ಸರಸ್ವತಿ ನಟರಾಜ್ ಬರೆದಿರುವುದೆಲ್ಲವೂ ಜನಮನ ಸೆಳೆದಿರುವ ಸಾಹಿತ್ಯ ಅಪಾರ ಸೃಜನಾತ್ಮಕ ಸಾಮರ್ಥ್ಯವನ್ನು ಹೊಂದಿರುವ ಇವರ ಕತೆಗಳು ಕಾದಂಬರಿಗಳೆಲ್ಲವೂ ವೈಶಿಷ್ಟ್ಯಪೂರ್ಣವಾದ ಕಥಾ ಹಂದರವನ್ನು ಹೊಂದಿದ್ದು ಹೊಸತನದಿಂದ ಲಕಲಕಿಸುತ್ತವೆ. ಬಹಳ ಪರಿಣಾಮಕಾರಿಯಾಗಿ ಇವರು ಕಟ್ಟಿಕೊಡುವ ಪಾತ್ರಗಳ ಅಂತರ್ಯುದ್ಧ, ಭಾವನೆಗಳ ತಾಕಲಾಟ, ಒಳತೋಟಿ ಎಲ್ಲವೂ, ಜನಜೀವನವನ್ನು ಬಹಳ ಹತ್ತಿರದಿಂದ ಹಾಗೂ ಬದುಕನ್ನು ಆಳವಾಗಿ ಅವಲೋಕಿಸಿದವರಿಗೆ ಮತ್ತು ಪಳಗಿದ ಲೇಖಕಿಯೊಬ್ಬರಿಗೆ ಮಾತ್ರ ಸಾಧ್ಯ. ಗಟ್ಟಿ ಸಾಹಿತ್ಯದ ಮೂಲಕ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿರುವ ಸರಸ್ವತಿಯವರು, ಕಥಾ ಸ್ಪರ್ಧೆ, ಕವನ ಸ್ಪರ್ಧೆ, ಕಾದಂಬರಿ ಸ್ಪರ್ಧೆಗಳಲ್ಲಿ ಸಾಕಷ್ಟು ಬಹುಮಾನಗಳನ್ನು ಪಡೆದು ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಾರೆ. ಇವರ ಬಹುಮಾನಿತ ಕಾದಂಬರಿ ಜ್ಯೋತಿ ನಾಡಿನ ಸುಪ್ರಸಿದ್ಧ ವಾರಪತ್ರಿಕೆ ಸುಧಾದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದ್ದಲ್ಲದೆ ಜೀವನದಿ ಎಂಬ ಹೆಸರಿನಲ್ಲಿ ಟಿವಿ ವಾಹಿನಿಯಲ್ಲಿ ಧಾರಾವಾಹಿಯಾಗಿಯೂ ಪ್ರಸಾರಗೊಂಡು, ಜನಮನ ಸೂರೆಗೊಂಡು ಅತ್ಯುತ್ತಮ ಕತೆಯೆಂಬ ಸಮ್ಮಾನಕ್ಕೆ ಪಾತ್ರವಾಗಿದೆ. ಇವರು ಮನೆ ಕಾದಂಬರಿ ಮಾಸ್ತಿ ಟ್ರಸ್ಟ್ ವತಿಯಿಂದ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಇವರ ಮತ್ತೊಂದು ಕಾದಂಬರಿ ಸಿಕ್ಕು ಸುಧಾ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಹರಿದುಬಂದದ್ದಲ್ಲದೆ ಸಂಸ್ಕೃತ ಭಾಷೆಗೂ ಅನುವಾದ ಗೊಂಡಿರುವ ಹೆಗ್ಗಳಿಕೆಗೆ ಹೊಂದಿದೆ. ಬದುಕಿನ ದಟ್ಟ ಅನುಭವಗಳನ್ನು ಅದರ ಎಲ್ಲ ಸೂಕ್ಷ್ಮತೆಯೊಂದಿಗೆ ಹಿಡಿದಿಡುವ ಅಪರೂಪದ ಸಾಮರ್ಥ್ಯ ಹೊಂದಿರುವ ಸರಸ್ವತಿ ಅವರಿಂದ ಸಾಹಿತ್ಯಲೋಕ ಖಂಡಿತಾ ಗಾತ್ರ ಹಾಗೂ ಸಾಮರ್ಥ್ಯ ಎರಡರಲ್ಲೂ ಹೆಚ್ಚಿನದನ್ನು ನಿರೀಕ್ಷಿಸಬಹುದು ಎಂದು ಪುಸ್ತಕದ ಬೆನ್ನುಡಿಯಲ್ಲಿ ರತ್ನಾಮೂರ್ತಿ ತಿಳಿಸಿದ್ದಾರೆ.
ಸರಸ್ವತಿ ನಟರಾಜ್ ಜನಿಸಿದ್ದು 1958ರ ಏಪ್ರಿಲ್ 2ರಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ. ತಂದೆ- ಎಸ್. ಕೇಶವಮೂರ್ತಿ, ತಾಯಿ- ಮಹಾಲಕ್ಷಮ್ಮ. ಜ್ಯೋತಿ(2008), ಮನೆ (2010) ಕಾದಂಬರಿಗಳು ಹಾಗೂ ದಣಿದ ಜೀವಕ್ಕೆ ಮತ್ತೆ ಕನಸನುಣಿಸಿ (2008) ಕಥಾಸಂಕಲನ ಪ್ರಕಟವಾಗಿವೆ. ಮಾಸ್ತಿ ಕಾದಂಬರಿ ಸ್ಪರ್ಧೆಯಲ್ಲಿ 'ಮನೆ' ಕಾದಂಬರಿಗೆ ಮೊದಲ ಬಹುಮಾನ ಪಡೆದಿದ್ದಾರೆ. ...
READ MORE