ಕವಯತ್ರಿ ವಿಜಯಶ್ರೀ ಹಾಲಾಡಿ ಅವರ ಕವನ ಸಂಕಲನ-ಸಾಕು ಬೆಳಕಿನ ಮಾತು. ಸಾಹಿತಿ ಜೆ.ಪಿ. ಬಸವರಾಜು ಅವರು ಮುನ್ನುಡಿ ಬರೆದು ‘ಇಲ್ಲಿಯ ಕವನಗಳದ್ದು ಬೇರೆಯದೇ ದನಿ, ಈ ನಡಿಗೆಯೂ ಬೇರೆಯದೇ. ಗುಡ್ಡ, ಬೆಟ್ಟ, ನದಿ, ಹೊಳೆ, ಗಾಳಿ, ಇಳೆ, ಮಳೆ, ಹೂವು, ಗಿಳಿ ಎಲ್ಲವೂ ಅವುಗಳ ರೂಪದಲ್ಲಿಯೇ ಬರುತ್ತವೆ. ಯಾವವೂ ಯಾವುದರ ಸಂಕೇತವಲ್ಲ. ಪ್ರತಿಮೆ ರೂಪಕಗಳಲ್ಲ, ಉಪಮೆಗಳಲ್ಲ. ವಸ್ತು ಪ್ರತಿರೂಪಗಳೂ ಅಲ್ಲ. ಏನನ್ನೋ ಹೇಳಲು, ಯಾವುದನ್ನೋ ಸೂಚಿಸಲು ಅನ್ಯರೂಪದಲ್ಲಿ ಬಂದು ಎದುರಾಗುವ ವಸ್ತುಗಳು ಇಲ್ಲಿಲ್ಲ. ವಾಸ್ತವದ ಉರಿ ಸಂಕಲನದ ಉದ್ದಕ್ಕೂ ಕಾಣಿಸುತ್ತದೆ. ಈ ಉರಿ ಧಗಧಗ ಉರಿಯುವುದಿಲ್ಲ. ಒಳಗೆ ಹರಿಯುವ ಲಾವಾ ರಸವಾಗಿ, ತಣ್ಣನೆಯ ಬೆಂಕಿಯಾಗಿ, ಧ್ವನಿ ಕಳೆದುಕೊಂಡ ಯಾತನೆಯಾಗಿ, ಚಿರಂತನ ನೋವಾಗಿ ಕಾಣದಂತೆ ಅಡಗಿ ಕುಳಿತಿದೆ. ಯಾತನೆಯೇ ಈ ಸಂಕಲನದ ಸ್ಥಾಯೀ ಭಾವದಂತೆಯೂ ಕಾಣಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಎಂ. ಆರ್. ಕಮಲ ಅವರು ‘ ಹೆಣ್ಣೊಬ್ಬಳ ಅತ್ಯಂತ ಸೂಕ್ಷ್ಮ, ಸಂಕೀರ್ಣ ಅನುಭವಗಳನ್ನು ಈ ಸಂಕಲನದ ಕವಿತೆಗಳು ರೂಪಕಾತ್ಮಕವಾಗಿ ಹೇಳುತ್ತವೆ. ಇಲ್ಲಿರುವ ಚಿತ್ರಗಳು, ಚಿಂತನೆಗಳು ಮೇಲು ನೋಟಕ್ಕೆ ಚದುರಿದಂತೆ ಕಂಡರೂ ಅದಕ್ಕೊಂದು ಪ್ರಕೃತಿಯ ಅಪೂರ್ವ ವಿನ್ಯಾಸವಿದೆ. ಬಿಡಿ, ಬಿಡಿ ಚಿತ್ರಗಳೆಲ್ಲ ಏಕತ್ರವಾಗಿ, ನಿಸರ್ಗವಾಗುವ ವಿಸ್ಮಯದಂತೆ ಕವಿತೆಗಳ ತುಂಬಾ ಹರಡಿಕೊಂಡಿರುವ ಶಬ್ದಚಿತ್ರಗಳು ಒಟ್ಟಾಗಿ ಹೊಮ್ಮಿಸುವ ಧ್ವನಿ ಬೆರಗನ್ನು ಹುಟ್ಟಿಸುತ್ತವೆ. ಇಲ್ಲಿಯ ಕವನಗಳು ಹೊಸ ಛಂದಸ್ಸಿನ ಹುಡುಕಾಟದಲ್ಲಿವೆ. ಹೊಸ ಭಾಷೆ, ಹೊಸ ರೀತಿಯ ಅಭಿವ್ಯಕ್ತಿಗೆ ತುಡಿಯುತ್ತವೆ. ಅವರ ಮುಂದಿನ ಕಾವ್ಯದ ಬಗ್ಗೆ ಅಪಾರ ಭರವಸೆಯನ್ನು ಈ ಸಂಕಲನದ ಕವನಗಳು ಮೂಡಿಸುತ್ತವೆ’ ಎಂದು ಪ್ರಶಂಸಿಸಿದ್ದಾರೆ.
ಕವಯತ್ರಿ ವಿಜಯಶ್ರೀ ಹಾಲಾಡಿ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದವರು. ತಂದೆ ಬಾಬುರಾವ್ ತಾಯಿ ಎಂ., ರತ್ನಾವತಿ. ಎಂ.ಎ., ಬಿ.ಎಡ್. ಪದವೀಧರರು. ಕೃತಿಗಳು: ಬೀಜ ಹಸಿರಾಗುವ ಗಳಿಗೆ (ಕವನ ಸಂಕಲನ-2009), ’ಪಪ್ಪು ನಾಯಿಯ ಪ್ರೀತಿ ( ಮಕ್ಕಳ ಸಾಹಿತ್ಯ ವಿಭಾಗದ ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2015 ರ ಪುಸ್ತಕ ಬಹುಮಾನ) , ಪ್ರಶಸ್ತಿ-ಪುರಸ್ಕಾರಗಳು: ಮುಂಬೈ ಕನ್ನಡ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ, (ಹಸ್ತಪ್ರತಿಗೆ-2007) , ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ ಲಭಿಸಿದೆ. 2023ನೇ ಸಾಲಿನ ಕೇಂದ್ರ ಬಾಲ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ...
READ MORE