"ಎಲ್ಲರ ಬದುಕು ಒಂದು ಪ್ರಯೋಗಶಾಲೆ! ಎಷ್ಟು ಹೆಚ್ಚಿನ ಪ್ರಯೋಗಗಳನ್ನು ಮಾಡುತ್ತೇವೆಯೋ, ಅಷ್ಟು ನಮ್ಮ ಜೀವನವನ್ನು ಉತ್ತಮ ಪಡಿಸಿಕೊಳ್ಳಬಹುದು." ಅಮೆರಿಕದ ಖ್ಯಾತ ಪ್ರಬಂಧಕಾರ, ಉಪನ್ಯಾಸಕ, ತತ್ವಜ್ಞಾನಿ ಹಾಗೂ ಕವಿ 'ರಾಲ್ಫ್ ವಾಲ್ಡೋ ಎಮರ್ಸನ್' ಅವರು ತಮ್ಮ "ಸೆಲ್ಫ್- ರಿಲಯನ್ಸ್" ಎನ್ನುವ ಪ್ರಬಂಧದಲ್ಲಿ ಹೇಳುತ್ತಾರೆ. ಅವರ ಈ ಮಾತುಗಳು ಬಹಳ ಅರ್ಥಪೂರ್ಣ. ನಮ್ಮನ್ನು ನಾವು ಉನ್ನತೀಕರಿಸಿಕೊಳ್ಳಲು ಪ್ರಯತ್ನಿಸಬೇಕು. ಆಗಷ್ಟೇ ಜೀವನದ ಅನೇಕ ಮಜಲುಗಳನ್ನು ನೋಡಿ ಅರಿಯುವ ಅವಕಾಶ ಸಿಗುತ್ತದೆ. ಕಲಿಕೆ ನಿರಂತರ. ನಾವು ಹುಟ್ಟಿನಿಂದ ಸಾವಿನವರೆಗೆ ಒಂದಲ್ಲ ಒಂದು ವಿಷಯವನ್ನು ಕಲಿಯುತ್ತಲೇ ಇರುತ್ತೇವೆ. ಅದನ್ನೇ ಪ್ರಯೋಗಗಳು ಎನ್ನುವುದು. ಕಥೆಗಳನ್ನು ಬರೆಯಲು ಶುರು ಮಾಡಿದ ಮೇಲೆ, ಪ್ರತಿಯೊಂದು ಕಥೆಯನ್ನು ಬರೆಯುವ ಮೊದಲು ಆ ಕಥೆಯಲ್ಲಿನ ಸಾರಕ್ಕೆ ಬೇಕಾದ ವಿಷಯಗಳನ್ನು ಸಂಗ್ರಹಿಸುವ ಮೂಲಕ ನನ್ನ ಜ್ಞಾನದ ವ್ಯಾಪ್ತಿ, ಅನೇಕ ವಿಷಯಗಳ ವಿಸ್ತೀರ್ಣದಲ್ಲಿ ಸುತ್ತುತ್ತಿದ್ದೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ. ಇಂತಹ ಪ್ರಯೋಗದ ಫಲ ಶೋಧನೆಯೇ "ಪ್ರತ್ಯುತ್ಕ್ರಮ" -ಮೌನ ಯುದ್ಧ ಎನ್ನುವ ಕಾದಂಬರಿ. "ಪ್ರತ್ಯುತ್ಕ್ರಮ" ಎನ್ನುವುದು ಸಂಸ್ಕೃತದಿಂದ ಕನ್ನಡಕ್ಕೆ ಎರವಲು ಪಡೆದ ಪದ. ಇದರ ಅರ್ಥ "ಯುದ್ಧಕ್ಕಾಗಿ ಸಿದ್ಧತೆ ಮಾಡಿಕೊಳ್ಳುವುದು ಅಥವಾ ಯಾವುದೇ ಕಾರ್ಯ ಮಾಡುವುದಕ್ಕೆ ಸಿದ್ಧವಾಗುವುದು!" ಈ ಕಥೆಯಲ್ಲಿ ಶೀರ್ಷಿಕೆಯೇ ನಾಯಕ! ಈ ಕಥೆ ರಾಜಕೀಯ, ಅಧಿಕಾರ ಹಾಗೂ ಸಾಮಾನ್ಯ ಪ್ರಜೆಗಳ ನಡುವೆ ನಡೆಯುವ ಸಂಘರ್ಷವನ್ನು ಹೇಳುವ ಒಂದು ಪ್ರಯೋಗವಾಗಿದೆ. ಕಥೆ ಕಾನೂನು ಹಾಗೂ ಅಧಿಕಾರದ ಚೌಕಟ್ಟಿನಲ್ಲಿ ನಡೆಯುವ ವಿಷಯದ ಆಧಾರದಲ್ಲಿ ರಚನೆಯಾಗಿದೆ. ಈ ಕಥೆಯಲ್ಲಿ ಸರ್ಕಾರ, ಸಂವಿಧಾನ ಹಾಗೂ ಕಾನೂನಿನ ಅಡಿಯಲ್ಲಿ ಬರುವ ಇಲಾಖೆಗಳ ಕಾರ್ಯವೈಖರಿಯನ್ನು ತಿಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದೇನೆ. ಸರ್ಕಾರಿ ಅಧಿಕಾರಿಗಳಿಗೆ ಇರುವ ಅಧಿಕಾರ ಹಾಗೂ ಅದರ ಚೌಕಟ್ಟು, ತಿಳಿದೋ ತಿಳಿಯದೆಯೋ ಅನ್ಯಾಯಕ್ಕೆ ಒಳಗಾಗುವ ಸಾಮಾನ್ಯ ಜನರ ಅಸಹಾಯಕ ಪರಿಸ್ಥಿತಿ, ಅದೇ ಸಾಮಾನ್ಯ ಜನರು ಅನ್ಯಾಯಕ್ಕೆ ಒಳಗಾದಾಗ ತಮ್ಮ ಬುದ್ಧಿವಂತಿಕೆಯಿಂದ ಹೇಗೆ ಅನ್ಯಾಯವನ್ನು ಸರಿ ಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಾರೆ ಎನ್ನುವುದನ್ನು ಕಥೆಯ ಮೂಲಕ ಹೇಳಲು ಪುಟ್ಟ ಪ್ರಯತ್ನ ಕೂಡ ಮಾಡಿದ್ದೇನೆ. ಕಾದಂಬರಿಯ ಶೀರ್ಷಿಕೆಯೇ ಇಡೀ ಕಥೆಯ ಸಾರಾಂಶದ ಪ್ರತೀಕ! ಹಂತ ಹಂತವಾಗಿ ಕಾದಂಬರಿಯಲ್ಲಿನ ಮುಖ್ಯ ಕಾರಣ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತದೆ. ಶೀರ್ಷಿಕೆ ಹೇಳುವಂತೆ, ಕಾದಂಬರಿಯಲ್ಲಿ ಬರುವ ಒಂದೋ, ಎರಡೋ ಅಥವಾ ಬಹುತೇಕ ಪಾತ್ರಗಳು ಯುದ್ಧದ ಸಿದ್ಧತೆಯಲ್ಲಿ ತೊಡಗುತ್ತವೆ. ಯಾರು ಯಾರ ಮೇಲೆ ಯುದ್ಧ ಸಾರಿದ್ದಾರೆ, ಯಾರು ಯಾವ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ ಎನ್ನುವುದು ಓದುಗರ ತರ್ಕಕ್ಕೆ ಬಿಟ್ಟಿದ್ದು. ಓದುವ ಸಂಭ್ರಮ ನಿಮ್ಮದಾಗಲಿ .
"ಶ್ರೀರಾಜರಾಜೇಶ್ವರಿ" ಎನ್ನುವ ಹೆಸರಿನಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ಇವರ ನಿಜನಾಮಧೇಯ ರಮ್ಯ ಎಸ್. ವೃತ್ತಿಯಲ್ಲಿ ಶಿಕ್ಷಕಿ ಮತ್ತು ಆಪ್ತ ಸಮಾಲೋಚಕಿಯಾಗಿರುವ ಇವರು ಪ್ರವೃತ್ತಿಯಲ್ಲಿ ಬರಹಗಾರ್ತಿ. ಸಕ್ಕರೆ ನಾಡು ಎಂದೇ ಪ್ರಸಿದ್ಧವಾಗಿರುವ ಮಂಡ್ಯ ತಾಲ್ಲೂಕಿನ ದ್ಯಾಪಸಂದ್ರ ಎನ್ನುವ ಗ್ರಾಮದವರಾದ ರಮ್ಯ, ಪದವಿ ಶಿಕ್ಷಣದ ವರೆಗೆ ಕಲಿತದ್ದು ಮಂಡ್ಯದ ಜನತಾ ಶಿಕ್ಷಣ ಸಂಸ್ಥೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಜೈವಿಕ ತಂತ್ರಜ್ಞಾನ, ಶಿಕ್ಷಣ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತ್ತಕೋತ್ತರ ಶಿಕ್ಷಣ ಪಡೆದಿರುವ ಇವರಿಗೆ ಓದು ಮತ್ತು ಬರವಣಿಗೆ ನೆಚ್ಚಿನ ಹವ್ಯಾಸ. ಪದವಿಪೂರ್ವ ಶಿಕ್ಷಣದ ಸಮಯದಲ್ಲಿ ಪತ್ರಿಕೆಗಳಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ವಿಭಾಗಕ್ಕೆ ...
READ MORE