಅಗಸನಕಟ್ಟೆ
(07 August 1958)

ಡಾ. ಲೋಕೇಶ್ ಅಗಸನಕಟ್ಟೆ ಅವರು ಕವಿ-ಕತೆಗಾರರು. 1958ರ ಆಗಸ್ಟ್ 7ರಂದು ದಾವಣಗೆರೆ ತಾಲ್ಲೂಕು ಅಗಸನಕಟ್ಟೆ ಗ್ರಾಮದಲ್ಲಿ ಜನಿಸಿದರು. ಅಗಸನಕಟ್ಟೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ, ಆನಗೋಡಿನ ಶ್ರೀ ಮರುಳಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು, ಜಿ.ಚನ್ನಪ್ಪ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಹಾಗೂ ಸಿರಿಗೆರೆಯ ಎಂ.ಬಿ.ಆರ್. ಕಾಲೇಜಿನಲ್ಲಿ ಪದವಿ ಮೈಸೂರಿನ ಕುವೆಂಪು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿ, ಪಿಹೆಚ್‍ಡಿ ಸಹ ಪಡೆದಿದ್ದಾರೆ.  1986 ರಿಂದ ಮುಂಜಾನೆ ಪತ್ರಿಕೆಯ ವರದಿಗಾರರಾಗಿ ವೃತ್ತಿ ಜೀವನ ಆರಂಭಿಸಿದ ಅಗಸನಕಟ್ಟೆ,  1984 ರಿಂದ 2017ರವರೆಗೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಸಾಹಿತ್ಯಿಕ ಬರವಣಿಗೆ, ಅಂಕಣ ಬರಹ, ...

READ MORE

Reviews

ಲೋಕೇಶ ಅಗಸನಕಟ್ಟೆ ಅವರ ಹೊಸ ಕಾದಂಬರಿ ವೈಷ್ಣವ ಜನತೋ’ ಎಚ್.ಆರ್. ರಮೇಶ್- ಅವಧಿ

----

ಮಾತು ಮೀರಿದ ಕ್ರಿಯಾರೂಪ- ಬರಗೂರು ರಾಮಚಂದ್ರಪ್ಪ (ವಾರ್ತಾಭಾರತಿ)

 ಲೋಕೇಶ ಅಗಸನಕಟ್ಟೆಯವರ 'ವೈಷ್ಣವ ಜನತೋ' ಕಾದಂಬರಿಯು ಗ್ರಾಮೀಣ ಕೇಂದ್ರಿತ ವಸ್ತುವಿನ ಮೂಲಕವೇ ದೇಶವ್ಯಾಪಿ ತಾತ್ವಿಕತೆಯತ್ತ ಸಾಗುವ ಅಂತರ್ಮುಖಿ ಚಲನೆಯನ್ನು ಒಳಗೊಂಡಿದೆ. ಗ್ರಾಮೀಣ ಬದುಕನ್ನು ಕಟ್ಟಿಕೊಡುವ ಕೃತಿಯಾದ್ದರಿಂದ ಇದೊಂದು ಪ್ರಾದೇಶಿಕ ಪ್ರಧಾನತೆಯ ಕಾದಂಬರಿಯೆಂದು ಮೇಲ್ನೋಟಕ್ಕೆ ಅನ್ನಿಸುವುದು ಸಹಜವಾದರೂ, ಪ್ರಾದೇಶಿಕ ಸೊಗಡಿನ ಸಂಭ್ರಮದಲ್ಲಿ – ಮುಳುಗಿ ಹೋಗುವುದಿಲ್ಲವೆಂಬುದು ಗಮನಿಸಲೇ ಬೇಕಾದ ಸಂಗತಿಯಾಗಿದೆ. ಕನ್ನಡದಲ್ಲಿ ಪ್ರಾದೇಶಿಕ ಪರಂಪರೆಯನ್ನು ಕಟ್ಟಿಕೊಟ್ಟ ವಿವಿಧ ಮಾದರಿಯ ಕಾದಂಬರಿಗಳು ಬಂದಿರುವ ಹಿನ್ನೆಲೆಯಲ್ಲಿ ಈ ಮಾತು ಹೇಳುತ್ತಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ನೆಲೆಯೂರಿದ ಸಾಮಾಜಿಕ ಸಾಂಸ್ಕೃತಿಕ ನಮೂನೆಗಳನ್ನು ನಲಿವಿನಿಂದ ನಿರೂಪಿಸಿದ ಕೃತಿಗಳು ಕೂಡ ನಮ್ಮಲ್ಲಿವೆ. ಈ ಮಾದರಿಯ ಕೃತಿಗಳು ಊಳಿಗಮಾನ್ಯ ಪದ್ಧತಿಯ ಪ್ರಾದೇಶಿಕ 'ವೈಭವ'ವನ್ನು ಮನತುಂಬಿಸಿಕೊಂಡು ಮಾತಾಡುತ್ತವೆ.

