'ಶ್ರೀಕುವೆಂಪು ದರ್ಶನ' ಲೇಖಕ ಹ.ಕ. ರಾಜೇಗೌಡ ಅವರು ಸಂಪಾದಿಸಿರುವ ಕುವೆಂಪು ಸಾಹಿತ್ಯದ ಅವಲೋಕನ ಲೇಖನಗಳ ಸಂಕಲನ. ಕುವೆಂಪು ಜೀವನ ಮತ್ತು ಸಾಹಿತ್ಯದ ಬಗ್ಗೆ ಅತ್ಯಂತ ಆಳವಾಗಿ ಅಧ್ಯಯನ ಮಾಡಿ ಕುವೆಂಪು ಅವರ ಜೀನವ ದರ್ಶನ ಮಾಡಿಸುವ ಪುಸ್ತಕವಿದು. ಕುವೆಂಪು ಅವರ ವ್ಯಕ್ತಿತ್ವ, ಮಡಿಯಾದ ಬಾಳ್ವೆಯ ಮತ್ತು ಅವರ ಋಷಿಸದೃಶವಾದ ವ್ಯಕ್ತಿತ್ವವನ್ನು ಬಿಚ್ಚಿಡುತ್ತದೆ. ಈ ಕೃತಿಯ ಸಂಪಾದಕರು ಸುಮಾರು ನಾಲ್ಕು ದಶಕಗಳ ಕಾಲ ಅವರ ಸನ್ನಿಧಿಯಲ್ಲಿ ಕುಳಿತು ಅನೇಕ ವಿಚಾರಗಳನ್ನು ಕೇಳಿ ವಿಸ್ಮಯಪಟ್ಟಿದ್ದು ಸಾಹಿತ್ಯ ಅಧ್ಯಯನ ಯಾತ್ರೆಯಂತೆ ಈ ಕೃತಿಯನ್ನು ಸಂಪಾದಿಸಿದ್ದಾರೆ. ಈ ಪುಸ್ತಕ ಅನೇಕ ರೀತಿಯ ಮಾರ್ಗದರ್ಶನ ಮತ್ತು ಶಕ್ತಿಯನ್ನು ನೀಡುತ್ತದೆ ಎನ್ನುತ್ತಾರೆ ರಾಜೇಗೌಡರು. ಹಲವಾರು ಸಾಹಿತಿಗಳು, ಪತ್ರಕರ್ತರು, ಕವಿಗಳು, ವಿದ್ಯಾರ್ಥಿಗಳು ’ ಕುವೆಂಪು ಅವರನ್ನು ಕಂಡಂತೆ ಅವರ ಬಗ್ಗೆ ಲೇಖನಗಳನ್ನು ಇಲ್ಲಿ ದಾಖಲಿಸಿದ್ದು, ಹೆಸರಾಂತ ಕವಿಗಳು ಅವರ ಸಾಹಿತ್ಯದೊಲವನ್ನು ಮೆಚ್ಚಿ ಯುಗದ ಕವಿ ಬಗ್ಗೆ ಬರೆದಿರುವ ಕಾವ್ಯಗಳ ಸಂಗ್ರಹ ಈ ಪುಸ್ತಕದಲ್ಲಿದೆ.
ಹ.ಕ. ರಾಜೇಗೌಡರು ಮೂಲತಃ ಮಂಡ್ಯ ನಾಗಮಂಗಲ ತಾಲ್ಲೂಕು ಹನುಮನಹಳ್ಳಿಯವರು. ಕೃಷಿಕ ಕುಟುಂಬದಲ್ಲಿ ಜನಿಸಿದ ರಾಜೇಗೌಡರು ನಾಡಿನ ಪ್ರಮುಖ ಸಂಶೋಧಕರಲ್ಲಿ ಒಬ್ಬರು. ಕನ್ನಡ (ಎಂ.ಎ) ಸ್ನಾತಕೋತ್ತರ ಪದವೀಧರರಾದ ಅವರು ಬೆಂಗಳೂರು, ಕನಕಪುರದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾ ವಿಭಾಗಕ್ಕೆ ಸೇರಿದರು. ರಾಷ್ಟ್ರಕವಿ ಕುವೆಂಪು, ದೇಜಗೌ, ಹಾ.ಮಾ.ನಾಯಕ ಅವರ ಪ್ರಭಾವಲಯದಲ್ಲಿ ಗುರುತಿಸಿಕೊಂಡಿದ್ದ ಅವರು ತಮ್ಮ ಸಂಶೋಧನಾ ಕೃತಿಗಳ ಮೂಲಕ ಸಾಹಿತ್ಯಕ ವಲಯದಲ್ಲಿ ಗಣನೀಯ ಕೆಲಸ ಮಾಡಿದ್ದಾರೆ. ವಿಮರ್ಶಾ ಕೃತಿ ’ವಿವೇಚನೆ’ ಕಥಾಸಂಕಲನಗಳಾದ ’ಜಗ್ಗಿನ ಜನಪದ ಕಥೆಗಳು’,’ಮಳೆ ಹುಯ್ಯುತ್ತಿದೆ’ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ...
READ MORE