ಗವಾಕ್ಷಿ ‘ಭೀಷ್ಮ ಸಾಹನಿ’ ಕಾದಂಬರಿಯ ಕನ್ನಡಾನುವಾದ ಕೃತಿಯಾಗಿದ್ದು, ಶಾರದಾ ಸ್ವಾಮಿ ಹಾಗೂ ಎಸ್.ಎಂ. ರಾಮಚಂದ್ರ ಸ್ವಾಮಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕಾದಂಬರಿಯಲ್ಲಿ ಒಂದು ಸಂಸಾರದಲ್ಲಿನ ಒಬ್ಬ ಪುಟ್ಟ ಬಾಲಕ ಇಲ್ಲಿ ಕಥೆ ಹೇಳುತ್ತಿದ್ದಾನೆ. ಅವನ ಮುಗ್ಧ ಮಾತುಗಳು ಆತ ಎಲ್ಲವನ್ನೂ ಗಮನಿಸುತ್ತಿರುವುದು ಗೊತ್ತಾಗುತ್ತದೆ. ಮನೆಯಲ್ಲಿನ ಒಂದು ಸಣ್ಣ ಸಪ್ಪಳದಿಂದ, ನಗುವಿನಿಂದ, ದೂರದ ಸದ್ದಿನಿಂದ ಈತ ಎಲ್ಲವನ್ನೂ ಅದೇನಿರಬಹುದೆಂದು ನಿಖರವಾಗಿ ಹೇಳುತ್ತಾನೆ. ಸಂಸಾರದಲ್ಲಿನ ಸಣ್ಣಪುಟ್ಟ ಬೇಸರಗಳನ್ನೂ ಧ್ವನಿಗಳಿಂದಲೇ ತಿಳಿಯಬಲ್ಲ. ಇಲ್ಲಿನ ಆಗುಹೋಗುಗಳು ವಿಶೇಷವಾದವುಗಳೇನಲ್ಲ; ಎಲ್ಲ ಸಂಸಾರಗಳಲ್ಲೂ ಇರುವಂಥವೇ. ಒಂದೇ ಸೂರಿನಡಿ ವಾಸಿಸುವ ವಿವಿಧ ಪಾತ್ರಗಳ ನಡವಳಿಕೆ ಮಾತ್ರ ವಿಭಿನ್ನ, ಆಳು-ಮಾಲಿಕ ಎಂಬ ತಾರತಮ್ಯ ಕತೆಯುದ್ದಕ್ಕೂ ಸಾಗಿ ಬಂದಿದೆ. ಸಂಘರ್ಷ-ಪ್ರೀತಿ- ಕನಿಕರ-ಬೇಸರ-ಸಂತೋಷ ಎಲ್ಲವೂ ಮೇಳೆಸಿರುವ ಸಂಸಾರದಲ್ಲಿ ಯಾವುದನ್ನೂ ಸರಿಪಡಿಸಲಾಗದ ದೌರ್ಬಲ್ಯವೊಂದು ಇಣುಕುತ್ತಲೇ ಇದೆ. ಬಾಲಕನೊಬ್ಬ ತನ್ನ ಪ್ರೌಢಾವಸ್ಥೆ ತಲುಪುವಲ್ಲಿನವರೆಗಿನ ಹಲವು ನೋಟಗಳು ಈ ಪುಸ್ತಕದಲ್ಲಿ ಲಭ್ಯವಿವೆ.