‘Redವೈನ್’ ವಿ.ನಿಶಾಗೋಪಿನಾಥ್ ಅವರ ಕವನ ಸಂಕಲನ. ಈ ಸಂಕಲನಕ್ಕೆ ಡಿ.ಎಸ್. ಚೌಗಲೆ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ವಿ ನಿಶಾಗೋಪಿನಾಥ್ ಈ ಕಾಲದ ಅತ್ಯಂತ ಮಹತ್ವದ ಕವಿ, ನಿಶಾ ಅವರ ಪ್ರೇಮ ಕವಿತೆಗಳನ್ನು ಓದಿದಾಗ ನನಗನ್ನಿಸಿದ್ದು, ಸಮಕಾಲೀನ ಕನ್ನಡ ಕಾವ್ಯಕ್ಕೆ ಸಂಬಂಧಿಸಿದಂತೆ ಪ್ರೀತಿಯ ಅಭಿವ್ಯಕ್ತಿಯನ್ನು ಇಷ್ಟು ದಟ್ಟವಾಗಿ ನೀಡುವವರನ್ನು ನಾನು ಕಂಡಿಲ್ಲ.
ನಲ್ಲ-ನಲ್ಲೆಯರ ಪ್ರೇಮ ಕಾಮದ ಪಿಸುನುಡಿಯ ಸಲ್ಲಾಪಗಳು, ಹುಸಿಮುನಿಸು, ಅನುರಾಗದ ಉತ್ಕಟತೆ, ಎರಡು ಆತ್ಮಗಳು ಏಕೀಭವಿಸಿ ಸೃಷ್ಟಿಗೊಳ್ಳುವ ಕಾಮದ ತುತ್ತತುದಿಯ ಅನುಭೂತಿ. ಅವನ ಆಗಮನ ನಿರ್ಗಮನಗಳ ಮಧ್ಯ ರಸಗಟ್ಟುವ ವಿರಹ, ತೋಳ ತೆಕ್ಕೆಯಲ್ಲಿ ಒಸರುವ ಬೆಚ್ಚಗಿನ ಅನುಭವ-ಹೀಗೆ ಎಲ್ಲವೂ ಸಂವೇದನೆ ಪಡೆದು ರೂಪಕ, ಪ್ರತಿಮೆಗಳಲ್ಲಿ ಮಡುಗಟ್ಟಿ ನಿಂತಿದೆ ಎಂದಿದ್ದಾರೆ. ಇವರ ಕವಿತೆಗಳು ಮರಾಠಿಯ ಪ್ರಸಿದ್ಧ ಕತೆಗಾರ್ತಿ ಮತ್ತು ಕವಿ ಪ್ರಜ್ಞಾ ದಯಾ ಪವಾರ ಅವರನ್ನು ನೆನಪಿಸುವಷ್ಟು ಕಾಡುತ್ತವೆ. ಪ್ರಜ್ಞಾ ದಯಾ ಪವಾರ ಪುರುಷ ಕೇಂದ್ರಿತ ಕಾಮದ ಸ್ವರೂಪಗಳನ್ನು ಕತೆಗಳಲ್ಲಿ ನವರೂಪಕಗಳ ಮೂಲಕ ಸೃಷ್ಟಿಸಿ ಬೆಚ್ಚಿ ಬೀಳಿಸುವಂತೆ ನಿಶಾ ಅವರು ತಮ್ಮ ಕವಿತೆಗಳಲ್ಲಿ ಹೊಸ ಹೊಸ ರೂಪಕಗಳನ್ನು ಕಾವ್ಯದಲ್ಲಿ ಕಟ್ಟ ಕಾವ್ಯರಸಿಕರನ್ನು ಬೆಚ್ಚಿ ಬೀಳಸುತ್ತಾರೆ. ವಿ ನಿಶಾಗೋಪಿನಾಥ್ ಅವರ ಈ ಅರವತ್ತು ಪ್ರೇಮ ಕವಿತೆಗಳ ಗುಚ್ಛ 'ರೆಡ್ ವೈನ್' ಕನ್ನಡ ಕಾವ್ಯದಲ್ಲಿ ನಿಸ್ಸಂಕೋಚವಾಗಿ ಒಂದು ಮೈಲುಗಲ್ಲಾಗಲಿದೆ.
ಕವಯತ್ರಿ ವಿ ನಿಶಾ ಗೋಪಿನಾಥ್ ಅವರು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಸೊಣ್ಣನಾಯಕನ ಹಳ್ಳಿಯವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಪತ್ರಿಕೋದ್ಯಮದಲ್ಲಿ ಪದವೀಧರೆಯಾಗಿದ್ದು ಇನ್ನೋವೆಟಿವ್ ಸಿಸ್ಟಮ್ಸ್ನಲ್ಲಿ ಕೆಲವು ಕಾಲ ಕಂಪ್ಯೂಟರ್ ಅಧ್ಯಾಪಕಿಯಾಗಿ ಕೆಲಸ ಮಾಡಿದ್ದಾರೆ. ಮಯೂರ, ವಿಜಯ ಹಾಗೂ ಕಸ್ತೂರಿ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವವಿದ್ದು ನಾಡಿನ ಹಲವು ಪತ್ರಿಕೆಗಳಲ್ಲಿ ಅವರ ಕವಿತೆಗಳು ಪ್ರಕಟವಾಗಿವೆ. 'ಬೇಲಿ ಹೂ' ಅವರ ಮೊದಲ ಕಥಾ ಸಂಕಲನ. ಸಾಮಾಜಿಕ ಕಳಕಳಿ ಹೊಂದಿರುವ ನಿಶಾ ಗೋಪಿನಾಥ್, ಹಲವಾರು ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ‘ನೀಲಿ ನಕ್ಷತ್ರ’ ಅವರ ಕವನ ಸಂಕಲನ. ...
READ MORE