‘ಸಬರಮತಿ’ ಕಾವ್ಯ- ಕಥನ ಲೇಖಕಿ ಎಚ್.ಎಸ್. ಅನುಪಮಾ ಅವರ ಕೃತಿ. ಹಿರಿಯ ಲೇಖಕ ಓ.ಎಲ್.ನಾಗಭೂಷಣಸ್ವಾಮಿ ದೀರ್ಘ ಮುನ್ನುಡಿ ಬರೆದಿದ್ದಾರೆ. ‘ಸಬರಮತಿ’ ಕವಿತೆ ಈ ಹೊತ್ತಿನಲ್ಲಿ ಕನ್ನಡಕ್ಕೆ ಅಗತ್ಯವಾಗಿ ಬೇಕಾಗಿದ್ದಂಥ ಬರವಣಿಗೆ ಎನ್ನುತ್ತಾರೆ. ಓ.ಎಲ್. ನಾಗಭೂಷಣಸ್ವಾಮಿ. ಅನುಪಮಾ ಅವರ ಕವಿತೆಗಳು ವಿಕಾಸ ಹೊಂದುತ್ತ ಹೊಸ ಮಜಲನ್ನು ಮುಟ್ಟಿರುವುದರ ಸೂಚನೆ ಈ ಕೃತಿಯಲ್ಲಿದೆ.
ಈ ಕವಿತೆಯ ಮಾತಿನಲ್ಲೇ ಹೇಳುವುದಾದರೆ, ‘ಬದುಕೆಂಬುದು ವಿಕಾಸದ ನುಸಿ ನುಂಗಿರುವ ಚಿತ್ತಾರ’ವಾಗಿರುವ ಹೊತ್ತಿನಲ್ಲಿ, ‘ನೈದಿಲೆಯ ಒಡಲೊಳಗೆ ಕೊರೆವ ಹುಳ ಹೊಕ್ಕು ಕೂತು/ಸಹಜ ಬಣ್ಣ ಪೂರ ಮೆದ್ದು ಕೇಸರಿಯ ಮೆತ್ತಿ’ರುವ ಹೊತ್ತಿನಲ್ಲಿ, ‘ವಿಷವಾವುದೋ ಕಹಿ ಯಾವುದೋ ನಾಲಗೆ ರುಚಿ ಮರೆತ’ ಹೊತ್ತಿನಲ್ಲಿ, ಸೇಡಿನಾರ್ಭಟ ಕಿವಿ ಗಡಚಿಕ್ಕುವ ಹೊತ್ತಿನಲ್ಲಿ, ಎದೆಯ ಪಿಸುದನಿ ಆಲಿಸಲು ಪುರಸೊತ್ತಿಲ್ಲದ ಹೊತ್ತಿನಲ್ಲಿ ಸಬರಮತಿಯಂಥ ರಚನೆಯನ್ನು ಮಾಡುವುದು ತೀರ ಅಗತ್ಯ ಮತ್ತು ಅದಕ್ಕೆ ಅಗಾಧವಾದ ಆತ್ಮವಿಶ್ವಾಸವೂ ಅಗತ್ಯ. ಇಂಥ ರಚನೆ ಯಾಕೆ ಅಗತ್ಯವೆಂದರೆ ಕಾವ್ಯದ ಉದ್ದೇಶವೇ ಒಳಿತು ಕೆಡುಕುಗಳ ಬಗ್ಗೆ ಎಚ್ಚರ ಮೂಡಿಸುವುದು. ಕನ್ನಡವಂತೂ ಹಾಗೆ ನಂಬಿದೆ. ಇದು ಸುಖ, ಇದು ದುಃಖ, ಇದು ಪುಣ್ಯಕ್ಕೆ ಕಾರಣ, ಅದು ಪಾಪ ಎಂಬ ಎಚ್ಚರವನ್ನು ಹಿಂದಿನ ಕವಿಗಳು ನೀಡಿದ್ದಾರೆಂದು ಸಾವಿರ ವರ್ಷಗಳಿಗೂ ಹಳೆಯದಾದ ಕವಿರಾಜಮಾರ್ಗವೇ ಹೇಳಿದೆ. ಸಬರಮತಿ ಹಾಗೆ ಇಂದಿನ ಅಗತ್ಯವಾದ ಸಹನೆ, ಸಹಬಾಳುವೆ, ಬದುಕಿನ ಭರವಸೆ, ಆತ್ಮಾವಲೋಕನಗಳ ಅಗತ್ಯವನ್ನು ಕಾಣಿಸಿಕೊಡುವ ರಚನೆ.
ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...
READ MORE