‘ಸುಡುಹಗಲ ಸೊಲ್ಲು’ ಸರ್ಜಾಶಂಕರ ಹರಳಿಮಠ ಅವರ ಆಯ್ದ ಲೇಖನಗಳ ಸಂಕಲನ. ಈ ಕೃತಿಗೆ ನಟರಾಜ್ ಹುಳಿಯಾರ್ ಅವರ ಬೆನ್ನುಡಿ ಬರಹವಿದೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ಹಲವು ವರ್ಷಗಳಿಂದ ನೀವು ನಿಮ್ಮ ಬರಹಗಳನ್ನು ಸಾಮಾಜಿಕ ಬದಲಾವಣೆಯ ಮುಖ್ಯ ಸಾಧನವಾಗಿ ರೂಪಿಸುತ್ತಿರುವುದನ್ನು ಗಮನಿಸುತ್ತಾ ಬಂದಿರುವೆ. ನಿಮ್ಮ ಬರಹ ಹಾಗೂ ಕ್ರಿಯೆಗಳ ನಿಲುವು, ಕಾಳಜಿ ಹಾಗೂ ನೀವು ಸೂಚಿಸುವ ಸಾಮಾಜಿಕ ಪರಿಹಾರಗಳನ್ನು ಹಲವು ಸಲ ಒಪ್ಪಿರುವೆ: ಜೊತೆಗೆ ನಿಮ್ಮ ಮಾರ್ಗಗಳ ಬಗ್ಗೆ ಒಪ್ಪಿಗೆ ಅಥವಾ ಭಿನ್ನಮತ ತೋರುತ್ತಲೇ ನಿಮ್ಮ ನಿಜವಾದ ತಲ್ಲಣಗಳನ್ನು ಅರಿಯಲೆತ್ನಿಸಿರುವೆ’ ಎನ್ನುತ್ತಾರೆ ನಟರಾಜ ಹುಳಿಯಾರ್. ಜೊತೆಗೆ ‘ಸಾಮಾಜಿಕ ಸ್ಥಿತಿಯನ್ನು ಅರಿಯುವ ಹಾಗೂ ಇದನ್ನು ಒಂದಿಷ್ಟಾದರೂ ಬದಲಾಯಿಸುವ ದಾರಿಗಳ ಹುಡುಕಾಟವೇ ನನ್ನ ಸಾಹಿತ್ಯದ ಮೂಲಧಾತು’ ಎಂಬ ಖಚಿತ ನಿಲುವಿನಿಂದ ಹೊರಟಿರುವ ನಿಮಗೆ ನಿಮ್ಮ ಗುರಿಗಳ ಬಗ್ಗೆ ಸ್ಪಷ್ಟತೆಯಿದೆ: ಆದರೆ ದಾರಿಗಳ ವಿಚಾರದಲ್ಲಿ ಅಸ್ಪಷ್ಟತೆಯಿದೆ. ಅದು ಈ ಕಾಲದ ಅನೇಕ ಸೂಕ್ಷ್ಮಜ್ಞರ ನಿಜವಾದ ಗೊಂದಲ ಕೂಡ ಇರಬಹುದು. ಗಾಂಧಿ, ಮಾರ್ಕ್ಸ್ ಹಾಗೂ ನಮ್ಮ ಕಾಲದ ಲಂಕೇಶ್, ಮೇಧಾಪಾಟ್ಕರ್, ಅರುಂಧತಿರಾಯ್ ಹುಡುಕುವ ಮಾರ್ಗಗಳು, ದಂಗೆಗಳು, ಜಾತ್ಯಾತೀತ ಹೋರಾಟಗಳು..ಇವೆಲ್ಲದರ ನಡುವೆ ಹೊಯ್ದಾಡುವ ನಿಮ್ಮ ಕಾಳಜಿಯ ಮನಸ್ಸು ಯಾವುದು ನಿಜವಾದ ವಿಮೋಚನೆಯ ಮಾರ್ಗ ಎಂಬುದನ್ನು ಸುಲಭವಾಗಿ ನಿರ್ಧರಿಸಲಾಗದೆ ನಿಜವಾದ ಬಿಕ್ಕಟ್ಟನ್ನು ಎದುರಿಸುತ್ತಿದೆ. ನೀವು ದಿನನಿತ್ಯ ಕಾಣುವ ಭಾರತದ ಭೀಕರ ವಾಸ್ತವಗಳು, ಹೃದಯಹೀನ ರಾಜಕಾರಣಿಗಳು, ಕ್ರೂರ ಅಧಿಕಾರಿಗಳು, ಅಭಿವೃದ್ಧಿ ಯೋಜನೆಗಳ ನಿರ್ದಯ ತರ್ಕಗಳು ಈ ವಿಮೋಚನೆಯ ಮಾರ್ಗಗಳನ್ನು ಮತ್ತೆ ಮತ್ತೆ ಪರೀಕ್ಷಿಸಿಕೊಳ್ಳುವಂತೆ ಮಾಡುತ್ತವೆ. ನಿಮ್ಮ ಕ್ರಿಯಾಶೀಲ ಚಟುವಟಿಕೆಗಳ ಭಾಗವಾದ ನೇರ ವಿಶ್ಲೇಷಣೆಗಳ ಜೊತೆಗೆ ಲೋಕದ ಸಂಕೀರ್ಣ ಮುಖಗಳನ್ನು ಮುಟ್ಟಲು ಕತೆಗಳನ್ನು ಕೂಡ ಬರೆಯುವ ನಿಮಗೆ ಸದಾ ಎದುರಾಗುವ ಬಿಕ್ಕಟ್ಟು ಹಾಗೂ ಗೊಂದಲಗಳೇ ಆಳವಾದ ಸತ್ಯಗಳನ್ನು ಹುಡುಕುವಂತೆ ನಿಮ್ಮನ್ನು ಒತ್ತಾಯಿಸಬಲ್ಲವು. ಈ ಪ್ರಾಮಾಣಿಕ ಹುಡುಕಾಟವೇ ಯಾಂತ್ರಿಕ ಪ್ರಗತಿಪರ ನುಡಿಗಟ್ಟಿನ ಜಡತೆಯನ್ನು ಒಡೆದು ಹೊಸ ಭಾಷೆಯನ್ನು, ಹೊಸ ಬಗೆಯ ಕ್ರಿಯೆಗಳನ್ನು ರೂಪಿಸುವ ಮಹತ್ತರ ಕೆಲಸಕ್ಕೆ ನಿಮ್ಮನ್ನು ಅಣಿಗೊಳಿಸಬಲ್ಲದು ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.
ಲೇಖಕ, ಚಿಂತಕ, ಡಾ. ಸರ್ಜಾಶಂಕರ್ ಹರಳಿಮಠ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹರಳಿಮಠ ಗ್ರಾಮದವರು. ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಪದವಿ ಮುಗಿಸಿ ಉದ್ಯೋಗವರಸಿ ಬೆಂಗಳೂರಿಗೆ ತೆರಳಿದರು. ಅಲ್ಲಿ ಬಹುರಾಷ್ಟ್ರೀಯ ಕಂಪನಿ ಸೇರಿದಂತೆ ಕೆಲವು ಕಂಪನಿಗಳಲ್ಲಿ ಒಂದು ದಶಕದ ಕಾಲ ಸೇವೆ ಸಲ್ಲಿಸಿದ ನಂತರ ಹುದ್ದೆಗೆ ರಾಜೀನಾಮೆ ನೀಡಿ ಊರಿಗೆ ಮರಳಿ ಶಿವಮೊಗ್ಗದಲ್ಲಿ ಗ್ರಾಮೀಣ ಮಹಿಳೆಯರು ಉತ್ಪಾದಿಸುವ ಕೈಮಗ್ಗದ ಉಡುಪುಗಳೂ ಸೇರಿದಂತೆ ಗೃಹ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ‘ದೇಸಿ ಸಂಸ್ಖೃತಿ’ ಎಂಬ ಮಾರುಕಟ್ಟೆ ಕೇಂದ್ರವನ್ನು ಆರಂಭಿಸಿದರು. ಜತೆ ಜತೆಗೆ ಜನಪರ ಹೋರಾಟಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಲೇ ಕುವೆಂಪು ...
READ MORE