'ವೈಭವ'ದ ಜೊತೆಗೆ ಒಳವಿಷಾದದ ಎಳೆ ಇರುವುದಿಲ್ಲ. ಸಮೃದ್ಧಿಯ ಸಂಕೇತಗಳಲ್ಲಿ ಸುಖಿಸುವ ಮನೋಧರ್ಮವನ್ನು ಇಂಥ ರಚನೆಗಳಲ್ಲಿ ಕಾಣಬಹುದು. ಇನ್ನು ಕೆಲವು ಕೃತಿಗಳಲ್ಲಿ ವಿಷಾದದ ಎಳೆಯೊಂದು ಬೆಳೆದಿರುವುದುಂಟು; ಆದರೆ ಈ ವಿಷಾದವು ಬದುಕಿನ ಬವಣೆಗಳನ್ನು ಕಂಡು ಕರುಳಲ್ಲಿ ಕೆಂಡ ಕಟ್ಟಿಕೊಂಡು ಹುಟ್ಟಿರುವುದಿಲ್ಲ; ಬದಲಾಗಿ, ಗ್ರಾಮೀಣ ಪ್ರದೇಶದ ರೂಢಮೂಲ ಮೌಲ್ಯಗಳು ಕರಗುತ್ತಿವೆಯೆಂಬ ಕೊರಗಿನಿಂದ ಹುಟ್ಟಿದ ವಿಷಾದವಾಗಿರುತ್ತದೆ. ಇಂಥ ವಿಷಾದದಲ್ಲಿ ಹಳಹಳಿಕೆಯ ಭಾವವೇ ಪ್ರಧಾನವಾಗಿರುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಊಳಿಗಮಾನ್ಯ ಪದ್ಧತಿಯ ಪ್ರಾದೇಶಿಕ ಕಟ್ಟಡ ಕುಸಿಯುತ್ತಿದೆಯೆಂದೂ 'ಸಮೃದ್ಧಿ'ಯು ಸೊರಗಿ ಸೋರಿಹೋಗುತ್ತಿದೆ ಎಂದೂ ಸಂಕಟಪಡುವ ಪ್ರವೃತ್ತಿಯು ಹಳಹಳಿಕೆಯ ಅಂತರ್ಗತ ಅನುಭವವಾಗಿರುತ್ತದೆ. ಎಪ್ಪತ್ತರ ದಶಕದಿಂದ ಗ್ರಾಮೀಣ ಪ್ರಾದೇಶಿಕ ಬದುಕನ್ನು ಕಂಡುಕೊಳ್ಳುವ ಕ್ರಮ ಬದಲಾಗಿದೆ; ಬದಲಾಗುತ್ತಿರುವ ಗ್ರಾಮೀಣ ಬದುಕನ್ನು ಸಾಮಾಜಿಕ ನೆಲೆಗಳ ಮೂಲಕ ಪರಿಶೀಲಿಸುವ ಕ್ರಮದ ಜೊತೆಗೆ 'ಸಮೃದ್ಧಿ'ಯ ಕಲ್ಪ ನೆಯೇ ಹುಸಿಯೆಂದು ಅನಾವರಣಗೊಳಿಸುವ ಆಯಾಮವೊಂದು ಕನ್ನಡ ಕಥನ ಲೋಕಕ್ಕೆ ಲಭ್ಯವಾಗಿದೆ.

