‘ಸ್ವರ್ಣ ಸಂಪಿಗೆ’ ಕೃತಿಯು ಜಿ.ಆರ್. ಪರಿಮಳಾರಾವ್ ಅವರ ಜಪಾನಿನ ಮಾದರಿ ಹೈಕುಗಳಾಗಿವೆ. ಕೃತಿಗೆ ಮುನ್ನುಡಿ ಬರೆದಿರುವ ದೊಡ್ಡರಂಗೇಗೌಡ ಅವರು, ಸ್ವರ್ಣ ಸಂಪಿಗೆ ಸಂಕಲನದಲ್ಲಿ ಸಾವಿರದ ಶಬ್ಧ ಚಿತ್ರಗಳಿವೆ. ಪದಮೈತ್ರಿ ಲಾಲಿತ್ಯಪೂರ್ಣ; ತಮ್ಮ ಬಾಳಿನ ರಂಗಿನ ಅನುಭಗಳಿಗೆ ಪದ ಪದದಲ್ಲೂ ಬಣ್ಣ ತುಂಬಿ ತಾನು ‘ನುಡಿ ಚಿತ್ರ’ ಬಿಡಿಸುವಲ್ಲೂ ‘ಸೈ’ ಎನ್ನಿಸಿಕೊಳ್ಳುತ್ತಾರೆ ಕವಯಿತ್ರಿ ಪರಿಮಳಾರಾವ್ ಅವರು, ಇದು ವಾಸ್ತವವಾಗಿ ಕಡಿಮೆ ಸಾಧನೆಯೇನಲ್ಲ! ‘ ಶೂನ್ಯಗಳ ಸನ್ನೆಯಲಿ ಕಂಡುಕೋ ನಿನ್ನ ನನ್ನಿಯ ಅರಿವು.. ..ನಡೆಸುವುದು ಮುನ್ನ’ ಎಂಬಲ್ಲಿ ಕಾಣುವ ಕವಯಿತ್ರಿಯ ಆತ್ಮಶೋಧ ಮೆಚ್ಚಬೇಕಾದದ್ದು ಎಂದಿದ್ದಾರೆ. ಕೃತಿಗೆ ಬೆನ್ನುಡಿ ಬರೆದಿರುವ ಅನುಸೂಯಾ ದೇವಿ ಅವರು, ಬದುಕಿನ ಸೂಕ್ಷ್ಮ ಸಂಗತಿಗಳನ್ನು ತಮ್ಮ ಕವಿತಾ ಕ್ಯಾಮರಾಗಳಿಂದ ಸೆರೆಹಿಡಿಯುವ ಪರಿಮಳಾರಾವ್ ಅವರಿಗೆ ಮಾತನ್ನು ಮಿತವಾಗಿ ಬಳಸಿ ಹಿತವಾದ, ಹಿರಿದಾದ, ಅರ್ಥ ಕೊಡುವ ಚಮತ್ಕಾರಿಕೆ ಚೆನ್ನಾಗಿ ಸಿದ್ದಿಸಿದೆ. ವರಕವಿ ಬೇಂದ್ರೆಯವರ ಎದೆಯೊಳಗಿದ್ದರೆ ಹದ, ಬಂದೀತು ನಾಲಿಗೆಗೆ ಪದ’ ಎಂಬ ಸಾಲು ಇವರ ಕಾವ್ಯ ಕಲೆಗೆ ಅನ್ವಯವಾಗುತ್ತದೆ. ಅವರ ಹೈಕುಗಳಿಗೆ ಅವರದೇ ಆದ ಛಾಪು ಇದೆ. ಎಲ್ಲ ಸುಲಭಗ್ರಾಹ್ಯ. ಆದರೆ ಒಳಗಿನ ತಿರುಳು ರಸಪೂರ್ಣ, ಸತ್ವ ತತ್ವಗಳಲ್ಲಿ ಬೀಗಿ ನಡೆಯುವ ಬಳಕು. ಪಂಪ ಮಹಾಕವಿಯಂತೆ ಈಕೆಯು ‘ಹಿತ ಮಿತ ಮೃದುವಚನ’ ಳೇ! ಸಣ್ಣ ಮಾತಿನಲ್ಲಿ ಬಣ್ಣಬಣ್ಣದ ಸತ್ಯ ದರ್ಶನ ಮಾಡಿಸುವಾಕೆ. ‘ಸ್ವರ್ಣ ಸಂಪಿಗೆ’ ಅವರ ಕಲ್ಪನಾ ವಿಲಾಸಕ್ಕೆ ಚಿತ್ತ ಲಹರಿಯ ಚಿತ್ತ ಚಿತ್ತರಗಳಿಗೆ ಚಿಂತನ ಶಕ್ತಿ ಚಿತ್ರಕ ಶಕ್ತಿಗಳನ್ನು ಸುಮನ ಸುಗಂಧಗಳಂತೆ ಎರಡಿಲ್ಲದೆ ಒಂದಾಗಿ ಬೆರೆಸುವ ಬೆರಗಿನ ಮೋಡಿಗೆ ಸಾಕ್ಷಿಯಾಗಿದೆ. ಜಪಾನಿನ ಹೈಕು ಮಾದರಿಯನ್ನು ಇಷ್ಟು ಚೆನ್ನಾಗಿ ಒಗ್ಗಿಸಿಕೊಂಡ ಕವಿಗಳು ಅಪರೂಪ ಎಂದಿದ್ದಾರೆ.
ಹನಿಗವನಗಳ ರಚನೆಯಲ್ಲಿ ಆಸಕ್ತಿಯುಳ್ಳ ಪರಿಮಳಾರಾವ್ ಜಿ. ಆರ್. ತಮ್ಮ ದಿನನಿತ್ಯದ ಅನುಭವಗಳ ಮನಸ್ಸಿನ ಮಾತುಗಳನ್ನು ಹನಿಗವನಗಳಿಗೆ ಇಳಿಸುತ್ತಾರೆ. 1941 ಜನವರಿ 06 ರಂದು ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಜನಿಸಿದರು. ’ಮಂದಾರ ಮಾಲಿನಿ’ ಅವರ ಕವನ ಸಂಕಲನ. ’ಬರ್ಥ್ ಆಫ್ ಹೋಪ್, ಅಲೆಯ ಆಲಾಪ, ಅಂತರಂಗಯಾನ, ಸ್ವರ್ಣ ಸಂಪಿಗೆ’ ಹೈಕುಗಳ ಕೃತಿ. ’ಮಿನುಗು ದೀಪ ಹನಿಗವನಗಳು, ಋತುಗಾನ’ ಅವರ ಮತ್ತಿತರ ಕೃತಿಗಳು. ‘ಸ್ಪಿಂಗ್ ಅವಾರ್ಡ್, ಸರ್ ಎಮ್. ವಿಶ್ವೇಶ್ವರಯ್ಯ ಪ್ರತಿಷ್ಠಾನದಿಂದ ಕಾವ್ಯಶ್ರೀ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಗಾರ್ಡನ್ ಆಫ್ ಪೊಯಟ್’ ಮುಂತಾದ ಗೌರವ ಪುರಸ್ಕಾರಗಳು ಸಂದಿವೆ. ...
READ MORE