ಲೇಖಕಿ ಚೈತ್ರಾ ಶಿವಯೋಗಿಮಠ ಅವರ ಕವನ ಸಂಕಲನ ಕೃತಿ ʻಪಟ್ರಿಕೋರ್ʼ. ಇದು ಇವರ ಮೊದಲ ಕವಿತಾ ಸಂಗ್ರಹವಾಗಿದೆ. ಪುಸ್ತಕದ ಬೆನ್ನುಡಿಯಲ್ಲಿ ಲೇಖಕ ಎಚ್.ಎಸ್. ಶಿವಪ್ರಕಾಶ್ ಅವರು, “ ಇಲ್ಲಿ ಗಮನ ಸೆಳೆಯುವ ಅಂಶವೆಂದರೆ ಮೊದಲ ಸಂಕಲನದಲ್ಲಿಯೇ ಲೇಖಕಿ ತನ್ನದೇ ಆದ ನುಡಿಗಟ್ಟನ್ನು ತನ್ನ ಸುತ್ತಲೂ ನೋಡುವ ವಿಶಿಷ್ಟ ಪರಿಯನ್ನ ಈಗಾಗಲೇ ಗಳಿಸಿಕೊಂಡಿದ್ದಾರೆ. ಇಲ್ಲಿ ಹೇಳ್ತನದ ಮನೋಭೂಮಿಕೆಯಂದ ಕಂಡ ಗಂಡು-ಹೆಣ್ಣಿನ ಮತ್ತು ಲೌಕಿಕ- ಅಲೌಕಿಕ ಭಾವಭಕುತಿಯ ಅಂತರಂಗ-ಬಹಿರಂಗದ ವಿಸ್ಮಯಜನ್ಯ ಪ್ರತಿಮೆಗಳ ಜೊತೆಗೆ ನಿಸರ್ಗ ಸಮಿಪವಾದ ಗ್ರಹಿಕೆಯ ಮಾರ್ಗ ಇವು ಒಟ್ಟಾಗಿ ಬೆಸೆದುಕೊಂಡಿರುವುದು ಸಹ ಸೆಳೆಯತಕ್ಕದ್ದಾಗಿದೆ. ಇಲ್ಲಿನ ಬಹುಮಟ್ಟಿನ ಕವಿತೆಗಳಲ್ಲಿ ಉತ್ಕಟತನವಿದೆ. ಸಾಚಾತನವಿದೆ. ಹಾಗೆ ಕಂಡದ್ದನ್ನ ಅನುಭವಿಸಿದ್ದನ್ನ ಆದಷ್ಟು ಪ್ರಭಾವಶಾಲಿಯಾಗಿ ಯಥಾವತ್ತಾಗಿ ಶಬ್ದಗಳಲ್ಲಿ,, ಪ್ರತಿಮೆಗಳಲ್ಲಿ ದಾಖಲಿಸುವ ಒಂದು ಸಮರ್ಥ ಬಗೆಯಿದೆ. ಈ ಕವಿತೆಗಳನ್ನು ಓದಿದಾಗ ನವೋದಯ, ನವ್ಯ, ಬಂಡಾಯ ಅವು ಯಾವುದರ ಪ್ರಭಾವವೇ ಕಾಣುವುದಿಲ್ಲ. ಇವರು ಸಾಹಿತ್ಯೇತರ ಹಿನ್ನೆಲೆಯಿಂದ ಬಂದಿರುವುದರಿಂದ ಸಾಹಿತ್ಯ ವಿಮರ್ಶೆ, ಪರಿಭಾಷೆ ಇತಾದಿಗಳ ಪ್ರಭಾವವಿಲ್ಲ. ಅನುಭವಗಳನ್ನು ಸೀದಾ ಕಾವ್ಯಕ್ಕೆ ಕರೆ ತರುವ ರೀತಿ ಇವತ್ತಿನ ಬಹುತೇಕ ಸಮರ್ಥ ಯುವಕವಿಗಳಲ್ಲಿದೆ” ಎಂದು ಹೇಳಿದ್ದಾರೆ.
ಕವಯತ್ರಿ ಚೈತ್ರಾ ಶಿವಯೋಗಿಮಠ ಮೂಲತಃ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದವರು. ಪ್ರಸ್ತುತ ಬೆಂಗಳೂರಿನ ವಾಸವಿದ್ದಾರೆ. ವಿಟಿಯು ವಿಶ್ವವಿದ್ಯಾಲಯದಿಂದ ಎಂಟೆಕ್ ಪದವೀಧರರು. ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಓದು ಬರಹ, ನಿರೂಪಣೆ ಅವರ ಹವ್ಯಾಸ. ನಾಡಿನ ಮುದ್ರಣ ಹಾಗೂ ಡಿಜಿಟಲ್ ಪ್ರತ್ರಿಕೆಗಳಲ್ಲಿ ಇವರ ಕವನ-ಬರಹಗಳು ಪ್ರಕಟವಾಗಿವೆ. ...
READ MORE