ಊಳಿಗಮಾನ್ಯ ಗ್ರಾಮೀಣ ವ್ಯವಸ್ಥೆಯೊಳಗಿನ ವೈರುಧ್ಯ ಮತ್ತು ವಿವಿಧ ಸಾಮಾಜಿಕ ಸಮುದಾಯಗಳ ಬದುಕಿನ ಚಹರೆಗಳನ್ನು ದಾಖಲಿಸುತ್ತಲೇ ಮುಖಾಮುಖಿಯಾಗುವ ಮನೋಧರ್ಮವೊಂದನ್ನು ಇಂತಹ ಕಥನಗಳಲ್ಲಿ ಕಾಣಬಹುದು. ಪ್ರಜಾಸತ್ತಾತ್ಮಕ ಸಮಾಜವೊಂದರಲ್ಲಿ ನಡೆಯುತ್ತಿರುವ ಸ್ಥಿತ್ಯಂತರದ ಸಂಕಟಗಳನ್ನು, ಅಲ್ಲಿಯವರೆಗೆ ಅಜ್ಞಾತವಾಗಿದ್ದ ಸಮುದಾಯಗಳ ಬದುಕಿನ ಮೂಲಕ ಪರಿಶೀಲಿಸುವ ಪ್ರತಿಭಟನಾ ಪ್ರತೀಕಗಳನ್ನೂ ಕಾಣಬಹುದು. ಈ ಮಾದರಿಯ ರಚನೆಗಳಲ್ಲಿ ಚಲನಶೀಲತೆಯ ಒರತೆ ಉಕ್ಕುವುದುಂಟು. ಈ ಒರತೆಯನ್ನು ಕೃತಿಕಾರರು ತಂತಮ್ಮ ಬೊಗಸೆಯಲ್ಲಿ ಎಷ್ಟೆಷ್ಟು ಮತ್ತು ಹೇಗೆ ಹೇಗೆ ತುಂಬಿಕೊಳ್ಳುತ್ತಾರೆಂಬ ಆಧಾರದಲ್ಲಿ ಕೃತಿಯ ವಸ್ತು ವಿನ್ಯಾಸಗಳು ಕಟ್ಟಿಕೊಳ್ಳುತ್ತವೆ. ಬದಲಾವಣೆಯ ಬೊಗಸೆಯನ್ನು ತನ್ನದಾಗಿಸಿಕೊಳ್ಳುವ ವಿಧಾನದಲ್ಲೇ ನೆಲೆ-ನಿಲುವುಗಳು ರೂಪುಗೊಳ್ಳುತ್ತವೆ; ಸಮಕಾಲೀನವಾಗುತ್ತವೆ. ಲೋಕೇಶ ಅಗಸನಕಟ್ಟೆಯವರ ಕಾದಂಬರಿಯು ಬದಲಾಗುತ್ತಿರುವ ಗ್ರಾಮೀಣ ಬದುಕಿನ ರೂಪಕಾತಕ ಸಿತ ಂತರಗಳನ್ನು ತೆರೆಯುತ ಹೋಗುತ್ತಿರುವ ಕಾರಣದಿಂದ ಹೆಚ್ಚು ಸಮಕಾಲೀನವೂ, ಸಾಮುದಾಯಿಕವೂ ಆಗುತ್ತದೆ. ಸಾಮುದಾಯಿಕವಾಗುವುದಕ್ಕೆ ಪೂರಕವಾದ ವಿವಿಧ ಸಮುದಾಯಗಳ ಪ್ರಾತಿನಿಧಿಕ ಪಾತ್ರಗಳನ್ನು ಕಾದಂಬರಿಯ ತುಂಬ ಕಾಣಬಹುದಾಗಿದೆ.

ಇಲ್ಲಿ ಬರುವ ಪ್ರಮುಖ ಪಾತ್ರಗಳು ತಂತಮ್ಮ ಜನಮೂಲ ಸಮುದಾಯದ ಪ್ರತಿನಿಧಿಗಳೂ ಆಗುವುದೊಂದು ವಿಶೇಷ. ಬಹುಪಾಲು ಪಾತ್ರಗಳು ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಸಿದ್ಧ ಬದುಕಿನ ಬಂಧದಿಂದ ಬಿಡುಗಡೆಗೊಳ್ಳುತ್ತ ಬೆಳೆಯುವಲ್ಲಿ ಕಾದಂಬರಿಯ ಬೆಳಕಿನ ಹಾದಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಪ್ರತಿ ಪ್ರಧಾನ ಪಾತ್ರವೂ ತನ್ನನ್ನು ತಾನು ಮೀರುವ ಮನೋಧರ್ಮದಿಂದ ಸಾಮಾಜಿಕ ಸ್ಥಿತ್ಯಂತರದ ಸಂಕೇತವಾಗುತ್ತದೆ. ಇಂತಹ ಪಾತ್ರಗಳ ಮೂಲಕ ಅನಾವರಣಗೊಳ್ಳುವ ವ್ಯಕ್ತಿತ್ವ ಕೂಡ ಜೀವನ ವಿಧಾನವೊಂದರ ತಿನ ಪ್ರತೀಕವಾಗುವುದರಿಂದ ಇಡೀ ಕಾದಂಬರಿಯು ಬಹುಮುಖೀ ಬದುಕನ್ನು ಸಮರ್ಥವಾಗಿ ನಿರೂಪಿಸುವ ಸಾರ್ಥಕತೆಗೆ ಪಾತ್ರವಾಗುತ್ತದೆ. ಈ ಬಹುಮುಖೀ ಬದುಕಿನ ರೂಪಿಕೆಗಳಲ್ಲಿ ವೈರುಧ್ಯ, ವೈವಿಧ್ಯ, ವೈಷಮ್ಯ, ಸಂತೋಷ, ಸಂಕಟ - ಎಲ್ಲವೂ ಆಯಾಯ ಸನ್ನಿವೇಶದ ಜೀವಜಲವಾಗಿ ಹೊಮ್ಮುತ್ತವೆ; ಚಿಮ್ಮುತ್ತವೆ; ಹರಿಯುತ್ತವೆ; ಉರಿಯುತ್ತವೆ; ಹರಿಯುತ್ತ ಉರಿಯುತ್ತ, ಅರಿವಾಗಿಯೂ ರೂಪಾಂತರಗೊಳ್ಳುತ್ತವೆ.

