‘ಎಂದೂ ಹುಟ್ಟದ ಮಗುವಿಗೆ ಪತ್ರ’ ಇದು ಇಟಾಲಿಯನ್ ಕಾದಂಬರಿಗಾರ್ತಿ ಮತ್ತು ಪತ್ರಕರ್ತೆ ಒರಿಯಾನ ಫಲಾಚಿಯವರ ಪ್ರಚೋದನಾಕಾರಿಯಾದ ಕಾದಂಬರಿಯಾಗಿದೆ. ಇದನ್ನು ಕನ್ನಡಕ್ಕೆ ಸುಧಾ ಆಡುಕಳ ಅವರು ಅನುವಾದಿಸಿದ್ದಾರೆ. ಜೀವವೊಂದನ್ನು ಭೂಮಿಗೆ ತರಬೇಕೆ ಅಥವಾ ಬೇಡವೇ ಎಂಬ ಪ್ರಪಂಚದಷ್ಟೇ ಹಳೆಯದಾದ ಪ್ರಶ್ನೆಯ ಕುರಿತು ಈ ಕಾದಂಬರಿಯು ಚರ್ಚಿಸುತ್ತದೆ. ಕಾದಂಬರಿಯಲ್ಲಿ ಹೆಣ್ಣೊಬ್ಬಳು ತಾನು ಗರ್ಭಿಣಿಯೆಂದು ತಿಳಿದ ಕ್ಷಣದಿಂದ ತನ್ನ ಸ್ವಗತವನ್ನು ಪ್ರಾರಂಭಿಸುತ್ತಾಳೆ. ಅವಿವಾಹಿತ ಯುವತಿಯೊಬ್ಬಳು ಅನಿರೀಕ್ಷಿತವಾಗಿ ತಾಯಾಗುವ ಸಂದರ್ಭ ಬಂದಾಗ ಅವಳ ಮನೋಲೋಕದಲ್ಲಿ ಉಂಟಾದ ಭಾವುಕತೆ, ಸಂದಿಗ್ಧತೆ ಇದರಿಂದ ಅವಳ ದೇಹಸ್ಥಿತಿಯಲ್ಲಾಗುವ ಏರುಪೇರುಗಳು ತಾಯಿ ಮಗುವಿನೊಂದಿಗೆ ಮಾತನಾಡುತ್ತಿರುವ ರೀತಿಯಲ್ಲಿ ನಿರೂಪಿಸಲ್ಪಟ್ಟಿದೆ. ಪ್ರತಿ ತಾಯಿಯೂ ಈ ಕೃತಿ ಓದುವಾಗ ಮತ್ತೊಮ್ಮೆ ತನ್ನ ಗರ್ಭಧಾರಣೆಯ ಮೊದಲ ದಿನಗಳಿಗೆ ಮರಳಿ ತನ್ನೆಲ್ಲಾ ನೆನಪುಗಳನ್ನು ಸವಿಯುತ್ತಾಳೆ. ಆರಂಭದಲ್ಲಿ ಸಮಾಜದ ವ್ಯಂಗ್ಯ, ತನ್ನ ವೈಯಕ್ತಿಕ ವೃತ್ತ, ಸುಖ ಎಲ್ಲವನ್ನೂ ಕಡೆಗಣಿಸಿ ಮಗುವಿಗೆಜನ್ಮ ನೀಡಲೇಬೇಕೆಂದು ನಿರ್ಧರಿಸುತ್ತಾಳೆ. ಆದರೆ ಆ ನಿರ್ಧಾರವನ್ನು ಅವಳ ಭವಿಷ್ಯದ ಕನಸುಗಳು ಮನ್ನಿಸುವುದಿಲ್ಲ. ಅವಳ ಸಂಗಾತಿ ಅಂದರೆ ಮಗುವಿನ ತಂದೆ ಕೂಡ ಆ ಮಗು ಭೂಮಿಗೆ ಬರುವುದರ ಬಗ್ಗೆ ಮೊದಲು ಅಸಮಾಧಾನ ವ್ಯಕ್ತಪಡಿಸಿದ್ದು ಅವಳೊಳಗೆ ಅನೇಕ ತುಮಲಗಳನ್ನು ಹುಟ್ಟುಹಾಕುತ್ತದೆ. ಅವಳು ತನ್ನ ವೃತ್ತಿ ಬದುಕಿನಿಂದ ವಿಮುಖಳಾಗಬೇಕಾಗುತ್ತದೆ ಎಂಬುದನ್ನು ಒಪ್ಪಿಕೊಳ್ಳಲು ಅವಳಿಗೆ ಸಾಧ್ಯವಾಗುವುದಿಲ್ಲ. ವೈದ್ಯರು ಮಗುವಿನ ಉಳಿವಿಗಾಗಿ ಅವಳು ಹಾಸಿಗೆಯಲ್ಲಿಯೇ ಇರಬೇಕೆಂದು ಸಲಹೆ ನೀಡಿದಾಗ ಅವಳು ಇನ್ನೂ ಮನುಷ್ಯ ರೂಪ ಪಡೆಯದ ಆ ಭ್ರೂಣಕ್ಕಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಬದುಕಬೇಕ ಎಂಬ ಪ್ರಶ್ನೆ ಆಗಾಗ ಅವಳನ್ನು ಕಾಡಲಾರಂಭಿಸುತ್ತದೆ. ಆ ಮಗು ಜನಿಸಲು ಸಾಧ್ಯವಿಲ್ಲ ಅಂದುಕೊಳ್ಳುತ್ತಿರುವಾಗಲೇ ಗರ್ಭದಲ್ಲಿ ಅದರ ಚಲನೆ ನೀಡುವ ಮಧುರ ಅನುಭೂತಿಯನ್ನು ಅನುಭವಿಸಿ, ಮಗುವಿನ ಮೋಹಕ್ಕೆ ಒಳಗಾಗುತ್ತಾಳೆ.ತಾಯ್ತನದ ಅನನ್ಯತೆಯನ್ನು ಒಪ್ಪಿಕೊಳ್ಳುತ್ತಲೇ ಅದರಿಂದ ತಾಯಿಯೊಬ್ಬಳು ವಂಚಿತವಾಗುವ ತಿರುವೊಂದನ್ನು ಕಾದಂಬರಿ ಪಡೆದುಕೊಳ್ಳುತ್ತದೆ.
ಸುಧಾ ಆಡುಕಳ ಅವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳ ಗ್ರಾಮದವರಾದ ಶ್ರೀಮತಿ ಸುಧಾ ಆಡುಕಳ ಅವರು ಪ್ರಸ್ತುತ ಉಡುಪಿಯ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ರಾಧಾ, ನೃತ್ಯಗಾಥಾ, ಆನಂದಭಾವಿನಿ, ಮಾಧವಿ ಮೊದಲಾದ ಏಕವ್ಯಕ್ತಿ ನಾಟಕಗಳನ್ನು, ಮಕ್ಕಳ ರವೀಂದ್ರ, ಕನಕ-ಕೃಷ್ಣ, ಮಕ್ಕಳ ರಾಮಾಯಣ, ಬ್ರಹ್ಮರಾಕ್ಷಸ ಮತ್ತು ಕಥೆ, ಮರ ಮತ್ತು ಮನುಷ್ಯ ಮೊದಲಾದ ಮಕ್ಕಳ ನಾಟಕಗಳನ್ನು ರಚಿಸಿರುತ್ತಾರೆ. ರವೀಂದ್ರನಾಥ ಟ್ಯಾಗೋರರ ಕೆಂಪು ಕಣಗಿಲೆ, ಚಿತ್ರಾ ಮತ್ತು ಅವಳ ಕಾಗದ ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಇವರ ‘ಬಕುಲದ ಬಾಗಿಲಿನಿಂದ’ ಕೃತಿಗೆ ರಾಜ್ಯಸಾಹಿತ್ಯ ಅಕಾಡೆಮಿ ಬಹುಮಾನ ...
READ MORE