ʻಇಳೆಯ ಮೇಲಿನ ನಕ್ಷತ್ರʼ-ಎಂಬುದು ಸಂಕಲ್ಪ (ಡಿ. ಓ. ಸದಾಶಿವ) ಅವರು ರಚಿಸಿದ ಕಾದಂಬರಿ. ಕೃತಿ ಶೀರ್ಷಿಕೆಯ ಹೆಸರಿನಲ್ಲೇ ಮಿನುಗಿದೆ, ಬೆಳಕಿದೆ. ಕತ್ತಲನ್ನು ಹೊಡೆದೋಡಿಸುವ ಸಂಕಲ್ಪವಿದೆ. ತನ್ನವರಲ್ಲಿಯ ಒಡಕು ಮುಚ್ಚಿ ಮರ್ಯಾದೆಯನ್ನು ಕಾಪಾಡಲು ನಿರಂತರ ಯತ್ನಿಸುವ ಕರುಣಾಮಯಿ ಅರುಂಧತಿಯ ಪಾತ್ರವು ಕಾದಂಬರಿಯ ತುಂಬಾ ಆವರಿಸಿಕೊಂಡಿದೆ. ಕುಟುಂಬಗಳಲ್ಲಿ ಸಾಮರಸ್ಯ ತರಲು ತನ್ನನ್ನು ತಾನು ತೇಯ್ದುಕೊಂಡು ಪರಿಮಳ ಸೂಸುವ ಗಂಧದಂತೆ ಅವಳ ಪಾತ್ರ. ಇಲ್ಲಿ ಬರುವ ಎಲ್ಲ ಪಾತ್ರಗಳ ಹೆಸರುಗಳು; ಜ್ಯೇಷ್ಠ, ಪುನರ್ವಸು, ಅರುಂಧತಿ, ಶ್ರವಣ, ರೋಹಿಣಿ, ಪೂರ್ವಪಲ್ಗಣಿ. ಶತತಾರ, ಮೃಗಶಿರ ಹೀಗೆ ಎಲ್ಲವೂ ನಭದಲ್ಲಿ ಮಿನುಗುವ ನಕ್ಷತ್ರಗಳೇ ಆಗಿವೆ. ಲೇಖಕರು ತಾವು ಸೃಷ್ಟಿಸಿದ ಪಾತ್ರಗಳಿಗೆ ನಕ್ಷತ್ರಗಳ ಹೆಸರನ್ನೇ ನೀಡಿ, ಮನುಷ್ಯನೂ ಕತ್ತಲಂತಾಗದೆ ನಕ್ಷತ್ರಗಳಂತೆ ಮಿನುಗಿ ಬೆಳಕಾಗಲಿ ಎಂಬ ಸಂದೇಶ ಸಾರ ಹೊರಟಂತಿದೆ. ಲೇಖಕರಿಗೆ ಭಾಷೆಯ ಮೇಲೆ ಹಿಡಿತವಿದೆ. ನಿರೂಪಣಾ ಶೈಲಿಯೂ ಗೊತ್ತಿದೆ. ಓದುಗರ ಮನಮಿಡಿಯುವಂತೆ ಕಥೆಯನ್ನು ಕಟ್ಟುವ ಕಲೆಯೂ ಕರಗತವಾಗುತ್ತದೆ ಎಂದು ಕಥೆಗಾರ ಡಾ. ಬಿ. ಎಲ್. ವೇಣು ಪ್ರಶಂಸಿಸಿದ್ದಾರೆ.
`ಸಂಕಲ್ಪ' ಕಾವ್ಯನಾಮದ ಮೂಲಕ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಡಿ.ಓ ಸದಾಶಿವ ಅವರು ಜನಿಸಿದ್ದು 1986 ಜನವರಿ 14ರಂದು. ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕಿನ ದೇವಿಗೆರೆಯವರು. ತಾಯಿ ಪಾರ್ವತಮ್ಮ. ತಂದೆ ಓಂಕಾರಪ್ಪ. ಹುಟ್ಟೂರಾದ ಕಂಗುವಳ್ಳಿಯಲ್ಲಿ ಪ್ರೌಢ ಶಿಕ್ಷಣ ಪಡೆದರು. ಹೊಸದುರ್ಗ ಸರ್ಕಾರಿ ಪದವಿ ಕಾಲೇಜಿನಿಂದ ಕಾಮರ್ಸ್ ವಿಷಯದಲ್ಲಿ ಹಾಗೂ ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಹೊಸದುರ್ಗ ಪದವಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಅಲಂಕಾರ-ಇವರ ಮೊದಲ ಕವನ ಸಂಕಲನ. ...
READ MORE