‘ಸಮವಸ್ತ್ರದೊಳಗೊಂದು ಸುತ್ತು’ ಕೃತಿಯು ಡಿ.ಸಿ. ರಾಜಪ್ಪ ಅವರ ಕವನ ಸಂಕಲನ ಭಾಗ-2 ಕೃತಿಯಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಕುಂವೀ ಅವರು, ನೂರಾರು ಆಪ್ತ ಮನಸ್ಸುಗಳು ಈ ಸಂಕಲನದೊಳಗಿರುವುದು ಸೋಜಿಗದ ಸಂಗತಿ. ಇಲಾಖೆಯ ಸುಸಂಸ್ಕೃತ ಹಿರಿಯ ಅಧಿಕಾರಿಗಳೊಂದೇ ಅಲ್ಲದೆ ಆರಕ್ಷಕ ಸಿಪಾಯಿಗಳೂ ತಮ್ಮ ದೈನಂದಿನ ಅನೇಕ ಅನುಭವಗಳನ್ನು ತಮ್ಮ ತಮ್ಮ ಕವಿತೆಗಳಲ್ಲಿ ಆಕರ್ಷಕ ರೀತಿಯಲ್ಲಿ ಸೆರೆ ಹಿಡಿದಿದ್ದಾರೆ. ಗುಲ್ ಮೊಹರ್ ನಂಥ ಮರಗಿಡ, ಪತಂಗದಂಥ ವೈವಿಧ್ಯಮಯ ರೂಪಕಗಳ ಮೂಲಕ ದೈನಂದಿನ ಆಗು- ಹೋಗುಗಳಿಗೆ; ಕಷ್ಟ ಕಾರ್ಪಣ್ಯಗಳಿಗೆ ಕಾವ್ಯಾತ್ಮಕವಾಗಿ ಸ್ಪಂದಿಸಿದ್ದಾರೆ. ಪ್ರೇಮ ಸಂಬಂಧೀ ತಕಾರುಗಳ ಜೊತೆಗೇನೆ ರೈತಾಪಿ ಮಂದಿ ಬಗೆಗಿನ ಕಾಳಜಿಗಳಿಗಿಲ್ಲಿ ಬರವಿಲ್ಲ. ನಾಡು- ನುಡಿ ಬಗೆಗಿನ ಕಕ್ಕುಲಾತಿ ಇರುವಂತೆಯೇ ದೇಶಾಭಿಮಾನ ಸೂರೆಗೊಂಡಿರುವ ಕವಿತೆಗಳು ಸಂಕಲನದ ಮೆರುಗು ಹೆಚ್ಚಿಸಿವೆ. ವರ್ತಮಾನದ ಸಮಾಜವನ್ನು ಮೂಢನಂಬಿಕೆಗಳಿಂದ ಮುಕ್ತಗೊಳಿಸಬೇಕೆಂಬ ತಹತಹಿಕೆ, ತಮಗೂ ಸಾಮಾಜಿಕ ಪ್ರಜ್ಞೆ; ಇದೆ ಎಂಬ ಆತ್ಮವಿಶ್ವಾಸವನ್ನು ರಾಜಪ್ಪ, ರವಿಕಾಂತೇಗೌಡರಂಥ ಹಿರಿಯ ಮತ್ತು ದಕ್ಷ ಅಧಿಕಾರಿಗಳ ನುರಿತ ಕವಿತೆಗಳಲ್ಲಿ ನೋಡಬಹುದು. ಪೊಲೀಸರೇ ತಮ್ಮ ಬದುಕನ್ನು ಕವಿತೆಗಳ ಮೂಲಕ ಅನಾವರಣಗೊಳಿಸಿಕೊಂಡಿರುವುದಲ್ಲದೆ ತಾವೂ ಶೇಕಡಾ ನೂರರಷ್ಟು ಮನುಷ್ಯರೆಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಇಲ್ಲಿ ವಿಶ್ಲೇಷಿತವಾಗಿದೆ.