ಈ ರೂಪಾಂತರ ಪ್ರಕ್ರಿಯೆಯನ್ನು ಡಾ. ಲೋಕೇಶ ಅಗಸನಕಟ್ಟೆ ನಿರುದ್ವಿಗ್ನ ನಿರೂಪಣೆಯ ಮೂಲಕ ಅನುಭವಾತಕಗೊಳಿಸಿದ್ದಾರೆ. ಸ್ಥಿತ್ಯಂತರ ಮತ್ತು ರೂಪಾಂತರ ಪ್ರಕ್ರಿಯೆಗಳನ್ನು ಗ್ರಹಿಸುವ ವಿಧಾನ ಒಂದೇ ರೀತಿಯಾಗಿರುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಹೊರಬೀಳುವ ಸಾಮಾಜಿಕ ಸತ್ಯಗಳನ್ನು ತಮ್ಮವಾಗಿಯೇ ಅನುಭವಿಸುವ ಸಂಕಟಾತ್ಮಕ ಸಮುದಾಯಗಳ ಸಂವೇದನೆಯ ತೀವ್ರತೆಗೂ ಮಾನಸಿಕ ದೂರವನ್ನು ಕಾಪಿಟ್ಟುಕೊಂಡ ಕಣೋಟದ ಕ್ರಮಕ್ಕೂ ವ್ಯತ್ಯಾಸವಿರುತ್ತದೆ. ಹೀಗಾಗಿ ಅಭಿವ್ಯಕ್ತಿ ಕ್ರಮದಲ್ಲೂ ಈ ವ್ಯತ್ಯಾಸ ಗೋಚರಿಸುತ್ತದೆ. ಅಭಿವ್ಯಕ್ತಿಸುವ ವ್ಯಕ್ತಿಗಳು ನಿಂತ ನೆಲೆಗಳನ್ನು ನಿರ್ದೆಶಿಸುತ್ತದೆ. ಇಂತಹ ಅಭಿವ್ಯಕ್ತಿ ವಿಧಾನಗಳಲ್ಲಿ ಒಂದು ಸರಿ, ಇನ್ನೊಂದು ಸರಿಯಲ್ಲ ಎಂದು ಹೇಳುವುದು ಸರಿಯಲ್ಲ. ಇದು ಅವರವರ ಗ್ರಹಿಕಾ ವಿಧಾನಕ್ಕೆ ಸಂಬಂಧಿಸಿದ ಸಂಗತಿ. ಜೊತೆಗೆ ಸಾಮಾಜಿಕ ಆರ್ಥಿಕ ಆಯಾಮಗಳ ಅನುಭವ ಸ್ತರಗಳ ಸಂಗತಿ. ಈ ಕಾದಂಬರಿಯಲ್ಲಿ ಕಾದಂಬರಿಕಾರರು ಪಾತ್ರಗಳ ಒಳಹೋಗುತ್ತಲೇ ಹೊರಬಂದು, ಮಾನಸಿಕ ದೂರದಿಂದ ನೋಡುವ ಮತ್ತು ನಿರೂಪಿಸುವ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ; ತನ್ಮೂಲಕ ವೈವಿಧ್ಯಮಯ ವ್ಯಕ್ತಿತ್ವಗಳಿಂದ ಕೂಡಿದ ಬಹುತ್ವದ ಬದುಕನ್ನು ಕಣ್ಣಲ್ಲಿ ಕಣ್ಣಿಟ್ಟು ಕಟ್ಟಿಕೊಟ್ಟಿದ್ದಾರೆ.

Related Books